ಇದು ಡಿಜಿಟಲ್ ಮಾಧ್ಯಮಗಳ ಯುಗ. ಮಾಹಿತಿ ತಂತ್ರಜ್ಞಾನಗಳ ಇರ. ಸಾಮಾಜಿಕ ಅಂತರ್ಜಾಲ ಮಾಧ್ಯಮಗಳ ಮೂಲಕ ದೇಶದ ಮೂಲೆ ಮೂಲೆಯ ಕ್ಷಣ-ಕ್ಷಣದ ಆಗು-ಹೋಗುಗಳನ್ನು ನಿಮಿಷದೊಳಗೆ ತಿಳಿಯುವ, ಲೈವ್ ಆಗಿ ನೋಡುವ ಸೂಪರ್ ಸಾನಿಕ್ ಯುಗ. ‘ನಿನ್ನೆಯ ವರ್ತಮಾನ ಇಂದಿನ ಸುದ್ದಿ ‘ಎಂಬ ಪತ್ರಿಕೋದ್ಯಮದ ಡೆಫಿನೇಶನ್ ಗಳು ಅಳಿಸಿ ಹೋಗಿ ‘ವರ್ತಮಾನದೊಂದಿಗೆ ಸಾಗುವುದೇ ಸುದ್ದಿ’ ಎಂಬ ಭರಪೂರ ಮಾಹಿತಿಗಳ ಯುಗದಲ್ಲಿ ನಾವಿದ್ದೇವೆ. ಇಂತಹ ಮಾಹಿತಿ ತಂತ್ರಜ್ಞಾನದ ಬಲದಿಂದಲೇ ಹಲವು ವೆಬ್ ಸೈಟ್ ಮಾಧ್ಯಮಗಳು ಆವಿರ್ಭವಿಸಿದೆ. ಸುದ್ದಿಯನ್ನು ಬಿತ್ತರಿಸುವ, ಮಾಹಿತಿಯನ್ನು ಅತ್ಯಂತ್ರ ಕ್ಷಿಪ್ರಗತಿಯಲ್ಲಿ ಪ್ರಸಾರಿಸುವ ಕೆಲಸವನ್ನು ಚುರುಕಾಗಿ, ಅಷ್ಟೇ ಪರಿಣಾಮಕಾರಿಯಾಗಿ ಈ ವೆಬ್ ಸೈಟ್ ಮಾಧ್ಯಮಗಳು ಇಂದು ಮಾಡುತ್ತಿವೆ. ಜನಸಾಮಾನ್ಯರ ಜ್ಞಾನ ದಿಗಂತವನ್ನು ಹೆಚ್ಚಿಸುವ ಕೆಲಸವನ್ನು ಅತ್ಯಂತ ಜತನದಿಂದ ಮಾಡಿಕೊಂಡು ಬರುತ್ತಿದೆ.
ಹೀಗಿರುತ್ತಾ ತುಳಿತಕ್ಕೊಳಕ್ಕಾದ ಅನೇಕ ಜಾತಿ ಸಮೂಹಗಳು ಇಂದು ಸಂಘಟನೆಗಳ ಮೂಲಕ ಬಲಿಷ್ಠವಾಗಿ ಒಗ್ಗೂಡಿ ಸಾಮಾಜಿಕ ಸ್ಥಾನಮಾನಕ್ಕಾಗಿ ಧ್ವನಿಯೆತ್ತುತ್ತಿವೆ. ಹೋರಾಟಕ್ಕಿಳಿದಿವೆ. ಈ ಧಮನಿತರ ಧ್ವನಿಯ ಸಾರಥಿಯಾಗಿ ಸಮುದಾಯದ ಮುಖವಾಣಿಯಾಗಿ ಅನೇಕ ಸಮುದಾಯ ವೆಬ್ ಸೈಟ್ ಮಾಧ್ಯಮಗಳು ದೇಶದಲ್ಲಿ ಸಮುದಾಯಮುಖಿ ಕೆಲಸ ಮಾಡುತ್ತಿವೆ. ಇಂತಹ ಸಮುದಾಯ ವೆಬ್ ಸೈಟ್ ಮಾಧ್ಯಮಗಳಲ್ಲಿ ಇಂದು ಅತ್ಯಂತ ಮುಂಚೂಣಿ ಸ್ಥಾನದಲ್ಲಿ ನಿಲ್ಲಬಲ್ಲ ಅರ್ಹತೆಯನ್ನು ಸಂಪಾದಿಸಿಕೊಂಡು ಕುಂಬಾರ/ಕುಲಾಲ ಸಮುದಾಯದ ಪ್ರಬಲ ಮುಖವಾಣಿಯಾಗಿ, ಸಮುದಾಯದ ಸಮಸ್ತ ವಿದ್ಯಮಾನಗಳ ಕ್ಷಿಪ್ರ ಪ್ರಸಾರಕನಾಗಿ, ನಿಜವಾದ ಸಾಮಾಜಿಕ ಕಾಳಜಿ, ಸಮುದಾಯದ ಅಭಿವೃದ್ಧಿಯ ತುಡಿತ ಇರುವ ಕುಂಬಾರ ಸಮುದಾಯದ ಮುಖ್ಯ ಮುಖವಾಣಿಯೇ ಪತ್ರಕರ್ತ ದಿನೇಶ್ ಬಂಗೇರ ಇರ್ವತ್ತೂರು ಸಾರಥ್ಯದ ‘ಕುಲಾಲ್ ವರ್ಲ್ಡ್ ಡಾಟ್ ಕಾಮ್ ‘ವೆಬ್ ಸೈಟ್.
ಹೌದು. ಕುಲಾಲ್ ವರ್ಲ್ಡ್ ಕಳೆದ ನಾಲ್ಕು ವರ್ಷಗಳ ಜರ್ನಿಯಲ್ಲಿ ಸಾಧಿಸಿದ ಕೆಲಸಗಳು, ಹಂಚಿದ ಸಮುದಾಯದ ಮಾಹಿತಿಗಳು ಹುಬ್ಬೇರಿಸುವಷ್ಟು ಅಚ್ಚರಿಯನ್ನು ಉಂಟುಮಾಡಬಲ್ಲದು. ಸಮುದಾಯದ ಸಮಸ್ತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುತ್ತಾ, ಆರ್ಥಿಕ ಬಲಹೀನರ, ಆಶಕ್ತ ರೋಗಿಗಳ ನೂರಾರು ವರದಿಗಳನ್ನು ತಯಾರಿಸಿ ಸಮುದಾಯದ ಅನೇಕ ಹೃದಯವಂತ ಮನಸ್ಸುಗಳಿಂದ ಆರ್ಥಿಕ ಸಹಾಯಧನವನ್ನು ಒದಗಿಸಿದ ಪರಿ ಮಾಧ್ಯಮ ಕ್ಷೇತ್ರದಲ್ಲಿ ಒಂದು ಕ್ರಾಂತಿಯನ್ನು ಉಂಟು ಮಾಡಬಲ್ಲಹಂತಹದ್ದು. ಅಂತಹ ಕುಲಾಲ್ ವರ್ಲ್ಡ್ ಜರ್ನಿಯ ಬಗ್ಗೆ ನಾವು ತಿಳಿಯಲೇ ಬೇಕು.
ಕುಂಬಾರ ಸಮುದಾಯದ ಸುದ್ದಿಗಳ ಗೂಡು: ಕುಲಾಲ್ ವರ್ಲ್ಡ್ ವೆಬ್ ಸೈಟ್:
ಹೌದು. ಕುಲಾಲ್ ವರ್ಲ್ಡ್ ಎಂಬ ವೆಬ್ ಸೈಟನ್ನು ನೀವು ಸುಮ್ಮಗೆ ತೆರೆದು ಕ್ಲಿಕ್ಕಿಸುತ್ತಾ ಹೋದರೆ ಕುಂಬಾರ ಸಮುದಾಯದ ಸಂಘಗಳು ಸಂಘಟಿಸಿದ ಕಾರ್ಯಕ್ರಮಗಳ ಸಮಗ್ರ ಸುದ್ದಿಗಳು ಈ ವೆಬ್ ಸೈಟಿನಲ್ಲಿ ತೆರೆದುಕೊಳ್ಳುತ್ತಾ ಸಾಗುತ್ತದೆ. ಕರಾವಳಿ ಕುಲಾಲ ಯುವ ವೇದಿಕೆಯ ಆಶ್ರಯದಲ್ಲಿ ಜರುಗಿದ ನೂರಾರು ಕಾರ್ಯಕ್ರಮಗಳ ವರದಿಗಳು, ಸಂಘಗಳ ವಾರ್ಷಿಕೋತ್ಸವ, ಸಮುದಾಯದ ಅನೇಕ ಹಿರಿ-ಕಿರಿಯ ಪ್ರತಿಭಾನ್ವಿತರ ಪರಿಚಯ ಮಾಲಿಕೆ, ಸಮುದಾಯದ ಅಭಿವೃದ್ಧಿಗಾಗಿ ದುಡಿದು ಮಡಿದ ಅನೇಕ ಹಿರಿಯರ ಬದುಕಿನ ಚಿತ್ರಣ ಎಲ್ಲವೂ ಇಲ್ಲಿ ಲಭ್ಯ.
ಕುಲಾಲ/ಕುಂಬಾರ ಸಮುದಾಯದ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಇಲ್ಲಿ ನೂರಾರು ವಿಮರ್ಶಾ ಬರಹಗಳು ಪ್ರಕಟಗೊಂಡು ವಿದ್ಯಾವಂತ ಯುವ ಮನಸ್ಸುಗಳಲ್ಲಿ ಅರಿವಿನ ಕಿಚ್ಚನ್ನು ಹಚ್ಚಿದೆ. ಮುಖ್ಯವಾಗಿ ಕುಂಬಾರಿಕೆಯನ್ನೇ ನೆಚ್ಚಿಕೊಂಡು ಬದುಕುತ್ತಿರುವವರ ಸಮಸ್ಯೆಗಳು, ತುಳುನಾಡಿನ ಕುಲಾಲರ ”ಬರಿ’ಯ ಸಮಸ್ಯೆಗಳು, ರಾಜಕೀಯದಲ್ಲಿ ಕುಂಬಾರರ ಕಡೆಗಣನೆ, ಕುಂಬಾರರ ಮೇಲೆ ಕೆಲವು ಮೇಲ್ವರ್ಗದ ಸಮುದಾಯದ ನಿರಂತರ ದಬ್ಬಾಳಿಗೆ.. ಹೀಗೇ ನೂರಾರು ಸಾಮುದಾಯಿಕ ವಿಷಯಗಳ ಬಗ್ಗೆ ಸರಣಿ ಲೇಖನಗಳನ್ನು ಪ್ರಕಟಿಸಿ ಜಾಗೃತ ಕುಂಬಾರ ಯುವ ಮನಸ್ಸುಗಳನ್ನು ಸೃಷ್ಟಿಸಿದೆ.
ಕುಂಬಾರ/ ಕುಲಾಲ ಸಮುದಾಯದ ಅನೇಕ ಯುವ ಬರಹಗಾರರಿಗೆ ಮುಕ್ತ ವೇದಿಕೆ ಕಲ್ಪಿಸಿರುವ ಕುಲಾಲ್ ವರ್ಲ್ಡ್ ನಲ್ಲಿ ಇಂದು ಅನೇಕ ನುಡಿಚಿತ್ರ ಬರಹಳು, ಕಥೆ-ಕವನ-ಪ್ರಬಂಧಗಳ ಗುಚ್ಛ, ಆಯ್ದ ಸಂಶೋಧನಾ ಬರಹಗಳು, ಕುಂಬಾರ ಸಮುದಾಯದ ಐತಿಹ್ಯ, ಕುಂಬಾರಿಕೆಯ ಪ್ರಾಮುಖ್ಯತೆಯ ನೂರಾರು ಅತ್ಯಮೂಲ್ಯ ಬರಹಗಳ ಸಂಗ್ರಹವಿದೆ. ಕುಂಬಾರ ಸಮುದಾಯದ ಯಾವುದೇ ಮಾಹಿತಿಗೆ ಕುಲಾಲ್ ವರ್ಲ್ಡ್ ಡಾಟ್ ಕಾಮ್ ನ ಮೇಲೆ ಕ್ಲಿಕ್ ಮಾಡಿದರೆ ಮಾಹಿತಿಯ ಭರಪೂರ ಹರಿದು ಬರುತ್ತದೆ. ಸಮುದಾಯದ ವೆಬ್ ಸೈಟ್ ಮಾಧ್ಯಮ ಎಷ್ಟು ಕ್ರೀಯಾಶೀಲವಾಗಿದೆ ಅನ್ನುವುದೇ ಇದಕ್ಕೆ ಸಾಕ್ಷಿ.
ಅಶಕ್ತ ರೋಗಿಗಳ ಬದುಕಿಗೆ ಆಶಾಕಿರಣ: ಕುಲಾಲ್ ವರ್ಲ್ಡ್
ಮಾದ್ಯಮಗಳ ಕೆಲಸ ಸುದ್ದಿಯನ್ನು ಪ್ರಸಾರಿಸಿ, ಚರ್ಚೆಗಳಿಗೆ ವೇದಿಕೆ ಕಲ್ಪಿಸಿ ನಿರುಮ್ಮಳವಾಗಿರುವುದು ಎಂದಷ್ಟೇ ಭಾವಿಸಿದರೆ ಅದು ತಪ್ಪು; ಕುಲಾಲ್ ವರ್ಲ್ಡ್ ಅತೀ ಮುಖ್ಯವಾಗಿ ಕಾಣುವುದು ಅದು ಸುದ್ದಿ ಪ್ರಸಾರದ ಜೊತೆ ಜೊತೆಯಲ್ಲಿ ತೋರುತ್ತಿರುವ ಸಾಮಾಜಿಕ ಬದ್ಧತೆಯ ಕಾರಣದಿಂದ. ಕುಂಬಾರ/ಕುಲಾಲ ಸಮುದಾಯದ ಹೆಚ್ಚಿನ ಮಂದಿ ಶೋಷಿತ-ಬಡವರು.
ಈ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಅನೇಕ ಬಡ ರೋಗಿಗಳ, ಭೀಕರ ಕಾಯಿಲೆಗಳಿಗೆ ತುತ್ತಾಗಿ ಆಸ್ಪತ್ರೆಗೆ ಸೇರಿ ಸಾವು-ಬದುಕಿನ ನಡುವೇ ಹೋರಾಟಕ್ಕಿಳಿದ ಅದೆಷ್ಟೋ ಬಡ ರೋಗಿಗಳ ಕಣ್ಣೀರಿಗೆ ಮಿಡಿದ ”ಕುಲಾಲ್ ವರ್ಲ್ಡ್” ಅವರ ಬಗೆಗೆ ವಿಶೇಷ ವರದಿಗಳನ್ನು ಪ್ರಕಟಿಸಿದಷ್ಟೇ ಅಲ್ಲ; ಸಮುದಾಯದ ಅನೇಕ ಸಜ್ಜನ ದಾನಿಗಳಿಂದ ಸ್ವತಃ ತಾನೇ ಆರ್ಥಿಕ ಸಹಕಾರವನ್ನು ಯಾಚಿಸಿ ಬಡ ರೋಗಿಗಳಿಗೆ ನೀಡಿ ಸಾಮಾಜಿಕ ಕಳಕಳಿಯನ್ನು ಮೆರೆದಿದೆ.
‘ಕುಲಾಲ್ ವರ್ಲ್ಡ್ ” ಎಂಬ ವಾಟ್ಸಾಪ್ ಗ್ರೂಪನ್ನು ಸೃಷ್ಟಿಸಿಕೊಂಡು ವರದಿಯನ್ನು ಹಂಚಿ ಮಾನವೀಯ ಮಿಡಿತದ ಅನೇಕ ಸಜ್ಜನರು ಸ್ಪಂದಿಸುವಂತೆ ಮಾಡಿದೆ. ಪೈಸೆ ಪೈಸೆಯನ್ನು ಲೆಕ್ಕವಿರಿಸಿ ಬಡ ರೋಗಿಗಳ ಅಕೌಂಟಿಗೆ ನೇರವಾಗಿ ಜಮಾ ಮಾಡಿದೆ. ಕುಲಾಲ್ ವರ್ಲ್ಡ್ ಸ್ವತಃ ತನ್ನ ಮೂಲಕ ಸುಮಾರು ೧೨ ಲಕ್ಷಕ್ಕೂ ಅಧಿಕ ಧನ ಸಹಾಯವನ್ನುಸಂಗ್ರಹಿಸಿ ಅಶಕ್ತರಿಗೆ ಹಂಚಿದೆ.
ವಿಶೇಷ ವರದಿಗಳನ್ನು ಪ್ರಕಟಿಸಿ ಬೇರೆ ಬೇರೆ ಮೂಲದಿಂದ ಸುಮಾರು ೨೫ ಲಕ್ಷಕ್ಕೂ ಅಧಿಕ ಧನಸಹಾಯವನ್ನು ಆಶಕ್ತರಿಗೆ ಹರಿದು ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಕುಲಾಲ್ ವರ್ಲ್ಡ್ ನಲ್ಲಿ ಪ್ರಕಟಿತ ಅನೇಕ ಬಡ ರೋಗಿಗಳ ಕಣ್ಣೀರ ಕಥೆಗೆ `ಕುಲಾಲ ಚಾವಡಿ’ ದೋಹಾ ಕುಲಾಲ್ಸ್’ ಬೆಹರೈನ್ ಕುಲಾಲ್ಸ್’ ನಂಥ ಅನೇಕ ವಾಟ್ಸಾಪು ಗ್ರೂಪುಗಳು, ವಿದೇಶದ ಉದ್ಯೋಗಿಗಳು ನೆರವು ನೀಡಿದ್ದಾರೆ. ಸಮುದಾಯದ ವೆಬ್ ಸೈಟೊಂದು ಸಮುದಾಯಮುಖಿ ಕೆಲಸವನ್ನು ಹೀಗೂ ಮಾಡಬಹುದು ಎಂದು ತೋರಿಸಿರುವುದು ಮಾಧ್ಯಮ ಕ್ಷೇತ್ರದ ಒಂದು ಅದ್ಭುತ ವಿದ್ಯಮಾನ.
ಕುಲಾಲ್ ವರ್ಲ್ಡ್ ಸಾರಥಿ: ದಿನೇಶ್ ಬಂಗೇರ ಇರ್ವತ್ತೂರು
ಸದಾ ಕ್ರೀಯಾಶೀಲತೆ ಮತ್ತು ಸಾಮಾಜಿಕ ಜವಬ್ದಾರಿಯನ್ನು ಮೆರೆದು ಸರ್ವರಿಂದಲೂ ಮೆಚ್ಚುಗೆ ಪಡೆದಿರುವ ‘ಕುಲಾಲ್ ವರ್ಲ್ಡ್’ ಎಂಬ ಸಮುದಾಯ ವಾಣಿಯನ್ನು ಕಟ್ಟಿ ಅದನ್ನು ಮುನ್ನಡೆಸುವ ಮುಖ್ಯ ಸಾರಥಿ ದಿನೇಶ್ ಬಂಗೇರ ಇರ್ವತ್ತೂರು. ಕಾರ್ಕಳ ತಾಲೂಕಿನ ಇರ್ವತ್ತೂರಿನವರಾದ ಇವರು ಪದವಿ ವ್ಯಾಸಂಗವನ್ನು ಮಾಡಿ ಪತ್ರಿಕೋದ್ಯಮದ ಅತೀವ ತುಡಿತವನ್ನು ತನ್ನೊಳಗೆ ತುಂಬಿಕೊಂಡವರು. ಮಂಗಳೂರಿನ ಅನೇಕ ಪತ್ರಿಕೆಗಳಲ್ಲಿ ದುಡಿದು ಪತ್ರಿಕೋದ್ಯಮದ ಒಳ-ಹೊರಗನ್ನು ಅರ್ಥೈಸಿಕೊಂಡವರು. ಗಲ್ಫ್ ರಾಷ್ಟ್ರಗಳಲ್ಲಿ ಒಂದಾದ ದೋಹಾ ಕತಾರ್ ನ ಕಂಪೆನಿಯಲ್ಲಿ ಉದ್ಯೋಗ ದೊರಕಿ ವಿದೇಶಕ್ಕೆ ತೆರಳಿದವರೂ ಪ್ರಸ್ತುತ ಅಲ್ಲೇ ‘ಕುಲಾಲ್ ವರ್ಲ್ಡ್’ ಎಂಬ ವೆಬ್ ಸೈಟನ್ನು ಕಟ್ಟಿ ಮುನ್ನೆಡೆಸಿದ್ದು ವಿಶೇಷ.
ದೂರದ ಗಲ್ಫ್ ನಲ್ಲಿದ್ದರೂ ಇವರೊಳಗಿನ ಸಮುದಾಯದ ತುಡಿತ, ಪತ್ರಿಕೋದ್ಯಮದ ಅನುಭವ ಈ ವೆಬ್ ಸೈಟನ್ನು ತೆರೆಯುವಂತೆ ಮಾಡಿತ್ತು. ಹಲವು ಅಡೆತಡೆ, ಕೆಲಸದ ಒತ್ತಡ, ಬರಹಗಾರರ, ಓದುಗರ ನೀರಸ ಪ್ರತಿಕ್ರಿಯೆಯ ಮಧ್ಯೆಯೂ ಕುಲಾಲ್ ವರ್ಲ್ಡ್ ನ ಸಮುದಾಯ ಮುಖಿ ಕೆಲಸ ನಿಂತಿಲ್ಲ. ಮಾಹಿತಿ ಪ್ರಸಾರದ ವೇಗಕ್ಕೆ ಕಡಿವಾಣ ಬಿದ್ದಿಲ್ಲ. ಪ್ರಪಂಚದ ಮೂಲೆಮೂಲೆಯಿಂದ ಕುಂಬಾರ ಸಮುದಾಯದ ಆಗು-ಹೋಗುಗಳ ಮಾಹಿತಿಗಳನ್ನು ಪ್ರಕಟಿಸಿ ಪ್ರಸಾರಿಸುವ ಕೆಲಸವನ್ನು ದಿನೇಶ್ ಇರ್ವತ್ತೂರು ಅತ್ಯಂತ ಜತನದಿಂದ ಮಾಡಿಕೊಂಡು ಬರುತ್ತಿದ್ದಾರೆ.
ಕರಾವಳಿಯ ಅನೇಕ ವಿದ್ಯಾವಂತ ಮನಸ್ಸುಗಳು, ಸಮುದಾಯದ ನಾಯಕರ ಬೆಂಬಲ ಅವರಿಗಿದೆ. ಕುಲಾಲ್ ವರ್ಲ್ಡ್ ನ ಪ್ರಖರತೆ ಮತ್ತು ಪ್ರಚಾರವನ್ನು ಗಮನಿಸಿದ ಅನ್ಯ ಸಮುದಾಯದ ಸಂಘಟನೆಗಳು ಕುಲಾಲ್ ವರ್ಲ್ಡ್ ಅನ್ನು ಮಾದರಿಯನ್ನಾಗಿರಿಸಿ ತಮ್ಮ ಸಮುದಾಯಕ್ಕೂ ಇಂತಹುದೇ ಮಾಧ್ಯಮ ಬೇಕು ಎಂಬ ನಿಲುವು ತಾಳಿರುವುದು ಈ ವೆಬ್ ಸೈಟಿಗೆ ಸಂದ ಗುರುತರ ಗೌರವ.
ಪ್ರಪಂಚಾದಾದ್ಯಂತ ಲಕ್ಷಾಂತರ ಓದುಗರಿರುವ ”ಕುಲಾಲ್ ವರ್ಲ್ಡ್” ಎಲ್ಲ ವೆಬ್ ಸೈಟ್ ಮಾಧ್ಯಮಗಳ ಹಾಗೇ ಜಾಹಿರಾತುದಾರರ ಮತ್ತು ಸಮುದಾಯದ ಬೆಂಬಲದ ಕೊರತೆಯನ್ನು ಎದುರಿಸುತ್ತಿದೆ. ಇದು ತಪ್ಪಬೇಕು. ಕುಲಾಲ್ ವರ್ಲ್ಡ್ ಎಂಬುದು ಕುಂಬಾರರ ಹೆಮ್ಮೆಯ ಸಮುದಾಯ ವಾಣಿ. ಬೆಂಬಲದ ಮಹಾಪೂರ ಹರಿಸಬೇಕಾದದ್ದು ಪ್ರತಿಯೊಬ್ಬ ಪ್ರಜ್ಞಾವಂತ ಕುಂಬಾರರ ಕರ್ತವ್ಯ.
ಎನಿವೇ.. ದೂರದ ಗಲ್ಫ್ ನಲ್ಲಿದ್ದೂ ಕನ್ನಡದ ಪತ್ರಿಕೋದ್ಯಮದ ಕೆಲಸ ಮಾಡುವ ದಿನೇಶ್ ಇರ್ವತ್ತೂರು ಮತ್ತವರ ಬಳಗಕ್ಕೆ, ಸಮುದಾಯದ ಪ್ರಬಲ ಮಾಧ್ಯಮವಾಗಿ ಬೆಳೆಯುತ್ತಿರುವ ಕುಲಾಲ್ ವರ್ಲ್ಡ್ ಗೆ ನಮ್ಮದೊಂದು ಗೌರವದ ಸಲಾಮು ಸಲ್ಲಲಿ.. ಹಾರ್ದಿಕ ಅಭಿವಂದನೆ ಅರ್ಪಣೆಯಾಗಲಿ..ಏನಂತೀರಿ??
ಮಾಹಿತಿ: ಹೇಮಂತ ಕುಲಾಲ್ ಕಿನ್ನಿಗೋಳಿ
ಬರಹ: ಮಂಜುನಾಥ್ ಹಿಲಿಯಾಣ