ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಒಂದೆಡೆ ಕುಲಾಲ ಸಮಾಜವನ್ನು ರಾಜಕೀಯ ಪ್ರಾತಿನಿಧ್ಯದಿಂದ ಸಂಪೂರ್ಣ ನಿರ್ಲಕ್ಷಿಸಲಾಗುತ್ತಿದೆ ಎಂಬ ಆರೋಪಗಳು ಎಲ್ಲೆಡೆ ಚಾಲ್ತಿಯಲ್ಲಿರುವಂತೆಯೇ ಮತ್ತೊಂದೆಡೆ ಇದಕ್ಕೆ ಸಾಕ್ಷಿ ಎನ್ನುವಂತೆ ಕುಲಾಲ ಸಮಾಜದ ರಾಜಕೀಯ ಆಶಾಕಿರಣ ಎಂಬಂತಿದ್ದ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹುದ್ದೆಯಿಂದ ಜಿ.ವಿ. ರಾಜೇಶ್ ಅವರನ್ನು ದಿಢೀರ್ ಎತ್ತಂಗಡಿ ಮಾಡುವ ಮೂಲಕ ಅನ್ಯಾಯ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನವರಾದ ರಾಜೇಶ್ ಕುಲಾಲ ಸಮಾಜದವರಾಗಿದ್ದು, ಆರ್ಎಸ್ಎಸ್ ಪ್ರಚಾರಕರಾಗಿ ಹಲವು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ್ದರು. 2022ರ ಜುಲೈನಲ್ಲಿ ಅವರನ್ನು ಆರೆಸ್ಸೆಸ್ ಪಕ್ಷದ ಕೆಲಸಕ್ಕೆ ನಿಯೋಜಿಸಿತ್ತು. ಪ್ರಚಾರಕ ಹುದ್ದೆಯಿಂದ ಸಂಘಟನಾ ಕಾರ್ಯದರ್ಶಿಯಂತಹ ಅತ್ಯಂತ ಜವಾಬ್ದಾರಿಯ, ಮಹತ್ವದ ಹುದ್ದೆಗೆ ಬಂದವರ ಅವಧಿ ಸಾಮಾನ್ಯವಾಗಿ ಮೂರು ವರ್ಷ ಇರುತ್ತದೆ. ಆದರೆ ಅವಧಿಗೆ ಮುಂಚಿತವಾಗಿ ಅವರನ್ನು ಬದಲಾವಣೆ ಮಾಡಿರುವುದು ಪಕ್ಷದೊಳಗೆ ಹಲವು ಚರ್ಚೆಯನ್ನು ಹುಟ್ಟುಹಾಕಿದ್ದಲ್ಲದೆ, ರಾಜಕೀಯ ಪ್ರಾತಿನಿಧ್ಯಕ್ಕೆ ಹಂಬಲಿಸುತ್ತಿದ್ದ ಕುಲಾಲ ಸಮಾಜಕ್ಕೆ ದ್ರೋಹ ಮಾಡಿದಂತಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಸಂಘಟನಾ ಕಾರ್ಯದರ್ಶಿಯಾಗಿ ಪಕ್ಷದ ಹಿರಿಯರು, ಹಲವು ಮಾಜಿ ಮುಖ್ಯಮಂತ್ರಿಗಳ ಜತೆಗೆ ಸಮನ್ವಯ ಸಾಧಿಸುವುದರ ಜತೆಗೆ ಸಂಘ ಮತ್ತು ಪಕ್ಷದ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಮಹತ್ವದ ಹೊಣೆ ಹೊತ್ತಿದ್ದ ರಾಜೇಶ್ ಅವರನ್ನು ದಿಢೀರ್ ಹುದ್ದೆಯಿಂದ ತೆಗೆಯಲಾಗಿದೆ.
ಅವಿಭಜಿತ ದ.ಕ. ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಕುಲಾಲ ಸಮುದಾಯದ ಬೆಂಬಲಿಗರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಲ್ಲದೆ ಸ್ಥಳೀಯಾಡಳಿತ ಚುನಾವಣೆಯಲ್ಲೂ ಈ ಸಮುದಾಯದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದಿದ್ದಾರೆ. ಆದರೆ ಉನ್ನತ ರಾಜಕೀಯ ಸ್ಥಾನಮಾನದ ವಿಚಾರಕ್ಕೆ ಬಂದಾಗ ಕರಾವಳಿಯಲ್ಲಿ ಸರಿಸುಮಾರು ೩ ಲಕ್ಷ ಜನಸಂಖ್ಯೆ ಇರುವ ಕುಲಾಲ ಸಮುದಾಯ ಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದು, ರಾಜೇಶ್ ಅವರು ಬಿಜೆಪಿಯ ಉನ್ನತ ಹುದ್ದೆ ಅಲಂಕರಿಸಿದಾಗ ಮುಂದೆ ಅವರಿಗೆ ಕರಾವಳಿಯ ಯಾವುದಾದರೊಂದು ಕ್ಷೇತ್ರದಲ್ಲಿ ಶಾಸಕ ಸ್ಥಾನ ಲಭಿಸಬಹುದು ಎಂಬ ಆಶಾಭಾವನೆ ಇತ್ತು. ಆದರೆ ಅದು ಈಗ ಮಣ್ಣುಪಾಲಾಗಿದೆ. ಸಂಘ ನಿಷ್ಠರಾಗಿದ್ದ ಅನೇಕರು ಪಕ್ಷ ತೊರೆಯುವ, ಬಂಡಾಯ ಏಳುವುದರ ಬಗ್ಗೆ ಮುಂಜಾಗ್ರತೆ ವಹಿಸಿ, ಹಿರಿಯರ ಜತೆ ಚರ್ಚಿಸಿ ಮಾತುಕತೆ ಮೂಲಕ ಬಗೆಹರಿಸುವ, ರಾಜಕೀಯ ಸವಾಲುಗಳನ್ನು ಪರಿಹರಿಸುವ ಹೊಣೆಯೂ ಸಂಘಟನಾ ಕಾರ್ಯದರ್ಶಿ ಅವರ ಮೇಲಿತ್ತು. ಅದನ್ನು ಸಮರ್ಥವಾಗಿ ನಿಭಾಯಿಸಿದ್ದರೂ ಅವರನ್ನು ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಲಿಲ್ಲ. ಆ ಮೂಲಕ ರಾಜಕೀಯ ಪಕ್ಷಗಳು ಕುಲಾಲರನ್ನು ಸಂಘಟನೆ ದೃಷ್ಟಿಯಿಂದ ಕರಪತ್ರ ಹಂಚಲು, ಪೋಸ್ಟರ್ , ಬ್ಯಾನರ್ ಕಟ್ಟಲು ಮಾತ್ರ ಉಪಯೋಗಿಸಿಕೊಳ್ಳುತ್ತ ಬಂದಿದೆ ಎನ್ನುವ ಮಾತುಗಳು ನಿಜವಾಗಿದೆ. ಇನ್ನು ಪ್ರೀತಿ, ವಿಶ್ವಾಸಕ್ಕೆ, ಸಂಘಟನೆಗೆ ತತ್ವನಿಷ್ಠರಾಗಿ ದುಡಿದು ಪ್ರಾಣವನ್ನೇ ಅರ್ಪಿಸಲು ಸಿದ್ಧರಿರುವ ಸಮುದಾಯದ ಯುವಕರನ್ನು ಬಳಸಿಕೊಂಡು ಕೆಲ ಪಕ್ಷಗಳು ತಮ್ಮ ಸಂಘಟನೆಗಳ ಸಣ್ಣಪುಟ್ಟ ಪದಾಧಿಕಾರಿ ಹುದ್ದೆಗಳನ್ನು ನೀಡಿ, ಮುಂಗೈಗೆ ಬೆಣ್ಣೆ ಸವರುವ ಕೆಲಸವನ್ನಷ್ಟೇ ಮಾಡುತ್ತಿದೆ. ಹೀಗಾಗಿ ಪಕ್ಷ ಸಂಘಟನೆ ಹಾಗೂ ಅನಿವಾರ್ಯವಾದಾಗ ರಕ್ತಪಾತಗಳಿಗೆ ಕೊರಳೊಡ್ಡಲು ಮಾತ್ರ ಕುಲಾಲ ಸಮಾಜದ ವ್ಯಕ್ತಿಗಳು ಆ ಪಕ್ಷಗಳಿಗೆ ಅಗತ್ಯ ಎಂಬ ಮಾತನ್ನು ವಿಷಾದದಿಂದಲೇ ಹೇಳಬೇಕಾಗಿದೆ.
ವಿಧಾನಪರಿಷತ್ ನಲ್ಲೂ ಅವಕಾಶ ಇಲ್ಲ
ಕರಾವಳಿಯಲ್ಲಿ ಕುಲಾಲ ಸಮುದಾಯದ ಮಟ್ಟಿಗೆ ಅವಕಾಶ ನೀಡುವಲ್ಲಿ ಆಶಾಕಿರಣವಾದ ಬಿಜೆಪಿಯು ವಿಧಾನ ಪರಿಷತ್ ಚುನಾವಣೆಗೆ ಅವಿಭಜಿತ ದ.ಕ ಕ್ಷೇತ್ರದ ಅಭ್ಯರ್ಥಿಯಾಗಿಯೂ ಪ್ರಬಲ ಸಮುದಾಯದ ವ್ಯಕ್ತಿಗಳಿಗೆ ಅವಕಾಶ ನೀಡುತ್ತಿದೆ. ಬಂಟ, ಬಿಲ್ಲವ, ಬ್ರಾಹ್ಮಣ ಹೀಗೆ ಬಲಿಷ್ಠ ಸಮುದಾಯಕ್ಕೆ ಅವಕಾಶ ನೀಡುವುದರ ಬದಲು ಇತರ ಸಮುದಾಯಕ್ಕೂ ಒಂದು ಅವಕಾಶ ನೀಡಿ ಸಾಮಾಜಿಕ ನ್ಯಾಯಕ್ಕೆ ಬೆಲೆ ಕೊಡುವ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಯೋಚನೆ ಮಾಡುತ್ತಿಲ್ಲ.
ಅತ್ತ ಕಾಂಗ್ರೆಸ್ ಕೂಡಾ ಹಲವು ವರ್ಷಗಳಿಂದ ಕುಲಾಲ ಸಮುದಾಯದವರನ್ನು ಕಡೆಗಣಿಸುತ್ತಲೇ ಬಂದಿದೆ. ನಾಯಕರ ಈ ತುಷ್ಟೀಕರಣ ನೀತಿಯಿಂದಾಗಿಯೇ ಸಮುದಾಯದ ಯುವಕರು ಇತ್ತೀಚೆಗೆ ಈ ಪಕ್ಷದಿಂದ ವಿಮುಖರಾಗುತ್ತಿದ್ದಾರೆ ಎಂಬ ಸಾಮಾನ್ಯ ಪ್ರಜ್ಞೆ ಕೂಡಾ ಪಕ್ಷದ ಮುಖಂಡರಿಗೆ ಇದ್ದಂತಿಲ್ಲ. ಕರಾವಳಿಯಲ್ಲಿ ಕುಲಾಲ ಸಮಾಜದ ಹೆಚ್ಚಿನ ಜನ ಸಂಖ್ಯೆಯಿದ್ದರೂ ಇವರಿಗೆ ಸೂಕ್ತ ಅವಕಾಶ ನೀಡುತ್ತಿಲ್ಲ. ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ವೈದ್ಯ, ಪ್ರಾಧ್ಯಾಪಕ, ಕನ್ನಡ ಪರ ಹೋರಾಟಗಾರ, ಸಂಘಟನಾ ಚತುರ ಅಣ್ಣಯ್ಯ ಕುಲಾಲ್ ರಂತವರನ್ನು ಉನ್ನತ ಹುದ್ದೆ ನೀಡುವ ಮೂಲಕ ಅವಕಾಶ ನೀಡಬೇಕು ಎಂಬ ಕೂಗಿಗೂ ಯಾವ ಬೆಲೆಯೂ ಇಲ್ಲ. ವಿಧಾನಸಭೆಯಲ್ಲಿನ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿಗೆ ಮೂರು ಸ್ಥಾನಗಳು ಸಿಗಲಿವೆ. ಇದಕ್ಕೆ ಸಭೆಯಲ್ಲಿ 40ಕ್ಕೂ ಹೆಚ್ಚು ಹೆಸರುಗಳ ಬಗ್ಗೆ ಚರ್ಚೆಯಾಗಿದ್ದು, ಕೋಟಾ ಶ್ರೀನಿವಾಸ್ ಪೂಜಾರಿ ವಿಧಾನಸಭೆಗೆ ಆಯ್ಕೆ ಆದಲ್ಲಿ ಆ ಮೂಲಕ ಖಾಲಿ ಆಗುವ ವಿಧಾನ ಪರಿಷತ್ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ಮತ್ತು ಸಿ.ಟಿ.ರವಿ ಹೆಸರೇ ಚಾಲ್ತಿಯಲ್ಲಿದ್ದು, ಹಿಂದುಳಿದ ವರ್ಗದ ಹೊಸ ಮುಖಗಳಿಗೆ ಅವಕಾಶ ಇಲ್ಲ ಎಂಬಂತಹ ಪರಿಸ್ಥಿತಿ ಇದೆ. ಇನ್ನು ಕಾಂಗ್ರೆಸ್ ನಲ್ಲಿ ಗೆಲ್ಲಬಹುದಾದ ಏಳು ಸ್ಥಾನಗಳಿಗೆ ಕುಲಾಲ ಸಮುದಾಯದ ಒಬ್ಬರ ಹೆಸರೂ ಚಾಲ್ತಿಯಲ್ಲಿ ಇಲ್ಲ. ಇಲ್ಲಿ ಎಸ್ಸಿ/ಎಸ್ಟಿ, ಒಬಿಸಿ, ವೀರಶೈವ-ಲಿಂಗಾಯತ, ಒಕ್ಕಲಿಗ ಮತ್ತು ಅಲ್ಪಸಂಖ್ಯಾತ ಸಮುದಾಯದ ಸದಸ್ಯರಿಗೆ ಮಾತ್ರ ಪ್ರಾತಿನಿಧ್ಯ ಎನ್ನುವಂತಾಗಿದೆ.