ನಮ್ಮ ಯುವ ಜನರ ಬಯಕೆ, ಕನಸು, ಆಸಕ್ತಿ, ಆಸೆ, ನಿರೀಕ್ಷೆಗಳನ್ನು ಅವಲೋಕಿಸಿದರೆ ಭವಿಷ್ಯವನ್ನು ಊಹಿಸುವುದೂ ಕೂಡಾ ಕಷ್ಟ ಅನ್ನಿಸುತ್ತದೆ. ಅಂಗೈನಲ್ಲಿರುವ ಮೊಬೈಲ್, ಅಂತರ್ಜಾಲವೇ ಜಗತ್ತು. ಈ ಭೂಮಿ, ನೀರು, ಅಗ್ನಿ, ವಾಯು, ಪ್ರಕೃತಿ ಎಲ್ಲವನ್ನೂ ಮರೆತುಬಿಡುವಷ್ಟು ಮೋಡಿ ಮಾಡಿದೆಯೋ ಅಥವಾ ಈ ಪರಿಕರಗಳಿಗೆ ಅಡಿಕ್ಟ್ ಆಗಿಬಿಟ್ಟಿದ್ದಾರೋ ಅರ್ಥವಾಗುವುದಿಲ್ಲ.
ಸಂಬಂಧಗಳನ್ನು ಮಾತು, ಸ್ನೇಹವಷ್ಟೆ ಕುದುರಿಸುತ್ತದೆ ಅಂದುಕೊಂಡಿದ್ದ ಕಾಲವಿತ್ತು. ಆದರೆ ಈಗ ಸಂಬಂಧಗಳನ್ನು ಸುಲಭವಾಗಿ ಕುದುರಿಸಲು ಇಂಟರ್ ನೆಟ್, ಫೇಸ್ ಬುಕ್ ಬಳಕೆಯಾಗುತ್ತಿವೆ. ಒಡಹುಟ್ಟು, ರಕ್ತ ಸಂಬಂಧಿ, ಗೆಳೆಯರು, ಹಿರಿಯರು ಅನಿವಾರ್ಯವಲ್ಲ ಎಲ್ಲವೂ ಮೊಬೈಲ್ ಹಾಗೂ ಅದರಲ್ಲಿರುವ ಇಂಟರ್ ನೆಟ್ ಪ್ಯಾಕ್ ಸಾಕು ಎನ್ನುವಷ್ಟರಮಟ್ಟಿಗೆ ಅನ್ನಿಸಿಬಿಟ್ಟಿದೆ. ಮನೆಯಲ್ಲಿದ್ದುಕೊಂಡೇ ಮನೆಗೆ ಬೇಕಾದ, ಆ ಕ್ಷಣಕ್ಕೆ ತಿನ್ನಲು ಬೇಕಾದ, ಕುಡಿಯಲು ಅಗತ್ಯವಾದವುಗಳನ್ನು ಮನೆ ಬಾಗಿಲಿಗೇ ಮುಟ್ಟಿಸುವುದಕ್ಕೆ ಪುಟ್ಟ ಮೊಬೈಲ್ ನೆರವಾಗುತ್ತಿರುವುದರಿಂದ ಅದರ ಮುಂದೆ ಉಳಿದೆಲ್ಲವೂ ನಗಣ್ಯವೆನಿಸಿದೆ.
ಯುವ ಮನಸ್ಸುಗಳು ಅದೆಷ್ಟು ಚಡಪಡಿಸುತ್ತಿವೆ ಎನ್ನುವುದು ಅರ್ಥವಾಗಬೇಕಾದರೆ ಅವರ ಕೈನಲ್ಲಿರುವ ಮೊಬೈಲ್ ಸ್ಥಗಿತವಾಗಬೇಕು, ಇಂಟರ್ ನೆಟ್ ಇಲ್ಲದಿರಬೇಕು. ಆಗ ಅವರಿಗೆ ಆ ಕ್ಷಣ ನರಕಯಾತನೆ, ಜಗತ್ತಿನ ಸಂಪರ್ಕವೇ ಇಲ್ಲ ಎನ್ನುವಂಥ ನಿರ್ವಾತ ಸ್ಥಿತಿ.
ಆಕರ್ಷಣೆ, ಗೆಳೆತನ, ಪ್ರೀತಿ, ವಿವಾಹ ಇವಿಷ್ಟೇ ಈಗಿನ ಯುವಕರ ಬದುಕಿನ ಸರಳ ಸೂತ್ರಗಳು ಎನ್ನುವಂತಾಗಿದೆ. ಮಗ-ಮಗಳು ವಯಸ್ಸಿಗೆ ಬರುತ್ತಿದ್ದಾಳೆ. ಅವರಿಗೆ ಮದುವೆ ಮಾಡಬೇಕು, ಸಂಬಂಧ ಹುಡುಕಬೇಕು, ಬದುಕಿಗೆ ಭದ್ರವಾದ ಉದ್ಯೋಗ ಸಿಗಬೇಕು ಇತ್ಯಾದಿ…ಇತ್ಯಾದಿ ಕನಸುಗಳಿರುತ್ತವೆ ಹೆತ್ತವರಿಗೆ. ಇದನ್ನು ಅವರು ತಮ್ಮ ಜವಾಬ್ದಾರಿ ಎನ್ನುತ್ತಿದ್ದರು. ಇದಕ್ಕಾಗಿ ಅವರು ಪಡುತ್ತಿದ್ದ ಶ್ರಮ, ನಿದ್ದೆಯಿಲ್ಲದೆ ಕಳೆಯುತ್ತಿದ್ದ ರಾತ್ರಿಗಳು ಈಗ ಬೇರೆ ಆಯಾಮ ಪಡೆದುಕೊಂಡಿವೆ.
ಇಂಟರ್ ನೆಟ್, ಫೇಸ್ ಬುಕ್ ನಲ್ಲಿ ಪರಿಚಯ, ಚಾಟಿಂಗ್, ಗೆಟ್ ಟುಗೆದರ್, ಮ್ಯೂಚ್ವಲ್ ಡಿಸ್ಕಷನ್, ಪರಸ್ಪರ ಒಪ್ಪಿಕೊಂಡು ಮದುವೆಗೆ ನಿರ್ಧರಿಸುವುದು ತಾವೇ ಮದುವೆಯಾಗಿ ಹೆತ್ತವರಿಗೆ ಮಾಹಿತಿ ರವಾನಿಸುವುದು. ಹೆತ್ತವರು ಓಕೆ ಅಂದ್ರೆ ಹೆತ್ತವರ ಸಂಬಂಧವಿಟ್ಟುಕೊಳ್ಳುವುದು ಇಲ್ಲವಾದರೆ ಕರುಳಬಳ್ಳಿ ಸಂಬಂಧ ಮುಂದುವರಿಸುವುದು ಬೇಡವೆಂದಾದರೆ ಟೋಟಲ್ ಸಂಬಂಧವನ್ನೇ ಕಡಿದುಕೊಳ್ಳುವುದು. ಇದನ್ನೂ ಮೀರಿ ಯಾವುದಾದರೂ ಟಿವಿ ಚಾನೆಲ್ ಮುಂದೆ ಜೊತೆಯಾಗಿ ಕುಳಿತು ಮನೆ ಮಂದಿಯ ಜೊತೆಗೆ ಸಂವಾದ ಮಾಡುವುದು.
ತಾವಿಬ್ಬರೇ ಜೊತೆಯಾಗಿ ಬದುಕುವುದು, ಗೆಳೆಯರನ್ನು ಬಿಟ್ಟರೆ ಯಾರ ಸಂಬಂಧವೂ ಇಲ್ಲ, ಸಂಪರ್ಕವೂ ಇಲ್ಲ. ಇದು ಈಗ ಒಂಥರಾ ಫ್ಯಾಷನ್. ಇಬ್ಬರು ಸಂಪಾದಿಸುತ್ತೇವೆ, ಚೆನ್ನಾಗಿ ಬದುಕುತ್ತೇವೆ, ತಮ್ಮ ಬದುಕನ್ನು ನಿರ್ಧರಿಸುವುದಕ್ಕೆ ತಾವೇ ಸಮರ್ಥರು. ಹಿರಿಯರು, ಹೆತ್ತವರು ಔಟ್ ಡೇಟೆಡ್ ಮಾಡೆಲ್ ಗಳಾಗಿ ಅವರ ಕಣ್ಣಿಗೆ ಕಾಣಿಸಿದರೂ ಅಚ್ಚರಿಯಿಲ್ಲ.
ಇದಕ್ಕಿಂತಲೂ ಭಯಾನಕವಾದ ಮದುವೆ ಕಾನ್ಸೆಪ್ಟ್ ಬೆಳೆಯುತ್ತಿದೆ. ಹಳೆ ತಲೆಮಾರಿನವರಿಗೆ ಇದು ಆಘಾತತರುವಂಥದ್ದು, ಆದರೆ ಈಗಿನ ಪೀಳಿಗೆಗೆ ಆಪ್ಯಾಯಮಾನವಾದುದು, ಅದುವೇ ಲೀವಿಂಗ್ ಟುಗೆದರ್.
ಮದುವೆಯಾಗದೆ, ತಾಳಿ ಕಟ್ಟದೆ, ಸಪ್ತಪದಿ ತುಳಿಯದೆ, ಪ್ರಸ್ಥ ಎನ್ನುವ ಸಂಪ್ರದಾಯದ ಬಂಧನವಿಲ್ಲದೆ ಜಸ್ಟ್ ಇಬ್ಬರೂ ಒಂದೇ ಸೂರಿನಲ್ಲಿ ಪತಿ-ಪತ್ನಿಯಂತೆ ಬದುಕನ್ನು ಹಂಚಿಕೊಂಡು ವಾಸ ಮಾಡುವುದು. ನಿಜಕ್ಕೂ ಊಹೆ ಮಾಡುವುದೂ ಸಾಧ್ಯವಿಲ್ಲ ಹಳೆ ತಲೆಮಾರಿನವರಿಗೆ. ಇದಕ್ಕೆ ಒಗ್ಗಿಕೊಂಡವರಿಗೆ ಎಲ್ಲವೂ ಡೋಂಟ್ ಕೇರ್.
ಇದನ್ನು ಆಧುನಿಕತೆಯ ಫಲ ಎನ್ನುವುದೋ, ನಮ್ಮ ಶಿಕ್ಷಣ ವ್ಯವಸ್ಥೆಯ ಕ್ರಾಂತಿಕಾರಿ ಯೋಚನೆಯೋ ಅಥವಾ ಇನ್ನೇನಿರಬಹುದು ?
ಜಾಗತೀಕರಣ, ಉದಾರೀಕರಣವೆಂದರೆ ನಮ್ಮನ್ನು ನಾವು ಮುಕ್ತವಾಗಿಸಿಕೊಳ್ಳುವುದು. ಯಾವ ಬಂಧನವೂ ಇಲ್ಲದ, ಕಟ್ಟುಪಾಡುಗಳಿಲ್ಲದ, ಸ್ವಚ್ಛಂಧವಾಗಿ ಇರುವಷ್ಟು ದಿನ ಬದುಕುವ ಅದರಲ್ಲೂ ಯಾರ ಹಂಗೂ ಇಲ್ಲದ ನಮ್ಮ ಸಾಮ್ರಾಜ್ಯವೆನ್ನೋಣವೇ?. ಅರ್ಥವಾಗದ ಕಾರಣಕ್ಕೆ ಹೊಳೆದ ಈ ವಿಚಾರಗಳು ಹಂಚಿಕೆಯಾಗಿವೆ, ಚರ್ಚೆಗೆ ಮುಕ್ತವಾಗಿವೆ, ಅದಕ್ಕೆ ಅಭಿವ್ಯಕ್ತಿಸಲು ನೀವು ಸ್ವತಂತ್ರರು, ಅದು ನಿಮಗಿರುವ ಸ್ವಾತಂತ್ರ್ಯ ಕೂಡಾ.
-ಚಿದಂಬರ ಬೈಕಂಪಾಡಿ
(ಗೌರವ ಸಂಪಾದಕರು)