ತನ್ವಿ ಕುಲಾಲ್ ಚಿಕಿತ್ಸೆಗೆ 15 ಲಕ್ಷ ರೂ ಅಗತ್ಯವಿದೆ ಎಂದು ವಾರಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ಗೆ ದೇಶ-ವಿದೇಶದ ದಾನಿಗಳು ಹಣದ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಕೋಡಿನಾಳ ಗ್ರಾಮದಲ್ಲಿ ವಾಸಿಸುತ್ತಿರುವ ಬಾಲಕೃಷ್ಣ ಮತ್ತು ಶೋಭಾ ದಂಪತಿಯ ಪ್ರೀತಿಯ ಪುತ್ರಿ 17 ವರ್ಷದ ತನ್ವಿ ಕುಲಾಲ್ ಎಂಬ ಯುವತಿ ಕೆಲವು ವರ್ಷಗಳಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆ 15 ಲಕ್ಷ ರೊ. ಬೇಕೆಂದಾಗ ಕುಟುಂಬಕ್ಕೆ ದಿಕ್ಕುದೋಚದೆ ಕೊನೆಗೆ ಸಾಮಾಜಿಕ ಜಾಲತಾಣದಲ್ಲಿ ಫಯಾಜ್ ಮಾಡೂರು ಮತ್ತು ನೌಫಾಲ್ ಬಿ ದೆರಳಕಟ್ಟೆ ಇವರ ಮುಂದಾಳುತ್ವದಲ್ಲಿ ಕುಟುಂಬದ ಸಮ್ಮತಿಯ ಮೇರೆಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿಯಬಿಟ್ಟರು. ದುರದೃಷ್ಟವೆನ್ನುವಂತೆ ಹಲವಾರು ಮಂದಿ ಹಣ ಕಳಿಸಿದರೂ ಮೊದಲ ಮೂರ್ನಾಲ್ಕು ದಿನ ಬ್ಯಾಂಕ್ ಖಾತೆಯಲ್ಲಿ ಆದ ತೊಂದರೆಯಿಂದ ಅವರಿಗೆ ಹಣ ತಲುಪಿರಲಿಲ್ಲ. ಆದರೆ ಬಳಿಕ ಅದನ್ನು ಸರಿಪಡಿಸಲಾಗಿದ್ದುಊರ ಪರವೂರ ದಾನಿಗಳು ಜಾತಿ, ಮತ ಭೇದ ನೋಡದೆ ಯುವತಿಯ ಚಿಕಿತ್ಸೆಗೆ ಸ್ಪಂದಿಸಿದ್ದರಿಂದ ಚಿಕಿತ್ಸೆಗೆ ಬೇಕಾದ 15 ಲಕ್ಷ ರೂಪಾಯಿ ಮೊತ್ತಸಂಗ್ರಹಗೊಂಡಿದೆ. ಈ ಮಗಳ ಚಿಕಿತ್ಸೆಗೆ ಅಗತ್ಯವಿದ್ದ ಹಣ ಸಂಗ್ರಹ ಆಗಿರುವುದರಿಂದ ಈ ಖಾತೆಗೆ ಇನ್ನು ಹಣ ನೀಡುವುದು ಬೇಡ ಎಂದು ತನ್ವಿ ಹೆತ್ತವರು ತಿಳಿಸಿದ್ದು ಅದಕ್ಕಾಗಿ ತೆರೆದಿದ್ದ ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ. ಸಹಾಯ ಹಸ್ತ ಚಾಚಿದ ಎಲ್ಲಾ ದಾನಿಗಳಿಗೆ ತನ್ವಿ ಹೆತ್ತವರು ಧನ್ಯವಾದ ತಿಳಿಸಿದ್ದಾರೆ.