ಬಲೇ ತೆಲಿಪಾಲೆ-ಮಜಾಭಾರತದಲ್ಲಿ ಮಿಂಚಿದ ರಾಜೇಶ್ ಮುಗುಳಿ
ಗಂಡಾಗಿ ಹುಟ್ಟಿ ಹೆಣ್ಣಾಗಿ ಅಭಿನಯಿಸಿ ರಂಗಭೂಮಿಯಲ್ಲಿ ಸಂಚಲನ ಮೂಡಿಸಿದ ಹಲವಾರು ಕಲಾವಿದರನ್ನು ಕಾಣಬಹುದು. ಅಭಿನಯ ಚತುರತೆ, ಮಾತಿನ ಸೊಗಸು, ಬರಹದ ಮೋಡಿಯಲ್ಲಿ ಜನಮನ ಗೆದ್ದ ಕೆಲವೇ ಕೆಲವು ಕಲಾವಿದರಲ್ಲಿ ರಾಜೇಶ್ ಮುಗುಳಿಯು ಒಬ್ಬರು. ರಂಗಭೂಮಿಯ ಪ್ರಬುದ್ಧ ನಟನಾಗಿ, ನಟನಾಸಕ್ತರನ್ನು ಪಳಗಿಸುವ ನಿರ್ದೇಶಕನಾಗಿ, ನಾಟಕಗಳಿಗೆ ಸಾಹಿತ್ಯದ ಸೊಬಗನ್ನು ತುಂಬುವ ಬರಹಗಾರನಾಗಿ ಮಿನುಗುತ್ತಿರುವ ಉದಯೋನ್ಮುಖ ಕವಿಯಾಗಿದ್ದು ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ರಾಜೇಶ್ ಮುಗುಳಿ ವರ್ಕಾಡಿಯ ಕೊಡ್ಡಮೊಗರು ಗ್ರಾಮದ ಮುಗುಳಿಯ ಬಾಬು ಕುಲಾಲ್ ಸುಮತಿ ದಂಪತಿಯ ಪುತ್ರ. ಶಾಲಾ ಕಾಲೇಜುಗಳಲ್ಲಿ ತನ್ನ ನಟನಾಸಕ್ತಿಗೆ ವೇದಿಕೆಯನ್ನು ಕಂಡುಕೊಂಡು ರಾಜೇಶ್ ಅನಂತರದ ದಿನಗಳಲ್ಲಿ ರಂಗಭೂಮಿಯನ್ನೇರುವಲ್ಲಿ ಯಶಸ್ವಿಯಾದರು.
ಕಾಲೇಜು ಶಿಕ್ಷಣದ ಕೊನೆಯ ಸಂದರ್ಭದಲ್ಲಿ ಅಭಿನಯಿಸಿದ “ಗುಟ್ಟು ರಟ್ಟಾನಗ’ ನಾಟಕದ ಸ್ತ್ರೀ ಪಾತ್ರವು ಇವರ ಕಲಾ ಬದುಕಿಗೆ ಹೊಸ ತಿರುವನ್ನು ನೀಡಿತು. 2005ರಲ್ಲಿ ಕೃಷ್ಣ ಜೆ. ಮಂಜೇಶ್ವರ ಅವರ ಶಾರದಾ ಆರ್ಟ್ಸ್ ಕಲಾವಿದೆರ್ ತಂಡದಲ್ಲಿ “ಜ್ವಾಲಮುಖೀ’ ಎಂಬ ನಾಟಕದ ಮೂಲಕ ತಮ್ಮ ವೃತ್ತಿಪರ ಕಲಾವಿದನಾಗಿ ಸೇರ್ಪಡೆಗೊಂಡು ಇವರು ತನ್ನನ್ನು ಕಲಾಸೇವೆಗೆ ಮುಡಿಪಾಗಿಟ್ಟರು. ರಾಜೇಶ್ ಮುಗುಳಿ ಅಭಿನಯದ “ಬರುವೆರಾ’,”ಅಕ್ಕ ಬತ್ತಿ ಬೊಕ್ಕ ಒಟ್ಟಿಗೆ ಪೋಯಿ’,”ಸಾದಿ ತಪ್ಪೊಡಿ’, “ಎಡ್ಡೆಡುಪ್ಪುಗ’, “ಸುದ್ದಿ ತಿಕ್ಕ್ ೦ಡ್ ‘, “ಆರ್ ಪನ್ಲಕ’ ಮೊದಲಾದ ನಾಟಗಳ ನಾಯಕಿ, ಖಳನಾಯಕಿ, ಹಾಸ್ಯ ಸ್ತ್ರೀ ಪಾತ್ರಗಳಿಗೆ ಕಲಾಭಿಮಾನಿಗಳ ಅಭಿಮಾನ ಹಾಗೂ ಪ್ರೋತ್ಸಾಹವನ್ನೂ ಗಳಿಸಿಕೊಂಡು ರಂಗಭೂಮಿಯಲ್ಲಿ ಮಿನುಗತೊಡಗಿದರು. ಇವರು ಪಾತ್ರವನ್ನು ಕೇವಲ ಸ್ತ್ರೀ ಪಾತ್ರಗಳಿಗೆ ಮೀಸಲಿಡದೆ 2016ರಲ್ಲಿ “ನಿತ್ಯೆ ಬನ್ನಗ’ ಎಂಬ ನಾಟಕದ ಮೂಲಕ ವಿಭಿನ್ನವಾದ ಪುರುಷ ಪಾತ್ರದಲ್ಲೂ ಅಭಿನಯಿಸಿ ತನ್ನ ಅಭಿನಯ ಚಾತುರ್ಯತೆಯನ್ನು ತೆರೆದಿಟ್ಟು ಜನ ಪ್ರಶಂಸೆಗಳಿಸಿದರು. ತನ್ನ ನಟನಾ ಕೌಶಲ್ಯದಿಂದ ಹಲವಾರು ಬಹುಮಾನಗಳನ್ನೂ ಗಳಿಸಿದ್ದಾರೆ.
2010ರಲ್ಲಿ ಜರಗಿದ ಅಂತ ರ್ಜಿಲ್ಲಾ ನಾಟಕ ಸ್ಪರ್ಧೆಯಲ್ಲಿ “ಎಲ್ಲೆ ಗೊತ್ತಾವು’ ನಾಟಕದ ಕಥಾ ನಾಯಕಿ ಪಾತ್ರಕ್ಕೆ ಬಹುಮಾನ, 2011ರಲ್ಲಿ ಕುತ್ತಾರಿನಲ್ಲಿ ಜರಗಿದ ನಾಟಕ ಸ್ಪರ್ಧೆಯಲ್ಲಿ ಉತ್ತಮ ನಟಿ ಬಹುಮಾನ, 2017ರಲ್ಲಿ “ಆರ್ ಪನ್ಲಕ’ ನಾಟಕದಲ್ಲಿ ಉತ್ತಮ ಪೋಷಕ ನಟಿ ಬಹುಮಾನ ಮಾತ್ರವಲ್ಲದೆ ಇವರು ಅಭಿನಯಿಸಿದ ನಮ್ಮ ಟಿವಿಯಲ್ಲಿ ಯಶಸ್ವಿ ಯಾಗಿ ಜನಮನಗೆದ್ದ “ಬಲೆತೆಲಿಪಾಲೆ’ ಕಲರ್ಸ್ ಸೂಪರ್ ಕನ್ನಡ ವಾಹಿನಿಯಲ್ಲಿ ನೇರ ಪ್ರಸಾರವಾಗುವ ಮಜಾಭಾರತ ಕಾರ್ಯಕ್ರಮದಲ್ಲಿಯೂ ಮಿಂಚಿ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. ಇಷ್ಟು ಮಾತ್ರವಲ್ಲದೇ ಯಕ್ಷಗಾನ ರಂಗದಲ್ಲಿಯೂ ತಾನು ಸೈ ಎನಿಸಿಕೊಂಡ ಈ ಕಲಾವಿದ ಈಗಾಗಲೇ “ಮೋಕೆದ ಆರಿಯಣ್ಣೆ’ ಎಂಬ ತುಳು ಹಾಗೂ “ಒಂದು ಮೊಟ್ಟೆಯ ಕಥೆ’ ಎಂಬ ಕನ್ನಡ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.
ಗಡಿನಾಡ ಕಲಾ ಜಗತ್ತಿಗೆ ನೀಡಿದ ಕೊಡುಗೆ ಆಪಾರ ಸಾಧನೆಯ ಹಾದಿಯಲಿ ಮಾರ್ಗದರ್ಶಕರಾಗಿ, ಬೆನ್ನೆಲುಬಾಗಿ ಈ ಮಟ್ಟಕ್ಕೆ ಬೆಳೆಯಲು ಪ್ರೀತಿಯಿಂದ ಕೈಹಿಡಿದು ಮುನ್ನಡೆಸಿದ ಕೃಷ್ಣ ಜೆ. ಮಂಜೇಶ್ವರ ಇವರನ್ನು ಪೂಜನೀಯ ಭಾವದಿಂದ ಸ್ಮರಿಸಿಕೊಳ್ಳುತ್ತಾರೆ ರಾಜೇಶ್ ಮುಗುಳಿ. ಆದುದರಿಂದಲೇ ನಟನಾಗಿ, ನಿರ್ದೇಶಕನಾಗಿ, ಸಾಹಿತ್ಯಗಾರನಾಗಿ ತುಳುರಂಗಭೂಮಿ ಯಲ್ಲಿ ಸಕ್ರಿಯವಾಗಿರುವ ರಾಜೇಶ್ ಮುಗುಳಿಯವರ ಕಿರಿಯ ವಯಸ್ಸಿನ ಹಿರಿಯ ಸಾಧನೆ ಅಭಿನಂದನಾರ್ಹ. ರಂಗಮಿತ್ರೆರ್ ಪೆರ್ಮುದೆ ಇವರು ತುಳುನಾಡ ಕದಿಕೆ ಬಿರುದನ್ನು ನೀಡಿ ಗೌರವಿಸಿದ್ದಾರೆ. ಈ ಗಡಿನಾಡಿನ ಮಿನುಗುವ ರಾಜಕುಮಾರಿ (ರ)ಗೆ ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಲಿ. ಪ್ರಶಸ್ತಿ ಗೌರವಗಳ ಗರಿ ಇವರನ್ನು ಅಲಂಕರಿಸಲಿ.
——————————————————————————————————–
ಶಾರದಾ ತಂಡದ ಪ್ರಭಾವಿ ಕಲಾವಿದರಲ್ಲಿ ಒಬ್ಬರಾದ ರಾಜೇಶ್ ಮುಗುಳಿಯವರು ಶಾಂತ ಸ್ವಭಾವದ, ಪ್ರಬುದ್ದ ಕಲಾವಿದ. ತನ್ನ ಪಾತ್ರಗಳಿಗೆ ಜೀವ ತುಂಬುವ ಅವರ ನೈಜ, ಮನಮೋಹಕ ಅಭಿನಯ ಇವರ ಆಸ್ತಿ. ಎಲ್ಲರಿಗೂ ಆತ್ಮೀಯನಾಗಿರುವ ರಾಜೇಶ್ ತಂಡದಲ್ಲಿ ತೋರುವ ಕಾಳಜಿ ಹಾಗೂ ಇತರ ಕಲಾವಿದರೊಂದಿಗೆ ಪ್ರೀತಿ ಗೌರವದಿಂದ ಬೆರೆಯುವ ರೀತಿ ಮೆಚ್ಚತಕ್ಕದ್ದು. ಇವರು ಕಲಾವಿದನಾಗಿ ಇನ್ನೂ ಎತ್ತರಕ್ಕೆ ಬೆಳೆಯುವಂತೆ ಕಲಾಮಾತೆ ಆನುಗ್ರಹಿಸಲಿ.
– ಗಡಿನಾಡ ಕಲಾನಿಧಿ ಕೃಷ್ಣ ಜಿ . ಮಂಜೇಶ್ವರ
——————————————————————————————————
ಕಲೆಯ ಬೀಡಾದ ಕಾಸರಗೋಡಿನಲ್ಲಿ ಇಂತಹ ಪ್ರಬುದ್ಧ ಕಲಾವಿದ ಬೆಳೆದುಬರುತ್ತಿರುವುದು ಸಂತೋಷದ ವಿಷಯ. ಸರಳ ವ್ಯಕ್ತಿತ್ವದ ಇವರ ಹಲವಾರು ನಾಟಕಗಳನ್ನು ನೋಡುವ ಭಾಗ್ಯ ನಮಗೆ ದೊರೆತಿದೆ.ಇವರಂತಹ ಕಲಾವಿದ ಬಹಳ ಆಪರೂಪ ಇವರ ಸಾಧನೆ ಹೀಗೆ ಮುಂದುವರಿದು ಕೀರ್ತಿಶಾಲಿಯಾಗಲಿ.
-ಎ.ಆರ್ ಸುಬ್ಬಯ್ಯ ಕಟ್ಟೆ ಕೈರಳಿ ಪ್ರಕಾಶನ
——————————————————————————————————
ಬರಹ – ಅಖೀಲೇಶ್ ನಗುಮುಗಂ (ಕೃಪೆ: ಉದಯವಾಣಿ)