ಕುಂಬಾರ ಸಮಾಜದ ಕಷ್ಟಗಳೇನು? ಬೇಡಿಕೆಗಳೇನು ಎಂಬುದನ್ನು ಇಲ್ಲಿ ತೆರೆದಿಡಲಾಗಿದೆ
ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕುಂಬಾರ ಸಮುದಾಯ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ರಾಜ್ಯದಲ್ಲಿ ಕಡಿಮೆ ಜನಸಂಖ್ಯೆ ಹೊಂದಿರುವ ಕುಂಬಾರರು ಕುಲಕಸುಬಾದ ಮಣ್ಣಿನ ಮಡಿಕೆ ಮಾಡಿ ಮಾರಾಟ ಮಾಡಲೂ ಸಾಧ್ಯವಾಗದೆ, ಅದರಿಂದ ಜೀವನಮಟ್ಟವೂ ಸುಧಾರಣೆಯಾಗದೆ ಸಂಕಷ್ಟದಲ್ಲಿದ್ದಾರೆ. ಕುಂಬಾರ ಸಮುದಾಯದ ಅಭ್ಯುದಯಕ್ಕೆ ಏನೆಲ್ಲ ಆಗಬೇಕು? ಅವರು ಅನುಭವಿಸುತ್ತಿರುವ ಕಷ್ಟಗಳೇನು? ಬೇಡಿಕೆಗಳೇನು? ಎಂಬುದನ್ನು ಇಲ್ಲಿ ತೆರೆದಿಡಲಾಗಿದೆ. ಸರ್ಕಾರ ಈ ಬಗ್ಗೆ ಗಮನಹರಿಸಿ ನೆರವಾಗಬೇಕಾದ ಅಗತ್ಯವಿದೆ.
ಕುಂಬಾರ ಜನಾಂಗದವರನ್ನು ಪ್ರತಿನಿಧಿಸುವ ಯಾವೊಬ್ಬ ವಿಧಾನ ಪರಿಷತ್ತಿನ ಸದಸ್ಯ, ಶಾಸಕ, ಸಚಿವ ಇಲ್ಲ. ಸಮುದಾಯವನ್ನು ಗುರುತಿಸಿ ಲಭ್ಯವಿರುವ ಸೌಲಭ್ಯ ಕಲ್ಪಿಸುವ ನಾಯಕನೇ ಇಲ್ಲದಂತಾಗಿದೆ. ಶುಭಕಾರ್ಯಕ್ಕೆ ‘ಮಡಿಕೆ’ ಮತ್ತು ಶವಸಂಸ್ಕಾರ ಮಾಡುವ ವೇಳೆ ‘ಕುಡಿಕೆ’ ಈ ಎರಡು ವಿಷಯಕ್ಕೆ ಮಾತ್ರ ಕುಂಬಾರರನ್ನು ನೆನಪಿಸಿಕೊಳ್ಳುತ್ತಿರುವುದು ಶೋಚನೀಯ. ಸಣ್ಣ ಸಮುದಾಯಗಳಿಗೆ ಯೋಜನೆಗಳನ್ನು ರೂಪಿಸಿ ಅವರ ಕಲ್ಯಾಣಕ್ಕೆ ಸಹಕಾರ ನೀಡಬೇಕಾದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಇತರ ಸಮುದಾಯಕ್ಕೆ ತೋರಿಸುತ್ತಿರುವ ಕಾಳಜಿಯನ್ನು ಕುಂಬಾರ ಸಮುದಾಯಕ್ಕೆ ತೋರಿಸುತ್ತಿಲ್ಲವೆಂಬ ಆರೋಪ ಇದೆ. ಆದ್ದರಿಂದ ಸಮುದಾಯಕ್ಕೆ ಪ್ರತ್ಯೇಕ ನಿಗಮದ ಅಗತ್ಯವಿದೆ ಎಂಬ ಕೂಗು ಕೇಳಿಬಂದಿದೆ.
ಸರ್ವಜ್ಞನ ಸಮಾಧಿ ರಕ್ಷಿಸಿ:
ನಾವು ಸರ್ವಜ್ಞನನ್ನು ಆರಾಧಿಸುತ್ತೇವೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದಲ್ಲಿ ಕವಿ ಸರ್ವಜ್ಞ ಸಮಾಧಿಗೆ ಇಂದಿಗೂ ಕಾರ್ಯಕಲ್ಪ ಸಿಕ್ಕಿಲ್ಲ. ತಕ್ಷಣ ಅವರ ಸಮಾಧಿ ರಕ್ಷಣೆಗೆ ಸರ್ಕಾರ ಮುಂದಾಗಬೇಕೆಂದು ಸಮುದಾಯ ಒತ್ತಾಯಿಸಿದೆ. ಸರ್ವಜ್ಞನ ಸಮಾಧಿಸ್ಥಳ ಯಾವುದೇ ಅಭಿವೃದ್ಧಿ ಕಾಣುತ್ತಿಲ್ಲ. ಮಳೆ ಹೆಚ್ಚಾದಾಗ ಮುಳುಗಡೆಯಾಗುತ್ತದೆ. ಸರ್ವಜ್ಞ ಸಮಾಧಿ ಅಭಿವೃದ್ಧಿ ಮಾಡಿ ಐತಿಹಾಸಿಕ ಸ್ಥಳವಾಗಿ ಮಾರ್ಪಾಡು ಮಾಡಬೇಕೆಂದು ಸಮುದಾಯದವರು ಒತ್ತಾಯಿಸಿದ್ದಾರೆ.
ಎಸ್ಟಿಗೆ ಸೇರ್ಪಡೆ:
ಕುಂಬಾರರ ಜನಾಂಗವು ‘2ಎ’ ವರ್ಗದಲ್ಲಿದೆ. ಇದರಲ್ಲಿ ನೂರೆಂಟು ಜಾತಿಗಳಿದ್ದು, ಕುಂಬಾರ ಜನಾಂಗಕ್ಕೆ ಸಿಗಬೇಕಾದ ಸವಲತ್ತುಗಳು ದೊರೆಯುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಸಾಮಾನ್ಯ ವರ್ಗದಲ್ಲಿರುವ ಪ್ರಬಲ ಸಮುದಾಯವೊಂದು ‘2ಎ’ಗೆ ಸೇರ್ಪಡೆ ಮಾಡುವಂತೆ ಪ್ರತಿಭಟನೆಗಳು ನಡೆಯುತ್ತಿವೆ. ಒಂದು ವೇಳೆ ಈ ಸಮುದಾಯವನ್ನು ‘2ಎ’ಗೆ ಸೇರ್ಪಡೆ ಮಾಡಿದ್ದೇ ಆದಲ್ಲಿ, ತಕ್ಷಣ ಕುಂಬಾರ ಜನಾಂಗವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಒಳ ಮೀಸಲಾತಿ ನೀಡಬೇಕೆಂದು ಸಮುದಾಯದವರು ಒತ್ತಾಯಿಸಿದ್ದಾರೆ.
ಉಪ ಜಾತಿಗಳು:
ಕುಂಬಾರ ಜನಾಂಗದವರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಉಪ ಪಂಗಡಗಳಿಂದ ಕರೆಯಲ್ಪಡುತ್ತಾರೆ. ಮಂಗಳೂರು ಭಾಗದಲ್ಲಿ ಕುಲಾಲ್, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಜ್ಜನ ಕುಂಬಾರ್, ಕುಂಬಾರ್, ಮೂಲ್ಯ ಎಂಬ ಉಪ ಉಪಂಗಡಗಳಿವೆ.
ಅಭಿವೃದ್ಧಿ ನಿಗಮ ಸ್ಥಾಪಿಸಿ:
ಸಣ್ಣ-ಪುಟ್ಟ ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪಿಸಿ ಹತ್ತಾರು ಕೋಟಿ ರೂಪಾಯಿಗಳನ್ನು ಸರ್ಕಾರ ನೀಡುತ್ತಿದೆ. ಆದರೆ, ಕುಂಭ ಕಲಾ ನಿಗಮವನ್ನು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವ್ಯಾಪ್ತಿಯಲ್ಲಿ ಸ್ಥಾಪಿಸಿ, ಒಂದೆರಡು ಕೋಟಿ ರೂ.ಗಳನ್ನು ಮಾತ್ರ ನೀಡಿದೆ. ಈ ಅನುದಾನ ಕೂಡ ಸಮರ್ಪಕವಾಗಿ ಬಳಕೆ ಮಾಡಲು ದೇವರಾಜ ಅರಸು ನಿಗಮ ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ದೇವರಾಜ ಅರಸು ನಿಗಮದಿಂದ ಕುಂಭ ಕಲಾ ನಿಗಮವನ್ನು ಪ್ರತ್ಯೇಕಿಸಿ ಕನಿಷ್ಠ 50 ಕೋಟಿ ರೂ. ಅನುದಾನ ನೀಡಬೇಕೆಂಬುದು ಸಮುದಾಯದವರ ಒತ್ತಾಯ.
ವ್ಯಾಪಾರಕ್ಕೆ ಮಳಿಗೆ ನೀಡಿ:
ಪ್ಲಾಸ್ಟಿಕ್ ಮತ್ತು ಅಲ್ಯುಮಿನಿಯಂ ಪಾತ್ರೆ-ಪಗಡೆಗಳು ಅಡುಗೆಮನೆ ಆವರಿಸಿದ ಮೇಲೆ ಕುಂಬಾರರು ಮಾಡುತ್ತಿದ್ದ ಮಣ್ಣಿನ ಮಡಿಕೆಗಳು ಬೇಡಿಕೆ ಕಳೆದುಕೊಂಡವು. ಸಮಕಾಲೀನ ತಂತ್ರಜ್ಞಾನಕ್ಕೆ ಹೊಂದಿಕೊಂಡು ಅಡುಗೆಮನೆ ಉಪಕರಣಗಳನ್ನು ರೂಪಿಸುತ್ತಿದ್ದರೂ ಇವುಗಳ ಮಾರಾಟಕ್ಕೆ ಸೂಕ್ತ ವೇದಿಕೆ ಇಲ್ಲದಂತಾಗಿದೆ. ಮೆಟ್ರೋ ನಿಲ್ದಾಣ, ಬಸ್ ನಿಲ್ದಾಣ, ಏರ್ಪೋರ್ಟ್ಗಳಲ್ಲಿರುವ ಮಳಿಗೆಗಳಲ್ಲಿ ಕುಂಬಾರ ಕರಕುಶಲ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಡಬೇಕು. ಇದರಿಂದಾಗಿ ಕುಂಬಾರರು ಅಲ್ಪಮಟ್ಟಿಗೆ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕುಂಬಾರರು ಆಗ್ರಹಿಸಿದ್ದಾರೆ.
25 ಲಕ್ಷ ಜನಸಂಖ್ಯೆ:
ರಾಜ್ಯದಲ್ಲಿ ಅಂದಾಜಿನ ಪ್ರಕಾರ ಕುಂಬಾರರ ಜನಸಂಖ್ಯೆ ಪ್ರಮಾಣ 25 ಲಕ್ಷಕ್ಕಿಂತ ಹೆಚ್ಚಿದೆ. ಇದರಲ್ಲಿ ಕುಲಕಸುಬು ನಂಬಿ ಬದುಕುತ್ತಿರುವವರ ಪ್ರಮಾಣ ಶೇಕಡ 17 ಮಾತ್ರ. ಶೇ.50 ಜನರು ಕೂಲಿಕಾರ್ವಿುಕರಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಉದ್ಯೋಗದಲ್ಲಿರುವವರ ಪ್ರಮಾಣ ಶೇ.4 ಮಾತ್ರ. ಉಳಿದವರು ಸಣ್ಣ-ಪುಟ್ಟ ಕೆಲಸಗಳಲ್ಲಿ ನಿರತರಾಗಿದ್ದಾರೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕ, ಮೈಸೂರು ಭಾಗ, ಬೆಂಗಳೂರು ಮತ್ತು ಗ್ರಾಮಾಂತರದ ಭಾಗದಲ್ಲಿ ಹೆಚ್ಚಿನ ಕುಂಬಾರರು ವಾಸಿಸುತ್ತಿದ್ದಾರೆ.
ರಾಜಕೀಯ ವ್ಯವಸ್ಥೆ:
ಕರ್ನಾಟಕದಲ್ಲಿ ಕುಂಬಾರ ಸಮುದಾಯ ರಾಜಕೀಯವಾಗಿ ಗುರುತಿಸಿಕೊಂಡಿಲ್ಲ. ಇಡೀ ಸಮುದಾಯದಲ್ಲಿ ರಾಜಕೀಯ ಸ್ಥಾನ ಗಳಿಸಿದವರು, ಡಾ.ಎ.ಲಕ್ಷ್ಮೀಸಾಗರ್. ಇವರು ತೆಲುಗು ಕುಂಬಾರರಾಗಿದ್ದರು. ಇದಾದ ನಂತರ ಕುಂಬಾರ ಸಮುದಾಯದಲ್ಲಿ ರಾಜಕೀಯವಾಗಿ ಸ್ಥಾನ ಪಡೆದವರು ಯಾರೂ ಇಲ್ಲ. ಇವರು ಮೂಲತಃ ಕೋಲಾರ ಜಿಲ್ಲೆ ಗುಡಿಬಂಡೆ ತಾಲೂಕಿನ ಲಕ್ಷ್ಮೀಸಾಗರ ಎಂಬ ಊರಿನವರು. ಇವರು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ರಾಮಕೃಷ್ಣ ಹೆಗಡೆ ಮತ್ತು ಎಸ್.ಆರ್.ಬೊಮ್ಮಾಯಿ ಅವಧಿಯಲ್ಲಿ 3 ಬಾರಿ ಸಂಪುಟ ದರ್ಜೆ ಸಚಿವರಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರ, ನಗರಾಭಿವೃದ್ಧಿ ಸಚಿವರಾಗಿದ್ದರು. ಈ ವೇಳೆ ಸ್ವ-ಜಾತಿ ಹಾಗೂ ಸಂಬಂಧಿಕರನ್ನು ಸಹ ಹತ್ತಿರ ಸೇರಿಸದೆ ಬಡ ಸಮುದಾಯದ ನೇತರರಾಗಿ ಸಮಾಜದ ಸೇವೆ ಸಲ್ಲಿಸಿದ್ದರು.
ಕಾಲೇಜು ಸ್ಥಾಪಿಸಿ:
ಕುಂಬಾರ ಜನಾಂಗದ ಸಮುದಾಯವು ಶೈಕ್ಷಣಿಕವಾಗಿಯೂ ಹಿಂದುಳಿದಿದೆ. ಸ್ವಂತ ಶಕ್ತಿ ಮತ್ತು ಪರಿಶ್ರಮದಿಂದ ಕೆಲವು ಯುವ ಜನರು ಕೆಎಎಸ್ ಪಾಸ್ ಮಾಡಿ ಸರ್ಕಾರದ ಉನ್ನತ ಹುದ್ದೆಗೇರಿದ್ದಾರೆ. ಇದರ ಹೊರತಾಗಿ ಇವರ ವ್ಯಾಸಂಗಕ್ಕೆ ಇತರ ಸಮುದಾಯಗಳಲ್ಲಿರುವಂತೆ ಇಂಜಿನಿಯರಿಂಗ್ ಕಾಲೇಜ್, ಮೆಡಿಕಲ್ ಕಾಲೇಜ್, ಬೃಹತ್ ಹಾಸ್ಟೆಲ್ ಇದ್ಯಾವುದು ಇಲ್ಲದಿರುವುದು ವಿಪರ್ಯಾಸದ ಸಂಗತಿ.
ಪ್ರಮುಖ ಬೇಡಿಕೆಗಳು
* ದೇವರಾಜ ಅರಸು ನಿಗಮದಿಂದ ಕುಂಭಕಲಾಭಿವೃದ್ಧಿ ನಿಗಮವನ್ನು ಪ್ರತ್ಯೇಕಿಸಿ ಅನುದಾನ ನೀಡಬೇಕು.
* ಸಮುದಾಯದವರಿಗೆ ರಾಜಕೀಯ ಸ್ಥಾನ-ಮಾನ ನೀಡಬೇಕು.
* ಪ್ರತಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸರ್ವಜ್ಞ ಭವನ ನಿರ್ಮಾಣ ಮಾಡಬೇಕು.
* ಕುಂಬಾರಿಕೆ ಕರಕುಶಲ ಉತ್ಪನ್ನಗಳ ಮಾರುಕಟ್ಟೆಗೆ ಅವಕಾಶ ಕಲ್ಪಿಸಬೇಕು.
* ಪ್ರತಿ ವರ್ಷ ಕುಂಬಾರ ಸಮಾಜದ ವಿಶೇಷ ಸಾಧಕರಿಗೆ ಸರ್ಕಾರವೇ ಸರ್ವಜ್ಞ ಶ್ರೀ ಪ್ರಶಸ್ತಿ ನೀಡಬೇಕು.
ಸುದ್ದಿ ಕೃಪೆ : ವಿಜಯವಾಣಿ