ಏಳನೇ ತರಗತಿಯಿಂದಲೇ ಮಗುವಿನ ತಲೆಗೆ ನೀನು ಡಾಕ್ಟರ್, ಸಾಫ್ಟ್ ವೇರ್ ಇಂಜಿನಿಯರ್ ಆಗಬೇಕು ಎನ್ನುವುದನ್ನು ಹೇರಿಬಿಡುತ್ತೇವೆ. ಇದಕ್ಕೆ ಬಲವಾದ ಕಾರಣವೆಂದರೆ ನೆರೆಮನೆಯ ಮಗ, ಮಗಳಿಗಿಂತೇನೂ ನಮ್ಮ ಮಕ್ಕಳು ಕಡಿಮೆಯಲ್ಲ ಎನ್ನುವುದೋ ಅಥವಾ ಅವರಿಗಿಂತಲೂ ಹೆಚ್ಚಿನ ಘನಸ್ಥಿಕೆಯಲ್ಲಿ ಮಕ್ಕಳು ಇರಬೇಕು ಎನ್ನುವುದೋ ಗೊತ್ತಿಲ್ಲ. ಇಂಥ ಆಸೆ, ನಿರೀಕ್ಷೆ, ಕನಸು ಇರುವುದು ತಪ್ಪೆನ್ನಲಾಗದು. ಆದರೆ ಇದು ಎಷ್ಟರಮಟ್ಟಿಗೆ ಸರಿ ?
ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕುತ್ತಿರುವ ನಾವು ನಮ್ಮ ಮಕ್ಕಳ ಮೇಲೆ ನಮ್ಮತನವನ್ನು ಹೇಗೆ ಹೇರುತ್ತೇವೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದಕ್ಕೆ ಹೆಚ್ಚೇನೂ ಕಷ್ಟವಿಲ್ಲ. ನಾವು ಅನುಸರಿಸುತ್ತಿರುವುದೇ ಸರಿ ಎನ್ನುವ ನಿರ್ಧಾರಕ್ಕೆ ಬಂದು ಮತ್ತೊಂದು ಮಗ್ಗುಲಲ್ಲಿ ಯೋಚಿಸುವುದಕ್ಕೂ ನಮಗೆ ವ್ಯವಧಾನವಿಲ್ಲ ಮತ್ತು ಅದರ ಅಗತ್ಯವೂ ಇಲ್ಲ ಎಂದುಕೊಂಡು ನಿರುಮ್ಮಳವಾಗಿದ್ದೇವೆ.
ಶಿಕ್ಷಣ ಹೊರೆಯಾಗಬಾರದು ಮನಸ್ಸನ್ನು ಅರಳಿಸಬೇಕು, ಕುತೂಹಲ ಕೆರಳಿಸಬೇಕು ಎನ್ನುವುದು ಸಾಮಾನ್ಯ ಗ್ರಹಿಕೆ. ಆದರೆ ನಾವು ನಮ್ಮ ಮಕ್ಕಳನ್ನು ಶಿಕ್ಷಣ ವ್ಯವಸ್ಥೆಗೆ ಒಗ್ಗಿಸುವಾಗ ಅವರ ಆದ್ಯತೆ, ಅವರ ಗ್ರಹಿಕೆ, ಅವರ ಆಸಕ್ತಿಯನ್ನು ಅರ್ಥಮಾಡಿಕೊಳ್ಳುತ್ತಿದ್ದೇವೆಯೇ ಎನ್ನುವ ಸರಳ ಪ್ರಶ್ನೆಯನ್ನು ನಾವೇ ನಮಗೆ ಹಾಕಿಕೊಂಡರೆ ಸಿಗುವ ಉತ್ತರವೇನು?.
ಮಕ್ಕಳ ಕಲಿಕೆಯ ಸಾಮರ್ಥ್ಯವನ್ನು ಗಣಗೆನೆಗೆ ತೆಗೆದುಕೊಳ್ಳದೆ, ಆಸಕ್ತಿಯನ್ನು ಅರ್ಥೈಸಿಕೊಳ್ಳದೆ ನಮ್ಮ ವಿಚಾರಧಾರೆ, ನಮ್ಮ ಆಸಕ್ತಿ, ನಮ್ಮ ಹಿತಾಸಕ್ತಿಯನ್ನು ಅದೆಷ್ಟುನಾಜೂಕಾಗಿ ಮಕ್ಕಳ ಮೇಲೆ ಹೇರುತ್ತೇವೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ.
ಏಳನೇ ತರಗತಿಯಿಂದಲೇ ಮಗುವಿನ ತಲೆಗೆ ನೀನು ಡಾಕ್ಟರ್, ಸಾಫ್ಟ್ ವೇರ್ ಇಂಜಿನಿಯರ್ ಆಗಬೇಕು ಎನ್ನುವುದನ್ನು ಹೇರಿಬಿಡುತ್ತೇವೆ. ಇದಕ್ಕೆ ಬಲವಾದ ಕಾರಣವೆಂದರೆ ನೆರೆಮನೆಯ ಮಗ, ಮಗಳಿಗಿಂತೇನೂ ನಮ್ಮ ಮಕ್ಕಳು ಕಡಿಮೆಯಲ್ಲ ಎನ್ನುವುದೋ ಅಥವಾ ಅವರಿಗಿಂತಲೂ ಹೆಚ್ಚಿನ ಘನಸ್ಥಿಕೆಯಲ್ಲಿ ಮಕ್ಕಳು ಇರಬೇಕು ಎನ್ನುವುದೋ ಗೊತ್ತಿಲ್ಲ. ಇಂಥ ಆಸೆ, ನಿರೀಕ್ಷೆ, ಕನಸು ಇರುವುದು ತಪ್ಪೆನ್ನಲಾಗದು. ಆದರೆ ಇದು ಎಷ್ಟರಮಟ್ಟಿಗೆ ಸರಿ ?
ನಮ್ಮ ಮನಸ್ಥಿತಿಯೇ ಹೀಗೆ. ನಮ್ಮತನವನ್ನು ಮಾತ್ರ ಪ್ರೀತಿಸುವ, ನಮ್ಮದೇ ಸರಿಯೆಂದು ಪ್ರತಿಪಾದಿಸುವ ಸ್ವಾರ್ಥ ಗುಣ ನಮ್ಮನ್ನು ಆವರಿಸಿಕೊಂಡು ಬಿಟ್ಟಿದೆ. ಇದನ್ನೇ ಮೈಮರೆಯುವಿಕೆ ಎನ್ನುವುದು. ವಾಸ್ತವವಾಗಿ ಇಂಥ ಮೈಮರೆಯುವಿಕೆ ಮಕ್ಕಳ ಅಭಿರುಚಿ, ಆಸಕ್ತಿಯನ್ನು ಕಮರಿಸುತ್ತದೆ, ನೈಜವಾದ ಪ್ರತಿಭೆ ಅರಳಲು ಅವಕಾಶಕೊಡುವುದಿಲ್ಲ ಎನ್ನುವುದನ್ನು ಗ್ರಹಿಸುವುದೇ ಇಲ್ಲ. ಇದು ಮಕ್ಕಳ ಮನಸ್ಥಿತಿಯ ಮೇಲೆ ಗಾಢ ಪ್ರಭಾವ ಬೀರುತ್ತದೆ. ಆಸಕ್ತಿಯಿಲ್ಲದ, ಅಭಿರುಚಿಯಿಲ್ಲದ ತನ್ನದಲ್ಲದ ಶಿಕ್ಷಣವನ್ನು ಮಗು ಕಲಿಯುವುದು ಅನಿವಾರ್ಯವಾಗುತ್ತದೆ. ಮಗುವನ್ನು ಅರ್ಥಮಾಡಿಕೊಳ್ಳುವ ಆಸಕ್ತಿ, ತಾಳ್ಮೆಯೇ ಇಲ್ಲದವರಾಗಿ ಮಗುವಿನ ಮೇಲೆ ಕಲಿಕೆಯ ಭಾರವನ್ನು ಹೇರಿಬಿಡುತ್ತೇವೆ.
ಮೊದಲು ಒಳ್ಳೆಯ ಪ್ರಜೆಯಾಗಬೇಕು, ಸಮಾಜವನ್ನು ಪ್ರೀತಿಸುವ ಮನುಷ್ಯನಾಗಬೇಕು ಎನ್ನುವ ಕಲ್ಪನೆಯೂ ಇಲ್ಲದೆ ಏನಾದರೂ ಆಗು ಮೊದಲು ನೀನು ಮಾನವನಾಗು ಎನ್ನುವ ಕಾಲ ಬದಲಾಗಿ ಈಗ ಮೊದಲು ನೀನು ಡಾಕ್ಟರ್, ಇಂಜಿನಿಯರ್ ಆಗು ಮತ್ತೆ ನಾವು ಹೇಳುತ್ತೇವೆ ಮುಂದೇನಾಗಬೇಕೆಂದು ಎನ್ನುವ ಕಾಲದಲ್ಲಿದ್ದೇವೆ.ಒಂದು ಕಾಲವಿತ್ತು ಮಕ್ಕಳು ಆಡುತ್ತಾ ಓದು ಕಲಿಯಬೇಕು ಎನ್ನುವುದು. ಈಗ ಅದರ ವ್ಯಾಖ್ಯೆ ಬದಲಾಗಿದೆ ಕಲಿಯುತ್ತಾ ಕಲಿಯುತ್ತಾ ಕಾಲ ಕಳೆ ಎನ್ನುವುದು. ಈಗ ಇಂಟರ್ ನೆಟ್, ಮೊಬೈಲ್, ಕ್ಯಾಲ್ಸಿ ಇರುವುದರಿಂದ ಅದರ ಬಳಕೆಯೂ ಅಪರಾಧ ಅಲ್ಲ ಎನ್ನುವ ಹುಕುಂ ಜಾರಿಯಲ್ಲಿರುವುದರಿಂದ ಮೆದುಳಿಗೆ ಕೆಲಸವೇ ಇಲ್ಲ ಏನಿದ್ದರೂ ಮೆದುಳಿನ ಕೆಲಸವನ್ನು ಈ ಸಾಧನಗಳು ಮಾಡುತ್ತವೆ.
ಮಗ್ಗಿಯಂತೂ ಮಕ್ಕಳಿಗೆ ಗೊತ್ತೇ ಇಲ್ಲ, ಅದರ ಅನಿವಾರ್ಯತೆಯೂ ಇಲ್ಲ. ಲಾಗರ್ಥಮ್ ಬಳಕೆಯಂತೂ ಈಗ ಅನಿವಾರ್ಯವಲ್ಲ. ಈಗ ಯಾರ ಫೋನ್ ನಂಬರ್ ಕೂಡಾ ಮೆದುಳಿನಲ್ಲಿ ಸ್ಟೋರ್ ಮಾಡಿಕೊಳ್ಳುವ ಅಗತ್ಯವಿಲ್ಲ. ಮಾಹಿತಿಗಾಗಿ ಲೈಬ್ರರಿಯಲ್ಲಿ ಗಂಟೆಗಟ್ಟಲೆ ಕೂತು ಪುಸ್ತಕ ತಿರುವಿ ಹಾಕಿ ನೋಟ್ಸ್ ಬರೆದುಕೊಂಡು ಮನನ ಮಾಡುವ ಅಗತ್ಯವಿಲ್ಲ. ಕೈನಲ್ಲಿರುವ ಮೊಬೈಲ್ ನಲ್ಲೇ ಎಲ್ಲವೂ ಲಭ. ಆದ್ದರಿಂದಲೇ ಸಾಮಾನ್ಯ ತಿಳುವಳಿಕೆ ಯಾಕೆ ಬೇಕು ಎನ್ನುವಂತಾಗಿದೆ, ಹೈಟೆಕ್ ಸಾಧನಗಳು ಕೈಯಲ್ಲಿರುವುದರಿಂದ ಅಂಗೈಯ್ಯೊಳಗೇ ಜಗತ್ತು ಎನ್ನುವ ಕಲ್ಪನೆ. ಇವೆಲ್ಲವೂ ಬುದ್ಧಿವಂತನನ್ನು ದಡ್ಡನನ್ನಾಗಿ ಮಾಡುತ್ತಿವೆ, ನಿಧಾನವಾಗಿ ಮೆದುಳನ್ನು ನಿಷ್ಕ್ರಿಯಗೊಳಿಸುತ್ತಿವೆ ಎನ್ನುವ ಸತ್ಯವನ್ನು ಗ್ರಹಿಸಲಾಗದಂಥ ಸ್ಥಿತಿಗೆ ಬಂದಿದ್ದೇವೆ. ನಮ್ಮ ಗ್ರಹಿಕೆ ನಮ್ಮ ಮಕ್ಕಳು ಬುದ್ಧಿವಂತರಾಗುತ್ತಿದ್ದಾರೆ ಎನ್ನುವುದನ್ನು ಅಳೆಯಲು ನಮ್ಮ ಮಾನದಂಡ ಆತ ಬಳಕೆ ಮಾಡುವ ಮೊಬೈಲ್ ಅಥವಾ ಇಂಟರ್ ನೆಟ್ ಸರ್ಫಿಂಗ್.
ಇವುಗಳ ಬಳಕೆ ತಪ್ಪೆಂದು ವಾದಿಸುತ್ತಿಲ್ಲ ಅಥವಾ ಇವು ಅನಿವಾರ್ಯವೆಂದು ಪ್ರತಿಪಾದಿಸುತ್ತಿಲ್ಲ. ಅಗತ್ಯಕ್ಕಿಂತ ಹೆಚ್ಚು ಇವುಗಳನ್ನು ಅವಲಂಬಿಸುವ ಮೂಲಕ ನಾವು ನಮ್ಮ ಮಕ್ಕಳನ್ನು ಪರಾವಲಂಬಿಗಳನ್ನಾಗಿ ನಾವೇ ಮಾಡುತ್ತಿದ್ದೇವೆ. ಒಳ್ಳೆಯ ಶಿಕ್ಷಕನಾಗಬೇಕು, ಒಳ್ಳೆಯ ಕಲಾವಿದನಾಗಬೇಕು, ಒಳ್ಳೆಯ ಮನುಷ್ಯನಾಗಬೇಕು ಎನ್ನುವ ಕಲ್ಪನೆ ಬರುತ್ತಿಲ್ಲ. ನಮ್ಮ ಹಾಗೆ ನಮ್ಮ ಮಕ್ಕಳೂ ಆಗುವುದು ಬೇಡ, ಅವರು ನಮ್ಮನ್ನು ಮೀರಿಸುವಂಥವರಾಗಾಬೇಕು ಎನ್ನುವ ಕಲ್ಪನೆ ಒಳ್ಳೆಯದೇ ಆದರೂ ಅದರಿಂದ ಆಗುತ್ತಿರುವ ಕೆಟ್ಟ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವಷ್ಟೂ ಬುದ್ಧಿಶಕ್ತಿಯನ್ನು ಕಳೆದುಕೊಳ್ಳುತ್ತಿದ್ದೇವಲ್ಲ ಎನ್ನುವುದೇ ವ್ಯಥೆ.
ಮಕ್ಕಳು ಸ್ವಪ್ರೇರಣೆಯಿಂದ ಕಲಿಯುವ ಸ್ಥಿತಿ ಈಗ ಇಲ್ಲವೇ ಇಲ್ಲ. ದುಬಾರಿ ಕೋಚಿಂಗ್ ಕ್ಲಾಸಿಗೆ ಹೋದರೆ ಬುದ್ಧಿವಂತರು ಎನ್ನುವ ಮನಸ್ಥಿತಿಗೆ ಬಂದು ಬಿಟ್ಟಿದ್ದೇವೆ. ಆದರಿಂದ ಮಕ್ಕಳು ಬೇಡವೆಂದರು ನಾವೇ ಅತ್ಯುತ್ಸಾಹದಿಂದ ದುಬಾರಿ ಹಣ ಪಾವತಿಸಿ ಕೋಚಿಂಗ್ ಗೆ ಸೇರಿಸುತ್ತೇವೆ. ಇಂಥ ಸುಲಭ ವ್ಯವಸ್ಥೆಗಳು ಮಕ್ಕಳನ್ನು ಬುದ್ಧಿವಂತರನಾಗಿ ಮಾಡುತ್ತವೆ ಅಂದುಕೊಂಡಿದ್ದರೆ ಅದು ನಿಜಕ್ಕೂ ತಪ್ಪು ಗ್ರಹಿಕೆ. ಮಕ್ಕಳು ತಮಗಿರುವ ಸಾಮರ್ಥ್ಯದಷ್ಟನ್ನು ಮಾತ್ರ ಮೆದುಳಲ್ಲಿ ಹಿಡಿದಿಟ್ಟುಕೊಳ್ಳುತ್ತಾರೆ, ಅದು ಸಾಧ್ಯವಾಗದಿದ್ದಾಗ ಖಿನ್ನತೆಗೆ ಒಳಗಾಗುತ್ತಾರೆ. ಇಂಥ ಖಿನ್ನತೆಗೆ ಕಾರಣ ಆ ಮಕ್ಕಳೆನ್ನಲಾಗದು ಮಕ್ಕಳ ಹೆತ್ತವರೇ ಹೊಣೆಯಾಗಬೇಕಾಗುತ್ತದೆ. ಒತ್ತಾಯ ಮಾಡಿ ಆ ಮಗು ಕಲಿಯುವ ಆಸಕ್ತಿಯಲ್ಲದ ಶಿಕ್ಷಣ ಹೇರಿದ ತಪ್ಪಿಗೆ ಹೊಣೆಗಾರರಾಗುತ್ತೇವೆ.
ನಮ್ಮ ಗ್ರಹಿಕೆಯನ್ನು ಮೊದಲು ತಿದ್ದಿಕೊಳ್ಳುವ ಅಗತ್ಯವಿದೆ. ಹೇರಿಕೆಯ ಮನಸ್ಥಿತಿಯಿಂದ ಹೊರಬಂದು ಮಕ್ಕಳ ಆಸಕ್ತಿ, ಅವರ ಅಭಿರುಚಿಯನ್ನು ಗೌರವಿಸುವಂಥ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.
-ಚಿದಂಬರ ಬೈಕಂಪಾಡಿ (ಗೌರವ ಸಂಪಾದಕರು)