ಕರ್ನಾಟಕದಲ್ಲಿ ಇತರ ಸಮೂದಾಯದಲ್ಲಿ ಕಾರ್ಯಾಚರಿಸುತ್ತಿರುವ ಪತ್ರಿಕೆಗಳ ಸಂಖ್ಯೆಗೆ ಹೋಲಿಸಿದರೆ ಕುಂಬಾರ ಸಮುದಾಯದಲ್ಲಿದ್ದ ಪತ್ರಿಕೆ ಸಂಖ್ಯೆ ಏನೇನೂ ಅಲ್ಲ. ಉದಾಹರಣೆಗೆ ದೇವಾಂಗ ಸಮುದಾಯದಲ್ಲಿ ಇರುವ ಪತ್ರಿಕೆಗಳ ಸಂಖ್ಯೆ ಬರೋಬ್ಬರಿ 51. ಅಷ್ಟೂ ಪತ್ರಿಕೆಗಳು ಇಂದು ಯಾವುದೇ ಅಡೆತಡೆ ಇಲ್ಲದೇ ಆ ಜನರ ಸಹಕಾರದಿಂದ ಮುಂದುವರಿಯುತ್ತಿದೆ. ಆದರೆ ಕುಂಬಾರ ಸಮುದಾಯದಲ್ಲಿ ಇದ್ದುದೇ ಬೆರಳೆಣಿಕೆಯ ಪತ್ರಿಕೆಗಳು. ಅವುಗಳನ್ನೇ ನಮಗೆ ಉಳಿಸಿಕೊಳ್ಳಲಾಗುತ್ತಿಲ್ಲವೆಂದರೆ ನಮ್ಮ ದಾರಿದ್ರ್ಯಕ್ಕೆ ಏನು ಹೇಳೋಣ ಹೇಳಿ?
ದೇಶದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವಲಯ ಸೇರಿದಂತೆ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಯಲ್ಲಿ ಪತ್ರಿಕಾ ರಂಗದ ಕೊಡುಗೆ ಅಪಾರ…ಅಷ್ಟೇ ಮುಖ್ಯವಾದದ್ದು ಕೂಡ. ಪತ್ರಿಕೋದ್ಯಮ ಎಂಬುವುದು ಬರೀ ವೃತ್ತಿಯಾಗಿರದೇ ಅದೊಂದು ಸಮಾಜ ಸೇವೆಯೇ ಆಗಿದೆ. ಜಾಗತೀಕರಣದ ಅನೇಕ ಸವಾಲುಗಳ ನಡುವೆಯೂ ಪತ್ರಿಕೆಗಳು ಇಂದಿಗೂ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿವೆ. ಜನಜೀವನದಲ್ಲಿ ತಮ್ಮದೇ ಆದ ಪಾತ್ರವನ್ನು ನಿರ್ವಹಿಸುತ್ತಿವೆ. ಸಾಮಾಜಿಕ ಬದಲಾವಣೆಗೂ ಕಾರಣವಾಗುತ್ತಿವೆ. ಪ್ರಿಂಟ್ ಮೀಡಿಯಾದಲ್ಲಿ ಅನೇಕ ಪ್ರತಿಭಾವಂತ ಪತ್ರಕರ್ತರಿದ್ದಾರೆ. ಅನೇಕ ಪ್ರತಿಭಾನ್ವಿತ ಪತ್ರಕರ್ತರು ಆಗಿ ಹೋಗಿದ್ದಾರೆ.
ಇಂದು ಪ್ರಬಲವಾಗಿರು ದೃಶ್ಯ ಮಾಧ್ಯಮ ಎಷ್ಟೇ ದಾಳಿ ಮಾಡಿದರೂ, ದಿನದ ಇಪ್ಪತ್ತನಾಲ್ಕು ಗಂಟೆಗಳೂ ಸುದ್ದಿ ಪ್ರಸಾರ ಮಾಡಿದರೂ, ಪತ್ರಿಕೆಗಳ ಮಹತ್ವ ಇಂದಿಗೂ ಕಡಿಮೆಯಾಗಿಲ್ಲ. ಈ ಮಾತುಗಳು ಮಾಧ್ಯಮವನ್ನೇ ಉದ್ಯಮವನ್ನಾಗಿ ಮಾಡಿಕೊಂಡ ರಾಜ್ಯಮಟ್ಟದ ಆವೃತ್ತಿ ಇರುವ ಪತ್ರಿಕೆಗಳ ಕುರಿತಾಗಿ ನಿಜವೆನ್ನಬಹುದು. ಆದರೆ ಸಣ್ಣ ಸಮುದಾಯವಾದ ಕುಂಬಾರ/ಕುಲಾಲ ಓದುಗರನ್ನೇ ನೆಚ್ಚಿಕೊಂಡು, ಸಮಾಜದ ಮುಖವಾಣಿಯಾಗಿ, ಸಮಾಜದ ದನಿಯಾಗಿ ಹೊರಬರುತ್ತಿರುವ ಕುಂಬಾರ ಸಮುದಾಯದ ಪತ್ರಿಕೆಯ ಸ್ಥಿತಿಗತಿ ಹೇಗಿದೆ ? ಎಲ್ಲರು ಚಿಂತಿಸಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿ ನಾವಿದ್ದೇವೆ.
ಸದಾ ಸಮುದಾಯದ ಸವಾಲುಗಳ ಮೇಲೆ ಬೆಳಕು ಚೆಲ್ಲುವ, ಆಗು-ಹೋಗುಗಳ ವರದಿ ಪ್ರಸಾರಿಸುವ, ನಮ್ಮ ನೋವು- ನಲಿವುಗಳ ವಾಸ್ತವಗಳನ್ನು ಸಮಾಜದ ಮುಂದಿಡಬೇಕಾದ, ಸಮುದಾಯದ ಬಗೆಗಿನ ಅನೆಕ ಪೂರ್ವಾಗ್ರಹಗಳನ್ನು-ಸಂಶಯಗಳನ್ನು ದೂರೀಕರಿಸಲು ಯತ್ನಿಸಬೇಕಿದ್ದ ಸಮುದಾಯದ ಪತ್ರಿಕೆಗಳು ಹೇಗಿವೆ?? ಸಮುದಾಯಕ್ಕೆ ಆತ್ಮವಿಶ್ವಾಸ ತುಂಬುವ, ರಾಜಕೀಯ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳಲ್ಲಿ ತಮ್ಮ ನ್ಯಾಯಯುತ ಪಾಲನ್ನು ಪಡೆಯುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ ನಡೆಯಲು ಸಹಕಾರಿಯಾಗಬೇಕಿದ್ದ ಕನ್ನಡ ಭಾಷೆಯ ಕುಂಬಾರ ಸಮುದಾಯದ ಕಿರು ಪತ್ರಿಕೆಗಳ ಸುಗ್ಗಿ ಹೆಚ್ಚು ಕಡಿಮೆ ಮುಗಿಯುತ್ತಾ ಬಂದಂತೆ ತೋರುತ್ತಿದೆ.
ಹಲವು ವರ್ಷಗಳ ಹಿಂದೆ ಹುಟ್ಟಿ ಬೆಳೆದ ಕುಂಬಾರ ಸಮುದಾಯದ ಪತ್ರಿಕೆಗಳು ಬೇರೆ ಬೇರೆ ಕಾರಣಗಳಿಂದ ನಿಂತುಹೋಗುತ್ತಿರುವುದು ನೋವಿನ ಸಂಗತಿ.ಆದರೆ ಇದು ಕಟು ಸತ್ಯ. ಇದರ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾದ ಕಾಲದಲ್ಲಿ ನಾವಿದ್ದೇವೆ. ಹಲವು ವರ್ಷಗಳ ಹಿಂದೆಯೇ ಕರಾವಳಿ ಕುಲಾಲ ಬಂಧುಗಳ ಮುಖವಾಣಿಯಾಗಿ ಮಂಜೇಶ್ವರದಿಂದ ಖಾಸಗಿಯಾಗಿ ಹೊರಬರುತ್ತಿದ್ದ, ಆರಂಭದಲ್ಲಿ ಶಂಕರ ಕುಂಜತ್ತೂರು ಸಂಪಾದಕತ್ವದಲ್ಲಿದ್ದ `ಕುಂಭ ವಾಣಿ’ ಐದಾರು ವರ್ಷಗಳ ಹಿಂದೆ ಕಾರಣಾಂತರದಿಂದ ಪ್ರಕಟಣೆ ನಿಲ್ಲಿಸಿದೆ. ಇದಕ್ಕೂ ಮುನ್ನ ಆರಂಭಗೊಂಡಿದ್ದ ನೀಲಕಂಠಪ್ಪ ಎಂ ಕುಂಭಾರ್ ಸಂಪಾದಕತ್ವದ `ಕುಂಭ ಕಲ್ಪ’ ಮತ್ತು ಕೆ ವಿ ಶಂಕರ್ ಸಂಪಾದಕತ್ವದಲ್ಲಿ `ಕುಂಭ ಕ್ರಾಂತಿ’ ಎಂಬ ಪತ್ರಿಕೆಗಳು ಹೊರಬರುತ್ತಿದೆಯೋ, ಮುಚ್ಚಿದೆಯೋ ಯಾರಿಗೂ ತಿಳಿದಿಲ್ಲ. ೨ ವರ್ಷದ ಹಿಂದೆ ದೊಡ್ಡಮಟ್ಟದ ಪ್ರಚಾರದೊಂದಿಗೆ ಆರಂಭಗೊಂಡ ಜಗದೀಶ ಕುಂಬಾರ ಸಂಪಾದಕತ್ವದ ಉತ್ತರ ಕನ್ನಡದ `ಕರುನಾಡ ಕುಂಬಾರ ಪರಿವಾರ’ ಎಂಬ ಮಾಸ ಪತ್ರಿಕೆ ಆರಂಭಗೊಂಡ ಕೆಲವೇ ತಿಂಗಳಲ್ಲಿ ಬಾಗಿಲು ಮುಚ್ಚಿದೆ. ಇನ್ನು ಕರಾವಳಿಯಲ್ಲಿ ಹೊಸ ಮಹತ್ವಾಕಾಂಕ್ಷೆಯೊಂದಿಗೆ ಆರಂಭಿಸಲಾದ ವೇಣೂರು ಪದ್ಮನಾಭ ಕುಲಾಲರ `ಸರ್ವಜ್ಞ ವಾಣಿ’ ಮಾಸ ಪತ್ರಿಕೆ ಕೆಲವು ತಾಂತ್ರಿಕ ತೊಡಕುಗಳಿಂದ ಪ್ರಕಟಣೆ ಸ್ಥಗಿತಗೊಳಿಸಿ ಹಲವು ತಿಂಗಳುಗಳು ಕಳೆದುಹೋಗಿದೆ. ಈ ಹೊಸವರ್ಷದಲ್ಲಿ ಸರ್ವಜ್ಞವಾಣಿ ಪತ್ರಿಕೆ ಮತ್ತೆ ಮೈಕೊಡೆದು ಪ್ರಕಟಗೊಳ್ಳುತ್ತದೆ ಎಂಬ ಮಾತು ಮಿಥ್ಯವಾಗಿದೆ.
ಇವೆಲ್ಲಕ್ಕಿಂತ ಹೆಚ್ಚಾಗಿ ತಿಂಗಳ ಹಿಂದಷ್ಟೇ ಎಂಟು ವರುಷಗಳ ಕುಂಬಾರ ಸಮಾಜದ ಸಾಹಿತ್ಯ ಪ್ರಯಾಣವನ್ನು ನಿಲ್ಲಿಸುತ್ತಿರುವುದಾಗಿ ಬೆಂಗಳೂರು ಮೂಲದ `ಕುಂಭ ಉದಯ’ ಮಾಸ ಪತ್ರಿಕೆಯ ಸಂಪಾದಕ ಸಿ.ಎಂ ಸೋಮಸುಂದರ್ ತಮ್ಮ ಸಂಪಾದಕೀಯದಲ್ಲಿ ವಿಷಾದಪೂರ್ವಕವಾಗಿ ವಿವರವಾಗಿ ಬರೆದು ತಮ್ಮ ನೋವನ್ನು ಸಮುದಾಯದೊಂದಿಗೆ ತೋಡಿಕೊಂಡಿದ್ದಾರೆ. ಬಹುಶಃ ಇವರ ಸಂಪಾದಕೀಯ ಬರಹ ಕುಂಬಾರ ಸಮುದಾಯದ ಪ್ರಜ್ಞಾವಂತ ಮಂದಿ ಆತ್ಮವಿಮರ್ಶೆ ಮಾಡಿಕೊಳ್ಳುವಂತಿದೆ. ಕೇವಲ ಚಂದಾ ಹಣವನ್ನೇ ನೆಚ್ಚಿಕೊಂಡು ಹೊಸ ನಿರೀಕ್ಷೆಯೊಂದಿಗೆ ಪತ್ರಿಕೆ ಆರಂಭಿಸಿ, ಅದರಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ಸಮಾಜದ ಧ್ವನಿಯಾಗಿ ಪತ್ರಿಕೆಯನ್ನು ಮುನ್ನಡೆಸಿದ್ದ ಸೋಮಸುಂದರ್ ಅವರು, ಓದುಗರ ಬೆಂಬಲದ ಕೊರತೆಯಿಂದಾಗಿ ಪತ್ರಿಕೆ ಪ್ರಕಟಣೆ ನಿಲ್ಲಿಸುತ್ತಿದ್ದಾರೆಂದರೆ ನಮ್ಮ ಕುಂಬಾರ ಜನಾಂಗದವರಲ್ಲಿ ಸಮುದಾಯ ಪತ್ರಿಕೆಯ ಬಗ್ಗೆ ಎಷ್ಟು ಅಸಡ್ಡೆ, ಈಗಿನ ಕುಲಾಲ ಯುವ ಮನಸ್ಸುಗಳಲ್ಲಿ ಪತ್ರಿಕೆ ಓದುವ ಆಸಕ್ತಿ ಎಷ್ಟು ಕಡಿಮೆಯಾಗಿದೆ ಎಂಬುದನ್ನು ಸೂಚಿಸುವುದಿಲ್ಲವೇ ? ಯೋಚಿಸಿ.
ಜನಾಂಗದ ಪತ್ರಿಕೆಗಳು ವಾಣಿಜ್ಯದ ಉದ್ದೇಶ ಹೊಂದಿದವುಗಳಲ್ಲ. ಅವುಗಳಿಗೆ ಯಾವುದೇ ಲಾಭದ ಜಾಹಿರಾತು ದೊರಕುವುದಿಲ್ಲ ಅಲ್ಲದೇ ಮಾರಾಟದಿಂದ ಹೇಳಿಕೊಳ್ಳುವ ಲಾಭ ಬರುವುದು ಇಲ್ಲ. ಸಮುದಾಯದ ಪ್ರತ್ರಿಕೆಯ ಲಾಭ ಎನ್ನುವುದು ಆಯಾ ಭಾಷೆಯ ಓದುಗರಿಗೆ ಸಿಗುತ್ತದೆಯೇ ಹೊರತು ಪತ್ರಿಕೆಗೆ ಖಂಡಿತ ಅಲ್ಲ. ಸಮುದಾಯದ ಪ್ರತಿಯೊಬ್ಬನ ಬೌದ್ದಿಕ ಮಟ್ಟ ವಿಕಸಿತ ಗೊಳಿಸುವಲ್ಲಿ ಪತ್ರಿಕೆ ದೊಡ್ಡ ಕೆಲಸ ಮಾಡಬಲ್ಲದು. ಮಾತು ಮಾತಿಗೂ ನಾವು ಇಪ್ಪತ್ತೈದು ಲಕ್ಷ ಕುಂಬಾರರು ಕರ್ನಾಟಕದಲ್ಲಿದ್ದೇವೆ ಎಂದು ಜಂಭ ಕೊಚ್ಚಿಕೊಳ್ಳುವ ನಾವು ನಮ್ಮ ಜನಾಂಗದ ಎಷ್ಟು ಜನ ಪತ್ರಿಕೆಗಳಿಗೆ ಚಂದಾದಾರಾರಾಗಿದ್ದೇವೆ ಅಥವಾ ಓದುತ್ತಿದ್ದೇವೆ ಎಂದು ಪ್ರಶ್ನೆ ಮಾಡಿಕೊಳ್ಳುವುದು ಒಳ್ಳೆಯದು.ಪತ್ರಿಕೆಯನ್ನು ಓದಲು ಎಷ್ಟು ಜನ ಬೇರೆಯವರನ್ನು ಹುರಿದುಂಬಿಸಿದ್ದೇವೆ ಎಂದು ವಿಮರ್ಶೆ ಮಾಡಿಕೊಳ್ಳುವುದು ಒಳಿತು.
ಸುದ್ದಿ ಮಾಧ್ಯಮಗಳ ಪತ್ರಿಕೆಗಳು ಹೇಗೋ ಜಾಹಿರಾತಿನ ಬಲದಿಂದ ಉಳಿದುಕೊಳ್ಳುತ್ತವೆ. ಆದರೆ ಸಮುದಾಯದ ಮುಖವಾಣಿಯ ಎಲ್ಲ ಪತ್ರಿಕೆಗಳು ಯಾವ, ಯಾರ ಹಂಗಿಗೂ ಒಳಪಡದೇ ಸ್ವತಂತ್ರವಾಗಿ ಬದುಕಬೇಕು. ಅದಕ್ಕಿರುವ ಬಲ ಕೇವಲ ಸಮುದಾಯದ ಚಂದಾದಾರರು ಮಾತ್ರ. ಪತ್ರಿಕೆ ಮುನ್ನಡೆಯಲು ಮುದ್ರಣ, ವಿನ್ಯಾಸ, ರವಾನೆ, ಕಚೇರಿ ನಿರ್ವಹಣೆ, ಬರಹಗಾರರಿಗೆ ಕನಿಷ್ಠ ಸಂಭಾವನೆ ಸೇರಿದಂತೆ ಹತ್ತು ಹಲವು ಖರ್ಚುಗಳಿವೆ. ಇವೆಲ್ಲದಕ್ಕೂ ಮೂಲ ಚಂದಾ ಹಣ. ಪತ್ರಿಕೆಗೆ ಬೆನ್ನೆಲುಬಾದ ಇಂಥ ಚಂದಾದಾರರೇ ಕೈಕೊಟ್ಟರೆ ಪತ್ರಿಕೆಗಳು ಬದುಕುವುದಾದರೂ ಹೇಗೆ? ಪ್ರತಿಯೊಬ್ಬ ಪ್ರಜ್ಞಾವಂತ ಕುಂಬಾರನು ಕೇಳಿಕೊಳ್ಳಬೇಕಾದ ಪ್ರಶ್ನೆ ಇದು.
ಕರ್ನಾಟಕದಲ್ಲಿ ಇತರ ಸಮೂದಾಯದಲ್ಲಿ ಕಾರ್ಯಾಚರಿಸುತ್ತಿರುವ ಪತ್ರಿಕೆಗಳ ಸಂಖ್ಯೆಗೆ ಹೋಲಿಸಿದರೆ ಕುಂಬಾರ ಸಮುದಾಯದಲ್ಲಿದ್ದ ಪತ್ರಿಕೆ ಸಂಖ್ಯೆ ಏನೇನೂ ಅಲ್ಲ. ಉದಾಹರಣೆಗೆ ದೇವಾಂಗ ಸಮುದಾಯದಲ್ಲಿ ಇರುವ ಪತ್ರಿಕೆಗಳ ಸಂಖ್ಯೆ ಬರೋಬ್ಬರಿ 51. ಅಷ್ಟೂ ಪತ್ರಿಕೆಗಳು ಇಂದು ಯಾವುದೇ ಅಡೆತಡೆ ಇಲ್ಲದೇ ಆ ಜನರ ಸಹಕಾರದಿಂದ ಮುಂದುವರಿಯುತ್ತಿದೆ. ಆದರೆ ಕುಂಬಾರ ಸಮುದಾಯದಲ್ಲಿ ಇದ್ದುದೇ ಬೆರಳೆಣಿಕೆಯ ಪತ್ರಿಕೆಗಳು. ಅವುಗಳನ್ನೇ ನಮಗೆ ಉಳಿಸಿಕೊಳ್ಳಲಾಗುತ್ತಿಲ್ಲವೆಂದರೆ ನಮ್ಮ ದಾರಿದ್ರ್ಯಕ್ಕೆ ಏನು ಹೇಳೋಣ ಹೇಳಿ? ಸದ್ಯಕ್ಕೆ ನಮ್ಮಲ್ಲಿ ಮೈಸೂರಿನ ಎನ್. ಕುಮಾರಸ್ವಾಮಿ ಅವರ `ಕುಂಭ ಮಿತ್ರ’, ಮುಂಬಯಿ ಕುಲಾಲ ಸಂಘದ `ಅಮೂಲ್ಯ’ ಸೇರಿದಂತೆ ಕೆಲ ಪತ್ರಿಕೆಗೆಗಳು ಚೇತೋಹಾರಿಯಾಗಿ ಕಾಣುತ್ತಿದ್ದರೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಹೇಳಿಕೊಳ್ಳಲಾಗದ ದುಃಖ ದುಮ್ಮಾನದ ಜೊತೆಯಲ್ಲಿ ಇಂದು ಉಸಿರಾಡುತ್ತಿದೆ.
ಒಂದಂತೂ ಸತ್ಯ, ಯುವ ಸಮುದಾಯದಲ್ಲಿ ಪುಸ್ತಕ, ಪತ್ರಿಕೆ ಓದುವ ಅಭಿರುಚಿ ತುಂಬಾ ಕಡಿಮೆಯಾಗಿದೆ ಅನಿಸುತ್ತದೆ. ಇನ್ನು ಬರೆಯುವ ಹವ್ಯಾಸ ಇಲ್ಲವೆಂದೇ ಹೇಳಬಹುದು. ಕಳೆದೆರಡು ವರ್ಷಗಳಿಂದ ವೆಬ್ ಸೈಟ್ ನಿರ್ವಹಿಸುತ್ತಿರುವುದರಿಂದ ಈ ವಿಚಾರ ಸ್ಪಷ್ಟವಾಗಿ ಮನದಟ್ಟಾಗಿದೆ. ಸಾಮಾಜಿಕ ತಾಣಗಳಲ್ಲಿ ಸುದ್ದಿಯ ಲಿಂಕ್ ಕ್ಲಿಕ್ಕಿಸದೇ ಹೆಡ್ಡಿಂಗ್ ಓದಿಯೇ ಲೈಕ್ ಒತ್ತುವ, ಕಾಮೆಂಟ್ ಹಾಕುವ ಮಂದಿಯೇ ಹೆಚ್ಚು. ಇಂಥವರು ಪತ್ರಿಕೆ ಕೊಂಡು ಓದುವುದುಂಟೆ ? `ಕುಂಭ ಉದಯ’ದ ಸೋಮಸುಂದರ್ ಸಂಪಾದಕೀಯ ಬರಹ ಓದಿದರೆ ಮುಂದೆ ಯಾರೂ ಸಮುದಾಯದ ಹೊಸ ಪತ್ರಿಕೆ ಆರಂಭಿಸುವ ಧೈರ್ಯ ಮಾಡಲಾರರು. ಈಗಿರುವ ಪತ್ರಿಕೆಗಳನ್ನಾದರೂ ಉಳಿಸಲು ಪ್ರಯತ್ನಿಸಬೇಕಾಗಿದೆ. ಈ ಬಗ್ಗೆ ಪ್ರತಿಯೊಬ್ಬ ಕುಂಬಾರನು ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳಿತು.
ದಿನೇಶ್ ಬಂಗೇರ ಇರ್ವತ್ತೂರು
(ವ್ಯವಸ್ಥಾಪಕ ಸಂಪಾದಕ)