ಕುಲಕಸುಬಿಗೆ ಆಧುನಿಕ ಸ್ಪರ್ಶ ಕೊಟ್ಟು ಪಾಟ್ ಫ್ಯಾಕ್ಟರಿ ಕಟ್ಟಿದ ಸಾಣೂರಿನ ಶಂಕರ ಕುಲಾಲ್
ಕಾರ್ಕಳ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಎಂಜಿನಿಯರಿಂಗ್ ಕಲಿತು ಊರು ಬಿಟ್ಟು ಬೆಂಗಳೂರು ಸೇರುವುದು, ಅಲ್ಲೇ ತಳವೂರುವುದು ಆಧುನಿಕ ಟ್ರೆಂಡ್. ಎಲ್ಲೋ ಕೆಲವರು ಕೆಲವು ಸಮಯದ ಬಳಿಕ ಮರಳಿ ಊರಿಗೆ ಬಂದು ಕೃಷಿ ಮಾಡುವುದು ಇದೆ. ಆದರೆ, ಎಂಜಿನಿಯರ್ ವೃತ್ತಿಯಲ್ಲಿದ್ದ ಯುವಕರೊಬ್ಬರು ಮರಳಿ ಊರಿಗೆ ಬಂದು ಕುಂಬಾರಿಕೆ ನಡೆಸುತ್ತಿರುವ ವಿಶಿಷ್ಟ ವಿದ್ಯಮಾನ ಎಲ್ಲರ ಗಮನ ಸೆಳೆದಿದೆ.
ಕಾರ್ಕಳದ ಸಾಣೂರಿನ ಶಂಕರ್ ಕುಲಾಲ್ ಅವರೇ ಎಂಜಿನಿಯರ್ ವೃತ್ತಿ ಬಿಟ್ಟು ತಮ್ಮ ಕುಟುಂಬದ ಮೂಲ ಕಸುಬಾದ ಕುಂಬಾರಿಕೆಗಾಗಿ ಹಳ್ಳಿಗೆ ಮರಳಿದವರು. ಅವರೀಗ ಕೇವಲ ಸಾಂಪ್ರದಾಯಿಕ ಕುಂಬಾರಿಕೆ ಮಾಡುತ್ತಿಲ್ಲ, ಮಣ್ಣಿನ ವೃತ್ತಿಗೆ ಆಧುನಿಕ ಸ್ಪರ್ಶ ನೀಡಿ ಹೊಸ ಎತ್ತರಕ್ಕೇರಿಸುವ ಆವಿಷ್ಕಾರಗಳಲ್ಲಿ ತೊಡಗಿದ್ದಾರೆ. ಅವರೀಗ ಸಾಣೂರಿನ ಮನೆಯಲ್ಲೇ ಕುಳಿತು ಪಾಟ್ ಫ್ಯಾಕ್ಟರಿ ಕಟ್ಟಿದ್ದಾರೆ.
ಮೂಡುಬಿದಿರೆಯಲ್ಲಿ ಎಲೆಕ್ಟ್ರಾನಿಕ್ ಎಂಡ್ ಕಮ್ಯುನಿಕೇಶನ್ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಬೆಂಗಳೂರಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದರು ಶಂಕರ್. ಆದರೆ, ಕೌಟುಂಬಿಕ ಮತ್ತು ಮೂಲ ಕಸುಬಿನ ಸೆಳೆತ ಅವರನ್ನು ಮಹಾನಗರದಿಂದ ಮತ್ತೆ ಹಳ್ಳಿಗೆ ಕರೆಯಿತು.
ಊರಿಗೆ ಬಂದು ಕುಂಬಾರಿಕೆಯ ಮಡಿಕೆಯ ಕೆಲಸಕ್ಕೆ ಕೈ ಹಾಕಿದ ಅವರು ಅದರಲ್ಲಿಯೇ ಹೊಸ ಬಗೆಯ ಆವಿಷ್ಕಾರ ಮಾಡುತ್ತಿದ್ದಾರೆ. ಉತ್ತಮ ಗುಣಮಟ್ಟದ ಮಣ್ಣು ಆವೆ ಮಣ್ಣನ್ನು ಬಳಸಿ ವಿವಿಧ ಬಗೆಯಲ್ಲಿ ಸಂಸ್ಕರಿಸಿ ಒಲೆ, ತುಳಸಿಕಟ್ಟೆ ಅಡುಗೆಗೆ ಬಳಕೆ ಮಾಡಲು ವಿವಿಧ ಪಾತ್ರೆ ಮಾತ್ರವಲ್ಲ ಮಣ್ಣಿನ ಲೋಟಗಳನ್ನೂ ಉತ್ಪಾದಿಸಿ ಗಮನ ಸೆಳೆಯುತ್ತಿದ್ದಾರೆ.
ಶೋ ರೂಮ್ ನಿರ್ಮಾಣ
ಸ್ವಂತ ಉದ್ಯಮ ಕಟ್ಟುವ ನಿಟ್ಟಿನಲ್ಲಿ ಕಾರ್ಕಳದಲ್ಲಿಯೇ ಕುಂಬಾರಿಕೆ ಉತ್ಪನ್ನಗಳ ಮೊದಲ ಶೋ ರೂಂ. ಓಪನ್ ಮಾಡಿದ ಸಾಧನೆ ಇವರದು. ಪಾಟ್ ಫ್ಯಾಕ್ಟರಿ ಎಂಬ ಬ್ರಾಂಡ್ ರೂಪಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ.
ಮಣ್ಣಿನ ಉತ್ಪನ್ನಗಳನ್ನು ರಚಿಸುವುದರ ಜತೆಗೆ ಲೈನ್ ಸೇಲ್ ಮೂಲಕ ಹೊನ್ನಾವರದಿಂದ ಕಾಸರಗೋಡುವರೆಗೂ ವ್ಯಾಪಾರ ಮಾಡುತ್ತಾರೆ. ಆನ್ಲೈನ್ನಲ್ಲಿಯೂ ಗ್ರಾಹಕರಿಗೆ ಡೆಲಿವರಿ ಮಾಡುತ್ತಾರೆ. ಮಣ್ಣಿಗೆ ಮರಳಿ, ತನ್ನ ಕುಲವೃತ್ತಿಯನ್ನು ಪುನರುಜೀವನಗೊಳಿಸಿರುವ ಶಂಕರ್ ಕುಲಾಲ್ ಇಂದು ಗ್ರಾಮೀಣ ಉದ್ಯಮಶೀಲತೆಯ ಹೊಸ ಮಾದರಿಯಾಗಿದ್ದಾರೆ.
ಹಲವು ಮಂದಿಗೆ ಉದ್ಯೋಗ
ಹಳ್ಳಿಯ ವೃತ್ತಿಗೆ ಆಧುನಿಕ ಸ್ಪರ್ಶ ನೀಡುತ್ತಾ, ಗ್ರಾಮೀಣ ಉದ್ಯಮಶೀಲತೆಯ ಬೆಳಕಾಗಿ ಹಲವು ಮಂದಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿದ್ದಾರೆ. 8 ಮಂದಿಗೆ ತಮ್ಮ ಘಟಕದಲ್ಲಿ ಉದ್ಯೋಗ ನೀಡಿದ್ದಾರೆ. ಜತೆಗೆ ಇವರ ಆನ್ಲೈನ್ ಮತ್ತು ಲೈನ್ ಸೇಲ್ ಭಾಗವಾಗಿ 20ಕ್ಕೂ ಅಧಿಕ ಮಂದಿ ಅರೆ ಉದ್ಯೋಗ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಈ ಕೆಲಸದಲ್ಲಿ ನೆಮ್ಮದಿ ಇದೆ
ಸಾಣೂರಿನ ಗುರುಬೆಟ್ಟು ರಾಜು ಮೂಲ್ಯ, ಸುಶೀಲಾ ಮೂಲ್ಯ ದಂಪತಿ ಪುತ್ರನಾಗಿರುವ ಶಂಕರ್ ಕುಲಾಲ್ ಅವರು 10 ವರ್ಷ ಬೆಂಗಳೂರಿನಲ್ಲಿ ಸೆಮಿ ಕಂಡಕ್ಟರ್ ಕ್ಷೇತ್ರದಲ್ಲಿ ವೃತ್ತಿ ಮಾಡುತ್ತಿದ್ದರು. ಬೆಂಗಳೂರಿನಲ್ಲಿದ್ದರೂ ವಾರಾಂತ್ಯ ರಜೆ ಸಿಕ್ಕಾಗ ಅವರು ಕುಲಕಸುಬಿನಲ್ಲಿ ಹೆಚ್ಚು ಸಕ್ರಿಯರಾಗುತ್ತಿದ್ದರು. ಕುಂಬಾರಿಕೆ ವೃತ್ತಿಯಲ್ಲಿ ಗುಣಮಟ್ಟತೆ, ಸುಸ್ಥಿರ ಉತ್ಪನ್ನ ಮಣ್ಣು ಸಂಸ್ಕರಣೆ ವಿಧಾನಗಳ ಮೂಲಕ ನವೀನ ಮಾದರಿಯಲ್ಲಿ ಉತ್ಪನ್ನಗಳ ತಯಾರಿಕೆಯಲ್ಲಿ ಹೊಸಹೊಸ ಆಯಾಮಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಯೋಜನೆ ರೂಪಿಸಿದರು. ಅದರಂತೆ ಹಂತಹಂತವಾಗಿ ಕೆಲಸವೂ ನಡೆಯುತ್ತಿದೆ. ಬೆಂಗಳೂರು ಜೀವನಶೈಲಿಗಿಂತ ಕುಲ ಕಸುಬಿನಲ್ಲಿಯೇ ನೆಮ್ಮದಿಯೂ ಇದೆ ಎನ್ನುತ್ತಾರೆ ಶಂಕರ್.
ಮಣ್ಣು ದುಬಾರಿಯಾಗಿದೆ
ಕುಂಬಾರಿಕೆ ವೃತ್ತಿಯೂ ಸವಾಲಿನಿಂದ ಕೂಡಿದೆ. ಆವೆ ಮಣ್ಣು ಮಂಗಳೂರಿನ ಕೈಕಂಬ ಮತ್ತು ಕಾಪು ಬೆಳಪುವಿನಿಂದ ತರಿಸಿಕೊಳ್ಳಲಾಗುತ್ತದೆ. ಇದರ ದರವೂ ಸಾಕಷ್ಟು ದುಬಾರಿಯಾಗಿದೆ. ಅಲ್ಲದೆ ಸರಕಾರದ ಮಾರ್ಗಸೂಚಿ ಅನ್ವಯ ಮಣ್ಣು ಬಳಕೆಯ ಬಗ್ಗೆ ಎಚ್ಚರವಹಿಸಬೇಕು. ಇಷ್ಟೆಲ್ಲಾ ಸವಾಲುಗಳ ನಡುವೆಯೂ ಕುಂಬಾರಿಕೆ ವೃತ್ತಿ ನಡೆಯುತ್ತಿದೆ. ಗ್ರಾಹಕರಿಗೆ ಹೆಚ್ಚು ಹೊರೆಯಾಗದ ರೀತಿಯಲ್ಲಿದರ ನಿಗಧಿಪಡಿಸಿ ಮಾರಾಟ ಮತ್ತು ಮಾರುಕಟ್ಟೆ ಬಗ್ಗೆ ಯೋಜನೆ ರೂಪಿಸಬೇಕು ಎನ್ನುತ್ತಾರೆ ಶಂಕರ್ ಕುಲಾಲ್.