ಉತ್ತರಕನ್ನಡದ ದೈವಗಳ ಆರಾಧನಾ ವಿಶೇಷ ಆಚರಣೆಯೇ ಈ ಮುಖ ಕುಣಿತ!
ಗೋಕರ್ಣ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಉತ್ತರ ಕನ್ನಡದ ದೈವಗಳ ಆರಾಧನಾ ಕ್ರಮ ಎಂಬುದು ಬಹು ವಿಶೇಷ. ಎಷ್ಟು ವಿಶೇಷವೆಂದರೆ ಅದೊಂದು ಹೊಸ ಪರ್ಯಾಯ ಜಗತ್ತು. ಅಲ್ಲಿ ಭಕ್ತಿ, ಭಾವ, ಶೃದ್ಧೆ, ನೀತಿ, ನಿಯಮ, ಸಂಸ್ಕಾರ,ಸಂಸ್ಕೃತಿಗೆ ಮಾತ್ರ ಉನ್ನತ ಸ್ಥಾನ ಇಂತಹ ದೈವಾರಾಧನೆಯ ಕ್ರಮವಾದ ಬಂಡಿಹಬ್ಬದ ಮುನ್ನಾ ದಿನಗಳಲ್ಲಿ ನಡೆಯುವ ವಿಶೇಷ ಆಚರಣೆಯೇ ಮುಖ ಕುಣಿತ. ಕುಂಬಾರ (ಗುನಗಾ) ಸಮುದಾಯದ ಅರ್ಚಕರೇ ಈ ದೈವ ನರ್ತನ ಮಾಡುವರು.
ದೈವಗಳಿಗೆ ಆಯಾ ಬಣ್ಣದ ಮರದ ಮುಖ
ಮುಖ ಕುಣಿತ ಎಂದರೆ ಯಾವ ರೀತಿ ದಕ್ಷಿಣ ಕರಾವಳಿಯಲ್ಲಿ ದೈವದ ಪಾತ್ರ ಹಾಕಿಕೊಳ್ಳುವವರು, ಮುಖಕ್ಕೆ ಆಯಾ ಬಣ್ಣ ಬಳಿದುಕೊಳ್ಳುತ್ತಾರೋ ಹಾಗೆಯೇ ಇಲ್ಲಿ ಉತ್ತರ ಕರಾವಳಿಯಲ್ಲಿ ಆಯಾ ದೈವಗಳಿಗೆ ಆಯಾ ಬಣ್ಣದ ಮರದ ಮುಖಗಳಿವೆ. ಅದನ್ನೆಲ್ಲಾ ದೈವದ ಪರಿಚಾರಕನಾದ ಗುನಗನು ಮುಖ್ಯದೇವರ ಮುಂದೆ ಆಡಿಸುವುದು ಪದ್ಧತಿ. ಅದು ಪರಿವಾರ ದೈವಗಳು ಮುಖ್ಯ ದೈವಕ್ಕೆ ಕೊಡುವ ಗೌರವವೂ ಹೌದು.
ಮರದಿಂದ ತಯಾರಿಸಿದ ಮುಖ
ಮೊದಲು ಭದ್ರಕಾಳಿ ದೇವಸ್ಥಾನದಿಂದ ಭದ್ರಕಾಳಿ ದೈವವು ಊರಿನ ಮೆರವಣಿಗೆ ತೆರಳುತ್ತದೆ. ಹೊಸಬ ದೈವದ ಗುಡಿಯಿಂದ ಕಳಸದ ಮನೆಗೆ ಬಂದು ಆಡುಕಟ್ಟೆಯಲ್ಲಿ ಮುಖ ಆಡಿಸಲು ಅಪ್ಪಣೆ ಕೊಡುತ್ತದೆ. ಭದ್ರಕಾಳಿ ದೈವಕ್ಕೆ ನಾಲ್ಕೈದು ಪರಿವಾರದೈವಗಳಿದ್ದಾವೆ ಅವು ಮಾಣೇಶ್ವರ, ಚಂಡ, ಮುಂಡ ಹಾಗೂ ದೇವತೆ ಇವುಗಳ ತದ್ರೂಪವಾದ ಮುಖವಾಡವನ್ನು ಮರದಿಂದ ತಯಾರಿಸಿ 250 ವರ್ಷಗಳ ತನಕ ಕಾದಿಟ್ಟಿದ್ದಾರೆ. ಅದು ಬಂಡಿಹಬ್ಬದ ಆಚರಣೆಯ ದಿನದಲ್ಲಿಯೇ ಹೊರ ತೆಗೆಯಲ್ಪಡುವುದು.
ದೈವ ನರ್ತನ
ಈ ಮರದ ಮುಖವಾಡಗಳು ಹಾಲಿ ಮರದ ಚಕ್ಕೆಯಿಂದ ತಯಾರಿಸಲ್ಪಡುತ್ತವೆ. ಹೀಗೆ ಮುಖವಾಡ ಹೊರ ತೆಗೆಯುವ ಮುನ್ನ ಅದನ್ನು ಬಿಳಿ ಬಟ್ಟೆಯಲ್ಲಿ ಮುಚ್ಚಿ ಊರ ಹೊರಗಿನ ಗಡಿಯಲ್ಲಿ ಬಲಿ ನೀಡುತ್ತಾರೆ.
ಬಲಿ ನೆರವೇರಿದ ಬಳಿಕ ದೈವದ ಕಳಸದ ಮುಂದೆ ಬಂದು ಪ್ರತೀ ಮರದ ಮುಖವಾಡಕ್ಕೂ ಭದ್ರಕಾಳಿ ದೈವದ ಕಳಸ ಹೊತ್ತ ಗುನಗರು ಅಕ್ಷತೆ ಹಾಕಿ ಮುಖ ಕುಣಿತಕ್ಕೆ ಚಾಲನೆ ಕೊಡುತ್ತಾರೆ. ಒಂದಾದ ಮೇಲೊಂದರಂತೆ ಕೈಯಲ್ಲಿ ಖಡ್ಗದಾಕೃತಿಯ ಕೋಲು ಹಿಡಿದು ಮುಖವನ್ನು ದೈವದ ಪರಿಚಾರಕ ಗುನಗರು ಆಡಿಸುತ್ತಾರೆ.
ಗೋಕರ್ಣದಲ್ಲಿ ಕಳಸದ ಗುನಗರು ಕಳಸ ಹೊತ್ತರೆ, ರವಿ ಗುನಗ ಹಾಗೂ ಅವರ ತಂದೆ ಪೂಜೆ ಮಾಡುತ್ತಾರೆ ಹಾಗೆಯೇ ಸುಬ್ರಾಯ ಗುನಗ ಮುಖ ಕುಣಿತವೆಂಬ ಈ ದೈವ ನರ್ತನವನ್ನು ಮಾಡುತ್ತಾರೆ ಇದು ಇಲ್ಲಿನ ವಿಶೇಷ ಹಾಗೂ ಆಸಕ್ತಿಕರ ಆಚರಣೆಯಾಗಿದೆ.