(ಕುಲಾಲ್ ವರ್ಲ್ಡ್ ಡಾಟ್ ಕಾಮ್: 19 Dec, 2017)
ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ಎಲ್ಲಾ ರಾಜಕೀಯ ಪಕ್ಷ ಸಂಘಟನೆ ಹಾಗೂ ಚುನಾವಣೆಯನ್ನು ಗೆಲ್ಲಲು ರಣತಂತ್ರ ರೂಪಿಸುತ್ತಿವೆ. ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ, ಮನೆ ಮನೆ ಭೇಟಿ ಕಾರ್ಯಕ್ರಮ ನಡೆಯುತ್ತಿದೆ. ಈ ಮಧ್ಯೆ ಶತ ಶತಮಾನದಿಂದಲೂ ತನ್ನದೇ ಆದ ಇತಿಹಾಸ, ಸಂಸ್ಕೃತಿ, ಪರಂಪರೆ, ಆಚಾರ-ವಿಚಾರಗಳನ್ನು ಇಟ್ಟುಕೊಂಡು ಬಂದಿರುವ ಕುಂಬಾರ ಸಮುದಾಯದ ಯಾರೊಬ್ಬರಾದರೂ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗಬಹುದೇ ? ಈ ಬಾರಿಯಾದರೂ ಸಾಮಾಜಿಕವಾಗಿ ಈ ಸಮುದಾಯವನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ಕರೆತರಲು ಈ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗಬಹುದೇ ? ಯಾವ ಪಕ್ಷ ಕುಂಬಾರರನ್ನು ಪರಿಗಣಿಸಿ ವಿಧಾನಸಭೆಗೆ ಕಳಿಸಲು ಮನಸ್ಸು ಮಾಡಬಹುದು? ಹಲವಾರು ವರ್ಷಗಳಿಂದ ರಾಜಕೀಯ ಚಟುವಟಿಕೆಯಲ್ಲಿ ಗುರುತಿಸಿಕೊಂಡು ಅವಕಾಶ ಸಿಕ್ಕರೆ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿರುವ, ಕುಂಬಾರ ಸಮುದಾಯದ ಅರ್ಹ ಟಿಕೆಟ್ ಆಕಾಂಕ್ಷಿಗಳು ಯಾರಿದ್ದಾರೆ ? ಎಂಬಿತ್ಯಾದಿ ಚರ್ಚೆಗಳು ಆರಂಭಗೊಂಡಿದೆ.
ಕರ್ನಾಟಕದಲ್ಲಿ ಕುಂಬಾರ ಸಮುದಾಯದ ರಾಜಕೀಯ ನಾಯಕರು ಎಂದಾಗ ಮೊದಲು ನೆನಪಾಗುವ ಹೆಸರು ದಿವಂಗತ ಡಾ. ಎ. ಲಕ್ಷ್ಮೀಸಾಗರ್. ತೆಲುಗು ಕುಂಬಾರರಾಗಿದ್ದ ಇವರನ್ನು ಹೊರತುಪಡಿಸಿದರೆ ಕುಂಬಾರ ಸಮುದಾಯದಲ್ಲಿ ರಾಜಕೀಯವಾಗಿ ಜನರಿಂದ ಆಯ್ಕೆಗೊಂಡು ಉನ್ನತಮಟ್ಟದಲ್ಲಿ ಗುರುತಿಸಿಕೊಂಡ ಒಬ್ಬೇ ಒಬ್ಬ ನಾಯಕರಿಲ್ಲ. ಮೂಲತಃ ಕೋಲಾರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಲಕ್ಷ್ಮಿಸಾಗರ ಗ್ರಾಮದವರಾದ ಪ್ರೊ| ಎ. ಲಕ್ಷ್ಮಿಸಾಗರ್ ಅವರು ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ರಾಮಕೃಷ್ಣ ಹೆಗಡೆ ಮತ್ತು ಎಸ್ ಆರ್ ಬೊಮ್ಮಾಯಿ ಅವಧಿಯಲ್ಲಿ 3 ಬಾರಿ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಕಂದಾಯ, ಕಾನೂನು ಸಂಸದೀಯ ವ್ಯವಹಾರ, ನಗರಾಭಿವೃದ್ಧಿ, ವಸತಿ ಖಾತೆಗಳನ್ನು ನಿರ್ವಹಿಸಿದ್ದರು.
ಬೆಂಗಳೂರು ನಗರ ಪಾಲಿಕೆ ಸದಸ್ಯರಾಗಿದ್ದ ಅವರು 1978ರ ವಿಧಾನಸಭಾ ಚುನಾವಣೆಯಲ್ಲಿ ಜನತಾಪಕ್ಷದಿಂದ ಚಿಕ್ಕಪೇಟೆ ಕ್ಷೇತ್ರದಿಂದ ಮೊದಲಾಗಿ ಆಯ್ಕೆಯಾಗಿದ್ದರು. 1996ರಿಂದ 98ರವರೆಗೆ ವಿಧಾನಪರಿಷತ್ ಸದಸ್ಯರಾಗಿದ್ದರು. ದೇವರಾಜ ಅರಸು ಇಂದಿರಾಗಾಂಧಿ ಕಾಂಗ್ರೆಸ್ನಿಂದ ಹೊರಬಂದ ಸಮಯದಲ್ಲಿ, ಅರಸು ಬೆಂಬಲದಿಂದ ಪ್ರತಿಪಕ್ಷದ ನಾಯಕರೂ ಆಗಿದ್ದರು. ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದವರ ಸಾಲಿನಲ್ಲಿ ಪ್ರೊ. ಲಕ್ಷ್ಮೀಸಾಗರ್ ಪ್ರಮುಖರಾಗಿದ್ದರೂ ಕುಂಬಾರ ಸಮುದಾಯಕ್ಕೆ ಅವರ ಕೊಡುಗೆ ಹೇಳಿಕೊಳ್ಳುವಂತಹದ್ದೇನಿಲ್ಲ. ತಮ್ಮ ಅಧಿಕಾರದ ಅವಧಿಯಲ್ಲಿ ಸ್ವಜಾತಿ ಬಾಂಧವರನ್ನು ಬಿಡಿ, ಸಂಬಂಧಿಗಳ್ಯಾರನ್ನೂ ತನ್ನ ಹತ್ತಿರ ಸುಳಿಯಲು ಅವರು ಬಿಟ್ಟಿರಲಿಲ್ಲ. ಹೀಗಾಗಿ ಅವರ ಮೂಲಕ ಜಾತಿ ಬಾಂಧವರು ಯಾರೂ ರಾಜಕೀಯವಾಗಿ ಬೆಳೆಯಲಿಲ್ಲ. ಹೀಗಾಗಿ ೨೦೦೮ರಲ್ಲಿ ಲಕ್ಷ್ಮೀ ಸಾಗರ್ ನಿಧನರಾದ ಬಳಿಕ ಕುಂಬಾರರಿಗೆ ಹೇಳಿಕೊಳ್ಳಲು ಒಬ್ಬೇ ಒಬ್ಬಜನರಿಂದ ಆಯ್ಕೆಗೊಂಡ ರಾಜಕೀಯ ನಾಯಕರಿಲ್ಲ ಎಂಬ ಸ್ಥಿತಿ. ಕೆಲ ರಾಜಕಾರಣಿಗಳಂತೆ ಅವರ ಕುಟುಂಬ ರಾಜಕಾರಣ ಮುಂದುವರಿಯಲಿಲ್ಲವೇ ಎಂದು ಕೇಳಿದರೆ ಅದೂ ಇಲ್ಲ. ಕಾರಣ ಲಕ್ಷ್ಮೀಸಾಗರ್ ಆಜನ್ಮ ಬ್ರಹ್ಮಚಾರಿಯಾಗಿದ್ದರು!

ಲಕ್ಷ್ಮೀ ಸಾಗರ್ ಅವರಂತೆಯೇ ಕರಾವಳಿ ಭಾಗದಲ್ಲಿ ಹಿಂದುಳಿದ ಸಮಾಜದ ಏಳಿಗೆಗಾಗಿ ಶ್ರಮಿಸಿದವರು ಸ್ವಾತಂತ್ರ್ಯ ಹೋರಾಟಗಾರ ಡಾ.ಅಮ್ಮೆಂಬಳ ಬಾಳಪ್ಪ. ವಿವಿಧ ಜನಪರ ಚಳುವಳಿಗಳ ನೇತಾರರಾಗಿದ್ದ ಇವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಿಸುವ ಎಲ್ಲ ಅರ್ಹತೆಗಳು ಇದ್ದರೂ ರಾಜಕೀಯ ಪಕ್ಷಗಳು ಇವರಿಗೆ ಅವಕಾಶ ನೀಡಲಿಲ್ಲ. ಇವರ ಜೊತೆಗಿದ್ದ ಜಾರ್ಜ್ ಫೆರ್ನಾಂಡೀಸ್ ಸಿಕ್ಕ ಅವಕಾಶವನ್ನು ಬಳಸಿಕೊಂಡು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದರು. 1989ರಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ರ್ಸ್ಪಧಿಸಲು ಅಮ್ಮೆಂಬಳ ಬಾಳಪ್ಪರಿಗೆ ಟಿಕೆಟ್ ದೊರೆತು ಬಿ’ಫಾರ್ಮ್ ಕೂಡ ಕೊಡಲು ಸಿದ್ದವಾಗಿತ್ತು. ಅಮ್ಮೆಂಬಳ ಬಾಳಪ್ಪರು ಸ್ಪರ್ಧೆಯಿಂದ ಹಿಂದೆ ಸರಿದು ರಹೀಂ ಅವರಿಗೆ ಅವಕಾಶ ನೀಡಿದ್ದರು. ಈ ಸಂದರ್ಭ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಅಮ್ಮೆಂಬಳ ಬಾಳಪ್ಪರಿಗೆ ವಿಧಾನಪರಿಷತ್ ಸದಸ್ಯತ್ವ ನೀಡುವುದಾಗಿ ಆಶ್ವಾಸನೆಯನ್ನೂ ನೀಡಲಾಗಿತ್ತು. ಆದರೆ ಆ ಬಳಿಕ ರಾಜ್ಯದಲ್ಲಿ ಜೆಡಿಎಸ್ ಅಕಾರಕ್ಕೆ ಬಂದಿತ್ತಾದರೂ, ನೀಡಿದ್ದ ಭರವಸೆ ನಡೆಸಿಕೊಡಲಿಲ್ಲ. ಬಾಳಪ್ಪ ಪ್ರಜಾ ಸೋಶಲಿಸ್ಟ್, ಜನತಾ ಪಕ್ಷ ನಂತರ ಜನತಾದಳದಲ್ಲಿ ಸಕ್ರಿಯರಾಗಿ ಜಿಲ್ಲಾ, ರಾಜ್ಯ ಮಟ್ಟದ ನಾಯಕರಾಗಿ ಮುಂಚೂಣಿಯಲ್ಲಿದ್ದರೂ ಯಾವತ್ತೂ ಅಧಿಕಾರಕ್ಕಾಗಿ ಆಸೆಪಟ್ಟವರಲ್ಲ. ಬಾಳಪ್ಪರ ಸಿದ್ಧಾಂತ, ಸರಳಜೀವನ, ತತ್ವನಿಷ್ಠೆಗೆ ರಾಜಕೀಯ ಪಕ್ಷಗಳು ಬೆಲೆ ನೀಡಲಿಲ್ಲ.
ಲಕ್ಷ್ಮೀ ಸಾಗರ್, ಬಾಳಪ್ಪ ಅವರ ಕಾಲದಲ್ಲಿ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರ ಈಗಿನಷ್ಟು ಮಹತ್ವವನ್ನು ಪಡೆದಿರಲಿಲ್ಲ. ಆಗ ಏನಿದ್ದರೂ ಸಾಮಾಜಿಕ ಹೋರಾಟ, ವೈಯಕ್ತಿಕ ವರ್ಚಸ್ಸು ಚುನಾವಣೆಗೆ ಸ್ಪರ್ಧಿಸಲು ಪ್ರಮುಖ ಮಾನದಂಡವಾಗಿತ್ತು. ಈಗ ಏನಿದ್ದರೂ ಕ್ಷೇತ್ರದಲ್ಲಿ ಯಾವ ಸಮುದಾಯ ಪ್ರಾಬಲ್ಯವನ್ನು ಹೊಂದಿದೆ ಎನ್ನುವ ಲೆಕ್ಕಾಚಾರದ ಮೇಲೆಯೇ ಎಲ್ಲಾ ಪಕ್ಷಗಳು ಟಿಕೆಟ್ ನೀಡುತ್ತಿವೆ. ಈಗೀಗ ಟಿಕೆಟ್ ಕೊಡುವಾಗಲೂ ಜಾತಿ ಲೆಕ್ಕಾಚಾರ, ಗೆದ್ದ ಮೇಲೂ ಜಾತಿ ಲೆಕ್ಕಾಚಾರ ಎನ್ನುವಂತಾಗಿದೆ. ಹೀಗಿರುವಾಗ ರಾಜ್ಯದಲ್ಲಿ ಸುಮಾರು ೨೫ ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿರುವ ಹಿಂದುಳಿದ ಕುಂಬಾರ ಸಮುದಾಯ ಬಲು ಹಿಂದಿನಿಂದಲೂ ರಾಜಕೀಯ ಸ್ಥಾನಮಾನಕ್ಕಾಗಿ ವಿವಿಧ ಪಕ್ಷಗಳನ್ನು ಆಗ್ರಹಿಸುತ್ತಲೇ ಬಂದಿದೆ.
ರಾಜಕೀಯ ಪ್ರಾತಿನಿಧ್ಯ ವಿಚಾರದಲ್ಲಿ ವೈಯಕ್ತಿಕ ವರ್ಚಸ್ಸಿನಲ್ಲಿ ಮುಂದೆ ಬಂದವರು ಮಾತ್ರ ರಾಜಕೀಯ ಕ್ಷೇತ್ರದಲ್ಲಿ ಬೆಳವಣಿಗೆ ಕಂಡಿದ್ದಾರೆ. ಬಲು ಸಾತ್ವಿಕ ಸಮುದಾಯ ಎಂದು ಬಿಂಬಿತವಾಗಿರುವ ಕುಂಬಾರ ಸಮುದಾಯಕ್ಕೆ ರಾಜಕೀಯ ಪಕ್ಷಗಳು ನೀಡಿರುವ ಪ್ರಾತಿನಿಧ್ಯ ಏನೇನೂ ಇಲ್ಲ. ಮುಖ್ಯವಾಹಿನಿಗೆ ಸಮುದಾಯವನ್ನು ತರುವ ನಿಟ್ಟಿನಲ್ಲಿ ಕೆಲವು ನಾಯಕರು ಬದ್ಧತೆ ತೋರಿದ್ದು, ಇದಕ್ಕಾಗಿ ಎಲ್ಲಾ ಉಪಪಂಗಡಗಳನ್ನು ಒಂದೇ ಸೂರಿನಡಿ ತರುವ ಪ್ರಯತ್ನ ನಡೆಸಿದ್ದಾರೆ. ಆದರೂ ಪರಸ್ಪರ ವಿರೋಧಾಭಾಸಗಳಿಂದ ಸಮುದಾಯಕ್ಕೊಂದು ಗಟ್ಟಿ ಧ್ವನಿ ನೀಡುವ ಕೆಲಸ ಆಗಲೇ ಇಲ್ಲ. ಸಮುದಾಯ ರಾಜಕೀಯವಾಗಿ ಮೇಲೇರದೇ ಇರುವುದಕ್ಕೆ ಸಂಘಟಿತ ಹೋರಾಟದ ಕೊರತೆಯೂ ಕಾರಣವಾಗಿದೆ.
ಉತ್ತರ ಕರ್ನಾಟಕದ ಬೀದರ್, ಕಲ್ಬುರ್ಗಿ, ವಿಜಯಪುರ, ದಕ್ಷಿಣದ ಕೋಲಾರ, ಮಂಡ್ಯ, ಮೈಸೂರು ಬೆಂಗಳೂರು, ಮಧ್ಯ ಕರ್ನಾಟಕದ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಕುಂದಾಪುರ, ಉತ್ತರಕನ್ನಡಗಳಲ್ಲಿ ರಾಜಕೀಯವಾಗಿ ಪ್ರಭಾವ ಬೀರುವಷ್ಟು ಶಕ್ತಿ ಈ ಜಾತಿಗಿದ್ದರೂ ಇದುವರೆಗೆ ಒಂದೇ ಒಂದು ಎಂಎಲ್ ಎ/ ಎಂಎಲ್ ಸಿ ಸೀಟು ಗಿಟ್ಟಿಸಲು ಸಮುದಾಯಕ್ಕೆ ಸಾಧ್ಯವಾಗಿಲ್ಲ. ಹಾಗಂತ ನಮ್ಮಲ್ಲಿ ರಾಜಕೀಯ ನಾಯಕರಿಗೇನೂ ಕೊರತೆ ಇಲ್ಲ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ.
ಯಾವ ಪಕ್ಷದಲ್ಲಿ ಯಾರ್ಯಾರು ?
ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಾ, ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಕಾಂಗ್ರೆಸ್ ನ ಸೌಂದರ್ಯ ಮಂಜಪ್ಪ ಪೀಣ್ಯದ ಶಾಸಕ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಮಂಜಪ್ಪ ಅವರು ಈ ಹಿಂದೆ ಹಲವು ಬಾರಿ ಕೊನೇ ಕ್ಷಣದಲ್ಲಿ ಟಿಕೆಟ್ ವಂಚಿತರಾಗಿದ್ದವರು. ಮಂಜಪ್ಪ ಆವರ ಭಾವ ಸೌಂದರ್ಯ ರಮೇಶ್ ಅವರು ಪ್ರಸ್ತುತ ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದು ಕಳೆದ ಬಾರಿ ಇವರು ಬಂಟ್ವಾಳ ಅಥವಾ ಮೂಲ್ಕಿ-ಮೂಡಬಿದ್ರೆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಡಿತ್ತು. ಜೆಡಿಎಸ್ ನ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷರಾಗಿರುವ ಇವರು ಈ ಬಾರಿ ಯಾವುದಾದರೊಂದು ಪ್ರಮುಖ ಕ್ಷೇತ್ರದಲ್ಲಿ ಪಕ್ಷ ಟಿಕೆಟ್ ಗಿಟ್ಟಿಸುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ಜೆಡಿಎಸ್ ಪಾಳಯ ಸೇರಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಿವಕುಮಾರ ಚೌಡಶೆಟ್ಟಿ ಅವರು ಕನಕಪುರದಲ್ಲಿ ಸ್ಪರ್ಧಿಸುವ ದಟ್ಟ ಲಕ್ಷಣ ಕಾಣಿಸುತ್ತಿದೆ.
ಬಿಜೆಪಿಯ ಭದ್ರ ಕೋಟೆಯಾಗಿರುವ ಕರಾವಳಿಯಲ್ಲಿ ರಾಜ್ಯ ಬಿಜೆಪಿ ಶಿಕ್ಷಕ ಪ್ರಕೋಷ್ಠ ದ ಸಹ ಸಂಚಾಲಕರಾಗಿ ಬಳಿಕ ಬಿಜೆಪಿ ಆರೋಗ್ಯ ಪ್ರಕೋಷ್ಠಕದ ಸಂಚಾಲಕರಾಗಿರುವ ಡಾ. ಅಣ್ಣಯ್ಯ ಕುಲಾಲರ ಹೆಸರು ಸಂಭವನೀಯ ಟಿಕೆಟ್ ಆಕಾಂಕ್ಷಿ ಪಟ್ಟಿಯಲ್ಲಿ ಪ್ರತಿ ಚುನಾವಣೆಯ ಸಂದರ್ಭ ಕೇಳಿ ಬರುತ್ತಲೇ ಇದೆ. ಈ ಬಾರಿ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವೀ ಆಗುವರೋ ಕಾದು ನೋಡಬೇಕು. ಮೂಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ ಮಹಿಳಾ ಮೀಸಲಾತಿ ಬಂದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಅವರಿಗೆ ಟಿಕೆಟ್ ಖಚಿತವಾಗಿದೆ.
ರಾಣೆಬೆನ್ನೂರು ಬಿಜೆಪಿ ಒಬಿಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರವೀಣ್ ಕುಮಾರ್ ಕೆ ಟಿ, ಬೆಳಗಾಂ (ಖಾನಾಪುರ) ಜೆಡಿಎಸ್ ಮಹಿಳಾ ವಿಭಾಗದ ಜಿಲ್ಲಾ ಅಧ್ಯಕ್ಷೆಯಾಗಿರುವ ಮೇಘಾ ಕುಂದರಗಿ, ರೈತ ಮೋರ್ಚಾಗಳಲ್ಲಿ, ನೀರಾವರಿ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ, ಕಾಡ ಕೃಷ್ಣ ಮೇಲ್ದಂಡೆ ಯೋಜನೆಯ ಅಧ್ಯಕ್ಷರಾಗಿ ದುಡಿದ, ಪ್ರಸ್ತುತ ಬಿಜೆಪಿ ಯಾ ರೈತ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿರುವ ಬಿಜಾಪುರ ನಿಡಗುಂದಾದ ಬಸವರಾಜ್ ಕುಂಬಾರ, ಕೋಲಾರ ಬಿಜೆಪಿಯ ಮುಂದಾಳು ತಬಲಾ ನಾರಾಯಣಪ್ಪ, ಬೀದರ್ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಹುಮನಾಬಾದ್ ನ ಮಲ್ಲಿಕಾರ್ಜುನ ಕುಂಬಾರ, ಚಿತ್ರದುರ್ಗದ ಕಾಂಗ್ರೆಸ್ ಮುಖಂಡ ಲಿಂಗರಾಜು ಹೊಳಲ್ಕೆರೆ, ಕೋಲಾರದಲ್ಲಿ ಪಕ್ಷೇತರರಾಗಿ ವಿಧಾನಪರಿಷತ್ ಗೆ ಸ್ಪರ್ಧಿಸುತ್ತಲೇ ರಾಜಕೀಯ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ ಡಾ. ನಾಗರಾಜ್ ಮಾಲೂರು, ತುಮಕೂರಿನ ಸಿದ್ಧನಂಜಶೆಟ್ಟಿ ಮುಂತಾದವರು ಈ ಬಾರಿಯ ಕುಂಬಾರ ಸಮುದಾಯದ ಪ್ರಮುಖ ಟಿಕೆಟ್ ಆಕಾಂಕ್ಷಿಗಳಾಗಿದ್ದು, ವಿವಿಧ ಪಕ್ಷಗಳ ಹೈಕಮಾಂಡ್ ಇವರಿಗೆ ಅವಕಾಶ ಒದಗಿಸುವರೇ ಎಂಬುದನ್ನು ಕಾದು ನೋಡಬೇಕಾಗಿದೆ.
ದೇವೇಗೌಡ, ಯಡಿಯೂರಪ್ಪ, ಸಿದ್ಧರಾಮಯ್ಯ ಅವರಲ್ಲದೆ ಕರಾವಳಿಯ ರಮಾನಾಥ ರೈ, ಸೊರಕೆ, ನಳಿನ್ ಕುಮಾರ್ ಕಟೀಲ್ ಇವರೆಲ್ಲ ಕುಂಬಾರ ಸಮಾಜವನ್ನು, ಅವರ ನೋವು ನಲಿವನ್ನು ಅತೀ ಹತ್ತಿರದಿಂದ ಕಂಡವರು. ಇವರೆಲ್ಲ ಮನಸ್ಸು ಮಾಡಿದರೆ ಕುಂಬಾರ ಸಮುದಾಯಕ್ಕೆ ಈ ಬಾರಿ ಚೊಚ್ಚಲ ವಿಧಾನಸಭಾ ಸೀಟು ಸಿಕ್ಕೀತು ಎಂಬ ಆಶಾಭಾವನೆ ಕುಂಬಾರರಲ್ಲಿ ಇದೆ. ಇತ್ತೀಚಿನ ಸಭೆಗಳಲ್ಲಿ ಈ ಎಲ್ಲ ನಾಯಕರು ಕುಂಬಾರರ ಸಾಮಾಜಿಕ ನ್ಯಾಯದ ಬಗ್ಗೆ , ರಾಜಕೀಯ ಅನ್ಯಾಯದ ಬಗ್ಗೆ ಮಾತಾಡುತ್ತಿರುವುದು ಕಂಡಾಗ ರಾಜಕೀಯದ ಬದಲಾವಣೆಯ ಗಾಳಿ ಕುಂಬಾರ ಜನಾಂಗದತ್ತ ತಣ್ಣನೆ ಬೀಸುವ ಲಕ್ಷಣ ಕಾಣುತ್ತಿದೆ. ಅಹಿಂದ ವರ್ಗದಲ್ಲಿ ಎದ್ದು ಕಾಣುವ ಜಾತಿಯಲ್ಲಿ ಕುಂಬಾರರು ಪ್ರಮುಖರು ಎಂಬುದು ಸುಳ್ಳಲ್ಲ. ಆದರೆ ಗಾಡ್ ಫಾದರ್ ಇಲ್ಲದೆ ಈ ಸಮುದಾಯ ರಾಜಕೀಯ ನ್ಯಾಯದಿಂದ ವಂಚಿತರಾಗಿರುವುದು ಜಗಜ್ಜಾಹೀರಾದ ಸತ್ಯ.
(ತಕ್ಷಣಕ್ಕೆ ನೆನಪಿಗೆ ಬಂದ ಕುಂಬಾರ ನಾಯಕರ ಹೆಸರನ್ನಷ್ಟೇ ಇಲ್ಲಿ ಸೇರಿಸಿದ್ದು, ಕೆಲವರ ಹೆಸರು ಬಿಟ್ಟು ಹೋಗಿದ್ದಲ್ಲಿ ಮನ್ನಿಸಬೇಕು)
ದಿನೇಶ್ ಬಂಗೇರ ಇರ್ವತ್ತೂರು
(ವ್ಯವಸ್ಥಾಪಕ ಸಂಪಾದಕ)