ಆಧುನಿಕತೆ ಭರಾಟೆಯಲ್ಲಿ ಮಣ್ಣಿನ ಮಡಕೆ–ಕುಡಿಕೆಗಳ ಬಳಕೆ ಮರೆಯಾಗುತ್ತಿರುವ ಈ ದಿನಗಳಲ್ಲಿ ಶಿವಮೊಗ್ಗ ತಾಲ್ಲೂಕು ಹಾರ್ನಹಳ್ಳಿ ಹೋಬಳಿ ಸಂಕೆದೇವನಕೊಪ್ಪ ಗ್ರಾಮದ ಎಸ್.ಬಿ.ಹಾಲೇಶಪ್ಪ ಕುಂಬಾರಿಕೆಗೆ ಹೊಸ ರೂಪ ಕೊಟ್ಟು ಮರುಜೀವಗೊಳಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.
ಬೇಸಿಗೆಯ ದಿನಗಳಲ್ಲಿ ತಣ್ಣನೆ ನೀರಿಗೆ ನಗರ–ಗ್ರಾಮೀಣ ಪ್ರದೇಶ ಎಂಬ ಭೇದವಿಲ್ಲದೆ ಮಡಕೆ ಬಳಸುವುದು ಈಗಲೂ ಚಾಲ್ತಿಯಲ್ಲಿದೆ. ಮಡಕೆಯಲ್ಲಿ ತಯಾರಿಸಿದ ಮೀನಿನ ಅಡುಗೆ, ಮೊಸರು ರುಚಿಯೂ ಹೆಚ್ಚು. ಪ್ರಸ್ತುತದಲ್ಲಿ ಅಡುಗೆ ಮನೆಯಿಂದ ಅಲಂಕಾರಕ ಜಗತ್ತಿಗೆ ಜಿಗಿದಿರುವ ಕುಂಬಾರೋದ್ಯಮ ನಗರ ಪ್ರದೇಶಗಳಲ್ಲಿ ಹೊಸ ರೂಪ ತಳೆದು ಮರುಜೀವ ಪಡೆದಿದೆ.
ಸ್ಟಾರ್ ಹೋಟೆಲ್ಗಳು, ದೊಡ್ಡ ದೊಡ್ಡ ಮಹಲುಗಳು, ಚಿತ್ರೋದ್ಯಮಗಳಲ್ಲಿ ವಿವಿಧ ಆಕಾರದ ಹೂದಾನಿಗಳು, ನೀರು ತುಂಬಿಡುವ ಹೂಜಿಗಳು, ತಂದೂರಿ ಒಲೆಗಳು, ಕುದುರೆ, ಆನೆ, ಒಂಟೆ, ಮುಖವಾಡಗಳು, ದೀಪಧಾರಿಗಳು, ಲ್ಯಾಂಪ್ಗಳು, ಮೂರ್ತಿಗಳು ಮುಂತಾದ ರೂಪಗಳಲ್ಲಿ ಮಿಂಚತೊಡಗಿವೆ.
ಇವರ ಕಾಯಕಕ್ಕೆ ತಂದೆ ಬಸವರಾಜಪ್ಪ, ತಾಯಿ ರುದ್ರಮ್ಮ, ಪತ್ನಿ ಮಹಾಲಕ್ಷ್ಮೀ ಅವರ ಸಹಾಯಾಸ್ತವಿದೆ. ದ್ವಿತೀಯ ಪಿಯುವರೆಗೆ ವಿದ್ಯಾಭ್ಯಾಸ ಮಾಡಿರುವ ಹಾಲೇಶಪ್ಪ ಅವರು, ವಂಶಪಾರಂಪರ್ಯವಾಗಿ ಬಂದ ಕುಂಬಾರಿಕೆಯಲ್ಲೇ ಭವಿಷ್ಯ ರೂಪಿಸಿಕೊಳ್ಳಲು ನಿರ್ಧರಿಸಿರುವವರು. ಕಲೆಯನ್ನು ಹೆಚ್ಚು ಕರಗತ ಮಾಡಿಕೊಳ್ಳುವ ಸಲುವಾಗಿ ಬಿಡದಿಯ ಜೋಗರದೊಡ್ಡಿಯಲ್ಲಿರುವ ಕೆ.ಪಿ.ಜೆ. ಕರಕುಶಲ ತರಬೇತಿ ಕೇಂದ್ರದಲ್ಲಿ ಒಂದು ವರ್ಷ ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ತರಬೇತಿ ಕೇಂದ್ರದಲ್ಲಿ ಮೂರು ತಿಂಗಳ ತರಬೇತಿ ಪಡೆದಿದ್ದಾರೆ.
ಸುಟ್ಟಾವೆ ಮಣ್ಣಿನ ದೀಪ, ಗಣೇಶ ದೀಪ, ಲಕ್ಷ್ಮಿ ದೀಪ, ಮ್ಯಾಜಿಕ್ ಲ್ಯಾಂಪ್, ವಾಲ್ ಹ್ಯಾಗಿಂಗ್ ಸೆಟ್, ಮಣ್ಣಿನ ತೋರಣಗಳು, ಗಂಟೆಗಳು, ಹೂದಾನಿಗಳು, ಷೋ ಪಾಟ್, ಪೆನ್ಪಾಟ್, ಪಂಚಮುಖಿ ಗಣೇಶ, ಉಯ್ಯಾಲೆ ಗಣೇಶ, ನೃತ್ಯ ಗಣೇಶ ಮುಂತಾದ ಬಗೆ ಬಗೆಯ ಅಲಂಕಾರಿಕ ವಸ್ತುಗಳನ್ನು ತಯಾರಿಸುವಲ್ಲಿ ಸೈ ಎನಿಸಿಕೊಂಡಿರುವ ಹಾಲೇಶಪ್ಪ ಅವರು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ೨೦೦೭–೨೦೦೮ನೇ ಸಾಲಿನ ರಾಜ್ಯ ಸರ್ಕಾರದ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ಜಿಲ್ಲಾ ಪಂಚಾಯ್ತಿ ನಬಾರ್ಡ್, ಜಿಲ್ಲಾ ಮತ್ತು ಕೈಗಾರಿಕಾ ತರಬೇತಿ ಕೇಂದ್ರದ ಸಹಕಾರದೊಂದಿಗೆ ಶಿವಮೊಗ್ಗದ ಕೊಡಚಾದ್ರಿ ಉತ್ಸವ–೩, ಕಾರವಾರ, ಶಿರಸಿ, ಬೆಂಗಳೂರು, ಬೆಳಗಾವಿ, ಮೈಸೂರು, ಹುಬ್ಬಳ್ಳಿ–ಧಾರವಾಡ, ಗೋವಾ, ಪೂನಾ, ಹೈದರಾಬಾದ್, ಮುಂಬೈಗಳಲ್ಲಿ ನಡೆದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಭಾಗವಹಿಸಿ ‘ಬೆಸ್ಟ್ ಸ್ಟಾಲ್’ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ತಮ್ಮಂತೆಯೇ ಕುಂಬಾರಿಕೆಯಲ್ಲಿ ತರಬೇತಿ ಪಡೆದಿರು ವವರನ್ನು ಒಂದುಗೂಡಿಸಿ ಬದಲಾಗಿರುವ ಸನ್ನಿವೇಶಕ್ಕೆ ಅನುಗುಣವಾಗಿ ವಸ್ತುಗಳನ್ನು ತಯಾರಿಸುವ ಮೂಲಕ ಕಲೆಯನ್ನು ಉಳಿಸಿ ಬೆಳೆಸಲು ಪಣ ತೊಟ್ಟಿದ್ದಾರೆ. ‘ಕುಂಬಾರಿಕೆಗೆ ಮೂಲ ಸಾಮಗ್ರಿ ಮಣ್ಣು. ಇದು ಎಲ್ಲೆಡೆ ದೊರಕುವ ನೈಸರ್ಗಿಕ ಸಾಮಗ್ರಿಯಾದರೂ, ಎಲ್ಲ ಮಣ್ಣು ಮಡಕೆಯಾಗುವ ಗುಣಧರ್ಮ ಹೊಂದಿರುವುದಿಲ್ಲ. ಮಡಕೆ ಮಾಡಲು ಜೇಡಿ ಮಣ್ಣು ಮತ್ತು ಕಪ್ಪು ಮಣ್ಣು ಶ್ರೇಷ್ಠವಾದುದು. ಈ ಹಿಂದೆ ಮಣ್ಣನ್ನು ತಾವೇ ಇಲ್ಲವೇ ಕತ್ತೆಗಳ ಮೂಲಕ ಹೊತ್ತು ತರಲಾಗುತ್ತಿತ್ತು.
ಆದರೀಗ ಟ್ರ್ಯಾಕ್ಟರ್ ಇಲ್ಲವೇ ಲಾರಿಗಳ ಸಹಾಯದಿಂದ ತರುತ್ತೇವೆ. ಕೆಲವೊಮ್ಮೆ ಹಣ ಕೊಟ್ಟೂ ಮಣ್ಣು ತರಬೇಕಾಗುತ್ತದೆ. ಹೀಗೆ ತಂದ ಕಪ್ಪು ಮಣ್ಣು, ಕೆಂಪು ಮಣ್ಣು, ಬಿಳಿ ಜೇಡಿ ಮಣ್ಣನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ತೊಟ್ಟಿಯಲ್ಲಿ ಹಾಲಿಗಿಂತ ಸ್ವಲ್ಪ ಗಟ್ಟಿಯಾಗಿ ಕಲಸುತ್ತೇವೆ. ನಂತರ ಅದನ್ನು ಸೋಸಿ ಕಸ–ಕಡ್ಡಿಗಳನ್ನು ತೆಗೆಯುತ್ತೇವೆ. ಬಳಿಕ ಅದನ್ನು ಬಟ್ಟೆ ಇಲ್ಲವೇ ನೆಲದ ಮೇಲೆ ಹದ ಬರುವವರೆಗೆ ಹರಡುತ್ತೇವೆ. ಹದ ಬಂದ ನಂತರದಲ್ಲಿ ಬಗೆ ಬಗೆಯ ವಸ್ತುಗಳನ್ನು ತಯಾರಿಸುತ್ತೇವೆ’ ಎನ್ನುತ್ತಾರೆ ಹಾಲೇಶಪ್ಪ.
‘ಹೀಗೆ ತಯಾರಿಸಿದ ವಸ್ತುಗಳನ್ನು ಸೊನ್ನೆಯಿಂದ ಒಂಬೈ ನೂರು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಸುಡುತ್ತೇವೆ. ಕೆಲವಕ್ಕೆ ಸ್ವಾಭಾವಿಕ ಬಣ್ಣ ಕೊಟ್ಟರೆ, ಮತ್ತೆ ಕೆಲವಕ್ಕೆ ಚಿನ್ನ, ತಾಮ್ರ, ಮಿಶ್ರಲೋಹ ಇಲ್ಲವೇ ಟೆರ್ರಾಕೋಟ ಬಣ್ಣಗಳನ್ನು ನೀಡುತ್ತೇವೆ. ಕುಂಬಾರಿಕೆಯ ದೋಣಿ ಯಶಸ್ವಿಯಾಗಿ ದಡ ಸೇರಲು ತಾಯಿ ರುದ್ರಮ್ಮ ಕಾರಣಕರ್ತರು. ದೊಡ್ಡಪ್ಪ ಶಿವಾನಂದಪ್ಪ ಅವರೂ ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಪ್ರತಿ ಗಣೇಶೋತ್ಸವದಲ್ಲೂ ತಮ್ಮ ಸುತ್ತಮುತ್ತಲ ಗ್ರಾಮದವರಿಗೆ ಗಣೇಶ ಮೂರ್ತಿಗಳನ್ನು ತಯಾರಿಸಿಕೊಡುವ ಕಾಯಕದಲ್ಲಿ ನಿರತರಾಗಿದ್ದಾರೆ.
# ಎಚ್ ಸುನೀತಾ