- ‘ಹಿಂದು ನಾವೆಲ್ಲ ಒಂದು, ಧರ್ಮ ಉಳಿದರೆ ಜಾತಿ ಉಳಿಯುತ್ತದೆ’ ಎಂಬಿತ್ಯಾದಿ ಅಮಾಯಕರಿಗೆ ‘ಹೌದಲ್ವಾ’ ಎನ್ನಿಸುವ ಘೋಷಣೆಗಳಿಂದ ಕುಲಾಲ ಸೇರಿದಂತೆ ಸಣ್ಣ ಜಾತಿಗಳು ರಾಜಕೀಯ ಪ್ರಾತಿನಿಧ್ಯದಿಂದ ವಂಚಿತರಾಗುತ್ತಿದ್ದಾರೆ. ಈ ಮೂಲಕ ಕುಲಾಲದಂತಹ ಸಮುದಾಯಗಳು ಐತಿಹಾಸಿಕ ತಪ್ಪು ಮಾಡುತ್ತಿದ್ದಾರೆ. ತಮ್ಮ ಮುಂದಿನ ಪೀಳಿಗೆಯನ್ನು ಶಾಶ್ವತ ಅವಕಾಶ ವಂಚಿತರನ್ನಾಗಿ ಮಾಡುತ್ತಿದ್ದಾರೆ.
ಬೆಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ಸಾಮಾಜಿಕವಾಗಿ ಹಿಡಿತ ಹೊಂದಿರುವ ಬಂಟರು, ಜನಸಂಖ್ಯೆಯಲ್ಲಿ ದೊಡ್ಡದಾಗಿರುವ ಬಿಲ್ಲವರು, ಸಂಘಪರಿವಾರವನ್ನು ನಡೆಸುತ್ತಿರುವ ಬ್ರಾಹ್ಮಣರು ಮಾತ್ರ ಈ ಹಿಂದುತ್ವ ರಾಜಕಾರಣದ ಫಲಾನುಭವಿಗಳಾಗಿದ್ದಾರೆ
ಕರಾವಳಿಯಲ್ಲಿ ಈಗ ಬಂಟ-ಬಿಲ್ಲವ-ಬ್ರಾಹ್ಮಣ ಪ್ರಾತಿನಿಧ್ಯದ ಚರ್ಚೆ ನಡೆಯುತ್ತಿದೆ. ರಾಜಕೀಯ ಪ್ರಾತಿನಿಧ್ಯದ ಚರ್ಚೆ ಬಂದಾಗ ಕುಲಾಲ, ದೇವಾಡಿಗ ಸೇರಿದಂತೆ ಸಣ್ಣ ಸಣ್ಣ ಜಾತಿಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗುತ್ತಿದೆ. ಹತ್ತು ಹದಿನೈದು ವರ್ಷಗಳ ಹಿಂದೆ ಕುಲಾಲ ಸೇರಿದಂತೆ ಸಣ್ಣ ಸಣ್ಣ ಜಾತಿಗಳಿಗೂ ರಾಜಕೀಯ ಪ್ರಾತಿನಿಧ್ಯದ ಸರ್ಕಾರಿ ಸ್ಥಾನಮಾನವನ್ನು ಹಂಚಲಾಗುತ್ತಿತ್ತು. ಈಗ ಬಂಟ-ಬಿಲ್ಲವ- ಬ್ರಾಹ್ಮಣ- ಮುಸ್ಲಿಂ-ಕ್ರಿಶ್ಚಿಯನ್ ಹೊರತುಪಡಿಸಿದರೆ ಉಳಿದ ಜನ ಸಮುದಾಯಗಳು ಬದುಕಿಲ್ಲವೇನೋ ಎಂಬಂತೆ ರಾಜಕೀಯ ಪಕ್ಷಗಳು ನಡೆದುಕೊಳ್ಳುತ್ತಿವೆ. ಇದಕ್ಕೆ ಕಾರಣ ಹಿಂದುತ್ವ ರಾಜಕಾರಣ!
‘ಹಿಂದು ನಾವೆಲ್ಲ ಒಂದು, ಧರ್ಮ ಉಳಿದರೆ ಜಾತಿ ಉಳಿಯುತ್ತದೆ’ ಎಂಬಿತ್ಯಾದಿ ಅಮಾಯಕರಿಗೆ ‘ಹೌದಲ್ವಾ’ ಎನ್ನಿಸುವ ಘೋಷಣೆಗಳಿಂದ ಕುಲಾಲ ಸೇರಿದಂತೆ ಸಣ್ಣ ಜಾತಿಗಳು ರಾಜಕೀಯ ಪ್ರಾತಿನಿಧ್ಯದಿಂದ ವಂಚಿತರಾಗುತ್ತಿದ್ದಾರೆ. ಈ ಮೂಲಕ ಕುಲಾಲದಂತಹ ಸಮುದಾಯಗಳು ಐತಿಹಾಸಿಕ ತಪ್ಪು ಮಾಡುತ್ತಿದ್ದಾರೆ. ತಮ್ಮ ಮುಂದಿನ ಪೀಳಿಗೆಯನ್ನು ಶಾಶ್ವತ ಅವಕಾಶ ವಂಚಿತರನ್ನಾಗಿ ಮಾಡುತ್ತಿದ್ದಾರೆ.
ಕರಾವಳಿಯಲ್ಲಿ ಹಿಂದುತ್ವ ರಾಜಕಾರಣ ವಿಜೃಂಭಿಸಿದ ಬಳಿಕ ಮೇಲ್ವರ್ಗ ಮತ್ತು ಪ್ರಭಾವಿ ಸಮುದಾಯಗಳದ್ದೇ ಪಾರುಪತ್ಯವಾಗಿದೆ. ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ಸಾಮಾಜಿಕವಾಗಿ ಹಿಡಿತ ಹೊಂದಿರುವ ಬಂಟರು, ಜನಸಂಖ್ಯೆಯಲ್ಲಿ ದೊಡ್ಡದಾಗಿರುವ ಬಿಲ್ಲವರು, ಸಂಘಪರಿವಾರವನ್ನು ನಡೆಸುತ್ತಿರುವ ಬ್ರಾಹ್ಮಣರು ಮಾತ್ರ ಈ ಹಿಂದುತ್ವ ರಾಜಕಾರಣದ ಫಲಾನುಭವಿಗಳಾಗಿದ್ದಾರೆ. ಹಿಂದುತ್ವ ರಾಜಕಾರಣವು ಇಂತದ್ದೊಂದು ಅಜೆಂಡಾವನ್ನು ಸೆಟ್ ಮಾಡಿರುವುದರಿಂದ ಕಾಂಗ್ರೆಸ್ ಕೂಡಾ ಇದೇ ಮಾದರಿಯ ರಾಜಕಾರಣ ಮಾಡುವುದು ಅನಿವಾರ್ಯವಾಗಿದೆ.
ಹಾಗೆ ನೋಡಿದರೆ, ಕಳೆದ ಹತ್ತು ವರ್ಷದ ಹಿಂದಿನ ಕರಾವಳಿಯಲ್ಲಿ ಕುಲಾಲ ಜಾತಿಗೆ ಪ್ರಾತಿನಿಧ್ಯವಿತ್ತು. ಕುಲಾಲ ಸಮುದಾಯದ ಓಟು ಬೀಳುತ್ತೋ ಬಿಡುತ್ತೋ ಕಾಂಗ್ರೆಸ್ ಪ್ರಾಮಾಣಿಕವಾಗಿ ಕುಲಾಲರಿಗೆ ರಾಜಕೀಯ ಪ್ರಾತಿನಿಧ್ಯ ನೀಡುತ್ತಿತ್ತು. ತೇಜಸ್ವಿ ರಾಜ್ ಎಂಬ ಕುಲಾಲ ಯುವಕನನ್ನು ಎನ್ ಎಸ್ ಯುಐ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಲಾಗಿತ್ತು. ನಂತರ ತೇಜಸ್ವಿ ರಾಜ್ರನ್ನು ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಲಾಗಿತ್ತು. ತೀರಾ ಹಿಂದೆ ಹೋದರೆ ದೇವರಾಜ ಅರಸು ಮತ್ತು ರಾಮಕೃಷ್ಣ ಹೆಗಡೆಯವರು ಕುಂಬಾರ ಸಮುದಾಯದ ಲಕ್ಷ್ಮೀ ಸಾಗರ ಅವರಿಗೆ ರಾಜಕೀಯ ಸ್ಥಾನಮಾನ ಕೊಟ್ಟಿದ್ದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಹಲವು ಜಾತಿಗಳ ಅಭಿವೃದ್ದಿ ನಿಗಮವನ್ನು ಕಾಟಾಚಾರಕ್ಕೆ ಪ್ರಾರಂಭಿಸಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕುಂಬಾರರ ‘ಕುಂಭ ಕಲಾ ಅಭಿವೃದ್ಧಿ ಮಂಡಳಿ’ಗೆ ರಾಜ್ಯ ಕುಂಬಾರರ ಮಹಾಸಂಘದ ಅಧ್ಯಕ್ಷ ಶಿವಕುಮಾರ್ ಚೌಡ ಶೆಟ್ಟಿಯವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು. ಮುಂದೆ ಬಿಜೆಪಿ ಸರ್ಕಾರ ಬಂದಾಗ ಕುಂಭ ಕಲಾ ಅಭಿವೃದ್ದಿ ಮಂಡಳಿಗೆ ಯಾರನ್ನೂ ನೇಮಕ ಮಾಡದೇ ಕುಂಬಾರರಿಗೆ ಅನ್ಯಾಯ ಮಾಡಲಾಯಿತು. ಈ ಬಗ್ಗೆ ಬಿಜೆಪಿಯನ್ನು ಕುಂಬಾರರು ಪ್ರಶ್ನಿಸಿದಾಗ ‘ಕುಂಬಾರರ ಅಭಿವೃದ್ದಿ ನಿಗಮ’ ಎಂಬ ಸ್ವತಂತ್ರ ನಿಗಮ ಸೃಷ್ಟಿಸಿ ಕುಂಬಾರರಿಗೆ ಸ್ಥಾನಮಾನ ನೀಡಲಾಗುವುದು ಎಂದು ವಂಚಿಸಿತ್ತು. ಆದರೆ ಯಡಿಯೂರಪ್ಪ ಸರ್ಕಾರವು ಕುಂಬಾರರ ಸರ್ವಜ್ಞ ಪ್ರಾಧಿಕಾರಕ್ಕೆ ಕುಂಬಾರರನ್ನು ನೇಮಿಸದೇ ಲಿಂಗಾಯತರನ್ನು ನೇಮಿಸಿತ್ತು. ನಂತರ ಬಂದ ಸಿದ್ದರಾಮಯ್ಯ ಸರ್ಕಾರವು ಕುಂಬಾರ ಮಹಾ ಸಂಘದ ಅಧ್ಯಕ್ಷ ಶಿವಕುಮಾರ ಚೌಡ ಶೆಟ್ಟಿಯವರನ್ನು ಪ್ರತಿಷ್ಠಿತ ಬಿಎಂಟಿಸಿ ಉಪಾಧ್ಯಕ್ಷರನ್ನಾಗಿ ನೇಮಿಸಿತ್ತು. ಬಿಎಂಟಿಸಿ ಉಪಾಧ್ಯಕ್ಷ ಹುದ್ದೆಗಾಗಿ ಪ್ರಭಾವಿ ಶಾಸಕರು ಲಾಭಿ ಮಾಡುತ್ತಿದ್ದ ಹೊತ್ತಿನಲ್ಲಿ ಕಾಂಗ್ರೆಸ್ ಸರ್ಕಾರವು ಕುಲಾಲ/ಕುಂಬಾರ ಸಂಘದ ಅಧ್ಯಕ್ಷರಿಗೆ ಆ ಹುದ್ದೆಯನ್ನು ನೀಡಿತ್ತು. ಮೊನ್ನೆ ಮೊನ್ನೆ ರಮಾನಾಥ ರೈಗಳ ಆಪ್ತರಾಗಿರುವ ಕುಲಾಲ ಸಮುದಾಯದ ವಕೀಲರನ್ನು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಲಾಗಿದೆ.
ಒಂದು ಕಾಲದಲ್ಲಿ ಕುಲಾಲ ಸಮುದಾಯ ಜಾತ್ಯಾತೀತ ನಿಲುವನ್ನು ಹೊಂದಿತ್ತು. ಜಾತ್ಯಾತೀತ ನಿಲುವನ್ನು ಹೊಂದಿದ್ದ ಸಮಯದಲ್ಲಿ ರಾಜಕೀಯ, ಸಾಮಾಜಿಕ ಪ್ರಾತಿನಿಧ್ಯವನ್ನೂ ಹೊಂದಿತ್ತು. ಕುಲಾಲ ಸಮುದಾಯದಿಂದ ಬಂದ ಅಮ್ಮೆಂಬಳ ಬಾಳಪ್ಪ ಎಂಬ ಸ್ವಾತಂತ್ರ್ಯ ಹೋರಾಟಗಾರರು ಈ ದೇಶದ ಪ್ರಧಾನಿಯಾಗಿದ್ದ ಪಿ ವಿ ನರಸಿಂಹರಾವ್ ಅವರ ಆಪ್ತರಾಗಿದ್ದರು. ಸಮಾಜವಾದಿ ಸಿದ್ದಾಂತದ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡಿಸ್ಗೆ ಅಮ್ಮೆಂಬಳ ಬಾಳಪ್ಪನವರು ಗುರುಗಳಾಗಿದ್ದರು. ಕರಾವಳಿ ಮಾತ್ರವಲ್ಲದೇ ಕರ್ನಾಟಕದ ಜಾತಿ ಪ್ರಾತಿನಿಧ್ಯದ ವಿಚಾರ ಬಂದಾಗ ಅಮ್ಮೆಂಬಳ ಬಾಳಪ್ಪ ಹಾಕಿದ ಗೆರೆಯನ್ನು ಆಡಳಿತರೂಢ ಕಾಂಗ್ರೆಸ್ಸಿಗರು ದಾಟುತ್ತಿರಲಿಲ್ಲ. ಅಮ್ಮೆಂಬಳ ಬಾಳಪ್ಪನವರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭೂನ್ಯಾಯ ಮಂಡಳಿ ಸದಸ್ಯರಾಗಿ, ಹಿಂದುಳಿದ ವರ್ಗದ ಆಯೋಗದ ಸದಸ್ಯರಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಅಕಾಡೆಮಿ ಕೌನ್ಸಿಲ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಇಂತಹ ಕುಲಾಲ ಸಮುದಾಯ ಈಗ ಎಲ್ಲಿದೆ? ಹಿಂದುತ್ವ ಎಂಬ ಕೊಚ್ಚೆಯಲ್ಲಿ ಕೊಚ್ಚಿ ಹೋಗಿದೆ. ವಿಶ್ವ ಹಿಂದೂ ಪರಿಷತ್, ಭಜರಂಗದಳದಲ್ಲಿ ಕುಲಾಲರು ಕಾಲಾಳುಗಳಾಗಿದ್ದಾರೆ. ಡಾ ಅಣ್ಣಯ್ಯ ಕುಲಾಲ್ ಎಂಬ ವೈದ್ಯರು ಬಿಜೆಪಿ/ಹಿಂದುತ್ವದ ಸಂಘಟನೆ ಮಾಡಿದ್ದಷ್ಟು ಯಾವ ಸಮುದಾಯದ ನಾಯಕನೂ ಮಾಡಿಲ್ಲವೇನೋ? ಡಾಕ್ಟರ್ ಅಣ್ಣಯ್ಯ ಕುಲಾಲ್ ಅವರನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜೀವ್ ಗಾಂಧಿ ಯೂನಿವರ್ಸಿಟಿಗೆ ಸೆನೆಟ್ ಸದಸ್ಯರನ್ನಾಗಿಸಬೇಕು ಎಂದು ಹಲವು ಭಾರಿ ಶಿಫಾರಸ್ಸು ಆಗುತ್ತದೆ. ಆದರೆ ಸೆನೆಟ್ ಸದಸ್ಯರ ಪಟ್ಟಿ ಬರುವಾಗ ಅಣ್ಣಯ್ಯ ಕುಲಾಲ್ ಸೇರಿದಂತೆ ಹಿಂದುಳಿದ ವರ್ಗಗಳ ಹೆಸರೇ ಇರಲಿಲ್ಲ. ಹಿಂದುತ್ವಕ್ಕಾಗಿ ಪ್ರಾಣ ಕೊಡಲು, ಸಂಘಟಿಸಲು ಕುಲಾಲರು ಬೇಕು. ಆದರೆ ಸೆನೆಟ್ ಸ್ಥಾನಮಾನ ಮಾತ್ರ ಬಂಟರು ಮತ್ತು ಇತರರಿಗೆ! ಇದು ಬಿಜೆಪಿ/ಹಿಂದುತ್ವದ ನೀತಿ! ಈವರೆಗೆ ಡಾ ಅಣ್ಣಯ್ಯ ಕುಲಾಲ್ ಗೆ ಎಂಎಲ್ಸಿ ನೀಡಬೇಕು, ವಿವಿ ಸಿಂಡಿಕೇಟ್ ಸದಸ್ಯತ್ವ ನೀಡಬೇಕು ಎಂದು ನಡೆದ ಆಗ್ರಹ ಸಭೆಗಳೆಷ್ಟು? ಕುಲಾಲ ಸಮುದಾಯದ ಈ ಕೂಗು ಬಿಜೆಪಿ/ಹಿಂದುತ್ವಕ್ಕೆ ಯಾಕೆ ಕೇಳಿಲ್ಲ? ಯಾಕೆಂದರೆ ಹಿಂದುತ್ವದ ಫಲಾನುಭವಿಗಳು ಮೇಲ್ವರ್ಗಗಳು ಮಾತ್ರ!
ಕುಲಾಲರು ಎಷ್ಟೇ ಸಂಖ್ಯೆಯಲ್ಲಿ ಬಿಜೆಪಿ/ಹಿಂದುತ್ವದ ಭಾಗವಾದರೂ ಅವರಿಗೆ ರಾಜಕೀಯ ಪ್ರಾತಿನಿಧ್ಯ ಸಿಗುವುದಿಲ್ಲ. ಬದಲಾಗಿ ನಿಮ್ಮ ಸಮುದಾಯದ ಪ್ರಾತಿನಿಧ್ಯವು ರಾಜಕೀಯ ಮಾತ್ರವಲ್ಲದೇ ಎಲ್ಲಾ ಸೆಕ್ಟರ್ ಗಳಲ್ಲಿ ಕಡೆಗಣಿಸಲ್ಪಡುತ್ತದೆ ಎಂಬುದನ್ನು ಕುಲಾಲ ಸಮುದಾಯಕ್ಕೆ ಮನವರಿಕೆ ಮಾಡಬೇಕಿದೆ. ಕುಲಾಲರಿಗೆ ರಾಜಕೀಯ, ಸಾಮಾಜಿಕ, ಆರ್ಥಿಕ ಪ್ರಾತಿನಿಧ್ಯ ಸಿಗದೇ ‘ಹಿಂದೂ ನಾವೆಲ್ಲ ಒಂದು’ ಎನ್ನುವುದು ವಂಚನೆಯಲ್ಲವೇ?
ಹಿಂದುತ್ವದ ಮೇನಿಯಾವು ಸಣ್ಣ ಸಣ್ಣ ಜಾತಿಗಳ ಅಸ್ತಿತ್ವವನ್ನೇ ನಿರಾಕರಿಸುತ್ತದೆ. ಪ್ರಸ್ತುತ ರಾಜಕಾರಣದಲ್ಲಿ ನಡೆಯುತ್ತಿರುವಂತೆ ಸಂಖ್ಯೆ ಮತ್ತು ಪ್ರಭಾವದ ಆಧಾರದ ಹಿಂದುತ್ವ ರಾಜಕಾರಣವೇ ಟ್ರೆಂಡ್. ಆದರೆ, ಮುಂದೆ ಯಾವ ಪಕ್ಷ, ಸರ್ಕಾರ ಅಧಿಕಾರಕ್ಕೆ ಬಂದರೂ ಕುಲಾಲರಂತಹ ಸಣ್ಣ ಜಾತಿಗಳಿಗೆ ಪ್ರಾತಿನಿಧ್ಯ ಸಿಗುವುದಿಲ್ಲ. ಹಾಗಾಗಿ ಹಿಂದುತ್ವ ಎಂಬ ಮೇನಿಯಾದಿಂದ ಕುಲಾಲರು ಹೊರ ಬಂದು ತಮ್ಮ ಗತ ವೈಭವದ ರಾಜಕೀಯವನ್ನು ಮತ್ತೆ ಮುಂದುವರೆಸುವ ಮೂಲಕ ಸಣ್ಣ ಜಾತಿಗಳ ಪ್ರಾತಿನಿಧ್ಯವನ್ನು ರಕ್ಷಿಸಬೇಕಿದೆ.
* ನವೀನ್ ಸೂರಿಂಜೆ
(ಕೃಪೆ : eedina.com)