ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ಧರಾಮಯ್ಯ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿ ವರ್ಷ ಮೂರು ಕಳೆದರೂ ಕುಂಬಾರ ಜನಾಂಗದವರಲ್ಲಿ ಚಿಗುರೊಡೆದಿದ್ದ ಆಸೆಯೊಂದು ಕಮರಿ ಹೋಗಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ತಾನು ಮುಖ್ಯಮ೦ತ್ರಿಯಾದರೆ ರಾಜ್ಯಮಟ್ಟದ ಕುಂಬಾರ ಮಂಡಳಿ ಸ್ಥಾಪನೆ ಮಾಡಿ, ಅದಕ್ಕೆ ಕುಂಬಾರ ಜನಾಂಗದವರನ್ನೇ ಅಧ್ಯಕ್ಷರನ್ನಾಗಿ ಮಾಡುವ, ಜೊತೆಗೆ ಆರ್ಥಿಕ ಸಹಾಯ ಮಾಡುವುದಾಗಿ ಸಿದ್ಧರಾಮಯ್ಯ ಅಧಿಕಾರಕ್ಕೆ ಬರುವ ಮುನ್ನ ಭರವಸೆ ನೀಡಿದ್ದರು. ಆದರೆ ಯಾವಾಗ ಅಧಿಕಾರ ಕೈಗೆ ಸಿಕ್ಕಿತೋ ಅಂದಿನಿಂದ ಅವರು ಕುಂಬಾರ ಜನಾಂಗವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಹೀಗಾಗಿ ಸಮಾಜದ ಅಭಿವೃದ್ಧಿ ಮರೀಚಿಕೆಯಾಗಿದೆ.
ಕಳೆದ ಬಜೆಟ್ಟಿನಲ್ಲಿ ಕುಂಬಾರ, ಮಡಿವಾಳ, ಸವಿತಾ ಸಮಾಜ, ತಿಗಳ ಸಮುದಾಯಗಳ ಅಭಿವೃದ್ಧಿಗೆ ತಲಾ 10 ಕೋಟಿ ರೂ.ಗಳಂತೆ 50 ಕೋಟಿ ರೂ. ಅನುದಾನ ನೀಡಿದ್ದು ಬಿಟ್ಟರೆ ಬೇರೆ ಯಾವುದೇ ಪ್ರಯೋಜನವಿಲ್ಲ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಟ್ಟು 91 ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಇವುಗಳಲ್ಲಿ ಕುಂಬಾರ ಜನಾಂಗದ ಒಬ್ಬೇ ಒಬ್ಬ ನಾಯಕರಿಲ್ಲ. ರಾಜಕೀಯವಾಗಿ ಕಡೆಗಣಿಸಲ್ಪಟ್ಟ ಜನಾಂಗದವರಿಗೆ ಅವಕಾಶ ನೀಡುವ ಬದಲಾಗಿ ಸಚಿವ ಸ್ಥಾನ ಕೈತಪ್ಪಿದ್ದ 21 ಶಾಸಕರಿಗೆ ಅಧ್ಯಕ್ಷಗಾದಿ ನೀಡಲಾಗಿದೆ.
ಮೂರು ವರ್ಷಗಳ ಹಿಂದೆ ಮೈಸೂರು ನಾದಬ್ರಹ್ಮ ಸಂಗೀತಸಭಾ ಭವನದಲ್ಲಿ ಜಿಲ್ಲಾ ಕುಂಬಾರರ ಸಂಘ ಉದ್ಘಾಟಿಸಿ ಮಾತನಾಡಿದ್ದ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಶೇ.38, ದೇಶದಲ್ಲಿ ಶೇ.52 ರಷ್ಟು ಹಿಂದುಳಿದ ಜನಾಂಗದವರಿದ್ದರೂ ಸಹ ಸಂಘಟನೆ ಕೊರತೆಯಿಂದ ತಮಗೆ ಸಿಗಬೇಕಾದ ಶಿಕ್ಷಣ, ಸಾಮಾಜಿಕ ರಾಜಕೀಯದಲ್ಲಿ ಪಾಲು ಸಿಕ್ಕಿಲ್ಲ. ಕುಂಬಾರಿಕೆ ನಶಿಸಿ ಹೋಗುತ್ತಿದ್ದು, ಪುನರುಜ್ಜೀವನಗೊಳಿಸಬೇಕಾಗಿದೆ. ರಾಜ್ಯದಲ್ಲಿ ಚದುರಿ ಹೋಗಿರುವ ಕುಂಬಾರ ಜನಾಂಗದವರು ಸಂಘಟಿತರಾಗಿ ರಾಜಕೀಯ ಶಕ್ತಿ ಪಡೆದು ಹೋರಾಟದ ಮೂಲಕ ಸಾಮಾಜಿಕ ನ್ಯಾಯ ಪಡೆದುಕೊಳ್ಳಬೇಕೆಂದು ಕರೆ ನೀಡಿ, ಕುಂಬಾರ ಜನಾಂಗ ನ್ಯಾಯಯುತ ಪಾಲನ್ನು ಪಡೆಯಲು ತನ್ನ ಸಂಪೂರ್ಣ ಬೆಂಬಲವಿರುವುದಾಗಿ ಘೋಷಿಸಿದ್ದರು. ಇವರ ಮಾತಿನ ಮೋಡಿಗೆ ಮರುಳಾದ ಮೈಸೂರು ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಕೇರ್ಗಳ್ಳಿ ನಾಗಣ್ಣ ಬಳಿಕ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿಸುವುದಾಗಿ ಘೋಷಿಸಿ, ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಕುಂಬಾರ ಜನಾಂಗದವರು ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕು ಎಂದು ಮನವಿ ಮಾಡಿದ್ದರು.
ರಾಜ್ಯವನ್ನಾಳಿದ ಯಾವುದೇ ಸರ್ಕಾರ ಕುಂಬಾರ ಜನಾಂಗವನ್ನು ಗುರುತಿಸಿರಲಿಲ್ಲ. ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾದ ನಂತರ ಕುಂಭ ಕಲಾ ಅಭಿವೃದ್ಧಿ ಮಂಡಳಿ ಸ್ಥಾಪಿಸಿ 13 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದ್ದರು. ಹೀಗಾಗಿ ಆರ್ಥಿಕವಾಗಿ ತೀರಾ ಹಿಂದುಳಿದಿದ್ದ ಜನಾಂಗದವರು ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಪ್ರಗತಿ ಕಾಣುವ ಅವಕಾಶವಿತ್ತು. ಅಲ್ಲದೆ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ಕುಂಬಾರ ಭವನ ನಿರ್ಮಾಣಕ್ಕೆಂದು ರಾಜ್ಯ ಸರ್ಕಾರ ನಿವೇಶನ ಮತ್ತು ಅನುದಾನವನ್ನು ಮಂಜೂರು ಮಾಡಿತ್ತು. ಹೀಗಾಗಿ ಕರಾವಳಿ ಭಾಗದ ಕೆಲ ಕುಲಾಲ ಸಂಘಟನೆಗಳು ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿತ್ತು.
ರಾಜಕೀಯ ಪ್ರಾತಿನಿಧ್ಯ ಅಥವಾ ಈ ಕ್ಷೇತ್ರದಲ್ಲಿ ಕುಂಬಾರ ನಾಯಕರಿಲ್ಲದೇ ಸಮುದಾಯ ಬಹಳ ವರ್ಷಗಳಿಂದಲೂ ತುಳಿತಕ್ಕೆ ಒಳಗಾಗುತ್ತಲೇ ಬಂದಿದೆ. ಗಟ್ಟಿ ಧ್ವನಿ ಇಲ್ಲದ ಸಮಾಜಕ್ಕೆ ಧ್ವನಿಯಾಗುವ ಕೆಲಸವನ್ನು ಮಾಡಬೇಕಾದ ಸರಕಾರ ಓಟ್ ಬ್ಯಾಂಕಿನ ಲೆಕ್ಕಾಚಾರ ಹಾಕುತ್ತಾ ಕೀಳು ರಾಜಕೀಯ ಮಾಡುತ್ತಿದೆ. ಆಡಿದ ಮಾತಿಗೆ ಬೆಲೆ ನೀಡದ ಸಿದ್ಧರಾಮಯ್ಯರೇ ರಾಜ್ಯದಲ್ಲಿ ಕಾಂಗ್ರೆಸ್ ಅಧೋಗತಿಗಿಳಿಯಲು ಕಾರಣರಾಗುತ್ತಿದ್ದಾರೆ.
ಇದ್ದ ವೃತ್ತಿಯನ್ನೂ ಬಿಡುವಂತಾಗಿರುವ ಸಮುದಾಯದ ಲಕ್ಷಾಂತರ ಕುಟುಂಬಗಳಿಗೆ ಸೂಕ್ತ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಪ್ರಾತಿನಿಧ್ಯ ನೀಡುವತ್ತ ಸರ್ಕಾರಗಳು ಗಮನಹರಿಸಿಲ್ಲ. ಕುಂಬಾರರಿಗೆ ಹಾಗೂ ಕುಂಬಾರಿಕೆಗೆಂದು ಸರಕಾರ ಕೊಟ್ಟ ಕುಂಭಕಲಾ ನಿಗಮ ಸ್ವತಂತ್ರವಾಗದೆ ದೇವರಾಜ ಅರಸು ನಿಗಮದಲ್ಲಿ ಸಿಕ್ಕಿಕೊಂಡು ತ್ರಿಶಂಕು ಸ್ಥಿತಿಯಲ್ಲಿದೆ. ಕುಂಭಕಲಾ ನಿಗಮವನ್ನು ಸ್ವತಂತ್ರ ಮಂಡಳಿಯನ್ನಾಗಿ ಸರಕಾರ ಘೋಷಿಸಬೇಕು. ಇದು ಸ್ವತಂತ್ರವಾದಲ್ಲಿ ಕುಂಬಾರ ಜನಾಂಗದವರೊಬ್ಬರು ಅದಕ್ಕೆ ಅಧ್ಯಕ್ಷನಾಗಿ ಕುಂಬಾರ ಜನಾಂಗದ ಪ್ರತಿನಿಧಿಯಾಗಿ ಸರಕಾರದಲ್ಲಿ ಧ್ವನಿ ಎತ್ತುವ ಅವಕಾಶವಿದೆ. ಕುಂಭ ಕಲಾ ಅಭಿವೃದ್ಧಿ ಮಂಡಳಿಗೆ ಸರಕಾರ ಪ್ರಸ್ತುತ ವಾರ್ಷಿಕ 3 ಕೋಟಿ ರೂಪಾಯಿ ಬಿಡುಗಡೆಗೊಳಿಸುತ್ತಿದೆ. ಈ ಹಣವನ್ನು ನಿಯೋಜಿತ ಉದ್ದೇಶಕ್ಕೆ ಬಳಸಲಾಗಿರುವ ಬಗ್ಗೆಯೇ ಇಂದು ಸಂಶಯ ಬರುವಂತಾಗಿದೆ.
ಮತ್ತೊಂದೆಡೆ ಎಲ್ಲಾ ಬಸವಾದಿ ಶರಣರ ಪ್ರಾಧಿಕಾರವನ್ನು, ಅಧ್ಯಯನ ಪೀಠಗಳನ್ನು ರಚಿಸುತ್ತಿರುವ ಸರಕಾರ ಸರ್ವಜ್ಞನನ್ನು ನಿರ್ಲಕ್ಷ್ಯ ಮಾಡುತ್ತಾ ಬಂದಿದೆ. ಕಾಟಾಚಾರಕ್ಕೆ ಎಂಬಂತೆ ಸರ್ವಜ್ಞ ಜಯಂತಿಯನ್ನು ಆಚರಿಸುತ್ತಾ ಕಣ್ಣಿಗೆ ಮಣ್ಣೆರಚುತ್ತಿದೆ. ರಾಜ್ಯದಲ್ಲಿ ಬಹಳಷ್ಟು ಸಂಖ್ಯೆಯಲ್ಲಿರುವ ಕುಂಬಾರರು ಇಂದು ಸಂಘಟಿತರಾಗಿದ್ದಾರೆ. ಆದರೆ ರಾಜಕೀಯವಾಗಿ ಅವಕಾಶಗಳನ್ನು ಕೊಡದಿರುವುದು ಖಂಡನೀಯ.
ದಿನೇಶ್ ಬಂಗೇರ ಇರ್ವತ್ತೂರು
(ವ್ಯವಸ್ಥಾಪಕ ಸಂಪಾದಕ)