ಕಾರ್ಕಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : 1999 ಜುಲೈ 26ರ ಕಾರ್ಗಿಲ್ ಯುದ್ಧದ ಗೆಲುವು ಭಾರತದ ಇತಿಹಾಸದಲ್ಲಿ ಎಂದೆಂದಿಗೂ ಅಮರ. ಯುದ್ಧದಲ್ಲಿ ಮಡಿದ ಯೋಧರ ನೆನಪು ಭಾರತೀಯರ ಹೃದಯ ಮಂದಿರದಲ್ಲಿ ಪೂಜನೀಯ. ಆ ಯುದ್ಧದಲ್ಲಿ ಪಾಲ್ಗೊಂಡು ಬದುಕುಳಿದು ಬಂದ ಸೈನಿಕರ ಜೀವನದ ಕಥೆಯು ಪ್ರೇರಣಾದಾಯಕ. ಅಂತಹ ಸೈನಿಕರಲ್ಲಿ ಕಾರ್ಕಳದ ಜಯ ಮೂಲ್ಯ ಓರ್ವರು. 22 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆ ಜಯಮೂಲ್ಯ ಅವರು.
ಬಾಲ್ಯ – ಶಿಕ್ಷಣ
ಜಯ ಮೂಲ್ಯ ಅವರು 1966 ಮಾ. 14ರಂದು ಜನಿಸಿದರು. ಕಾರ್ಕಳದ ಕಣಂಜಾರು ಸೇಸ ಮೂಲ್ಯ ಮತ್ತು ಗಿರಿಜಾ ಮೂಲ್ಯ ದಂಪತಿಯ 7 ಮಕ್ಕಳಲ್ಲಿ ಎರಡನೇಯನಾಗಿ ಜನಿಸಿದವರು. ಶಿರ್ವ ಮಂಚಕಲ್ ಕುತ್ಯಾರುವಿನ ಅಜ್ಜಿ ಮನೆಯಲ್ಲಿ ತಮ್ಮ ಬಾಲ್ಯದ ಜೀವನವನ್ನು ಕಳೆದ ಇವರು ಪ್ರಾಥಮಿಕ ಶಿಕ್ಷಣವನ್ನು ಕುತ್ಯಾರು ವಿದ್ಯಾದಾಯಿನಿ ಹಿ.ಪ್ರಾ. ಶಾಲೆಯಲ್ಲಿ ಪಡೆದು, ಪ್ರೌಢ ಮತ್ತು ಪಿಯು ಶಿಕ್ಷಣವನ್ನು ಕುತ್ಯಾರು ಹಿಂದೂ ಜೂನಿಯರ್ ಕಾಲೇಜಿನಲ್ಲಿ ಪೂರೈಸಿದ್ದರು.
ಸೇನೆ ಸೇರ್ಪಡೆ
1985 ಡಿ. 5 ರಂದು ಭಾರತೀಯ ಸೇನೆಗೆ ಸೇರ್ಪಡೆಗೊಂಡ ಜಯ ಮೂಲ್ಯ ಅವರು ಒಂದು ವರ್ಷಗಳ ಕಾಲ ಹೈದರಾಬಾದ್ನಲ್ಲಿ ತರಬೇತಿ ಪಡೆದಿದ್ದರು. ಸಿಪಾಯಿಯಾಗಿ ಕರ್ತವ್ಯ ಪ್ರಾರಂಭಿಸಿದ ಇವರು ಜಮ್ಮು ಕಾಶ್ಮೀರದ ಕಟುವಾ ಎಂಬಲ್ಲಿ ಮೊದಲು ಸೇವೆ ಪ್ರಾರಂಭಿಸಿದ್ದು, ಆ ಬಳಿಕ ರಾಜಸ್ಥಾನ್, ಜಮ್ಮು ಕಾಶ್ಮೀರದ ನೌಶೇರ, ಹಿಮ ಪ್ರದೇಶವಾದ ಸಿಯಾಚಿನ್ ಹಾಗೂ ಉರಿ ಸೆಕ್ಟೆರ್ ಪ್ರದೇಶದಲ್ಲಿ ಕಾರ್ಯನಿರ್ವಹಿಸಿದ್ದರು.
ಹವಾಲ್ದಾರ್ ಆಗಿ ಭಡ್ತಿ
13 ವರ್ಷಗಳ ಕಾಲ ಸಿಪಾಯಿಯಾಗಿ ಸೇವೆ ಸಲ್ಲಿಸಿರುವ ಜಯಮೂಲ್ಯ ಅವರು ಬಳಿಕ ಹವಾಲ್ದಾರ್ ಆಗಿ ಭಡ್ತಿ ಹೊಂದಿದರು. ಅನಂತರ 9 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ 2007 ರಲ್ಲಿ ಸೇವಾ ನಿವೃತ್ತಿ ಪಡೆದರು.
ಥ್ರೀ ಆಪರೇಷನ್
ಸೇನೆಯಲ್ಲಿ ಜಯ ಮೂಲ್ಯ ಅವರು ಆಪ್ (ಆಪರೇಷನ್) – ಪರಾಕ್ರಮ್, ಆಪರೇಶನ್ – ರಕ್ಷಕ್ ಮತ್ತು ಆಪರೇಶನ್ ವಿಜಯ್ ಎಂಬ ಮೂರು ಆಪರೇಷನ್ಗಳಲ್ಲಿ ಭಾಗವಹಿಸಿದ್ದರು. ಇದರಲ್ಲಿ ಆಪರೇಶನ್ ವಿಜಯ್ ಎಂಬುದು ಕಾರ್ಗಿಲ್ ಯುದ್ಧವಾಗಿದೆ.
ಕಾರ್ಗಿಲ್ ಯುದ್ಧದ ಸಂದರ್ಭ ಅವರು ರಾಜಸ್ಥಾನದ ರಾಯಸಿಂಗ್ ನಗರದಲ್ಲಿ ಬಾರ್ಡರ್ನಿಂದ 8 ಕಿ. ಮೀ. ಹಿಂದೆ ಬಂಕರ್ನಲ್ಲಿದ್ದು, ಕ್ರಾಜ್ ವಾಹನದ ಮೀಡಿಯಮ್ ಗನ್-133 ಎಮ್ಎಮ್ನ ಚಾಲಕರಾಗಿ ಕರ್ತವ್ಯ ಸಲ್ಲಿಸಿದ್ದರು. ಮೂರು ಯುದ್ಧಗಳನ್ನು ಕಣ್ಣಾರೆ ಕಂಡ, ಮೂರು ಯುದ್ಧಗಳಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸಿದ ಜಯ ಮೂಲ್ಯ ಅವರು ತಾನು ಭಾರತದ ಸೈನಿಕ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಅಗ್ನಿಶಾಮಕದಲ್ಲಿ ಕರ್ತವ್ಯ
2007 ರಲ್ಲಿ ಸೇನೆಯಿಂದ ನಿವೃತ್ತಿ ಹೊಂದಿದ ಬಳಿಕ 2008ರಲ್ಲಿ ಅಗ್ನಿಶಾಮಕ ಇಲಾಖೆಗೆ ಸೇರ್ಪಡೆಗೊಂಡರು. ಮೊದಲು ಉಡುಪಿ ಅಗ್ನಿಶಾಮಕ ಠಾಣೆ, ಆ ಬಳಿಕ ಮಂಗಳೂರಿನಲ್ಲಿ ಕರ್ತವ್ಯ ಸಲ್ಲಿಸಿ, ಪ್ರಸ್ತುತ ಕಾರ್ಕಳ ಅಗ್ನಿಶಾಮಕ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಗ್ನಿವೀರ್ ಒಳ್ಳೆಯ ಯೋಜನೆ
ನಾನು ಸೇನೆಯಲ್ಲಿ ಕಳೆದ ದಿನಗಳು ಸ್ಮರಣೀಯವಾದುದು. ರಾಷ್ಟ್ರ ರಕ್ಷಣೆಯೇ ನಮ್ಮ ಮೊದಲ ಆದ್ಯತೆಯಾಗಿದ್ದು, ದೇಶವೇ ನಮ್ಮ ಮನೆಯೆಂಬ ಭಾವನೆ ಸೈನಿಕರಲ್ಲಿ ಇರುವುದು. ಪ್ರಸ್ತುತ ಕೇಂದ್ರ ಸರಕಾರವು ಅಗ್ನಿಪಥ್ ಮೂಲಕ ಯುವಕರಿಗೆ ಸೇನೆಗೆ ಸೇರುವ ಅವಕಾಶ ಕಲ್ಪಿಸಿರುವುದು ಉತ್ತಮ ಯೋಜನೆ. ದೇಶ ಸೇವೆಯ ತುಡಿತವಿರುವ ಯುವಕರಿಗೆ ಇದೊಂದು ಉತ್ತಮ ವೇದಿಕೆ. ದೇಶ ಸೇವೆಯೊಂದಿಗೆ ಸ್ವಾಭಿಮಾನಿ ಬದುಕನ್ನು ರೂಪಿಸಲು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ.– ಜಯ ಮೂಲ್ಯ