ಸಾಮಾಜಿಕ ಜಾಲತಾಣ, ವೆಬ್ಸೆೃಟ್ಗಳ ಮೂಲಕ ಕುಲಾಲ/ಕುಂಬಾರ ಸಮುದಾಯದ ಬಿಸಿ ಬಿಸಿ ಸುದ್ದಿಗಳನ್ನು ಬಿತ್ತರಿಸುತ್ತಿರುವ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಕೆಲ ಬೆರಳೆಣಿಕೆಯ ದುಷ್ಟ ಕೂಟದ ಪಾಲಿಗಂತೂ ನುಂಗಲಾರದ ತುತ್ತಾಗಿದೆ. ಇದೇ ಕಾರಣದಿಂದ ಇಂತಹ ಕೆಲವರು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಫೇಸ್ಬುಕ್ ಪುಟವನ್ನು ವರದಿ ಮಾಡಿ ಒತ್ತಾಯಪೂರ್ವಕವಾಗಿ ಬ್ಲಾಕ್ ಮಾಡಿಸಿದ್ದರು. ಕುಂಬಾರ/ಕುಲಾಲ ಸಮುದಾಯದ ಕ್ಷಣ, ಕ್ಷಣದ ಸುದ್ದಿಗಳನ್ನು, ವಿವಿಧ ಮಾಹಿತಿ ಆಧಾರಿತ ಸ್ಪಷ್ಟ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದರಿಂದ ದೇಶ ವಿದೇಶಗಳಲ್ಲಿರುವ ಜಾತಿ ಬಾಂಧವರನ್ನು ಅತೀ ವೇಗವಾಗಿ ತಲುಪುತ್ತಿತ್ತು. ಇದರ ಜನಪ್ರಿಯತೆಯನ್ನು ಸಹಿಸದ ಕೆಲ ವಿಘ್ನ ಸಂತೋಷಿಗಳು ವೆಬ್ ಸೈಟ್ ನ ಸುದ್ದಿಯನ್ನು ಫೇಸ್ ಬುಕ್ ಮೂಲಕ ಹಂಚದಂತೆ ಮಾಡುವಲ್ಲಿ ಸಫಲರಾಗಿದ್ದರು. ಈ ದುಷ್ಟರ ಹುನ್ನಾರವನ್ನು ಅರಿಯದೆ, ಸರಿಯಾದ ಕಾರಣವನ್ನೂ ನೀಡದೆ ಏಕಾಏಕಿ ಫೇಸ್ಬುಕ್ ಕಂಪೆನಿಯು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಎಂಬ ಹೆಸರನ್ನೇ ಬ್ಲಾಕ್ ಮಾಡಿತ್ತು.
ಈ ವಿಷಯಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್ ಎಕ್ಸ್ ಪರ್ಟ್ ಗಳ ಬಳಿ ಮಾಹಿತಿ ವಿನಿಮಯ ನಡೆಸಿದ್ದೇವೆ. ಈ ಬಗ್ಗೆ ನಾವೇನು ಕ್ರಮ ಜರುಗಿಸಿ ಬ್ಲಾಕ್ ಅನ್ನು ತೆಗೆದುಹಾಕಬಹುದು ಎಂಬ ಕುರಿತು ಚರ್ಚೆ ನಡೆಸಲಾಯಿತು. ಈ ಸಂದರ್ಭ ಫೇಸ್ ಬುಕ್ ಮೂಲಕ ವೆಬ್ ಸೈಟ್ ವರದಿಯ ಯಾವುದಾದರೊಂದು ಲಿಂಕನ್ನು ಶೇರ್ ಮಾಡಿ,ಅತ್ಯಧಿಕ ಸಂಖ್ಯೆಯಲ್ಲಿ ರಿವ್ಯೂ ಕೊಟ್ಟಲ್ಲಿ ಬ್ಲಾಕ್ ಓಪನ್ ಆಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಅದರಂತೆ `ಕುಲಾಲ್ ವರ್ಲ್ಡ್’ ಸಹಿತ ಹಲವು ವಾಟ್ಸಾಪ್ ಗ್ರೂಪ್ ಮಿತ್ರರ ಬಳಿ ಪ್ರಾಯೋಗಿಕವಾಗಿ ಇದನ್ನು ಅನುಸರಿಸುವಂತೆ ವಿನಂತಿ ಮಾಡಲಾಯಿತು. ಅದರಂತೆ ಅತ್ಯಧಿಕ ಮಿತ್ರರು `Review’ ನೀಡಿದ ಪರಿಣಾಮ ಇಂದು (ಫೆ.14) ಫೇಸ್ ಬುಕ್ ನ ಬ್ಲಾಕ್ ತೆರವುಗೊಂಡಿದ್ದು, ಹಳೆಯ ಪೋಸ್ಟ್ ಗಳು ಮತ್ತೆ ಕಾಣಿಸಿಕೊಂಡಿದೆ. ಇದರಿಂದ ಒಳಸಂಚು ನಡೆಸಿ ಫೇಸ್ ಬುಕ್ ಗೆ ಆಧಾರ ರಹಿತವಾಗಿ ಸುಳ್ಳು ಮಾಹಿತಿ ರವಾನಿಸಿದ ವೆಬ್ ನ್ಯೂಸ್ ಬ್ಲಾಕ್ ಮಾಡಲು ಯತ್ನಿಸಿದ ದುಷ್ಟರ ಸಂಚು ವಿಫಲವಾಗಿದೆ. ಆ ಮೂಲಕ ಕುಲಾಲ/ಕುಂಬಾರ ಸಮಾಜದ ದನಿಯನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ. ನಮಗೆ ಬೆಂಬಲಿಸಿ ಬ್ಲಾಕ್ ತೆರವುಗೊಳಿಸಲು ಸಹಕರಿಸಿದ ಸರ್ವ ಓದುಗರಿಗೆ, ಹಿತೈಷಿಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು.
– ದಿನೇಶ್ ಬಂಗೇರ ಇರ್ವತ್ತೂರು
ವ್ಯವಸ್ಥಾಪಕ ಸಂಪಾದಕ