ಜಾತಿ ಸಂಘಗಳಿಂದಲೇ ಮೊಳಕೆಯೊಡೆದು, ಅದರ ನೆರಳಲ್ಲೇ ಬೆಳೆದು ಅದರ ಎಲ್ಲಾ ಸಂಘಟನಾತ್ಮಕ ಶಕ್ತಿಯನ್ನು ಉಪಯೋಗಿಸಿಕೊಂಡು ಕಾಲೂರಿ ನಿಂತ ಮೇಲೆ, ಕಟ್ಟಿ ಬೆಳೆಸಿದ ಜಾತಿಯ ಬಡವರ ಪಕ್ಷ ಬಿಟ್ಟು ಡಿವಿಡೆಂಡ್ (ಲಾಭಾಂಶ) ಹೆಸರಲ್ಲಿ ಉಳ್ಳವರ ಪರ ನಿಂತಾಗಲೇ ದುರಂತ ಸಂಭವಿಸಿದ್ದು. ಇದರಿಂದಲೇ ಕರಾವಳಿ ಕರ್ನಾಟಕದ ಬೇರೆ ಬೇರೆ ಜಾತಿಗಳ ವಿವಿಧ ಸಂಘಗಳಲ್ಲಿ ವೈಮನಸ್ಸು -ಬಿಕ್ಕಟ್ಟು -ಗುಂಪುಗಾರಿಕೆ- ಹೋಳಾಗುವಿಕೆ-ಕೋರ್ಟ್ ಕಟ್ಟಳೆ ಎಂದು ತಿರುಗಾಡುವುದನ್ನು ಕಂಡಾಗ ಮೂಲ ಸಹಕಾರ ತತ್ವಗಳಿಗೆ ತಿಲಾಂಜಲಿ ಇಟ್ಟದ್ದು ಸತ್ಯ ಅಂತ ಕಾಣುತ್ತದೆ.
ಬ್ಯಾಂಕ್ ಅಂದರೇನೇ ಒಂದು ಸೋಜಿಗ, ಗೌರವ, ಪ್ರತಿಷ್ಠೆ ಹಾಗು ಉಳ್ಳವರ ಕಾರ್ಯಸ್ಥಾನ ಎಂಬ ದಿನಗಳಿದ್ದವು. ಬ್ಯಾಂಕ್ ಒಳಗೆ ಹೋಗುವುದು ಅಕೌಂಟ್ ಹೊಂದುವುದು ಮ್ಯಾನೇಜರ್ ಜೊತೆ ಮಾತಾಡುವುದು, ಸಾಲಕೊಡಿಸುವುದು ಅಂದರೆ ಆತ ದೊಡ್ಡ ಕುಳ ಅಂತಾನೆ ನಂಬಿದ್ದ ಕಾಲ ಇದ್ದವು. ಕ್ರಮೇಣ ಬ್ಯಾಂಕ್ ರಾಷ್ಟ್ರೀಕರಣ ಆದ ಮೇಲೆ, ಮಾಜಿ ಹಣಕಾಸು ಸಚಿವ ಜನಾರ್ಧನ ಪೂಜಾರಿಯವರು ಸಾಲ ಮೇಳ ಮಾಡಿದ ಮೇಲೆ ಬ್ಯಾಂಕ್ ನಿಧಾನವಾಗಿ ಬಡವರಿಗೆ ಬಾಗಿಲು ತೆರೆಯ ತೊಡಗಿತು. ಆದರೂ ಮೊನ್ನೆ ಮೊನ್ನೆಯವರೆಗೂ ಬ್ಯಾಂಕ್ ನವರ ದರ್ಪ-ಸತಾಯಿಸುವಿಕೆ ಉಳ್ಳವರಿಗೆ ಮಣೆ ಹಾಕೋದು ನಿಂತಿರಲಿಲ್ಲ. ಸಾಲ ತೆಗೆದುಕೊಂಡ ಬಡವನ ನೆತ್ತರು ಕುಡಿಯುವ ಬ್ಯಾಂಕ್ ಗಳು ಕೋಟಿಗಟ್ಟಲೆ ಸಾಲ ಪಡೆದು ವಂಚಿಸಿದ ಕುಳಗಳಿಗೆ ರಾಜಮರ್ಯಾದೆ ಕೊಟ್ಟು ತೋರಿಸಲಾಗದ ಸ್ಥಳಗಳಲ್ಲಿ ಪೆಟ್ಟು ತಿಂದು ಬಾಸುಂಡೆ ಬೀಳಿಸಿಕೊಂಡಿದ್ದಾವೆ. ಇದನ್ನು ಯಾಕೆ ನೋವಿಂದ ಹೇಳುತ್ತಿದ್ದೇನೆ ಅಂದರೆ 3-4 ದಶಕದ ಹಿಂದೆ ಎಂಬಿಬಿಎಸ್ ಸೀಟ್ ಸಿಕ್ಕಿದ ಸಂತೋಷದಲ್ಲಿ ಸರ್ಟಿಫಿಕೇಟ್ ಹಿಡಿದುಕೊಂಡು ಬಡ ಕೃಷಿ ಕಾರ್ಮಿಕ ತಂದೆಯ ಜೊತೆ ಕೇವಲ 25 ಸಾವಿರ ಸಾಲವನ್ನು ಕೇಳಲು ರಾಷ್ಟ್ರೀಕೃತ ಬ್ಯಾಂಕ್ ಒಂದರ ಬಾಗಿಲು ತಟ್ಟಿ ಅಲ್ಲಿ ಆಗೋಲ್ಲ ಅಂತ ಹೊರದಬ್ಬಿಸಿಕೊಂಡ ನೋವು ಮತ್ತೆ ಮತ್ತೆ ಕಾಡುತ್ತಲೇ ಇದೆ. ಅಂದು ಬ್ಯಾಂಕ್ ಗಳ ಬಗ್ಗೆ ಹುಟ್ಟಿದ ಒಂದು ಸಣ್ಣ ಮಟ್ಟದ ತಿರಸ್ಕಾರ ಇಂದಿಗೂ ಕಡಿಮೆ ಆಗಿಲ್ಲ.
ರಾಷ್ಟ್ರೀಕೃತ ಬ್ಯಾಂಕ್ ಗಳ ಇಂತಹ ದೌರ್ಜನ್ಯ ನಿಲ್ಲಿಸಲು ಹುಟ್ಟಿಕೊಂಡ ಸಮಾಜಮುಖೀ ಸಾಲವಿತರಣ ಸೇವೆಯೇ ಸಹಕಾರೀ ಬ್ಯಾಂಕ್ ಗಳು. ಸಹಕಾರೀ ತತ್ವ ಹೊಂದಿ ಲಾಭ ನೋಡದೇ ಉಳ್ಳವರ ಹಣದಿಂದ ಬಡವರಿಗೆ ಸಹಾಯ ಮಾಡಿ ಬಡವರನ್ನು ಆರ್ಥಿಕ ಸಂಕಷ್ಟ ದಿಂದ ಮೇಲೆತ್ತುವ ಒಂದು ಸಮಾಜ ಮುಖೀ ಚಿಂತನೆಯೇ ಸಹಕಾರೀ ಬ್ಯಾಂಕ್ ಗಳು.
ಅವುಗಳಲ್ಲಿ ವೃತ್ತಿ ಆಧಾರಿತ, ಜಾತಿ ಆಧಾರಿತ ಹಾಗೂ ಸಮಾನ ಮನಸ್ಕ ಜಾತ್ಯಾತೀತ ವ್ಯಕ್ತಿ ಆಧಾರಿತ ಬ್ಯಾಂಕ್ ಗಳು ಅಂತ ವಿಂಗಡಣೆ ಮಾಡಬಹುದು. ಅದರಲ್ಲಿ ವ್ಯಕ್ತಿ ಆಧಾರಿತ ಬ್ಯಾಂಕ್ ಗಳು ಸಹಕಾರ ತತ್ವ ಅಥವಾ ಡಿವಿಡೆಂಡ್ ತತ್ವ ಯಾವುದನ್ನೂ ಆರಿಸಿಕೊಳ್ಳಬಹುದು. ಆದರೆ ಕಸುಬು ಆಧಾರಿತ ಕುರುಬ, ನೇಕಾರ, ಕುಂಬಾರ ಮುಂತಾದ ಗುಡಿಕೈಗಾರಿಕಾ ಸಹಕಾರೀ ಬ್ಯಾಂಕ್ ಗಳು ಆಯಾಯ ವೃತ್ತಿ ಮಾಡುವವರಿಗೆ ಸಾಲ ಸವಲತ್ತು ಕೊಟ್ಟು ಆ ವೃತ್ತಿಯ ಜನರನ್ನ ಮೇಲೆತ್ತಲು ಪ್ರಯತ್ನಿಸಿದ್ದು ಪ್ರಯತ್ನಿಸುತ್ತಿರುವುದು ಸುಳ್ಳಲ್ಲ. ಆದರೆ ಸಮಸ್ಯೆ ಬಂದಿರುವುದು ಬಲಿಷ್ಠ ಜಾತಿ ಸಂಘಟನೆಗಳು ಸಂಘದ ಜನರ ಹಿತಕ್ಕಾಗಿ ಸ್ಥಾಪಿಸಿದ ಅತ್ತ ವ್ಯಕ್ತಿ ಆಧರಿತವೂ ಅಲ್ಲದ, ಇತ್ತ ವೃತ್ತಿ ಆಧಾರಿತವೂ ಅಲ್ಲದ ಕೇವಲ ಹೆಸರಿಗೆ ಸಹಕಾರೀ ಬ್ಯಾಂಕ್ ಎಂಬ ಹಣಕಾಸು ಸಂಸ್ಥೆಗಳು ಇಂದು ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು ಸುಳ್ಳಲ್ಲ.
ಜಾತಿ ಸಂಘಗಳಿಂದಲೇ ಮೊಳಕೆಯೊಡೆದು, ಅದರ ನೆರಳಲ್ಲೇ ಬೆಳೆದು ಅದರ ಎಲ್ಲಾ ಸಂಘಟನಾತ್ಮಕ ಶಕ್ತಿಯನ್ನು ಉಪಯೋಗಿಸಿಕೊಂಡು ಕಾಲೂರಿ ನಿಂತ ಮೇಲೆ, ಕಟ್ಟಿ ಬೆಳೆಸಿದ ಜಾತಿಯ ಬಡವರ ಪಕ್ಷ ಬಿಟ್ಟು ಡಿವಿಡೆಂಡ್ (ಲಾಭಾಂಶ) ಹೆಸರಲ್ಲಿ ಉಳ್ಳವರ ಪರ ನಿಂತಾಗಲೇ ದುರಂತ ಸಂಭವಿಸಿದ್ದು. ಇದರಿಂದಲೇ ಕರಾವಳಿ ಕರ್ನಾಟಕದ ಬೇರೆ ಬೇರೆ ಜಾತಿಗಳ ವಿವಿಧ ಸಂಘಗಳಲ್ಲಿ ವೈಮನಸ್ಸು -ಬಿಕ್ಕಟ್ಟು -ಗುಂಪುಗಾರಿಕೆ- ಹೋಳಾಗುವಿಕೆ-ಕೋರ್ಟ್ ಕಟ್ಟಳೆ ಎಂದು ತಿರುಗಾಡುವುದನ್ನು ಕಂಡಾಗ ಮೂಲ ಸಹಕಾರ ತತ್ ಗಳಿಗೆ ತಿಲಾಂಜಲಿ ಇಟ್ಟದ್ದು ಸತ್ಯ ಅಂತ ಕಾಣುತ್ತದೆ. ಇದು ಆಗಲೇಬಾರದು. ಜಾತಿ ಸಂಘಗಳ ಸುಪರ್ದಿಯಲ್ಲಿ ಹುಟ್ಟಿಕೊಂಡ ಸಹಕಾರಿ ಬ್ಯಾಂಕ್ ಗಳು ಕೇವಲ ಗೊಡ್ಡು ಹಣಕಾಸು ಸಂಸ್ಥೆ ಆಗಿ ಬೆಳೆದರೆ ಸಾಲದು. ಕನಿಷ್ಠ ದರದಲ್ಲಿ ಆ ಸಂಘದ ಜನರಿಗೆ ಸಾಲ ಸವಲತ್ತು ನೀಡಬೇಕು. ಅಲ್ಲದೇ ಹಣವಿರುವ ಆ ಜಾತಿ ಸಂಘದ ಶ್ರೀಮಂತರ ಮನ ಒಲಿಸಿ ಹಣ ಠೇವಣಿ ಇಟ್ಟು ಅವರ ಮೂಲ ಧನಕ್ಕೆ ಕುಂದು ಬರದಂತೆ ಕನಿಷ್ಠ ಡಿವಿಡೆಂಡ್ ಕೊಟ್ಟು ಬಂದ ಲಾಭದಲ್ಲಿ ಅರ್ಧದಷ್ಟು ಬ್ಯಾಂಕ್ ಅನ್ನ ಕಟ್ಟಲು ಸಹಕಾರ ನೀಡಿದ ಜಾತಿ ಸಂಘದ, ಬಡ ದೀನ ದುರ್ಬಲರ ಬಗ್ಗೆ ಹಮ್ಮ ಕೊಳ್ಳುವ ಸಮಾಜ ಮುಖೀ ಕಲ್ಯಾಣ ಕಾರ್ಯಕ್ರಮಗಳಿಗೆ ಕೊಡುವಂತಾಗಬೇಕು.
ಇದು ನಿಜವಾಗಿ ಜಾತಿ ಸಂಘಗಳು ಹುಟ್ಟುಹಾಕುವ/ ಹಾಕಿದ ಸಹಕಾರೀ ಬ್ಯಾಂಕ್ ಗಳ ಕರ್ತವ್ಯ. ಇದು ಇಂದು ಕಣ್ಮರೆಯಾಗಿದೆ. ಎಲ್ಲಾ ಕಡೆ ಶುದ್ಧ ಹಣಕಾಸು ವ್ಯವಹಾರ ಆರಂಭವಾಗಿದೆ. ಹೀಗೆ ಮಾಡಲು ಜಾತಿ ಬ್ಯಾಂಕ್ ಗಳೇ ಬೇಕೆಂದಿಲ್ಲ. ಈಗಿರುವ ರಾಷ್ಟ್ರೀಕೃತ ಮತ್ತು ವ್ಯಕ್ತಿ ಆಧಾರಿತ ಬ್ಯಾಂಕ್ ಗಳೇ ಸಾಕಾಗುತ್ತವೆ. ಜಾತಿಗಳಿಗೆ ಸಹಾಯ ಮಾಡಲು ವೃತ್ತಿ ಆಧಾರಿತ ಗುಡಿಕೈಗಾರಿಕಾ ಸಹಕಾರೀ ಬ್ಯಾಂಕ್ ಗಳೇ ಸಾಕು. ಸುಮ್ಮನೇ ಹಿರಿಯರು ಕಟ್ಟಿದ ಜಾತಿ ಸಂಘಟನೆಗಳನ್ನ ಒಡೆಯುವ ಸಹಕಾರದ ಗಂಧಗಾಳಿ ಇಲ್ಲದ ಅಶಾಂತಿ ಹರಡುವ, ಹೆಸರಿಗೆ ಮಾತ್ರ ಇರುವ, ಅದೆಷ್ಟೋ ಬ್ಯಾಂಕ್ ಗಳಲ್ಲಿ ಹೊಗೆಯಾಡುತ್ತಿರುವ ಅಸಮಾಧಾನ ಇಂದು ಬೀದಿಗೆ ಬರುತ್ತಿದೆ. ಇದು ಎಲ್ಲಾ ಜಾತಿಯ ಸಂಘಟನೆಗಳಲ್ಲಿ ಉಂಟಾಗಿರುವ ದೊಡ್ಡ ಸಮಸ್ಯೆ.
ಇದು ಇಂದು ನುಂಗಲಾರದ ತುತ್ತಾಗಿರುವುದನ್ನ ಎಲ್ಲಾ ಹಿರಿಯ ಸಹಕಾರಿ ತತ್ವ ಪ್ರತಿಪಾದಕರು ಅಸಹಾಯಕರಾಗಿ ಹೇಳುತ್ತಾರೆ. ಇದಕ್ಕೆ ಜಾತಿ ಸಂಘಟನೆಗಳೇ ಉತ್ತರ ಹುಡುಕಿ ಕೊಳ್ಳಬೇಕಾಗಿದೆ.
ಡಾ. ಅಣ್ಣಯ್ಯ ಕುಲಾಲ್ ಉಳ್ತೂರು
(ಪ್ರಧಾನ ಸಂಪಾದಕರು)