ಕೆ.ಆರ್.ಪೇಟೆ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಕುಂಬಾರ ಸಮುದಾಯದ ಆರಾಧ್ಯ ದೈವವಾಗಿರುವ ಮಾಕವಳ್ಳಿ ಮಂಚಮ್ಮ ಭಕ್ತರ ಕಷ್ಟಕಾರ್ಪಣ್ಯಗಳಿಗೆ ಪರಿಹಾರ ಒದಗಿಸುವ ಮತ್ತು ಇಷ್ಟಾರ್ಥವನ್ನು ಈಡೇರಿಸುವ ಮೂಲಕ ಎಲ್ಲರನ್ನೂ ಮುನ್ನಡೆಸುತ್ತಿದ್ದಾಳೆ.
32 ಗ್ರಾಮಗಳ ಕುಂಬಾರ ಸಮುದಾಯದ ಮನೆ ದೇವತೆಯಾಗಿರುವ ಈಕೆ ಬೇಡಿದ್ದನ್ನು ಕರುಣಿಸುವ ಶಕ್ತಿದೇವಿ. ಭಕ್ತಿಯಿಂದ ಬೇಡಿದರೆ ಆಗಲ್ಲ ಎಂಬ ಮಾತೆ ಇಲ್ಲ. ಈಕೆಯನ್ನು ನಂಬಿ ಬದುಕಿದ ಅದೆಷ್ಟೋ ಜನರಿದ್ದಾರೆ. ಸಮಸ್ಯೆ ಬಂದಾಗ ಅದನ್ನು ಆಕೆಯ ಮಡಿಲಿಗೆ ಸಮರ್ಪಿಸಿ ಪರಿಹಾರ ಕಂಡುಕೊಂಡಿದ್ದು, ಈಕೆಯನ್ನು ನಂಬಿದವರಿಗೆ ಒಳ್ಳೆಯದಾಗುವುದು ಖಚಿತ ಎಂಬ ಮಾತು ಪ್ರತೀತಿಯಲ್ಲಿದೆ.
ಹಿನ್ನೆಲೆ:
ಮಾಕವಳ್ಳಿಯಲ್ಲಿ ದೇವಸ್ಥಾನ ಪೂರ್ವಾಭಿಮುಖವಾಗಿದ್ದು ಮಂಚಮ್ಮ ಪೂರ್ವಭಿಮುಖವಾಗಿ ನೆಲೆ ನಿಂತಿದ್ದಾಳೆ. ಹುಲಿಯೂರು ದುರ್ಗದಲ್ಲಿನ ಕುಲ ದೇವರ ದರ್ಶನ ಪಡೆದ ಬಳಿಕ ಮಾಕವಳ್ಳಿ ಗ್ರಾಮಸ್ಥರು ಹಿಂದಿರುಗುವಾಗ ನೆರೆ ತಾಲೂಕಿನ ನಾಗಮಂಗಲದ ವೀರಭದ್ರಸ್ವಾಮಿಗೂ ಪೂಜೆ ಸಲ್ಲಿಸುತ್ತಾರೆ. ಈ ವೇಳೆ ಪ್ರಸಾದ ತೆಗೆದುಕೊಳ್ಳುವಾಗ ಭಕ್ತರೊಬ್ಬರ ಬ್ಯಾಗ್ನಲ್ಲಿ ಮೂರು ಕಲ್ಲುಗಳು ಕಂಡು ಬಂದಿದ್ದು, ಅದನ್ನು ಅಲ್ಲೇ ಎಸೆದು ಗ್ರಾಮಕ್ಕೆ ಹಿಂದಿರುಗುತ್ತಾರೆ. ಕೆಲ ಹೊತ್ತಿನ ಬಳಿಕ ಅದೇ ಬ್ಯಾಗ್ನಲ್ಲಿ ಅದೇ ಕಲ್ಲು ಕಂಡು ಬರುತ್ತವೆ. ಇದರಿಂದ ಆಶ್ಚರ್ಯಗೊಂಡ ಭಕ್ತರು ಶಾಸ್ತ್ರ ಕೇಳಿದಾಗ, ಮನೆದೇವತೆ ಮಂಚಮ್ಮ ಗ್ರಾಮದಲ್ಲಿ ನೆಲೆ ನಿಲ್ಲಲು ಕಲ್ಲಿನ ರೂಪದಲ್ಲಿ ಬಂದಿರುವುದಾಗಿ ತಿಳಿಸುತ್ತಾರೆ.
ನೀನೇ ಮಂಚಮ್ಮ ಎಂದು ಹೇಗೆ ತಿಳಿಯುವುದು ಎಂದು ಮರು ಪ್ರಶ್ನಿಸಿದಾಗ, ಕಿಕ್ಕೇರಿಯ ಕಲ್ಲು ತೋಟದಲ್ಲಿ ಅಡಕೆ ಹೊಂಬಾಳೆ ಮೇಲೆ ಬರುತ್ತೇನೆ. ಪೂಜೆ ಸಂದರ್ಭ ಪೂಜಾರಿ ಹಿಡಿದುಕೊಳ್ಳುತ್ತಾನೆ ಎಂಬ ವಾಗ್ದಾನ ಶಾಸ್ತ್ರದಲ್ಲಿ ಕೇಳಿ ಬರುತ್ತದೆ. ಆ ಬಳಿಕ ಗ್ರಾಮದಲ್ಲಿ ಕಲ್ಲಿನ ರೂಪದಲ್ಲಿ ಬಂದಿದ್ದ ಮಂಚಮ್ಮನ ಗದ್ದುಗೆ ಮಾಡಿ ಹುಲ್ಲಿನ ಮನೆಯಲ್ಲಿ ಪೂಜಾ ಕೈಂಕರ್ಯ ನೆರವೇರಿಸಲಾಗುತ್ತದೆ. ದೇವಿ ಇಲ್ಲೇ ನೆಲೆ ನಿಂತಿದ್ದರಿಂದ ದೂರದ ಹುಲಿದುರ್ಗಕ್ಕೆ ತೆರಳುವ ಬದಲಾಗಿ ಮೈಸೂರು, ಕೆ.ಆರ್.ನಗರ, ಚನ್ನರಾಯಪಟ್ಟಣ, ಬೆಂಗಳೂರು ಸೇರಿದಂತೆ ತಾಲೂಕಿನ 32 ಗ್ರಾಮದವರು ಇಲ್ಲೇ ಮನೆ ದೇವಿಯನ್ನು ಪೂಜಿಸಲು ಆರಂಭಿಸಿದರು.
ದಿನ ಕಳೆದಂತೆ ಹುಲಿನ ಮನೆಯಲ್ಲಿ ಮಂಚಮ್ಮನ ಗದ್ದುಗೆಯಲ್ಲಿ ಹುತ್ತ ದೊಡ್ಡದಾಗಿ ಬೆಳೆದಿದ್ದರಿಂದ ತಾಲೂಕಿನ ಆಲಂಬಾಡಿ ಗ್ರಾಮದ ಪುಟ್ಟಪ್ಪ ಎಂಬ ಭಕ್ತ ದೇವಿಯಿಂದ ಒಳ್ಳೆಯದಾಗಿದೆ ಎಂದು ದೇವಸ್ಥಾನ ನಿರ್ಮಿಸಿದರು. ಇದೀಗ ಅದನ್ನು ಭಕ್ತರು ಜೀರ್ಣೋದ್ಧಾರ ಮಾಡಿದ್ದಾರೆ.
ದೇವಸ್ಥಾನ ನಿರ್ಮಿಸಲು ಅಡಿಪಾಯ ತೆಗೆಯುವಾಗ ಮಣ್ಣಿನಲ್ಲಿ ಹೂತಿಟ್ಟ ಚಿನ್ನಾಭರಣ ಸಿಗುತ್ತದೆ. ಆರಂಭದಲ್ಲಿ ಹುಲ್ಲಿನ ಮನೆಯಲ್ಲಿ ದೇವಸ್ಥಾನ ನಿರ್ಮಿಸುವಾಗ ಮತ್ತು ಈಗ ಜೀರ್ಣೋದ್ಧಾರಕ್ಕೆಂದು ಅದಿಪಾಯ ತೆಗೆಯುವಾಗ ಎರಡು ಬಾರಿ ಮಣ್ಣಿನೊಳಗೆ ಬೆಳ್ಳಿ ಹಾಗೂ ಚಿನ್ನಾಭರಣ ದೊರಕಿತು ಎನ್ನುವ ಮಾತು ಪ್ರಚಲಿತದಲ್ಲಿದೆ.
ಪ್ರತಿ ಮೂರು ವರ್ಷಕ್ಕೊಮ್ಮೆ 32 ಗ್ರಾಮದವರು ಸೇರಿ ಮಂಚಮ್ಮನ ಹಬ್ಬ ಆಚರಿಸುತ್ತಾರೆ. ಮಧ್ಯರಾತ್ರಿಯಲ್ಲಿ ಗ್ರಾಮದ ಕಲ್ಯಾಣಿಯಲ್ಲಿ ಗಂಗಾಪೂಜೆ ಮಾಡಿ ಮಂಚಮ್ಮನನ್ನು ಆಹ್ವಾನಿಸುತ್ತಾರೆ. ಒಂದು ಕಳಸವನ್ನು ಪೂಜಾರಿ, ಉಳಿದ ನಾಲ್ಕು ಕಳಸವನ್ನು ಪುಟ್ಟ ಹೆಣ್ಣು ಮಕ್ಕಳು ಹೊತ್ತು ತರುತ್ತಾರೆ. ಈ ವೇಳೆ ಪೂಜಾರಿ ಮೇಲೆ ಮಂಚಮ್ಮ ಬರುತ್ತಾಳೆ. ಆಗ ಭಕ್ತರು ಕಷ್ಟಗಳನ್ನು ಬಗೆಹರಿಸುವಂತೆ ಕೇಳಿಕೊಳ್ಳುತ್ತಾರೆ. ದೇವಸ್ಥಾನಕ್ಕೆ ತಂದು ಬೆಲ್ಲದ ಅನ್ನ, ಹಣ್ಣು-ತುಪ್ಪ ನೈವೇದ್ಯ ಇರಿಸಿ ಪೂಜೆ ಸಲ್ಲಿಸುತ್ತಾರೆ. ಮರುದಿನ ಮಧ್ಯಾಹ್ನದ ತನಕ ಪೂಜೆ ನಡೆದು ಸಂಪನ್ನಗೊಂಡ ಮೇಲೆ ಹಬ್ಬಕ್ಕೆ ತೆರೆ ಎಳೆಯುತ್ತಾರೆ. ಭಕ್ತರು ದೇವಿಗೆ ಅರ್ಪಿಸಿದ್ದ ಕೆಂಪು ಸೀರೆ, ಬಳೆ, ಬೆಳ್ಳಿ, ಚಿನ್ನದ ಆಭರಣಗಳಲ್ಲಿ ದೇವಿ ತನಗಿಷ್ಟವಾದ ಸೀರೆಯನ್ನು ತೆಗೆದುಕೊಂಡಾಗ ಗದ್ದುಗೆಗೆ ಧಾರಣೆ ಮಾಡಿ ಪೂಜೆ ಸಲ್ಲಿಸುವುದು ವಾಡಿಕೆ.
ಮಂಚಮ್ಮ ದೇವಸ್ಥಾನದಲ್ಲಿ ಸಹೋದರ ವೀರಭದ್ರಸ್ವಾಮಿ, ಸಹೋದರಿ ಮಾಸ್ತಮ್ಮನ ಗದ್ದುಗೆ ಇದೆ. ಇಲ್ಲಿ ಮಂಗಳವಾರ, ಶುಕ್ರವಾರ ಪೂಜೆ ನೆರವೇರುತ್ತದೆ. ಬೆಲ್ಲದ ಅನ್ನ, ಹಣ್ಣು-ತುಪ್ಪ ನೈವೇದ್ಯ ಇಡಲಾಗುತ್ತದೆ. ಭಕ್ತರು ಕಂಕಣ ಭಾಗ್ಯ, ಸಂತಾನ ಭಾಗ್ಯ, ಜಮೀನಿನ ವ್ಯಾಜ್ಯ ಪರಿಹಾರ, ಆರೋಗ್ಯ ಸಮಸ್ಯೆ ನಿವಾರಣೆ ಸೇರಿದಂತೆ ಎಲ್ಲ ಕಷ್ಟಗಳಿಗೂ ಪರಿಹಾರ ಕಂಡುಕೊಳ್ಳುತ್ತಾರೆ.
ತಲುಪುವ ಮಾರ್ಗ:
ಬೆಂಗಳೂರು, ಮೈಸೂರು, ಮಂಡ್ಯ, ಹಾಸನದಿಂದ ಕೆ.ಆರ್.ಪೇಟೆಗೆ ಬರಬಹುದಾಗಿದ್ದು, ಸಾದ್ಗೋನಹಳ್ಳಿ ಮೂಲಕ 10 ಕಿಮೀ ಸಾಗಿದರೆ ದೂರದ ಮಂಚಮ್ಮನ ದೇವಸ್ಥಾನ ಸಿಗಲಿದೆ.
ದೇವಸ್ಥಾನಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದ್ದು, ಇದೀಗ ಉದ್ಘಾಟನೆಗೆ ಸಿದ್ಧವಾಗಿದೆ. ಭಕ್ತರ ನೆರವಿನಿಂದ 50 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಗದ್ದುಗೆಯಲ್ಲಿದ್ದ ಮಂಚಮ್ಮ, ವೀರಭದ್ರಸ್ವಾಮಿಗೆ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ. ಮೇ 17 ರವರೆಗೆ ದೇವಸ್ಥಾನ ಪ್ರಾಣ ಪ್ರತಿಷ್ಠಾಪನೆ, ಕಳಸ ಪ್ರತಿಷ್ಠಾಪನೆ ಕಾರ್ಯ ನೆರವೇರಲಿದೆ.
ಮಂಚಮ್ಮ ದೇವರನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಪೂಜಿಸುತ್ತೇವೆ. ನಾವು ಸಂಕಷ್ಟದಲ್ಲಿದ್ದಾಗ ನಮ್ಮನ್ನು ರಕ್ಷಿಸಿದ್ದಾಳೆ. ಈಗಲೂ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿದ್ದಾಳೆ. ಆಕೆಯ ಅಭಯದಿಂದ ನೆಮ್ಮದಿ ಜೀವನ ನಡೆಸುತ್ತಿದ್ದೇವೆ. ಯಾವುದೇ ಶುಭ ಕಾರ್ಯಕ್ಕೂ ಮುನ್ನ ದೇವರಿಗೆ ಪೂಜೆ ಸಲ್ಲಿಸುವುದು ವಾಡಿಕೆ.
ಶಿವಣ್ಣ ಗೌರವಾಧ್ಯಕ್ಷ, ದೇವಸ್ಥಾನ ಜೀರ್ಣೋದ್ಧಾರ ಸಮಿತಿ
ಭಕ್ತರು ಬೇಡಿದ್ದನ್ನು ದೇವಿ ಕರುಣಿಸಿದ್ದಾಳೆ. ಸಾಕಷ್ಟು ಜನರು ಕಷ್ಟ ನಿವಾರಣೆಗಾಗಿ ದೇವಿಯ ಮೊರೆ ಹೋಗುತ್ತಾರೆ. ಅಂತಹವರ ಸಮಸ್ಯೆ ನಿವಾರಣೆಯಾಗಿ ಒಳ್ಳೆಯದಾಗಿದೆ. ಭಕ್ತರನ್ನು ದೇವಿ ಸದಾ ಕಾಯುತ್ತಾಳೆ. ದೇವಿ ಪೂಜೆಯಿಂದ ನಮ್ಮ ಬದುಕು ನೆಮ್ಮದಿಯಾಗಿದೆ. ಭಕ್ತರ ಕಷ್ಟವನ್ನು ಬಹು ಬೇಗ ದೇವಿ ನಿವಾರಿಸುತ್ತಾಳೆ.
ವಸಂತಕುಮಾರ್ ಭಕ್ತ, ಮಾಕವಳ್ಳಿ
ಸುದ್ದಿ ಕೃಪೆ : ವಿಜಯವಾಣಿ