ಕುಲಾಲ/ಕುಂಬಾರರ ನೆಚ್ಚಿನ ಅಂತರ್ಜಾಲ ತಾಣ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಒಂದು ವರ್ಷದ ಹೊಸ್ತಿಲಲ್ಲಿ ಬಂದು ನಿಂತಿದೆ. ಇದೇನು ಬಹಳ ಹೆಗ್ಗಳಿಕೆಯ ವಿಚಾರವಲ್ಲ. ಆದರೆ ಒಂದು ವರ್ಷದಲ್ಲಿ ಕ್ರಮಿಸಿದ ಹಾದಿ ಬಹಳಷ್ಟು ಖುಷಿ, ಹೊಸ ಹುರುಪು ತುಂಬಿರುವುದಂತೂ ಸತ್ಯ. ಬಹಳಷ್ಟು ಬಾರಿ ಖುಷಿ ಕೊಡುವುದೇಕೆಂದರೆ, ಹೀಗೊಂದು ವೆಬ್ ಸೈಟ್ ಮಾಡುವ ಯೋಚನೆ ಹುಟ್ಟಿದ್ದು ಅಚಾನಕ್ಕಾಗಿ. ನಾವು ಈ ವೆಬ್ ಸೈಟನ್ನು ಬಹಳ ಯೋಚಿಸಿ, ಯೋಜಿಸಿ ರಚಿಸಿಕೊಂಡದ್ದಲ್ಲ. ಅದು ಅಯಾಚಿತವಾಗಿಯೇ ಅರಳಿದ್ದು, ಗಿರಿಯಲ್ಲಿ ಅರಳುವ ಹೂವಿನ ಹಾಗೆಯೇ. ಈ ಒಂದು ವರ್ಷದ ಅವಧಿಯಲ್ಲಿ ಕುಲಾಲ್ ವರ್ಲ್ಡ್ ಸಾಧಿಸಿದ್ದು ಅಪಾರ. ಸಮಾಜದ ಅಂತರ್ಜಾಲ ಸುದ್ದಿವಾಹಿನಿ ಆರಂಭಿಸುತ್ತೇವೆ ಎಂದಾಗಲೇ ಹಲವರಿಂದ ಮುಕ್ತ ಮನಸ್ಸಿನ ಬೆಂಬಲ ವ್ಯಕ್ತವಾಯಿತು.
ಒಂದು ವರ್ಷದಲ್ಲಿ ಮಾಡಿರುವ ಸಾಧನೆಯ ಬಗ್ಗೆ ನಮಗೆ ತೃಪ್ತಿ ಇದೆ, ಹೆಮ್ಮೆ ಇದೆ. ಇದೆಲ್ಲಾ ನಮ್ಮ ಪ್ರೀತಿಯ ಜನರಿಂದ ಮಾತ್ರ ಸಾಧ್ಯವಾಗಿದ್ದು. ಅವರ ಪ್ರೋತ್ಸಾಹದಿಂದಲೇ ಇಷ್ಟು ಎತ್ತರಕ್ಕೆ ಏರಲು ಸಾಧ್ಯವಾಯಿತು. ಏರಬೇಕಾದ ದಾರಿಯನ್ನು ಇನ್ನೂ ಕ್ರಮಿಸಿಲ್ಲ ಎಂಬ ಅರಿವು ನಮಗಿದೆ. ಅಲ್ಲದೆ ಜೊತೆಗಿರುತ್ತೇವೆ ಎಂದ ಹಲವರು ಯಾಕೆ ಸಕ್ರಿಯವಾಗಿ ತೊಡಗಿಸಿಕೊಳ್ಳಲಿಲ್ಲ ಎಂಬ ಪ್ರಶ್ನೆ ಕಾಡುತ್ತದೆ. ಜೊತೆಗೆ ಸಮಾನಮನಸ್ಕರನ್ನು ಒಳಗೊಳ್ಳುವಂತೆ ಮಾಡುವ ಪ್ರಯತ್ನವನ್ನು ಇನ್ನೂ ಹೆಚ್ಚು ಮಾಡಲಾಗದೆ ಹೋದದ್ದಕ್ಕೆ ಖೇದವಿದೆ. ಮುಂದೆ ಒಂದೊಂದೇ ಹೆಜ್ಜೆಗಳನ್ನು ಏರುತ್ತಾ ಏರುತ್ತಾ ನಾವು ಸಾಧಿಸುವುದನು ಸಾಧಿಸಿಯೇ ತೋರುತ್ತೇವೆ ಎಂಬ ಆತ್ಮವಿಶ್ವಾಸವಿದೆ.
ಕಳೆದ ವರ್ಷ ಅಕ್ಟೊಬರ್ ೩೦ರಂದು ಈ ವೆಬ್ ಸೈಟನ್ನು ಮಾಣಿಲ ಮೋಹನದಾಸ ಸ್ವಾಮೀಜಿ ಹಾಗೂ ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ಕ್ಷೇತ್ರದ ಧರ್ಮದರ್ಶಿ ರವಿ ಎನ್ ರವರ ಶುಭಾಶೀರ್ವಾದದೊಂದಿಗೆ ದೋಹಾ ಕತಾರ್ ಕುಲಾಲ ಸಮಾಜದ ಮುಖಂಡ ಆನಂದ ಕುಂಬಾರ ಅವರು ಅಧಿಕೃತ ಚಾಲನೆ ನೀಡಿದರು. ಅಲ್ಲಿಂದ ಒಂದು ವರ್ಷದ ಅವಧಿಯಲ್ಲಿ ಕುಲಾಲ್ ವರ್ಲ್ಡ್ ಡಾಟ್ ಕಾಮ್ ಓದುಗರಿಗೆ ಆಪ್ತವಾಗಿ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋಯಿತು. ಇದೀಗ ಪ್ರತೀ ದಿನ ೨೮ ದೇಶಗಳಲ್ಲಿರುವ ೫ ಸಾವಿರಕ್ಕೂ ಹೆಚ್ಚು ಮಂದಿ ಸಮಾಜ ಬಾಂಧವರು ಮೊಬೈಲ್, ಕಂಪ್ಯೂಟರ್ ಗಳ ಮೂಲಕ ಸಮಾಜದ ಸುದ್ದಿಗಳನ್ನು ಈ ವೆಬ್ ತಾಣದ ಮೂಲಕ ಓದುತ್ತಿದ್ದಾರೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಈ ಒಂದು ವರ್ಷದಲ್ಲಿ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ನಾನು ಚಿರಋಣಿ.
ಇನ್ನು ಸಮಾಜಕ್ಕಾಗಿ ಏನಾದರೂ ಮಾಡಬೇಕೆಂಬ ಹಂಬಲವಿರುವ ಸಮಾನ ಮನಸ್ಕ ಯುವಕರನ್ನು ಹೊಂದಿರುವ ನಮ್ಮ`ಕುಲಾಲ್ ವರ್ಲ್ಡ್’ ವಾಟ್ಸಪ್ ತಂಡದ ಕುರಿತು ಇಲ್ಲಿ ಹೇಳಲೇ ಬೇಕಾಗಿದೆ. ಸಾಮಾಜಿಕ ಜಾಲತಾಣವನ್ನು ಹೇಗೆ ಸಮಾಜಕಾರ್ಯಕ್ಕೆ ಉಪಯೋಗಿಸಬಹುದು ಎಂಬುದನ್ನು ತೋರಿಸಿಕೊಟ್ಟ ಕುಲಾಲರ ಮೊಟ್ಟ ಮೊದಲ ಗ್ರೂಪ್ ಎಂಬ ಹೆಮ್ಮೆ ನಮ್ಮದು. ಒಂದು ವರ್ಷದ ಅವಧಿಯಲ್ಲಿ ೨ ಲಕ್ಷಕ್ಕೂ ಅಧಿಕ ಮೊತ್ತದ ಆರ್ಥಿಕ ನೆರವು ನೀಡುವ ಮೂಲಕ ಮೂರು ಅಶಕ್ತ ಕುಟುಂಬಗಳ ಕಣ್ಣೀರೊರೆಸುವ ಕೆಲಸ ಮಾಡಿ ಪ್ರಶಂಸೆಗಿಟ್ಟಿಸಿದೆ.
ಒಳ್ಳೆಯದಿರಲಿ, ಕೆಟ್ಟದ್ದಿರಲಿ..ನಮ್ಮ ಬಗ್ಗೆ ನಾವೇ ಹೇಳಿಕೊಳ್ಳುವುದು ಮುಜುಗರದ ಸಂಗತಿ. ಈ ಕುರಿತು ನಿಮಗೇನನ್ನಿಸುತಿದೆ? ಈ ಬಗ್ಗೆ ಒಂದು ಸಾಲಾದರೂ ಬರೆಯುತ್ತೀರಿ ತಾನೇ ? ಈ ಬಾಂಧವ್ಯ ಹೀಗೇ ಮುಂದುವರೆಯಲಿ ಎಂದು ಮತ್ತೆ ಮತ್ತೆ ಆಶಿಸುತ್ತೇನೆ.
ದಿನೇಶ್ ಬಂಗೇರ ಇರ್ವತ್ತೂರು
(ವ್ಯವಸ್ಥಾಪಕ ಸಂಪಾದಕ)