ಶರಣ ಕುಂಬಾರ ಗುಂಡಯ್ಯನ ಸ್ಮರಣೋತ್ಸವ ನಿಮಿತ್ತ ವಿಶೇಷ ಲೇಖನ.
ಒಂದಿಷ್ಟು ಮಣ್ಣಿನ ಮೇಲೆ ರಭಸವಾಗಿ ನೀರು ಸುರಿದರೆ ಹೇಳ ಹೆಸರಿಲ್ಲದಂತೆ ಅಲ್ಲಿದ್ದ ಮಣ್ಣೆಲ್ಲ ಚದುರಿ ಹೋಗಿ ನೀರೊಳಗೆ ಬೆರೆತು ಮಣ್ಣೇ ಕಾಣಿಸದಂತಾಗು ತ್ತದೆ. ಸ್ವಲ್ಪ ಸ್ವಲ್ಪವಿದ್ರೂ ಅದು ಮತ್ತೊಂದೆಡೆ ಹರಿದು ಹೋಗುತ್ತದೆ. ಹಾಗೆಯೇ ತುಸುವೇ ನೀರಿನಲ್ಲಿ ಬಹಳಷ್ಟು ಮಣ್ಣನ್ನು ಸುರಿದುಬಿಟ್ಟಾಗ ಅಲ್ಲಿ ನೀರು ಇತ್ತೋ ಇಲ್ಲವೋ ಎಂಬಂತೆ ನೀರಿನಂಶ ಇದ್ದೂ ಇಲ್ಲದಂತೆ ಮರೆಯಾಗಿಬಿಡುತ್ತದೆ. ಆದರೆ ನಿಗದಿತ ಪ್ರಮಾಣದಲ್ಲಿ ಮಣ್ಣು ಮತ್ತು ನಿಗದಿತ ಪ್ರಮಾಣದ ನೀರನ್ನು ಬೆರೆಸಿ, ಹದವಾಗಿಸಿ ಮುದ್ದೆಯನ್ನು ಮೆದುಮಾಡಿ ಕೈಹಿಡಿದು ತಟ್ಟಿ ತಿಗರಿಯಲ್ಲಿ ತಿರುಗಿಸಿ ಕೈಯಿಂದ ತಟ್ಟುತ್ತ ತಟ್ಟುತ್ತಾ ಮಟ್ಟಸಗೊಳಿಸಿ ಒಂದು ಆಕಾರಕ್ಕೆ ತಂದು ಬೆಂಕಿಯಲ್ಲಿ ಹದವಾಗಿ ಬೇಯಿಸಿ ಗಡಿಗೆ/ಮಡಕೆಯನ್ನು ಮತ್ತು ಮಣ್ಣಿನ ಬೇರೆ ಬೇರೆ ಪರಿಕರಗಳನ್ನು ಮಾಡುವ ಕುಂಬಾರನ ಕೈಚಳಕದಲ್ಲಿ ಅದೆಂಥ ಅಭಿಯಂತರ ಜ್ಞಾನವಿದ್ದೀತು!! ನಿಜಕ್ಕೂ ಆಶ್ಚರ್ಯವೆನಿಸುತ್ತದೆ. ಇಂಥ ಗಡಿಗೆಗಳು ಪರಿಕರಗಳನ್ನು ಬಳಸಿದಲ್ಲಿ ಆಹಾರ/ನೀರು ಸಹ ಗುಣಮಟ್ಟದ್ದಾಗಿ ರೂಪಗೊಳ್ಳುತ್ತದೆ.
ಇಂದಿನ ಆಧುನಿಕ ಪರಿಕರಗಳಲ್ಲಿ ಶೇಖರಿಸಿಡುವುದಕ್ಕಿಂತಲೂ ಹೆಚ್ಚು ಗುಣಮಟ್ಟವನ್ನು ಕಾಯ್ದುಕೊಳ್ಳುವಂಥ ಇವುಗಳನ್ನು ರೂಪಿಸಿದ ಕುಂಬಾರನ ಚಾಣಾಕ್ಷತನ ಮತ್ತು ಜ್ಞಾನ ಇಂದಿನ ವ್ಯವಸ್ಥೆಯಲ್ಲಿ ಗೌಣವಾಗುತ್ತಿದೆಯಾದರೂ ಬಿಸಿಲು ನಾಡಿನ ಭಾಗದಲ್ಲಿ ಇಂದಿಗೂ ರಿಫ್ರಿಜರೇಟರ್ನತ್ತ ವಾಲದ ಜನ ಗಡಿಗೆಗಳನ್ನು ಖರೀದಿಸಿ ಅವುಗಳಲ್ಲಿ ಸಂಗ್ರಹಿಸಿದ ತಂಪಾದ ನೀರಿಗೆ ಮೊರೆ ಹೋಗುತ್ತಿರುವುದನ್ನು ಕಂಡಾಗ ಅಂದಿನ ಕುಂಬಾರಿಕೆಯ ಕಲೆ ಮತ್ತು ಕೈಚಳಕ ಎಂದೆಂದಿಗೂ ಪ್ರಸ್ತುತ ಮತ್ತು ಮೌಲ್ಯಯುತವಾಗಿವೆ ಎಂಬುದು ಕೇವಲ ಕುಂಬಾರಿಕೆಯಷ್ಟೇ ಅಲ್ಲ ಹಲವು ಬಗೆಯ ಕರಕುಶಲ ಕಲೆಗಳು ಮತ್ತೇ ಮತ್ತೇ ಸಾಬೀತುಪಡಿಸುತ್ತಲಿವೆ.
ಬಹುಶಃ ಇದಕ್ಕೆಲ್ಲ ಕಾರಣ ಅಂದಿನ ಕಾಲದಲ್ಲಿ ಸರಳತೆಯನ್ನು ಮೈಗೂಡಿಸಿಕೊಂಡಿದ್ದ ಕಾಯಕ ಜೀವಿಗಳಲ್ಲಿಯ ಕಾಯಕದ ಪ್ರಜ್ಞೆ ಮತ್ತು ತಮ್ಮ ಕಾಯವನ್ನು ಕೈಲಾಸ ಮಾಡಿಕೊಂಡು ತಮ್ಮ ಅಂಥ ಪವಿತ್ರ ಕಾಯಕದಲ್ಲಿಯೇ ಕೈಲಾಸವನ್ನು ಕಂಡುಕೊಂಡಿರುವ ಅವರ ನಿಲುವು. ಕಾಯಕ ಮತ್ತು ಭಕ್ತಿಯನ್ನು ಸಮ್ಮಿಳಿತಗೊಳಿಸಿಕೊಂಡ ಅವರ ಕಾಯವೇ ಲಿಂಗವಾಗುತಿತ್ತು. ಅವರ ಆ ಬಗೆಯ ಕಾಯಕದಲ್ಲಿಯೇ ಕೈಲಾಸವನ್ನು ಕಾಣುವಂಥವರಾಗಿದ್ದರು. ಹೀಗಾಗಿ ಅವರು ದೇವಾಲಯದ ಬದಲಾಗಿ ದೇಹಾಲಯಕ್ಕೆ ಮೊರೆ ಹೋಗಿ ತಮ್ಮ ಕಾಯಕವನ್ನೇ ಪೂಜೆಯಾಗಿಸಿಕೊಂಡು ಆ ಮೂಲಕ ತಮ್ಮೊಳಗಣ ಅರಿವೆಂಬ ದೇವನನ್ನು ಕಂಡುಕೊಂಡು ತಾವೇ ಮಹಾದೇವನಾಗುತ್ತಿದ್ದರು. ಮಡಕೆಯೊಂದು ಹದ ಮಣ್ಣಲ್ಲಿದ್ದಂತೆ ಮಹಾದೇವನೆಂಬ ಶಿವ ಶುದ್ಧ ಭಕ್ತನೊಳಗೇ ಸದಾ ಇರುತ್ತಿದ್ದನೆಂಬುದಕ್ಕೆ ನಮ್ಮಲ್ಲಿಯ ಅನೇಕ ಶರಣರು, ಸಂತರು, ದಾಸರು, ವಿವಿಧ ಮಾದರಿಯ ಸಾಧಕರು ಸಾಧಿಸಿ ತೋರಿದ್ದಾರೆ.
ಹನ್ನೆರಡನೇ ಶತಮಾನದ ವಚನಕಾರರಲ್ಲಿ ಬಸವಣ್ಣನ ಸಂಸರ್ಗಕ್ಕೆ ಒಳಗಾದ ಪ್ರತಿಯೊಬ್ಬರು ಕಾಯಕ ಜೀವಿಗಳಾಗಿದ್ದಂಥ ಶರಣರಲ್ಲಿ ಕುಂಬಾರ ಗುಂಡಯ್ಯ ತನ್ನ ಕಾಯಕದಲ್ಲಿ ಯಾವ ರೀತಿ ಮೈಮರೆಯುತ್ತಿದ್ದನೆಂದರೆ ಕಾಯಕ ಮಾಡುತ್ತ ಮಾಡುತ್ತ ತನ್ನ ಕಾಯದಲ್ಲಿಯೇ ಕೈಲಾಸವನ್ನನುಭವಸಿ ತನ್ನ ಮೈಯೊಳಗೇ ಮಹಾದೇವನನ್ನು ಅನುಭವಿಸುತ್ತಿದ್ದ ಮಣ್ಣ ಮಡಿಕೆ ಮಾಡುವ ಕುಂಬಾರ ಗುಂಡಯ್ಯನೀತ. ಇಂದಿನ ಬೀದರ್ ಜಿಲ್ಲೆ ಭಾಲ್ಕಿಯಲ್ಲಿ ಕುಂಬಾರ ಗುಂಡಯ್ಯ ಜನಿಸಿರುವ ಸಾಧ್ಯತೆ ಇದೆ. ಶಾಸನಗಳ ಪ್ರಕಾರ ಭಾಲ್ಕಿ ಊರಿಗೆ ಭಲ್ಲೂ ನಗರ, ಭಲ್ಲುಂಕ , ಭಾಲಿಕ, ಭಾಲಕ ಎಂಬ ಪ್ರಾಚೀನ ಹೆಸರು ಇರುವುದನ್ನು ಗಮನಿಸಬೇಕಿದೆ. ಈತ ಬಸವಣ್ಣನ ಕಾಲದವನೋ ಅಥವಾ ಬಸವ ಪೂರ್ವದವನೋ ಎಂಬ ಅನುಮಾನವಿದ್ದರೂ ಹರಿಹರನ ರಗಳೆ ಮುಂತಾದ ದಾಖಲೆಗಳ ಪ್ರಕಾರ ಬಸವಣ್ಣನ ಕಾಲದವನೇ ಇರಬೇಕೆಂದು ನಂಬಲಾಗಿದೆ.
ಗುಂಡಯ್ಯ ಸ್ವತಃ ವಚನಗಳನ್ನು ರಚಿಸಿಲ್ಲವಾದರೂ ಅನುಭವ ಮಂಟಪದಲ್ಲಿ ಹಲವಾರು ವಚನಕಾರರಿಂದ ಹಲವಾರು ವಚನಗಳು ರೂಪುಗೊಳ್ಳುವಂಥ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದನಂತೆ. ಹೀಗಿದ್ದಾಗ ಈತ ವಚನಗಳನ್ನು ರಚಿಸಿರಬಹುದಾದರೂ ಅವುಗಳು ಕಲ್ಯಾಣ ಕ್ರಾಂತಿಯಲ್ಲಿ ನಾಶವಾಗಿರುವ ಸಾಧ್ಯತೆಯೂ ಇದೆ. ಈ ಕುರಿತು ಶೋಧ ಕಾರ್ಯವಾಗಬೇಕೆನಿಸುತ್ತದೆ. ಈತನ ಪತ್ನಿ ಶರಣೆ ಕೇತಲಾದೇವಿ ಅದ್ಭುತವಾದ ಅನುಭಾವಿಕ ವಿಚಾರಸತಿ. ಇವರಿಬ್ಬರ ಕಾಯಕದ ಬದುಕಿನೊಡನೆ ಆಧ್ಯಾತ್ಮದ ಬದುಕು “ಸತಿಪತಿಗಳಿಂದೊಂದಾದ ಭಕ್ತಿಯಾಗಿ ಮಹಾದೇವನಿಗೆ ನೇರವಾಗಿ ಅರ್ಪಿತವಾಗುತ್ತಿತ್ತು” ತನ್ನ ಪತಿಯ ಅನುಭಾವಿಕ ವಿಚಾರಗಳ ಹಿನ್ನೆಲೆಯ ಪ್ರೇರಣೆ ಮತ್ತು ತಾನು ಕಂಡುಕೊಂಡ ಅನುಭಾವವನ್ನೊಳಗೊಳಿಸಿ ಕೇತಲಾದೇವಿ ರಚಿಸಿದ ಕೇವಲ ಎರಡು ವಚನಗಳು “ಕುಂಭೇಶ್ವರಾ” ಎಂಬ ವಚನಾಂಕಿತದಲ್ಲಿ ಅಧ್ಯಯನಕ್ಕೆ ಇಂದು ಲಭ್ಯವಿವೆ. ಆ ವಚನಗಳ ಮೂಲಕ ಈ ಶರಣ ದಂಪತಿಗಳ ಅನುಭಾವಿಕತೆಯನ್ನು ಅನುಭವಿಸಬಹುದು.
ಕುಂಬಾರ ಗುಂಡಯ್ಯನದ್ದು ಗಡಿಗೆ/ಮಡಕೆಯನ್ನು ಮತ್ತು ಪರಿಕರಗಳನ್ನು ತಯಾರಿಸುವ ಕಾಯಕ. ಬಹಿರಂಗದಲ್ಲಿ ಘಟದ ಕಾಯಕವನ್ನು ಮಾಡುತ್ತ ಆ ಕಾಯಕದಲ್ಲಿ ಭಕ್ತಿಯನ್ನು ಬೆರೆಸಿ ತನ್ಮಯನಾಗಿ ಸಂತಸ ಪಡುತ್ತಲೇ ಆಂತರ್ಯದಲ್ಲಿ ಶಿವನ ಸೇವೆ ಮಾಡುವ, ಆ ಶಿವನನ್ನೇ ತನ್ನೊಳಗೇ ಆವೀರ್ಭವಿಸಿಕೊಳ್ಳುವ ಆತನೊಡನೆ ತಾನೂ ಒಲುಮೆಯ ಕೂಟವನ್ನನುಭವಿಸುವ ಮೂಲಕ ಏಕಕಾಲಕ್ಕೆ ಕಾಯಕ ಮತ್ತು ಭಕ್ತಿಯನ್ನು ಮಾಡುವ ಅದ್ಭುತ ಅನುಭಾವಿ ಶರಣ. ಹೀಗೆ ತಾನು ತಯಾರಿಸಿದ ಗಡಿಗೆಯನ್ನು ಒಂದೊಮ್ಮೆ ತನ್ಮಯನಾಗಿ ಬಾರಿಸುತ್ತ ಕುಣಿಯುತ್ತಿದ್ದ ಗುಂಡಯ್ಯನ ತನು ಅಲುಗಾಡುತ್ತಿದ್ದರೆ ಆತನೊಳಗಿರುವ ದೇವನೆಂಬ ಲಿಂಗ ಅಲ್ಲಾಡುತ್ತಲೇ ಗುಂಡಯ್ಯನ ಕಾಯಕ ಮತ್ತು ಭಕ್ತಿಯನ್ನು ಮೆಚ್ಚಿ ತನ್ನಷ್ಟಕ್ಕೆ ತಾನೇ ಸಂತಸ ಪಡುತ್ತಾ ಆತನಂತೆಯೇ ಕುಣಿಯುತ್ತಿತ್ತಂತೆ, ಆತನ ಸತ್ಯಶುದ್ಧ ಕಾಯಕ ಮತ್ತು ನಡೆಯನ್ನು ಮೆಚ್ಚಿ ಹೌದಹುದೆನ್ನುತ್ತಿತ್ತಂತೆ. ಜನಪದರು ಈ ಘಟನೆಯನ್ನು ಮತ್ತಷ್ಟು ವೈಭವೀಕರಿಸಿ, ಆ ಪರಶಿವನೇ ತನ್ನ ಪತ್ನಿ ಗಿರಿಜೆಯನ್ನು ಬಿಟ್ಟು ಗುಂಡಯ್ಯನ ಹತ್ತಿರ ಬಂದು ನರ್ತಿಸುತ್ತಿದ್ದನೆಂದು ಹಾಡುತ್ತಾರೆ. ಆತನ ಭಕ್ತಿಯ ನಿಷ್ಠೆಯನ್ನು ಕಂಡು ಶಿವ ಆತನನ್ನು ಎಚ್ಚರಿಸಬೇಕೆಂದು ಆತನೊಳಗಣ ಶಿವಲಿಂಗವನ್ನು ಅಂದರೆ ಬಸವ ತತ್ವದಂತೆ ಆತನ ಮನಲಿಂಗವನ್ನು ತನ್ನತ್ತ ಆಕರ್ಷಿಸುತ್ತಾನಂತೆ. ಆಗ ತನ್ನ ಮನದೊಳಗಣ ಲಿಂಗದೊಡನೆ ಗುಂಡಯ್ಯ ಕಣ್ತೆರೆದು ಮುಂದೆ ನಿಂತಿದ್ದ ಪರಶಿವನನ್ನು ಕಂಡು ಹರ್ಷಿತನಾಗಿ ಮತ್ತೇ ಬಾರಿಸುತ್ತ ಕುಣಿಯುತ್ತಾನೆನ್ನುತ್ತಾರೆ. ಇದು ಮೇಲ್ನೋಟಕ್ಕೆ ಪೌರಾಣಿಕ/ಜನಪದರ ಕಥೆಯೆನಿಸಿದರೂ ಸಹ ಇದರ ಹಿಂದಿನ ಅನುಭಾವಿಕತೆಯನ್ನರಿಯಬೇಕಿದೆ.
ಬಾಹ್ಯದ ಕಾಯಕದೊಡನೆ ಭಕ್ತಿಯೂ ಬೆರೆತು ಭಕ್ತನ ಅಂತರಂಗದಲ್ಲಿ ಮನಲಿಂಗವನ್ನು ತಲುಪಿ ಅದು ಮೆಚ್ಚಿ ಭಕ್ತನೊಡನೆ ತಾನು ನಲಿಯುತ್ತಿರುವದನ್ನು ಕಂಡು ಜೀವಾತ್ಮ ಮತ್ತು ಪರಮಾತ್ಮನ ಪ್ರತೀಕವಾದ ಶಿವನೇ ಭಕ್ತನಂಗಳಕ್ಕೆ ಬಂದು ಜೀವ-ಶಿವರು ಒಂದಾಗಿದ್ದನ್ನು ಅನುಭವಿಸುವ ಈ ಅನುಭಾವಿಕ ನೆಲೆಯನ್ನು ಬಸವ ವಿಶಿಷ್ಠದ್ವೈತವೆನ್ನಬಹುದು. ಏಕೆಂದರೆ ಶಿವ-ಜೀವರನ್ನು ಒಂದಾಗಿಸುವಂತೆ ಸಾಧ್ಯವಾಗುವುದೇ ಇಷ್ಟಲಿಂಗ ಪೂಜಿಸಿಕೊಳ್ಳುವಲ್ಲಿ ತಾನೇ? ಶಿವನನ್ನು ಅಂತರಂಗದಲ್ಲಿಯೇ ಹುಡುಕಿಕೊಳ್ಳುವ ಪರಿಯನ್ನು ಈ ಘಟನೆ ಮತ್ತಷ್ಟು ಪುಷ್ಠೀಕರಿಸುತ್ತದೆ. ಇದಕ್ಕಾಗಿ, “ಜಗವೆಲ್ಲವ ಆಡಿಸುವ ಶಿವನನ್ನೇ ಗುಂಡಯ್ಯ ತನ್ನ ಮಡಿಕೆಯಿಂದ ಆಡಿಸಿದ” ಎನ್ನುತ್ತದೆ ಹರಿಹರನ ಕಾವ್ಯ. ಅಂದರೆ ಇಲ್ಲಿ ಗುಂಡಯ್ಯನ ಪವಿತ್ರವಾದ ಕಾಯಕ ಮತ್ತದರಿಂದ ರೂಪಗೊಂಡ ಗಡಿಗೆಗಳು ದೈವತ್ವಕ್ಕೇರುತ್ತವೆ. ಶೂದ್ರರು ಮತ್ತವರ ಕಾಯಕದಿಂದ ನೇರವಾಗಿ ಪರಶಿವನಿಗೆ ಹತ್ತಿರವಾಗುವಂಥ ಅದ್ಭುತವಾದ ನಿದರ್ಶನವನ್ನಿಲ್ಲಿ ಕಾಣಬಹುದಾಗಿದೆ. ಮಣ್ಣೆತ್ತಿನ ಅಮವಾಸೆಯಂದು ಮಣ್ಣಿನಿಂದಲೇ ನಿರ್ಮಿಸಿದ ಎತ್ತುಗಳನ್ನು ಸಾಂಕೇತಿಕವಾಗಿ ಪೂಜಿಸುವ ಮೂಲಕ ಸಕಲ ಜೀವಿಗಳಿಗೂ ಮತ್ತು ಅವುಗಳಿಗೆ ಆಶ್ರಯವಾಗಿರುವ ಮಣ್ಣಿಗೂ ಅವಿನಾಭಾವ ಸಂಬಂಧವಿರುವುದರ ಅರಿವನ್ನು ಜಾಗೃತಗೊಳಿಸಿಕೊಳ್ಳುವದು ವಾಡಿಕೆ. ಈ ಮಣ್ಣೆತ್ತಿನ ಅಮವಾಸೆಯ ದಿನವೇ ಕುಂಬಾರ ಗುಂಡಯ್ಯನ ಸ್ಮರಣೋತ್ಸವವನ್ನಾಚರಿಸುತ್ತಿರುವುದು ಸಹ ಮಣ್ಣಿನಿಂದಲೇ ಆತ ನಿರ್ಮಿಸುತ್ತಿದ್ದ ಮಡಕೆಯೊಂದಿಗಿನ ಆತನ ಭಕ್ತಿಯ ಪರಿಕಲ್ಪನೆಯನ್ನು ಅನುಭಾವಿಸಬೇಕೆಂಬ ಅರಿವನ್ನರಿಯಬೇಕಿದೆ.
“ಕುಂಬಾರ ಗುಂಡಯ್ಯ ತುಂಬಿ ತಿಗರಿಗೆ ಕೆಸರ ಶಂಭು ಹರನೆಂದು ತಿರುಗಿಸಲು ಶಿವಕುಣಿದ ಹಂಬಲಿಸಿ ಜಂಗ ಕಂಬಿಗೊಂಡ” ಎನ್ನುವ ನುಡಿಯಿದೆ. ಈತನ ಕಾರ್ಯಕ್ಷೇತ್ರ ಭಾಲ್ಕಿಯಾಗಿದ್ದರಿಂದ ಈಗಲೂ ಭಾಲ್ಕಿಯಲ್ಲಿ ಕಂಭೇಶ್ವರ ದೇವಾಲಯವಿದೆ. ಕುಂಬಾರ ಗುಂಡಯ್ಯನ ಉಬ್ಬು ಶಿಲ್ಪವಿದೆ. ಭಾಲ್ಕಿಯಲ್ಲಿ ಭಲ್ಲುಂಕೆ, ಭಲ್ಕೇಶ್ವರ, ಕುಂಬೇಶ್ವರ ಲಿಂಗಗಳುಳ್ಳ ದೇವಾಲಯಗಳಿವೆ. ಒಟ್ಟು ಹನ್ನೆರಡು ಲಿಂಗಗಳಿವೆ ಎನ್ನುತ್ತಾರೆ. ಗೊರ್ಟಾ, ಅಬ್ಬಲೂರು, ಬಳ್ಳಾರಿಯಲ್ಲಿಯೂ ಇಂಥ ದೇವಾಲಯಗಳಿವೆ ಹಾಗೂ ಅಬ್ಬಲೂರಿನ ಸೋಮೇಶ್ವರ ದೇವಾಲಯದಲ್ಲಿ ಕುಂಬಾರ ಗಉಂಡನ ಮುಂದೆ ಬಂದಾಡಿದ ನಮ್ಮ ಶಿವನು ಎಂಬ ಬರಹವಿದ್ದು ಕೆಳಗೆ ಗಡಿಗೆ ಬಾರಿಸುತ್ತ ಕುಳಿತ ಗುಂಡಯ್ಯನ ವಿಗ್ರಹವನ್ನು ಕೆತ್ತಲಾಗಿದೆ. (ಡಾ. ಜಯಶ್ರೀ ದಂಡೆಯವರ ಶರಣರ ಕ್ಷೇತ್ರ ದರ್ಶನ ಗ್ರಂಥದಲ್ಲಿ ಈ ಮಾಹಿತಿ ಸಿಗುತ್ತದೆ). ಇಂದಿಗೂ ಭಾಲ್ಕಿಯ ಈ ಭಾಗದಲ್ಲಿ ನಡೆದಾಡುತ್ತಿದ್ದರೆ ಕುಂಬಾರ ಗುಂಡಯ್ಯನ ಮಡಕೆಯ ಸುಮಧುರ ನಾದ ಸಹೃದಯದವರ ಮನಕ್ಕೆ ತಾಕಬಹುದು.<
ಶರಣ ಕುಂಬಾರ ಗುಂಡಯ್ಯನ ಮಡದಿ ಕೇತಲಾದೇವಿಯ ವಚನಗಳ ಮೂಲಕ ಮತ್ತಷ್ಟು ಈ ಶರಣ ದಂಪತಿಗಳ ಭಕ್ತಿಯ ನಿಲುವನ್ನು ಅರಿಯಬಹುದೆಂದು ನನ್ನಾಶಯ. ಇಂದಿಗೂ ಕಲ್ಬುರ್ಗಿಯ ಭಾಗದಲ್ಲಿ ಜನಪದರು “ಕುಂಬಾರ ಗುಂಡಯ್ಯನ ಮಡದಿ ಕಡಗದ ಕೈಯಾಕೆ ಕೊಡದ ಮ್ಯಾಲೇನು ಬರದಾಳ ಸೋ/// ಕಲಬುರಗಿ ಶರಣಬಸವನ ಬರದಾಳ ಸೋ///” ಎಂದು ಹಾಡುವದನ್ನು ಕೇಳಿದ್ದೇನೆ. ಈಕೆಯ ಪ್ರಸಿದ್ದ ವಚನವೊಂದು ಹೀಗಿದೆ,- “ಲಿಂಗವಂತರ ಲಿಂಗಾಚಾರಿಗಳ ಅಂಗಳಕ್ಕೆ ಹೋಗಿ ಲಿಂಗಾರ್ಪಿತವ ಮಾಡುವಲ್ಲಿ ಸಂದೇಹವಿಲ್ಲದಿರಬೇಕು. ಕಾಣದುದನೆ ಆಚರಿಸದೆ, ಕಂಡುದನು ನುಡಿಯದೆ ಕಾಣದುದನ ಕಂಡುದನು ಒಂದೇ ಸಮವೆಂದು ಅರಿಯಬಲ್ಲರೆ ಕುಂಭೇಶ್ವರ ಲಿಂಗವೆಂಬೆನು” ಎಂಬಲ್ಲಿ ಅಂಗಗುಣವಳಿದುಕೊಂಡು ಲಿಂಗಗುಣವುಳ್ಳವರ ಮನೆಯಂಗಳಕ್ಕೆ ಹೋಗಿ ಲಿಂಗಾರ್ಪಿತ ಮಾಡುವಾಗ ಅಲ್ಲಿ ಸಂದೇಹವಿರಬಾರದೆನ್ನುತ್ತಾಳೆ. ಏಕೆಂದರೆ ಲಿಂಗವಂತರೆಂದರೆ ಶರಣತ್ವವನ್ನು ಮೈಗೂಡಿಸಿಕೊಂಡವರು. ತಮ್ಮ ನಡೆಯನ್ನು ಮಾತ್ರ ನುಡಿಯಾಗಿಸಿಕೊಂಡವರು. ತಮ್ಮ ಕಾಯಕದಲ್ಲಿ ಮಾತ್ರ ಪ್ರಸಾದವನ್ನು ಕಂಡವರು. ತಮ್ಮ ಸ್ವಂತ ಭಕ್ತಿಯಲ್ಲಿ ಮಾತ್ರ ತಮ್ಮೊಳಗಣ ಶಿವನನ್ನರಿತವರು. ತಮ್ಮೊಳಗಣ ಪರಶಿವನ ಸ್ವರೂಪವಾದ ಲಿಂಗಯ್ಯನನ್ನು ಅವರು ಮೆಚ್ಚಿಸಿ ಆತನಿಂದ ಅಹುದಹುದೆನಿಸಿಕೊಂಡ ಪರಿಶುದ್ಧರೆಂಬುದು ಆಕೆಯ ನಿಲುವು. ಮುಂದುವರೆದು ಕಾಣದಿರುವದನ್ನು ಆಚರಿಸಬಾರದು. ಕಾಣದಿರುವುದನ್ನು ಸಹ ಕಂಡೆನೆಂದು ನುಡಿಯುವುದು ಸರಿಯಲ್ಲ. ಕಂಡಿರುವುದನ್ನು ಮಾತ್ರ ನುಡಿಯುವುದನ್ನು ಒಂದೇ ಸಮವೆಂದು ಅರಿಯುವದಾದರೆ ಅಂಥವರಿಗೆ ಲಿಂಗವೆಂಬೆನು ಎಂಬುದು ಕೇತಲಾದೇವಿಯ ಧೋರಣೆ. ಈ ವಚನದ ಮೊದಲ ಭಾಗದಲ್ಲಿ ಲಿಂಗವಂತರಲ್ಲಿ ಸಂಪೂರ್ಣ ನಿಷ್ಠೆ ಇರಬೇಕೆಂಬ ನಿಲುವಾದರೆ ಎರಡನೇ ಭಾಗದಲ್ಲಿ ಸತ್ಯವನ್ನು ಆಚರಿಸಬೇಕು. ಕಂಡದ್ದನ್ನು ನುಡಿಯಬೇಕು. ಕಾಣದಿರುವುದನ್ನು ಕಂಡೆನೆಂದು ವಿಜ್ರಂಭಿಸಿ ಹೇಳುವ ಪುಂಡರನ್ನು, ಮೌಢ್ಯರನ್ನು ಸತ್ಯಸಂಧರೆಂದೇ ಅರಿಯುವುದು ಸರಿಯಲ್ಲ. ಇಂಥವರಿಗೆ ಲಿಂಗವೆಂದು ನಾ ಕರೆಯಲಾರೆ. ಭಾವಿಸಲಾರೆನೆನ್ನುವ ಧೃಢ ನಿಲುವನ್ನು ಇಲ್ಲಿ ತೋರುವ ಮೂಲಕ ಅಂಗಗುಣವಳಿದ ಲಿಂಗವಂತರ ನಡೆ ಹೇಗಿರಬೇಕೆಂಬುದನ್ನು ಬಹಳ ಸ್ಪಷ್ಟವಾಗಿಯೇ ಬಯಲುಗೊಳಿಸಿದ್ದಾಳೆ.
“ಹದ ಮಣ್ಣಲ್ಲದೇ ಮಡಕೆಯಾಗದು, ವೃತಹೀನನ ಬಗೆಯಲಾಗದು. ಬೆರೆದಡೆ ನರಕ ತಪ್ಪದು ನಾನೊಲ್ಲೆ ಬಲ್ಲೆನಾಗಿ ಕುಂಭೇಶ್ವರಾ” ಎಂಬುದು ಕೇತಲಾದೇವಿಯ ಮತ್ತೊಂದು ವಚನವಿದು. ಈ ವಚನದಲ್ಲಿ ಒಂದು ಮಡಕೆಯನ್ನು ನಿರ್ಮಿಸಲು ಹದವಾದ ಮಣ್ಣು ಮತ್ತು ನೀರು ಬೇಕು. ನೀರಿನಿಂದ ಮಣ್ಣನ್ನು ಹದಗೊಳಿಸಿ ಕ್ರಮಬದ್ಧವಾಗಿ ಕೈಯಿಂದ ಮಡಕೆಯನ್ನು ನಿರ್ಮಿಸುವ ಹಾಗೆಯೇ ದೇವಪೂಜೆಯನ್ನು ಮಾಡಿಕೊಳ್ಳಲು ಅಂದರೆ ಇಷ್ಟಲಿಂಗವನ್ನು ಪೂಜಿಸಿಕೊಳ್ಳಲು ಒಂದು ನಿಯಮವಿದೆ, ಅದಕ್ಕೂ ಹೆಚ್ಚಾಗಿ ಒಳ ಮನಸ್ಸು ಇರಬೇಕು. ಪರಿಶುದ್ಧವಾದ ಕಾಯಕ ಮಾಡಲು ಪ್ರತಿಯೊಬ್ಬರಿಗೂ ಒಂದು ನೀತಿ, ನಿಯತ್ತು, ಕ್ರಮ ಬೇಕು. ಬದುಕಿನಲ್ಲಿ ಉತ್ತಮ ನಡೆಯನ್ನು ಅಳವಡಿಸಿಕೊಳ್ಳಲೂ ಒಂದು ಜೀವನ ಕ್ರಮವಿರಬೇಕು. ಇವುಗಳಿಗೆಲ್ಲ ಕೇತಲಾದೇವಿ ವೃತ ಎನ್ನುತ್ತಾಳೆ. ಇಂಥ ವೃತವನ್ನು ಅಳವಡಿಸಿಕೊಂಡು ಬದುಕಿದ ವ್ಯಕ್ತಿಯ ಅಂಗವು ಲಿಂಗಮಯವಾಗುತ್ತದೆ. ಈ ಬಗೆಯ ವೃತವಿಲ್ಲದವನ ಬದುಕು ಹದವಾದ ಮಣ್ಣು ಮತ್ತು ಸಮಪ್ರಮಾಣದ ನೀರು ಬೆರೆಯದ, ಸರಿಯಾಗಿ ಬೇಯದ ಮಡಕೆಯಂತಾಗಿ ಅಲ್ಲಿ ಕೈಲಾಸವಿರದೆ ನರಕವಿರುತ್ತದೆ. ಇಂಥ ವೃತ ಹೀನತೆಯನ್ನು ನಾನೊಲ್ಲೆನೆಂದು ತನ್ನ ದೈವವಾದ ಕುಂಭೇಶ್ವರನಲ್ಲಿ ಭಿನ್ನವಿಸಿಕೊಳ್ಳುತ್ತಾಳೆ. ಹೀಗೆ ತನ್ನ ಕುಲ ಕಾಯಕವಾದ ಕುಂಬಾರಿಕೆಯ ಕ್ರಮದ ಜೊತೆಗೆ ಬದುಕಿನ ವೃತದ ಬಗೆಗೆ ಆಕೆಯ ನಿಲುವನ್ನು ಗಮನಿಸಿದಾಗ ಅವರಲ್ಲಿ ಭಕ್ತಿಯೊಂದಿಗೆ ಕಾಯಕ ಬೆಸೆದುಕೊಂಡಿರುವುದನ್ನು ನೋಡುತ್ತೇವೆ. ಅವರಿಗೆ ಕಾಯವೇ ದೇವಾಲಯ, ತಮ್ಮರಿವಿನ ದೇವನನ್ನು ತಾವೇ ಇಷ್ಟಲಿಂಗದ ಮೂಲಕ ಪೂಜಿಸಿಕೊಳ್ಳುವುದೇ ಭಕ್ತಿ, ತಮ್ಮ ಕಾಯಕದಲ್ಲಿಯೇ ಕೈಲಾಸ ಕಾಣುವವೆಂಬ ಶರಣ ವಿಶಿಷ್ಠದ್ವೈತದ ನಿಲುವನ್ನು ಮತ್ತೇ ಮತ್ತೇ ರೂಪಿಸುತ್ತಲಿರುವುದನ್ನು ನಾವಿಂದು ಅರಿಯಬೇಕಿದೆ.