“ಭೂಮಿಗೆ ಬರಬೇಕು ಎಂದಾಗ ಒಡಲಿನಲ್ಲಿ ಜಾಗ ಕೊಟ್ಟೆ ,ಹಸಿವು ಎಂದು ಅತ್ತಾಗ ಎದೆಹಾಲುನಿಸಿದೆ, ನಿದ್ದೆ ಬಂದಾಗ ಮಡಿಲಿನಲ್ಲಿ ಮಲಗಿಸಿ ಜೋಗುಳ ಹಾಡಿದೆ, ನಾನು ಬೆಳೆಯುವ ಪ್ರತಿಹಂತದಲ್ಲೂ ಜೊತೆಯಾದೆ, ನಿನ್ನ ಪಡೆದ ನಾನು ತುಂಬಾನೇ ಅದೃಷ್ಟಶಾಲಿ”
ಮಗುವಿನ ಜನನದೊಂದಿಗೆ ಪ್ರತಿ ತಾಯಿ ಸತ್ತು ಮತ್ತೆ ಜನಿಸುತ್ತಾಳೆ. ಮಗುವಿನ ನಗೆಯಲ್ಲಿ ತಾಯ್ತನದ ನೋವನ್ನು ನಗುನಗುತ್ತಾ ಮರೆತು ಬಿಡುತ್ತಾರೆ. ತನ್ನೊಡಲಲ್ಲಿ ಮುದ್ದು ಮಗುವೊಂದು ಚಿಗುರೊಡೆಯುತ್ತಿದೆ ಎಂಬುದು ತಿಳಿಯುತ್ತಿದ್ದಂತೆಯೇ ಹೆಣ್ಣು ತಾಯ್ತನದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಳ್ಳುತ್ತಾಳೆ. ಒಬ್ಬ ಸಾಮಾನ್ಯ ಹೆಣ್ಣು ದೈವತ್ವಕ್ಕೇರುವ ಪಯಣ ಆರಂಭವಾಗುವುದೇ ಆಗ. ತೊದಲು ನುಡಿವ ಕಂದನ ಬಾಯಿಂದ ಮೊದಲ ಬಾರಿಗೆ ಬಂದ ಅಮ್ಮ ಎಂಬ ಪದಕ್ಕೆ ಹೆಣ್ಣಿನ ಬದುಕನ್ನೇ ಸಾರ್ಥಕಗೊಳಿಸುವ ಶಕ್ತಿ ಇದೆ. ಹೌದು ಇದೆಲ್ಲಾ ಸತ್ಯ. ಯಾವ ಅಮ್ಮ ಕೂಡ ತನ್ನ ಮಗುವಿಗೆ ಹಾಳು ಬಯಸಿದ್ದಿಲ್ಲ. ನಾನು ನನ್ನ ಅಮ್ಮನಿಗೆ ಏನಾದರೂ ಪ್ರೀತಿಯಿಂದ ಕೊಡುವುದು, ಅವರನ್ನು ಪ್ರೀತಿಯಿಂದ ನೋಡಿಕೊಳ್ಳುವುದು, ಹಾಗೆ ಅವರಲ್ಲಿ ಒಂದು ದಿನ ಕೇಳಿದೆ ಪ್ರೀತಿಯಿಂದ ನೋಡಿಕೊಂಡರೆ ನಿಮ್ಮ ಋಣವನ್ನು ತೀರಿಸಬಹುದೆ? ಅಮ್ಮ ಹೇಳಿದರು ಇಲ್ಲ ಮಗು ಒಂಬತ್ತು ತಿಂಗಳು ಇರುವಾಗ ನಿನ್ನನ್ನು ಹೊಟ್ಟೆಯಲ್ಲಿ ಹೊತ್ತುಕೊಂಡು ಹೊಸಲು ದಾಟಿದ ಋಣ ಕೂಡ ತೀರಿಸಲು ಸಾಧ್ಯವಿಲ್ಲ. ಹೌದು ಆಕೆಯ ಋಣವನ್ನು ತೀರಿಸಲು ಸಾಧ್ಯವಿಲ್ಲ.
ಹಿಂದಿನಿಂದಲೂ ಮಾತೃವಾತ್ಸಲ್ಯ, ಮಾತೃ ಪ್ರೇಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲವೆಂದು ಇತಿಹಾಸ ಪುರಾಣಗಳಲ್ಲಿ ಕಂಡುಕೊಳ್ಳಬಹುದು. ನನ್ನ ಅಮ್ಮ ನನಗೆ ತುಂಬಾ ಬುದ್ಧಿವಾದಗಳನ್ನು ಹೇಳಿದ್ದಾರೆ, ನಾನು ಈಗ ಏನೇ ನೆರವು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತೇನೆ ಅಂದರೆ ಅದು ನನ್ನ ತಾಯಿ ಅವರಿಂದ ಕಲಿತಿದ್ದು. ಅವರು ಯಾವಾಗಲೂ ಹೇಳುವುದು ಒಂದೇ ಸಾಧ್ಯವಾದರೆ ನಾಲ್ಕು ಜನಕ್ಕೆ ಸಹಾಯ ಮಾಡು, ನೀನು ಮಾಡುವ ಸಹಾಯ ಮುಂದೆ ನಿನ್ನ ಜೀವನಕ್ಕೆ ನೆರವಾಗುತ್ತದೆ ಎನ್ನುತ್ತಿದ್ದರು.
ಯಾವುದೇ ಸ್ವಾರ್ಥ ತುಂಬಿರದ ಪ್ರೀತಿ ಯಾವುದೆಂದರೆ ಅದು ಅಮ್ಮನ ಪ್ರೀತಿ ಮಾತ್ರ. ತಾಯಿಯೇ ಮಗುವಿನ ಮೊದಲ ಗುರು. ನಾವು ಯಾರೂ ದೇವರನ್ನು ಕಂಡಿಲ್ಲ. ಆದರೆ ಆ ದೇವರು ಸೃಷ್ಟಿಸಿದ ತಾಯಿಯನ್ನು ನಾವು ದೇವರ ರೂಪದಲ್ಲಿ ಕಾಣಬಹುದು. ಅಪ್ಪ ಹೊರಗೆ ಹೋಗಿ ದುಡಿಯುವಂತೆ ಅಮ್ಮನು ದುಡಿದು ಬರುತ್ತಾಳೆ . ಅಮ್ಮ, ಮನೆಗೆ ಬಂದ ಮೇಲು ದುಡಿಯುತ್ತಾರೆ. ಹಾಗಾದರೆ ಅವಳಿಗೆ ಎಲ್ಲಿದೆ ವಿಶ್ರಾಂತಿ ? ನಾವು ಬೆಳಗ್ಗೆ ಎದ್ದೇಳುವ ಮೊದಲೇ ಎದ್ದು ಚಾ, ಕಾಫಿ ,ತಿಂಡಿ, ಊಟವನ್ನು ಸಿದ್ಧಮಾಡಿ ಮತ್ತೆ ನನ್ನನ್ನು ಎಬ್ಬಿಸುತ್ತಾರೆ. ಹಾಗಾದರೆ ಅವರು ನಮ್ಮ ಮೇಲೆ ತೋರಿಸುವ ಇಷ್ಟು ಅಕ್ಕರೆಗೆ ನಾವು ಅವಳಿಗೆ ನೀಡುವ ಪ್ರತಿಫಲ ಏನು? ಪ್ರೀತಿ ಎಂಬ ಎರಡಕ್ಷರ ನಾವು ಕೊಡುವ ಪ್ರತಿಫಲ.
ನನಗೆ ನೆನಪಿರುವ ಹಾಗೆ ನಾನು ತುಂಬಾ ಹಠ ಮಾಡುತ್ತಿದ್ದೆ. ನನ್ನ ಹಟ ತರಲೆಗಳು ಒಂದೆರಡಲ್ಲ, ಅದನ್ನೆಲ್ಲ ತಾಳ್ಮೆಯಿಂದ ಸಹಿಸಿಕೊಂಡು ಪ್ರೀತಿ ತೋರಿದ್ದು ಅಮ್ಮ. ನನಗೆ ತಿಳುವಳಿಕೆ ಬಂದ ಮೇಲೆ ಅಮ್ಮ ನನಗೆ ಕಂಡಿದ್ದು ಶ್ರಮಜೀವಿ ಆಗಿ. ಯಾವಾಗಲೂ ಬೀಡಿ ಕಟ್ಟುತ್ತಾ, ಒಂದು ಕಡೆ ನಮ್ಮದೇ ಆದ ಅಂಗಡಿಯನ್ನು ನಡೆಸುತ್ತಾ ಮನೆ ಸಂಸಾರ ಮಕ್ಕಳು ಗಂಡ ಅವರನ್ನು ನೋಡಿಕೊಳ್ಳುವುದು. ಇಷ್ಟೆಲ್ಲಾ ಕೆಲಸಗಳನ್ನು ಮಾಡುತ್ತಿದ್ದಾಗಲೂ ಅವರು ಎಂದು ಆಯಾಸಗೊಂಡವರಲ್ಲ.
ಅಮ್ಮ ಅನ್ನೋ ಎರಡಕ್ಷರದ ಬೆಲೆ ಎಷ್ಟು ಕೋಟಿ ಕೊಟ್ಟರು ಸಿಗದು. ತಾಯಿ ಒಬ್ಬಳೇ.. ಅವಳೇ ಹಡೆದವಳು, ಹೆತ್ತು ಮುದ್ದಾಡಿದಳು, ಸಾಕಿ ಸಲಹಿದವಳು. ಕೊನೆಗೊಂದು ದಿನ ನಾವು ಸಾಧಿಸಿದ ಸಾಧನೆಯ ಪ್ರತೀಕ ಅವಳು. ತಾಯಿ ಅಮೃತ ,ಒಮ್ಮೆ ಅವಳನ್ನು ಕಳೆದುಕೊಂಡರೆ ಮರಳಿ ಬರಲಾರಳು. ಭೂಮಿಯಲ್ಲಿ ಇರುವಷ್ಟು ದಿನ ಅವಳನ್ನು ಪ್ರೀತಿಸಿ, ಪೂಜಿಸಿ ಮುಂದೊಂದು ದಿನ ಅದರ ಪ್ರತಿಫಲ ಸಿಕ್ಕೇ ಸಿಗುತ್ತದೆ.