ಇದು ಆಲೂರಿನ ಪೋಲಿಯೋ ಪೀಡಿತ ಸ್ವಾವಲಂಬಿ ಯುವತಿ ಯಶೋಗಾಥೆ
ಕುಂದಾಪುರ: ಮನಸ್ಸಿದ್ದರೇ ಮಾರ್ಗವಿದೆ, ಸಾಧನೆ ಮಾಡುವ ಛಲವೊಂದಿದ್ದರೇ ಯಾವುದೂ ಅಡ್ಡಿಯಲ್ಲ ಎಂಬುದನ್ನು ತನ್ನ ಸಾಮರ್ಥ್ಯ ಮತ್ತು ದಿಟ್ಟತನದ ಮೂಲಕ ಯುವಜನಾಂಗಕ್ಕೆ ಮಾದರಿಯಾಗುವ ರೀತಿಯಲ್ಲಿ ಸ್ವಾವಂಭಿಯಾಗಿ ಬದುಕುತ್ತಿರುವ ಯುವತಿಯೋರ್ವಳ ಯಶೋಗಾಥೆಯಿದು.
ಈ ಯುವತಿಯ ಹೆಸರು ಮಹಾದೇವಿ ಕುಲಾಲ್. ಕುಂದಾಪುರ ತಾಲೂಕಿನ ಆಲೂರು ಬಂಗ್ಲೆ ಎಂಬಲ್ಲಿನ ನಿವಾಸಿ ಮುತ್ತ ಕುಲಾಲ್ ಲಕ್ಷ್ಮೀ ಕುಲಾಲ್ ದಂಪತಿಗಳ ನಾಲ್ವರು ಮಕ್ಕಳ ಪೈಕಿ ಮೂರನೇಯವರೇ ಈ ಮಹಾದೇವಿ. ಹುಟ್ಟಿದ 6 ತಿಂಗಳಲ್ಲಿ ಪೊಲಿಯೋದಿಂದ ಒಂದು ಕಾಲಿನ ಬಲವನ್ನೇ ಕಳೆದುಕೊಂಡವರು ಈಕೆ. ಆದರೇ ಛಲ ಮಾತ್ರ ಬಿಡಲಿಲ್ಲ. ಚಿಕ್ಕಂದಿನಿಂದಲೇ ಸ್ವಾವಲಂಭಿಯಾಗಿ ಬದುಕುವ ಮಹದಾಸೆಯನ್ನು ಹೊತ್ತ ಈಕೆ ಮನೆಯವರ ಪ್ರೋತ್ಸಾಹ ಪಡೆದು ಆಲೂರಿನಲ್ಲಿಯೇ ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸವನ್ನು ಪಡೆದರು.
ವಿದ್ಯಾಭ್ಯಾಸದ ಬಳಿಕ ಜೀವನನಿರ್ವಹಣೆಯ ಬಗ್ಗೆ ತನ್ನದೇ ಆದ ಕಲ್ಪನೆಗಳನ್ನಿಟ್ಟುಕೊಂಡಿದ್ದ ಈಕೆ ಸುಮಾರು 5 ವರ್ಷಗಳ ಹಿಂದೆ ಮನೆ ಸಮೀಪದಲ್ಲಿ ರಘುರಾಮ ಕುಲಾಲ್ ಎನ್ನುವವರು ಆರಂಭಿಸಿದ ಆಧುನಿಕ ಕುಂಬಾರಿಕೆ ಕೆಲಸದ ವರ್ಕ್ಶಾಪ್ನಲ್ಲಿ 6 ತಿಂಗಳು ತರಭೇತಿ ಪಡೆದರು. ತರಭೇತಿ ಪಡೆದು ಹೊರಬಂದ ಈಕೆ ಮನೆಯಲ್ಲಿ ಸುಮ್ಮನೆ ಕೂರಲಿಲ್ಲ. ಬದಲಾಗಿ ಆವೆ ಮಣ್ಣನ್ನು ತರಿಸಿಕೊಂಡು ಅದಕ್ಕೆ ಮಾಡರ್ನ್ ಟಚ್ ಕೊಡುವ ಮೂಲಕ ತಮ್ಮ ಕೈಚಳಕವನ್ನು ವೃತ್ತಿಯಲ್ಲಿ ತೋರಿಸುತ್ತಾ ಬಂದಿದ್ದಾರೆ. ಕಿವಿಯ ಬೆಂಡೋಲೆ, ಸರಗಳು, ಬ್ರಾಸ್ಲೈಟ್ಗಳನ್ನು ವಿಶೇಷ ವಿನ್ಯಾಸದಲ್ಲಿ ಆಧುನಿಕತೆಯ ಬೇಡಿಕೆಗನುಸಾರವಾಗಿ ಮಾಡುವ ಇವರು ಗಣಪತಿ, ಮೂರು ಮಂಗಗಳ ಗೊಂಬೆಗಳು, ಆಮೆ ಸೇರಿದಂತೆ ಹಲವು ಗೊಂಬೆಗಳನ್ನು ಮಣ್ಣಿನಿಂದಲೇ ರಚಿಸುತ್ತಾರೆ.
ಹೀಗೆ ನಾಲ್ಕು ವರ್ಷಗಳ ಅನುಭವವನ್ನು ಹೊಂದಿರುವ ಇವರ ಈ ಕೆಲಸ ಇನ್ನೂ ಅಷ್ಟು ಪ್ರಚಾರವಾಗಿಲ್ಲ, ಕಷ್ಟಪಟ್ಟು ಮಾಡಿದ ವಸ್ತುಗಳು ಮಾರಾಟದ ಸಲುವಾಗಿ ಮಾರ್ಕೇಟಿಂಗ್ ಮಾಡುವುದು ಈಕೆಗೆ ಕಷ್ಟವಾಗುತ್ತಿದೆ. ಪಿಲಿಕುಳಖದ ಸಂಸ್ಥೆಯೊಂದು ಕಳೆದ ನಾಲ್ಕು ವರ್ಷಗಳಿಂದಲೂ ಇವರು ತಯಾರಿಸಿದ ತರಹೇವಾರಿ ವಸ್ತುಗಳನ್ನು ಖರೀಧಿಸುವ ಮೂಲಕ ಅವರಿಗೆ ಸಹಕಾರ ನೀಡುತ್ತಿದ್ದು ಇತ್ತೀಚೆಗೆ ಕೆಲವು ತಿಂಗಳುಗಳಿಂದ ಅವರು ಕೂಡ ಖರೀಧಿ ನಿಲ್ಲಿಸಿದೆ. ತಯಾರಿಸಿದ ವಸ್ತುಗಳಿಗೆ ಬೇಡಿಕೆ ಇಲ್ಲವೆಂದು ಮಹಾದೇವಿ ಅವರು ಬೇಸರ ವ್ಯಕ್ತಪಡಿಸುತ್ತಾರೆ. ಸರ, ಅಭರಣಗಳಿಗೆ ದಾರ ಮಂಗಳೂರಿನಿಂದ, ಆವೆ ಮಣ್ಣನ್ನು ತೆಕ್ಕಟ್ಟೆ ಸಮೀಪದಿಂದ ತರಬೇಕು. ಬಳಿಕ ಆವೆ ಮಣ್ಣನ್ನು ಪಾಕಗೊಳಿಸಿ, ಪಿಲ್ಟರ್ ಮಾಡಿ, ಬೇಕಾದ ಆಕೃತಿಯನ್ನು ಸಿದ್ದಪಡಿಸಿ ಅದನ್ನು ಸುಡಬೇಕು ಬಳಿಕ ಅದಕ್ಕೆ ಬಣ್ಣ ನೀಡಿ ದಾರದ ಮೂಲಕ ಜಾಯಿಂಟ್ ಮಾಡಬೇಕು. ಇನ್ನು ಫ್ಯಾಕಿಂಗ್ ಮೊದಲಾದವುಗಳನ್ನೊಳಗೊಂಡಂತೆ ಶ್ರಮವೂ ಜಾಸ್ತಿ , ಖರ್ಚೂ ಜಾಸ್ತಿ . ಮಾರುಕಟ್ಟೆಯ ಸಮಸ್ಯೆ ಕಾಡುತ್ತಿದೆ. ನನ್ನಿಂದ ಮಾರುಕಟ್ಟೆ ಮಾಡಲು ಸಾಧ್ಯವಾಗುತ್ತಿಲ್ಲ. ಮಾರುಕಟ್ಟೆಯನ್ನು ಒದಗಿಸುವ ಸಹಕಾರ ನೀಡಿದರೆ ಈ ಕಲೆಯಲ್ಲಿಯೇ ಮುಂದುವರಿಯುವದಲ್ಲದೇ ಜೀವನ ನಿರ್ವಹಣೆಯನ್ನು ಮಾಡುವ ಆಸೆಯಿದೆ ಎನ್ನುತ್ತಾರೆ ಮಹಾದೇವಿ.
ಮಹಾದೇವಿ ಅವರ ಸಾಧನೆ ಹಲವು ಸಂಘಸಂಸ್ಥೆಗಳು ಗುರುತಿಸಿದೆಯಾದರೂ ಸರಕಾರ ಮಾತ್ರ ಮಾಸಾಶನ ಹೊರತುಪಡಿಸಿ ಬೇರೆ ಯಾವುದೇ ಸಹಕಾರ ನೀಡಿಲ್ಲ. ಇವರ ಸಾಧನೆ ಗುರುತಿಸಿ 2012ರಲ್ಲಿ ’ಕೊಂಕಣಿ ಯುವ ಪುರಸ್ಕಾರ್’ ನೀಡಿದೆ. ಭಗತ್ಸಿಂಗ್ ಯುವಕ ಮಂಡಲ ಆಲೂರು, ಸ್ನೇಹ ನವೋದಯ ಸ್ವಸಹಾಯ ಸಂಘ ಆಲೂರು ಮಹಾದೇವಿ ಅವರನ್ನು ಸನ್ಮಾನಿಸಿದೆ.
ಪೊಲೀಯೋ ಸಮಸ್ಯೆಯನ್ನು ಮೆಟ್ಟಿನಿಂತು ಸ್ವಾವಲಂಬಿ ಬದುಕು ನಿರ್ವಹಣೆಗೆ ಮಾಡರ್ನ್ ಕುಂಬಾರಿಕೆ ಡಿಸೈನ್ ವೃತ್ತಿ ಕಂಡುಕೊಂಡಿರುವ ಆಲೂರಿನ ಮಹಾದೇವಿ ಅವರು ಇತರ ಎಲ್ಲ ವಿಶೇಷಚೇತನರಿಗೆ ಮಾದರಿಯಾಗಿದ್ದು, ಇವರ ಈ ಸಾಧನೆ ಹಾಗೂ ಶ್ರಮಕ್ಕೆ ಸರ್ಕಾರದಿಂದ ಸಹಕಾರದ ಅಗತ್ಯವಿದೆ.
# ಯೋಗೀಶ್ ಕುಂಭಾಸಿ