ಮಾಧ್ಯಮಗಳ ಗಮನಸೆಳೆದು `ದಶರಥ ಮಾಂಝೀ’ ಎಂದು ಕರೆಯಲ್ಪಟ್ಟ ಕಾರ್ಕಳದ `ಅಪ್ಪಿಯಣ್ಣ’ !
ಕಾರ್ಕಳ(ಕುಲಾಲ ವರ್ಲ್ಡ್ ಡಾಟ್ ಕಾಮ್) :ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದಲ್ಲಿ 1.5 ಕಿಲೋ ಮೀಟರ್ ಮಣ್ಣಿನ ರಸ್ತೆಯಿದೆ. ಮಳೆಗಾಲ ಬಂತಂದ್ರೆ ಇಲ್ಲಿನ ರಸ್ತೆ ಕೆಸರು ಗದ್ದೆಯಂತಾಗಿ ಜನರ ಸಂಚಾರಕ್ಕೆ ಅಡ್ಡಿಯಾಗುತ್ತೆ. ಈ ರಸ್ತೆಯನ್ನ 50 ವರ್ಷಗಳಿಂದ ಓರ್ವ ವೃದ್ಧ ದುರಸ್ತಿ ಮಾಡುತ್ತ ಬರ್ತಿದ್ದಾರೆ. ಇವರ ನೆರವಿಗೆ ಯಾವ ಸರ್ಕಾರಿ ವ್ಯವಸ್ಥೆಯೂ ಈವರೆಗೆ ಧಾವಿಸಿಲ್ಲ. 80ರ ಹರೆಯದ ವೃದ್ಧನ ಈ ಸಾಹಸ ಕಾರ್ಕಳ ತಾಲೂಕಿನ ಆಡಳಿತ ವ್ಯವಸ್ಥೆ ವೈಫಲ್ಯಕ್ಕೆ ಹಿಡಿದ ಕನ್ನಡಿಯಂತಿದೆ.
ಬಿಹಾರದ ದಶರಥ ಮಾಂಜಿಯವರ ಕಥೆ ನೀವು ಕೇಳಿಯೇ ಇರ್ತೀರ. ಇದೆ ರೀತಿ ಉಡುಪಿ ಜಿಲ್ಲೆಯ ಕಾರ್ಕಳದಲ್ಲೂ ಓರ್ವ ವೃದ್ಧ ಇದ್ದಾರೆ. ಇದು ಕಾರ್ಕಳ ಆಡಳಿತ ವ್ಯವಸ್ಥೆಗೆ ಹೆಮ್ಮೆ ತರುವಂತ ವಿಚಾರವಲ್ಲ. ಯಾಕಂದ್ರೆ ಅಜೆಕಾರಿನ ಈ ವೃದ್ಧ ತನ್ನೂರಿನ ರಸ್ತೆಯನ್ನ ಒಂದಲ್ಲ ಎರಡಲ್ಲ ಬರೋಬ್ಬರಿ 50 ವರ್ಷದಿಂದ ದುರಸ್ತಿ ಪಡಿಸ್ತಾ ಬರ್ತಿದ್ದಾರೆ. ಅದೂ ಏಕಾಂಗಿಯಾಗಿ. ಆದ್ರೆ ಅಲ್ಲಿನ ಗ್ರಾಮ ಪಂಚಾಯತ್ ಸೇರಿದಂತೆ ತಾಲೂಕು ಆಡಳಿತ ಮಾತ್ರ ತಮಗೂ ಈ ವಿಚಾರಕ್ಕೂ ಸಂಬಂಧವೆ ಇಲ್ಲವೇನು ಅನ್ನುವಂತೆ ಸೈಲೆಂಟ್ ಆಗಿದ್ದಾರೆ.
ಅಜೆಕಾರಿನ ಮರ್ಣೆ ಗ್ರಾಮದಿಂದ ದೊಂಬರಪಲ್ಕೆಗೆ ಹೋಗುವ ಮಣ್ಣಿನ ರಸ್ತೆ ದಶಕಗಳಿಂದಲೂ ಅವ್ಯವಸ್ಥಿತ ಸ್ಥಿತಿಯಲ್ಲಿದೆ. ಮಳೆ ಬಂದಾಗ ರಸ್ತೆ ಸಂಪೂರ್ಣವಾಗಿ ಹಾಳಾಗಿ, ಇಲ್ಲಿ ರಸ್ತೆಯೇ ಇಲ್ಲವೇನೋ ಅನ್ನೋ ಪರಿಸ್ಥಿತಿಗೆ ತಲುಪುತ್ತೆ. ಸಂಚಾರ ವ್ಯವಸ್ಥೆಗೆ ಅಡಚಣೆಯಾಗಿ ಸ್ಥಳೀಯರು ತೊಂದರೆ ಅನುಭವಿಸ್ತಾರೆ. ಇದನ್ನ ನೋಡಿದ 80 ವರ್ಷ ಪ್ರಾಯದ ಶ್ರೀನಿವಾಸ ಮೂಲ್ಯ ಸ್ಥಳೀಯವಾಗಿ ಅಪ್ಪಿಯಣ್ಣ ಎಂದೇ ಕರೆಯಲ್ಪಡುವ ಇವರು ತಾನೇ ಹಾರೆ-ಪಿಕ್ಕಾಸು ಹಿಡಿದು ರಸ್ತೆ ದುರಸ್ತಿ ಮಾಡಲು ಪ್ರಾರಂಭಿಸಿದ್ರು. ಕಳೆದ 50 ವರ್ಷಗಳಿಂದ ಅವರು ಸ್ವಂತ ಶ್ರಮದಿಂದ ಮಣ್ಣು ತುಂಬಿ.. ಚರಂಡಿ ಕಟ್ಟಿ.. ರಸ್ತೆ ಸುಧಾರಿಸಿದ್ದಾರೆ.
ಒಂದು ಚಿಕ್ಕ ಗುಂಡಿ ಬಿದ್ದರೂ ಅಪ್ಪಿಯಣ್ಣ ಅಲರ್ಟ್ ಆಗುತ್ತಾರೆ. ನೇರವಾಗಿ ದುರಸ್ತಿಗೆ ಮುಂದಾಗುತ್ತಾರೆ. ಅದೂ ಮಳೆಗಾಲದಲ್ಲಿ ಇವರೂ ಮನೆಯಲ್ಲಿರುವುದಕ್ಕಿಂತ ಮಳೆಯಲ್ಲಿ ರಸ್ತೆ ಸರಿ ಪಡಿಸುತ್ತಾ ಕಾಲ ಕಳೆಯೋದೇ ಹೆಚ್ಚು.
ಮರ್ಣೆಯಿಂದ ದೊಂಬರಪಲ್ಕೆಗೆ ಸಂಪರ್ಕಿಸುವ ಈ ರಸ್ತೆಯನ್ನ 15 ಕುಟುಂಬಗಳು ನಿತ್ಯವೂ ಬಳಸುತ್ತವೆ. ಮಳೆಗಾಲದಲ್ಲಿ ರಸ್ತೆ ಸಂಚಾರ ಯೋಗ್ಯವಾಗದೇ, ಶಾಲೆ, ಹಾಸ್ಪಿಟಲ್, ಮಾರುಕಟ್ಟೆಗೆ ಹೋಗಲು ಸ್ಥಳೀಯರು ತೊಂದರೆಪಡ್ತಾರೆ. ಅಪ್ಪಿಯಣ್ಣನ ಪ್ರಯತ್ನ ಇಲ್ಲ ಅಂದಿದ್ರೆ, ಈ ರಸ್ತೆ ತೀರಾ ಹದಗೆಟ್ಟ ಸ್ಥಿತಿಗೆ ತಲುಪುತ್ತಿತ್ತು ಅನ್ನೋದು ಗ್ರಾಮಸ್ಥರ ಅಭಿಪ್ರಾಯ.
ನಾನು ಸಾಯುವ ಮುಂಚೆ ರಸ್ತೆಗೆ ಡಾಂಬರು ಆಗಬೇಕು ಎಂಬುವದು ಶ್ರೀನಿವಾಸ ಮೂಲ್ಯ ಅವರ ಕನಸಾಗಿದೆ. ಆದರೆ ಕಾರ್ಕಳ ತಾಲೂಕು ಆಡಳಿತ ಈವರೆಗೂ ಇತ್ತ ಗಮನ ಹರಿಸಿಲ್ಲ. ಕಾರ್ಕಳ ತಾಲೂಕಿಗೆ 2024-25ರಲ್ಲಿ ನರೇಗಾ ಯೋಜನೆಯಡಿ 670.35 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಮರ್ಣೆ ಗ್ರಾಂ ಪಂಚಾಯತ್ಗೆ 23.5ಲಕ್ಷ ರೂ. ಬಂದಿತ್ತು. ಆದರೆ, ದೊಂಬರಪಲ್ಕೆ ರಸ್ತೆ ಅಭಿವೃದ್ಧಿಗೆ ಹಣ ಬಂದಿಲ್ಲ.