ಬೆಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಇನ್ನು ಕೆಲವೇ ದಿನಗಳಲ್ಲಿ ಅಂದರೆ ದಿನಾಂಕ 22.09.2025 ರಿಂದ ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಸಾಮಾಜಿಕ ಶೈಕ್ಷಣಿಕ (ಜಾತಿಗಣತಿ) ಗಣತಿ ಕಾರ್ಯ ಪ್ರಾರಂಭವಾಗಲಿದ್ದು, ಪ್ರತಿಯೊಂದು ಜನಾಂಗದಂತೆಯೇ ಕುಂಬಾರ ಜನಾಂಗದವರಲ್ಲೂ ಗೊಂದಲ, ತಳಮಳ ಪ್ರಾರಂಭವಾಗಿದೆ. ಅನೇಕರು ತಮಗೇ ಸರಿಯಾದ ಮಾಹಿತಿಯಿಲ್ಲದಿದ್ದರೂ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಪ್ರತಿಯನ್ನು ಹಾಗೂ ಅದರ ಹಿನ್ನೆಲೆಯನ್ನು ಅಧ್ಯಯನ ಮಾಡದೇ ತಮಗೆ ತೋಚಿದಂತೆ ಜನಗಳಿಗೆ ಸಲಹೆ ನೀಡುತ್ತಾ, ಜನಗಳ ದಿಕ್ಕುತಪ್ಪಿಸುತ್ತಾ ಪ್ರಚಾರ ಗಿಟ್ಟಿಸುತ್ತಿದ್ದಾರೆ, ಹೀಗಾಗದಿರಲಿ.
ಈ ಸಮೀಕ್ಷೆ ಜನಾಂಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಷ್ಟೇ ಆಗಿರದೆ ನಮ್ಮ ಬಹುಸಾಂಸ್ಕೃತಿಕ ಅಭ್ಯಾಸಗಳು, ಕುಲಕಸುಬಿನ ಹಿನ್ನೆಲೆ, ಜನಾಂಗದವರಾಗಿ ಇದುವರೆಗೆ ಪಡೆದಿರುವ ಸೌಲಭ್ಯಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತದೆ. ಜೊತೆಗೆ ನಾವು ನೀಡುವ ಮಾಹಿತಿಯ ಆಧಾರದ ಮೇಲೆ ರಾಜ್ಯ ಸರ್ಕಾರ ನಮ್ಮ ಜನಾಂಗಕ್ಕೆ ಭವಿಷ್ಯದಲ್ಲಿ ನೀಡಬಹುದಾದ ಸಾಂವಿಧಾನಿಕ ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ ಮೀಸಲಾತಿ, ಆಯವ್ಯಯದಲ್ಲಿ ನಿಗಧಿತ ಹಣ ಮೀಸಲಿಡುವುದು ಇವೆಲ್ಲದಕ್ಕೂ ಆಧಾರವಾಗಲಿದೆ. ನಾವು ಗಣತಿದಾರರು ಮನೆಗೆ ಬಂದಾಗ ನಾವು ನೀಡುವ ಮಾಹಿತಿ ನಮ್ಮ ಜನಾಂಗದ ಭವಿಷ್ಯವನ್ನು ನಿರ್ಧರಿಸುತ್ತದೆ.
ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಬರುವ 60 ಪ್ರಶ್ನೆಗಳಲ್ಲಿ 53 ಪ್ರಶ್ನೆಗಳು ಸಾಮಾನ್ಯ ಪ್ರಶ್ನೆಗಳಾಗಿದ್ದು, ನಿಮಗೆ ಅನ್ವಯಿಸಿದಂತೆ ತಿಳಿಸಿ. ಆದರೆ ಪ್ರಶ್ನೆ 8, 9, 10, 11, 24, 30, 31 ಹಾಗೂ 32 ನಮ್ಮ ಕುಲಕಸುಬು ಹಾಗೂ ನಮ್ಮ ಜಾತಿಗೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳಾಗಿವೆ. ಇವುಗಳಿಗೆ ಯೋಚನೆ ಮಾಡಿ ಸರಿಯಾದ ಹಾಗೂ ಸೂಕ್ತ ಉತ್ತರ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆ ಪತ್ರಿಕೆಯ ಆಳವಾದ ಅಧ್ಯಯನ ಹಾಗೂ ಹಿರಿಯರೊಡನೆ ಸಮಾಲೋಚನೆ ನಡೆಸಿದ ಬಳಿಕ ನಮ್ಮ ಕುಂಬಾರ ಜಾತಿಯ ಜನರು ಮೇಲೆ ನೀಡಿರುವ ಪ್ರಶ್ನೆಗಳಿಗೆ ಈ ಕೆಳಕಂಡಂತೆ ಉತ್ತರ ನೀಡಬೇಕಾಗುತ್ತದೆ ಎಂದು ಸೂಚಿಸುತ್ತೇನೆ.
ಪ್ರಶ್ನೆ 8: ಧರ್ಮ – ಹಿಂದು
ಪ್ರಶ್ನೆ 9: ಜಾತಿ – ಕುಂಬಾರ
ಪ್ರಶ್ನೆ 10: ಉಪಜಾತಿ – ನಿಮ್ಮ ಭಾಗದಲ್ಲಿ ಗುರುತಿಸಿಕೊಂಡಿರುವ ಜಾತಿಯ ಹೆಸರನ್ನು ಬರೆಯಿರಿ. ಉದಾ: ಕುಲಾಲ, ಮೂಲ್ಯ, ಚಕ್ರಶಾಲಿ, ಪ್ರಜಾಪತಿ, ಸಜ್ಜನ ಕುಂಬಾರ, ಒಡೆಯರ್, ಗುಣಗ ಇತ್ಯಾದಿಗಳಲ್ಲಿ ನೀವು ವಾಸಿಸುವ ಪ್ರದೇಶದಲ್ಲಿ ನಿಮ್ಮನ್ನು ಯಾವ ಹೆಸರಿನಿಂದ ಗುರುತಿಸುತ್ತಾರೋ ಅದನ್ನು ಬರೆಸಿ.
ಪ್ರಶ್ನೆ 11: ಜಾತಿಗೆ ಇರುವ ಇನ್ನಿತರ ಸಮಾನಾರ್ಥದ (ಪರ್ಯಾಯ) ಹೆಸರುಗಳು – ಕುಂಬಾರ, ಕುಲಾಲ, ಮೂಲ್ಯ, ಹಾಂಡ, ಲಾಡ ಕುಂಬಾರ, ಗೊಂಬಿ ಕುಂಬಾರ, ಕುಂಬಾರ ಶೆಟ್ಟಿ, ಒಡರಿ ಕುಂಬಾರ, ಶಾಲಿವಾಹನ ಕುಂಬಾರ, ಚಕ್ರಶಾಲಿ, ಬೈಲ್ ಕುಂಬಾರ, ಕುರುಬ ಕುಂಬಾರ, ರೆಡ್ಡಿ ಕುಂಬಾರ, ಸಜ್ಜನ ಕುಂಬಾರ, ಗುನಗ, ಗುಂಡ ಭಕ್ತ, ಕೊಯವ, ಕ್ಷತ್ರಿಯ ಕುಂಬಾರ, ವಡೆಯರ್, ಪ್ರಜಾಪತಿ, ಲಿಂಗಾಯತ ಕುಂಬಾರ, ಮರಾಠಿ ಕುಂಬಾರ, ತೆಲುಗು ಕುಂಬಾರ, ಕೊಂಕಣಿ ಕುಂಬಾರ ಮೊದಲಾದವುಗಳಲ್ಲಿ ತಮಗೆ ತಿಳಿದಿರುವಷ್ಟು ಹೆಸರುಗಳನ್ನು ಬರೆಸಿ.
ಪ್ರಶ್ನೆ 24 (e): ಮೀಸಲಾತಿಯಿಂದ ಪಡೆದ ಇತರೆ ಸೌಲಭ್ಯಗಳು – ಸೌಲಭ್ಯಗಳನ್ನು ಪಡೆದಿದ್ದರೆ ಅದನ್ನು ಬರೆಸಿ ಇಲ್ಲದಿದ್ದರೆ ಯಾವುದೂ ಇಲ್ಲ ಎಂದು ಬರೆಸಿ.
ಪ್ರಶ್ನೆ 30: ನಿಮ್ಮ ಕುಟುಂಬದ ಕುಲ ಕಸುಬು – 53 ರಲ್ಲಿ ನೀಡಿರುವ ಕುಂಬಾರರು/Potters ಎಂದು ಬರೆಸಿ.
ಪ್ರಶ್ನೆ 31: ನಿಮ್ಮ ಕುಲ ಕಸುಬು ಮುಂದುವರೆದಿದೆಯೇ? – ನಿಮ್ಮ ಕುಟುಂಬದಲ್ಲಿ ಈಗಲೂ ಕುಂಬಾರಿಕೆಯನ್ನು ಮಾಡುತ್ತಿದ್ದರೆ ಹೌದು ಎಂದು ಬರೆಸಿ. ಇಲ್ಲದಿದ್ದರೆ ಇಲ್ಲ ಎಂದು ಬರೆಸಿ.
ಪ್ರಶ್ನೆ 32: ನಿಮ್ಮ ಕುಲ ಕಸುಬಿನಿಂದ ಬಂದ ಖಾಯಿಲೆಗಳು – ಯಾವುದೂ ಇಲ್ಲ ಎಂದು ಬರೆಸಿ
(ಜನಾಂಗದ ಬಂಧುಗಳಿಗೆ ಕುಂಬಾರ ಜನಾಂಗದ ಭವಿಷ್ಯದ ದೃಷ್ಟಿಯಿಂದ ಡಾ.ಎಂ.ಪಿ.ವರ್ಷ, ಪ್ರಧಾನ ಸಂಚಾಲಕ, ಕರ್ನಾಟಕ ರಾಜ್ಯ ಸಮಸ್ತ ಕುಂಬಾರರ ಅಭಿವೃದ್ಧಿ ವೇದಿಕೆ ಇವರ ಸಂದೇಶ)