ಕುಂಬಾರ ಸಮುದಾಯವನ್ನು ಬಹಳ ವರ್ಷದಿಂದ ಕಾಡುತ್ತಿರುವ ಬಳಿ(ಬರಿ) ಗೋತ್ರ ಹಾಗೂ ಜಾತಕದ ವಿಚಾರದಲ್ಲಿ ಕುಲಾಲ ಯುವ ಮನಸ್ಸುಗಳು ಮತ್ತು ಅವರ ಪಾಲಕರು ಯಾಕೆ ಬದಲಾವಣೆಗೆ ಒಡ್ಡಿಕೊಳ್ಳಬಾರದು? ಬದಲಾಗಲೇ ಬೇಕಾದ ತುರ್ತು ಕಾಲಘಟ್ಟದಲ್ಲಿ ನಾವಿದ್ದೇವೆ..ಬರಿ ಹಾಗೂ ಬಳಿ ಗೋತ್ರ ಗಳ ಬಗೆಗೆ ವೈಜಾನಿಕ ಸತ್ಯವನ್ನು ಮೊದಲು ಅರಿತುಕೊಳ್ಳಬೇಕು. ಅದು ಬಿಟ್ಟು ಇನ್ನೂ ಅಜ್ಜ ನೆಟ್ಟ ಆಲದ ಮರಕ್ಕೆ ಸುತ್ತು ಬರುವುದಲ್ಲ. ಬದಲಾವಣೆಗಳಿಗೆ ತೆರೆದುಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿ ನಾವಿದ್ದೇವೆ…
ಬರಿ ಅಥವಾ ಬಳಿಯ ಬಗ್ಗೆ ಎಲ್ಲರೂ ತಿಳಿಯಬೇಕಾದ ವೈಜ್ಞಾನಿಕ ಸತ್ಯ ಇದೆ. ಅದು ಜೆನೆಟಿಕ್ಸ್ ಆಧರಿತ ಮಾಹಿತಿ. ಅದರ ಬಗ್ಗೆ ಈಗಿನವರಿಗೆ ತಿಳಿ ಹೇಳಿದರೆ ಕೆಲವರಿಗೆ ಕೋಪ ಬರಬಹುದು.ಆದರೂ ಹೇಳುವುದು ನಮ್ಮ ಕರ್ತವ್ಯ. ಹಿಂದೆ ಬೇರೆ ಜಾತಿಯವರ ಹಾಗೆ ಮೂಲ್ಯ ಅಥವಾ ಕುಲಾಲ ಮಂದಿ ಬೆರಳೆಣಿಕೆಯಷ್ಟು ಇದ್ದರು. ಆಗ ಬಂಜನ್, ಸಾಲ್ಯಾನ್, ಬಂಗೇರ, ಅಂಚನ್, ಉಪ್ಯಾನ್, ಕರ್ಮರನ್ ಮುಂತಾದ ಕುಟುಂಬ ಒಂದೋ ಎರಡೋ ಇದ್ದವು. ಆ ಸಂದರ್ಭ ಬಂಜನ್ ಕುಟುಂಬ ಅಂದಾಗ ಅದು ಒಂದೇ ಮನೆ, ಸಾಲ್ಯಾನ್ ಅಂದಾಗ ಇನ್ನೊಂದು ಮನೆ, ಅಥವಾ ಕುಟುಂಬ ಅಥವಾ ನಾಗಮೂಲವಾಗಿತ್ತು.
ಸಾಲ್ಯಾನ್ -ಸಾಲ್ಯಾನ್ , ಬಂಜನ್ -ಬಂಜನ್, ಬಂಗೇರ -ಬಂಗೇರ ಮಧ್ಯೆ ಮದುವೆ ಆಗಬಾರದು ಅವರು ಸಹೋದರರು ಆಗಿರುತ್ತಾರೆ ಎಂಬುದು ವಾದವಿತ್ತು. ಅದು ಅಂದಿನ ಕಾಲಕ್ಕೆ ಸತ್ಯವೂ ಆಗಿತ್ತು. ಆದರೆ ಇಂದು ಕಾಲ ಬದಲಾಗಿದೆ. ಬರಿ ಅಥವಾ ಬಳಿ ಬಂದು ಸಾವಿರಾರು ವರ್ಷಗಳು ಗತಿಸಿ ಹೋಗಿವೆ. ಅದೇ ಅಂದಿನ ಬಂಜನ್ ,ಬಂಗೇರ, ಸಾಲ್ಯಾನ್, ಉಪ್ಪಿಯನ್, ಅಂಚನ್, ಬರಿಗಳು ಕವಲೊಡೆದು ಸಾವಿರಾರು ಕುಟುಂಬಗಳಾಗಿವೆ. ಸಾವಿರ ವರ್ಷದ ಹಿಂದೆ ಮೂಲ ಬರಿಯ ವ್ಯಕ್ತಿಯ ರಕ್ತ ಹಾಗು ಜೀನ್ ಇಂದಿನ ಅದೇ ಬರಿಯ ವ್ಯಕ್ತಿಗೆ ಬರಲು ಸಾಧ್ಯವೇ ಇಲ್ಲ. ಕಾರಣ ಮ್ಯುಟೇಷನ್.
ಹಾಗಾಗಿ ಜಾತಿ ಬಿಟ್ಟು ಧರ್ಮ ಬಿಟ್ಟು ನಮ್ಮ ಜಾತಿಯ ಹಾಗು ಅನ್ಯ ಜಾತಿಯ ಯುವಕ ಯುವತಿಯರು ಮದುವೆಗೆ ಸಿದ್ಧರಾಗುತ್ತಿರುವಾಗ ಅವರನ್ನು ನಾವು ಜಾತಿ ಹಾಗೂ ಧರ್ಮದಿಂದ ಶಾಶ್ವತವಾಗಿ ಕಳೆದುಕೊಳ್ಳುವ ಬದಲು, ಬ್ರಾಹ್ಮಣ ಹಾಗೂ ಮೇಲ್ವರ್ಗದ ಮಂದಿ ಬದಲಾವಣೆಗೆ ಒಡ್ಡಿಕೊಂಡಂತೆ ಬರಿ, ಗೋತ್ರವನ್ನು ಮರೆತು ಸಂಬಂಧಗಳನ್ನು ಬೆಸೆಯಬೇಕಾದ ಅನಿವಾರ್ಯತೆಗೆ ತೆರೆದುಕೊಳ್ಳಬೇಕಾಗಿದೆ. ಇದು ಎಲ್ಲ ಯುವ ಕುಲಾಲರ ಜವಬ್ದಾರಿ.
ಈ ರೀತಿಯ ಚಿಂತನೆಗೆ ಒಪ್ಪಿಕೊಳ್ಳುವ ಕುಟುಂಬಗಳ ಜೊತೆ ಮಾತಾಡಿ ಮದುವೆಯ ಸಂಬಂಧ ಕುದುರಿಸುವುದು ಒಳಿತು. ಇದು ಅನಿವಾರ್ಯ ಹಾಗು ವೈಜ್ಞಾನಿಕ ಕೂಡಾ. ಆದರೆ ಕೆಲವು ಕುಲಾಲ ಹಿರಿಯರು, ಗುರಿಕಾರರು ಈ ಮಾತುಗಳಿಂದ ಕಣ್ಣು ಕೆಂಪು ಮಾಡುಬಹುದು. ಬದಲಾವಣೆ ಒಡ್ಡಿಕೊಳ್ಳಲು ಸಿದ್ಧವಿಲ್ಲದೇ ಇರಬಹುದು. ಆದರೆ ಅವರ ಜೊತೆ ಕುಳಿತು ಮಾತಾಡಬೇಕು ಅವರಿಗೆ ವೈಜ್ಞಾನಿಕ ವಿಷಯಗಳನ್ನ ತಿಳಿಸಿ ಹೇಳಬೇಕು. ಆಗ ಬದಲಾವಣೆ ಸಾಧ್ಯ. ಎಷ್ಟೋ ಹಿರಿಯರು ಮತ್ತು ಕಿರಿಯರು ಬದಲಾದ ವೈಜ್ಞಾನಿಕ ಸತ್ಯವನ್ನು ತಿಳಿದ ನಂತರ ಬದಲಾವಣೆಗೆ ತೆರೆದುಕೊಂಡಿದ್ದಾರೆ. ಅವರನ್ನು ಬದಲಾಯಿಸುವ ಕೆಲಸ ಮಾಡಬೇಕಾಗಿದೆ.
ವಿಧವಾ ವಿವಾಹ ,ಮಹಿಳಾ ಶಿಕ್ಷಣ ,ಮಹಿಳಾ ಉದ್ಯೊಗ ಮುಂತಾದ ಸಾಮಾಜಿಕ ಬದಲಾವಣೆಗಳು ಬಂದಾಗಲೂ ಆರಂಭದಲ್ಲಿ ಇದೇ ರೀತಿಯ ವಿರೋಧಗಳಿದ್ದವು. ಘಟ್ಟದ ಕುಂಬಾರ, ಕುಂದಾಪುರ-ಸುಳ್ಯದ ಕುಲಾಲ್, ಬೆಂಗಳೂರು-ಮೈಸೂರು-ಕಾಸರಗೋಡಿನ ಕೇರಳದ ಕುಂಬಾರರ ಸಂಬಂಧ ಅಂದರೆ ಹೆದರುವ ಅಥವಾ ಬೇಡ ಅನ್ನುವ ದಿನಗಳಿದ್ದವು. ಆದರೆ ಈಗ ಅವರೆಲ್ಲರ ನಡುವೆ ಮದುವೆಗಳಾಗುತ್ತಿವೆ. ಹಾಗಾಗಿ ಬದಲಾವಣೆಗೆ ನಾವು ಅನಿವಾರ್ಯವಾಗಿ ಒಡ್ಡಿಕೊಳ್ಳಲೇಬೇಕು. ಸಮುದಾಯ-ಜಾತಿ ಉಳಿಯಬೇಕಾದರೆ ಸಣ್ಣ ಪುಟ್ಟ ರಾಜಿಯನ್ನು ವೈಜ್ಞಾನಿಕ ನೆಲೆಯಲ್ಲಿ ಚಿಂತಿಸಿಯಾದರೂ ಮಾಡಬೇಕು. ಇದನ್ನು ಗುರಿಕಾರರು ಸ್ವಾಮೀಜಿಗಳು-ಹಿರಿಯರು, ಸಂಘದವರು ಹೇಳಬೇಕು. ಆ ಬಗ್ಗೆ ಗೋಷ್ಠಿ-ಚಿಂತನ-ಮಂಥನ ನಡೆಸಬೇಕು. ಓದುವುದು ವೇದ, ಹಾಕುವುದು ಗಾಳ ಆಗಬಾರದು. ಹಿರಿ-ಕಿರಿಯರೆಂಬ ಬೇಧ ಇಲ್ಲದೇ ಎಲ್ಲರು ಬದಲಾಗಬೇಕು.
ಮುಖ್ಯವಾಗಿ ಸಮುದಾಯದ ಸಂಘ-ಸಂಸ್ಥೆ ಗಳು ಈ ರೀತಿಯ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಬೇಕು. ಜಾತಿ ಬಹಿಷ್ಕಾರ, ಕುಟುಂಬ ಬಹಿಷ್ಕಾರದಂತಹ ಅವೈಜ್ಞಾನಿಕ ಪದ್ಧತಿಯ ಬಗ್ಗೆ ಮಾತಾಡುವುದನ್ನು ನಾವು ನಿಲ್ಲಿಸಬೇಕು. ಹಾಗೇ ಮಾತನಾಡುವವರಿಗೇ ಬುದ್ಧಿ ಹೇಳಿ ಬದಲಾಯಿಸಬೇಕು. ಸವಿ ಮಾತಿನ ಮಾನವೀಯತೆಯಿಂದ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಬೇಕು. ಸ್ವಲ್ಪ ಬದಲಾವಣೆಯ ಗಾಳಿಗೆ ನಮ್ಮನ್ನ ನಾವು ಒಡ್ಡಿಕೊಳ್ಳಬೇಕು. ಸಮುದಾಯವು ಐಕ್ಯತೆಯಿಂದ ಮುನ್ನಡೆಯಬೇಕು..
ಕುಲಾಲರು ಅರಿತುಕೊಳ್ಳಬೆಕಾದ ಸತ್ಯ ತುಂಬಾ ಇದೆ. ದೈವ ದೇವಸ್ಥಾನ ಗಳ ಹೆಸರಲ್ಲಿ ಕುಲಾಲರು ಬೇರೆಲ್ಲರಿಗಿಂತ ಸ್ವಲ್ಪ ಹೆಚ್ಚು ಧಾರ್ಮಿಕರು ಎಂಬುದು ಸುಳ್ಳಲ್ಲ. ದೇವರ ಹೆಸರಲ್ಲಿ ಬೇರೆ ಜಾತಿಯವರು ಸಾಧಿಸಿದ ಆರ್ಥಿಕ ಸಬಲತೆಯನ್ನು ನಾವು ಸಾಧಿಸಿಲ್ಲ. ಕಾರಣ ನಾವು ಕುಲಾಲ-ಮೂಲ್ಯರು ಧರ್ಮದ ಹೆಸರಲ್ಲಿ ಬೇರೆಯವರಿಂದ ಲೂಟಿಯಾದದ್ದು ಹಾಗೂ ಮೋಸಹೋಗಿದ್ದೇ ಜಾಸ್ತಿ . ಅದನ್ನು ವಿವರವಾಗಿ ಹೇಳಿದರೆ ಪುಟಗಟ್ಟಲೆ ಸಾಮಾಜಿಕ ಜಾಗೃತಿ ಲೇಖನವಾಗಬಹುದು.
ಬಹಳ ಮುಖ್ಯವಾಗಿ ಜಾತಿ ಒಳಗಿನ ಮದುವೆ ಜಾಸ್ತಿ ಆಗಬೇಕು. ಆಗ ಅಂತರ್ಜಾತಿಯ ಮದುವೆಗಳು ಆದಷ್ಟು ಕಡಿಮೆ ಆಗುತ್ತದೆ. ಇದಕ್ಕಿರುವ ಒಂದೇ ಒಂದು ಮಾರ್ಗ ಕುಲಾಲ್, ಕುಂಬಾರ, ಮೂಲ್ಯ ,ಗುನಗ, ಹಾಂಡ, ಕನ್ನಡ ಕುಂಬಾರ, ತೆಲುಗು ಕುಂಬಾರ, ಲಿಂಗಾಯತ ಕುಂಬಾರ ಎಂಬ ಗುಂಪನ್ನು ಸಹಾ ಸಂಬಂಧ ಕುದುರಿಸಿಕೊಳ್ಳಲು ಬಳಸಿಕೊಳ್ಳಬೇಕು. ನಮ್ಮಲ್ಲಿ ಇರುವ ಬರಿ ಅಥವಾ ಬಳಿ ಪದ್ಧತಿಗೆ ಜೋರಾಗಿ ಗಂಟು ಬೀಳದೆ ಅತೀ ಹತ್ತಿರದ ತಾಯಿ ಸಂತಾನದ ಸಂಬಂಧ ಬಿಟ್ಟು ದೂರದ ಒಂದೇ ಬರಿಯ ಸಂಬಂಧ ಮಾಡಿಕೊಳ್ಳುವಲ್ಲಿ ನಾವು ಸ್ವಲ್ಪ ಚಿಂತಿಸಿದರೆ ಒಳ್ಳೆಯದು. ಇದರಿಂದ ಕೆಲವು ಬಳಿ ಮೇಲು, ಇನ್ನು ಕೆಲವು ಕೀಳು ಎಂಬ ಭಾವನೆ ಕಡಿಮೆ ಆಗುತ್ತದೆ. ಆಗ ಬರಿಗಿಂತ ಕುಟುಂಬ ಸಂಸ್ಕಾರ, ವಿದ್ಯೆ-ವಿನಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಬರುತ್ತದೆ. ಜೊತೆಗೆ ವಧು-ವರರಿಗೆ ಅವರವರ ಇಷ್ಟ-ಕಷ್ಟಗಳಿಗೆ ಸೂಕ್ತ ಆಯ್ಕೆಗೆ ಅವಕಾಶ ಸಿಗುತ್ತದೆ. ಜಾತಿಯಲ್ಲಿ ಸೂಕ್ತ ಹುಡುಗ ಅಥವಾ ಹುಡುಗಿ ಸಿಕ್ಕಿಲ್ಲ ಎಂಬ ಕೂಗು ಕಮ್ಮಿಯಾಗುತ್ತದೆ. ಬರಿಯ ಹೆಸರಲ್ಲಿ ಶೋಷಣೆಯೂ ಕಡಿಮೆಯಾಗುತ್ತದೆ. ಅದು ಬಿಟ್ಟು ಬರಿ ,ಬಳಿ, ಕಟ್ಟುನಿಟ್ಟು ಅಂತ ನಾವು ಹಿಂದಿನ ಹಠಕ್ಕೆ ಬಿದ್ದರೆ, ನೊಂದ-ಬೆಂದ ನಮ್ಮ ಸಮುದಾಯದ ಅನೇಕ ಯುವಕ ಯುವತಿಯರು ಜಾತಿ ಬಿಟ್ಟು ಅನ್ಯ ಜಾತಿಯ ಹುಡುಗ/ಹುಡುಗಿಯನ್ನ ಹುಡುಕಿ ಹೋಗುತ್ತಾರೆ. ಇದರಿಂದ ನಷ್ಟ, ನೋವು, ಅವಮಾನ ಕುಟುಂಬದ ಹಿರಿಯರಿಗೆ ತಾನೇ? ಯೋಚಿಸಿ..
ಅದಕ್ಕಾಗಿ ಕುಟುಂಬದ ಹಿರಿ-ಕಿರಿಯರು ಕುಳಿತು ಚರ್ಚಿಸಿ ಈ ಬಗೆಯ ಹೊಸ ಚಿಂತನೆ ಹಾಗೂ ಪರಿಹಾರದತ್ತ ನಾವ್ಯಾಕೆ ತೆರೆದು ಕೊಳ್ಳಬಾರದು? ಕೇವಲ ಲ್ಯಾಂಡ್ ಲೈನ್ ಫೋನ್ ಹಾಗೂ ಪೇಜರ್ ಇದ್ದ ಕಾಲವನ್ನು ನಾವು-ನೀವು ಕಂಡಿದ್ದೆವು. ಆದರೆ ಈಗ ಸಂಬಂಧ, ಸಂಪ್ರದಾಯ, ಸಾಮಾಜಿಕ ಹರಟುವಿಕೆ, ಗೆಳತನ , ವೈಯಕ್ತಿಕ ರುಚಿ , ಹವ್ಯಾಸ ಬೆಡ್ ರೂಮ್ ವರೆಗೂ ಮೊಬೈಲ್ ವಾಟ್ಸ್ ಆಪ್ ಫೇಸ್ ಬುಕ್ ಅನ್ನು ನಾವು ಯಾವುದೇ ಪಾಪಪ್ರಜ್ಞೆ ಇಲ್ಲದೇ ಒಪ್ಪಿಕೊಂಡು-ಅಪ್ಪಿಕೊಂಡು ಸಾಮಾಜಿಕ ತಾಣಗಳ ದಾಸರಾಗಿದ್ದೇವೆ. ಹೀಗಿರುವಾಗ ಸಾವಿರಾರು ವರ್ಷಗಳ ಹಿಂದೆ ಇದ್ದ ಪದ್ಧತಿಗೆ ಗಂಟುಬೀಳುವುದು ಅದೆಷ್ಟು ಸರಿ? ಅತೀ ಹತ್ತಿರದ ರಕ್ತ ಸಂಬಂಧಗಳ ಮದುವೆ ಆದರೆ ಜೆನೆಟಿಕ್ ಡೋಮಿನಂಟ್ ಕಾಯಿಲೆ ಬರಬಹುದು ಎಂಬ ವೈಜ್ಞಾನಿಕ ದೃಷ್ಟಿಯಿಂದ ಒಂದೇ ಬರಿಯ ಮದುವೆ ಆಗಬಾರದು ಎಂಬ ಪದ್ಧತಿ ಬಂದಿರಬಹುದು. ಆದರೆ ಅಂದಿನ ಒಂದು ಕುಟುಂಬ ಇಂದು ಕುಡಿಯೊಡೆದು ಸಾವಿರವಾಗಿದೆ. ಆ ಕುಟುಂಬದ ಮೂಲ ವ್ಯಕ್ತಿಗಳ ರಕ್ತ ಹಾಗು ಜೀನ್ ಮ್ಯುಟೇಷನ್ ಎಂಬ ಮಾನವ ಜೀವಕೋಶದ ಅನಿವಾರ್ಯ ಬದಲಾವಣೆಗೆ ಒಳಗಾಗಿ ಆ ಕುಟುಂಬದ ಇಂದಿನ ಪೀಳಿಗೆಯ ಡಿಎನ್ ಎಗಳು ಅಡ್ಡಾದಿಡ್ಡಿ ಬದಲಾಗಿರುವುದನ್ನು ಇಂದಿನ ಎಲ್ಲಾ ವಿದ್ಯಾವಂತರು ತಿಳಿಯಬೇಕಾದ ಸತ್ಯ.
ಹಾಗಾಗಿ ಅಂದು ಮಾಡಿದ ಬಳಿ ಬರಿ ಗಳು ಈಗ ಎಷ್ಟು ಪ್ರಸ್ತುತ ? ಅಂದು ವೈಜ್ಞಾನಿಕ ನೆಲೆಯಲ್ಲಿ ಮಾಡಿದ ಬರಿಗಳಲ್ಲಿ ಮೇಲು-ಕೀಳು, ಕನಿಷ್ಠ-ಗರಿಷ್ಠ ಎಂಬ ತಾರತಮ್ಯ ಬರಲೇ ಬಾರದು. ಹೀಗೆ ನಾವು ಶ್ರೇಷ್ಠ-ಕನಿಷ್ಠ ಅಂತ ಹೇಳುವ ಬರಿಯ ಹೆಣ್ಣು-ಗಂಡನ್ನು ಮದುವೆಯಾದವರು ಯಾರೂ ಬೀದಿಗೆ ಬಿದ್ದಿಲ್ಲ. ಬಿದ್ದಿದ್ದರೂ ಸಹಾ ಅದು ಬರಿಯಿಂದಲ್ಲ. ಅವರ ವೃತ್ತಿ -ಪ್ರವೃತ್ತಿಯ ಏರಿಳಿತಗಳಿಂದಾಗಿರಬಹುದು ಗಮನಿಸಿ.. ಹಾಗಂತ ಶ್ರೇಷ್ಠ ಎಂಬ ಹಿರಿಮೆ-ಗರಿಮೆ ಇರುವ ಬರಿಯ ಸಂಬಂಧ ಕುದುರಿಸಿಕೊಂಡವರು ಬಡತನ, ನೋವು-ಸಾವನ್ನು ಜಯಿಸಿ ಅಜರಾಮರರಾಗಿಲ್ಲ ಎನ್ನುವುದೂ ಅಷ್ಟೇ ಸತ್ಯ. ಅಲ್ಲದೇ ಒಂದೇ ಬರಿಯ ಮದುವೆ ಆದವರ ಪಟ್ಟಿಯೂ ದೊಡ್ಡದಿದೆ. ಅವರ್ಯಾರೂ ದೊಡ್ಡ ಅನಾಹುತಕ್ಕೆ ಒಳಗಾಗಿಲ್ಲ. ಆದರೆ ಸಮಾಜದ ಮೂದಲಿಕೆಗೆ ಹೆದರಿ ಯಾರೂ ಮುಂದೆ ಬರುತ್ತಿಲ್ಲ ಅಷ್ಟೆ.
ಈಗ ನಾವು ನೀವು ಆತ್ಮಸಾಕ್ಷಿ ಯಾಗಿ ಹೇಳುವುದಾದರೆ ನಮ್ಮ ಕುಟುಂಬದ ಹುಡುಗ-ಹುಡುಗಿ ಪ್ರೇಮ ವಿವಾಹ ಅಥವಾ ಒಂದೇ ಬರಿಯ ವಿವಾಹ ಅನ್ಯ ಜಾತಿ-ಧರ್ಮದ ಮದುವೆ ಯಾದಾಗ ಮಕ್ಕಳ ಮೇಲಿನ ಪ್ರೀತಿಯಿಂದ ಆ ಪದ್ಧತಿ ಅವರ ತೀರ್ಮಾನಕ್ಕೆ ಕಟ್ಟುಬಿದ್ದು ಅವರ ಪರವಾಗಿ ನಿಲ್ಲುತ್ತೇವೆ. ಆದರೆ ಅದೇ ವಿಷಯ ನಮ್ಮ ಇನ್ನೊಂದು ಕುಟುಂಬದಲ್ಲಿ ನಡೆದಾಗ ನಾವೇ ಭೂಕಂಪ ಮಾಡಿಸುತ್ತೇವೆ. ಇಂತಹ ನಡವಳಿಕೆಯ ಬದಲು ಎಲ್ಲರಿಗೂ ಹಿತಮಿತವಾದ ಒಂದು ಬದಲಾವಣೆಗೆ ಒಡ್ಡಿಕೊಳ್ಳಬೇಕು.ಹಾಗಂತ ಬದಲಾವಣೆಯ ಗಾಳಿ ಬೀಸಿಲ್ಲ ಅಂತಲ್ಲ .ನಮ್- ನಿಮ್ಮಲ್ಲೂ ಹಲವು ಮಂದಿ ಬರಿಯನ್ನು ಬಿಟ್ಟು, ಜಾತಿಯಲ್ಲಿ ಸೂಕ್ತವಾದವರನ್ನ ಮದುವೆ ಆಗಿದ್ದಾರೆ. ಆದರೆ ತಪ್ಪೇನು ? ಎಂಬ ವಾದವನ್ನು ಒಳಗೊಳಗೇ ಹೇಳುವವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಬಹಿರಂಗವಾಗಿ ಮಾತಾಡಲು ಯಾಕೋ ಮುಜುಗರ ಹಾಗೂ ಅಂಜಿಕೆ.
ಬಾರಕೂರು ಮತ್ತು ಮುಂದೆ ಉತ್ತರಕ್ಕೆ ಹೋದ ಹಾಗೆ ಬರಿ ಎಂಬುದು ಬಳಿ ಎಂಬ ರೂಪ ಪಡೆಯುತ್ತದೆ. ಆದರೆ ತುಳುನಾಡಿನವರಂತೆ ಅಲ್ಲಿ ಜಾತಿಯ ಹೆಸರ ಜೊತೆ ಬರಿ ಅಥವಾ ಬಳಿ ಬರುವುದು ಕಡಿಮೆ. ಅಲ್ಲಿ ಕುಂಬಾರ,ಹಾಂಡ, ಕುಲಾಲ ಎಂಬುದೇ ಮುಖ್ಯ. ಹಾಗಾಗಿ ಅಲ್ಲಿ ಬರಿ ಅಥವಾ ಬಳಿ ಬರುವುದು ಮದುವೆ ಸಮಯದಲ್ಲಿ ಮಾತ್ರ. ಹೆಚ್ಚಿನವರಿಗೆ ಅದು ತಿಳಿದಿರುವುದೂ ಇಲ್ಲ. ಅಲ್ಲೊಬ್ಬ-ಇಲ್ಲೊಬ್ಬ ನಾಗಬನದ ಹಾಗೂ ದೈವಭೋಗದ ಗುರಿಕಾರರಿಗೆ ಮಾತ್ರ ಬಳಿ ವಿಚಾರ ಗೊತ್ತಿರುತ್ತದೆ. ಅಲ್ಲಿ ಮದುವೆ ವಿಷಯ ಬಂದಾಗ ಶಿಸ್ತು, ನಯ, ವಿನಯ,ವಿದ್ಯೆ, ಮನೆತನ, ತಂದೆ-ತಾಯಿಯ ಸಾಮಾಜಿಕ ಮೌಲ್ಯಗಳೇ ಮುಖ್ಯವಾಗುತ್ತದೆ. ಕೊನೆಗೆ `ಬಳಿ’ಯ ಪ್ರಸ್ತಾಪ ಬಂದರೂ ಸಹಾ ಎರಡೂ ಕಡೆಯವರಿಗೆ ಒಪ್ಪಿಗೆಯಾದರೆ ಬಳಿಯಿಂದಾಗಿ ಮದುವೆ ನಿಂತು ಹೋಗೋದು ಅತೀ ಕಡಿಮೆ. ಅಂತಹ ಗೊಂದಲ ಬಂದಾಗ ಬೇರೆ ಬೇರೆ ಬಳಿಯ ಹೆಸರು ಪ್ರಸ್ತಾಪನೆಯಾಗಿ ನಾಜೂಕಾಗಿ `ಬರಿ ಮ್ಯಾಚ್ ಆಗುತ್ತೆ’ ಅಂತ ಜಾಣ್ಮೆಯಿಂದ ಹೇಳಿ ಮದುವೆ ಮಾಡುವ ಸಾಕಷ್ಟು ಜನ ಪ್ರಜ್ಞಾವಂತರು ಅಲ್ಲಿ ಕಾಣಸಿಗುತ್ತಾರೆ. ಕಾರಣ ಅಲ್ಲಿಯ ವಿದ್ಯಾವಂತ ಯುವಕ-ಯುವತಿಯರು ಹಿರಿಯರಿಗೆ ತಿಳಿ ಹೇಳುವ ಕೆಲಸ ಮಾಡುವಲ್ಲಿ ಯಶಸ್ಸನ್ನು ಕಂಡಿದ್ದಾರೆ ಅನ್ನಿಸುತ್ತದೆ. ಅಂತಹುದೇ ಬದಲಾವಣೆ ಎಲ್ಲಾ ಕಡೆ ಬಂದರೆ ತಪ್ಪೇನು ?
ಹೀಗೆ ಬರಿ ಬಳಿ ಸಂಪ್ರದಾಯದ ಶೋಷಣೆಯಿಂದ ಯುವಕ-ಯುವತಿಯರು ಮನನೊಂದು ಅನ್ಯ ಧರ್ಮ ಅಥವಾ ಜಾತಿಯ ಸಂಬಂಧಕ್ಕೆ ಮನ ಮಾಡಿ ನಮ್ಮ ಜಾತಿಯಿಂದ, ಧರ್ಮ ದಿಂದ ದೂರ ಹೋದರೆ ಅದು ಅವರ ತಪ್ಪಲ್ಲ. ಅದರ ಹೊಣೆ ಹೊರಬೇಕಾದದ್ದು ಆ ಕುಟುಂಬದ ಹಿರಿಯರು. ಹಣವಿಲ್ಲದೇ ನಿಂತು ಹೋದ ಹಾಗೂ ಹೋಗುವ ಮದುವೆಗಳನ್ನು ಮತ್ತೆ ಮಾಡಬಹುದು, ಅವರ ಮುಖದಲ್ಲಿ ಗೆಲುವು ಮೂಡಿಸಬಹುದು. ಆದರೆ ಬರಿಯ ವಿಚಾರದಲ್ಲಿ ಅವಹೇಳನ ಮೂದಲಿಕೆ ಮಾಡಿ ನಿಂತು ಹೋದ ಮದುವೆಗಳು, ಅಲ್ಲಿ ನೊಂದ ಬೆಂದ ಯುವಕ ಯುವತಿಯ ,ಹೆತ್ತವರ,ಅಣ್ಣ-ತಮ್ಮಂದಿರ, ಕುಟುಂಬದವರ ನೋವು, ಬೇಗುದಿಯನ್ನ ತಣಿಸುವುದು ಕಷ್ಟ. ಅದಕ್ಕೆ ಒಂದೇ ಮದ್ದು.. ನಾವು ಬದಲಾವಣೆಗೆ ಒಗ್ಗಿಕೊಂಡು ಸಾಮಾಜಿಕ ಪರಿವರ್ತನೆಗೆ ಅನುವು ಮಾಡಿಕೊಡುವುದು. ಇದು ಈ ಕಾಲದ ತುರ್ತು ಅಗತ್ಯ.
- ಡಾ. ಅಣ್ಣಯ್ಯ ಕುಲಾಲ್ ಉಳ್ತೂರು (www.kulalworld.com)