ವಿಜಯಪುರ: ವಿಭಕ್ತ ಕುಟುಂಬಗಳೇ ಹೆಚ್ಚಾಗಿರುವ ಇಂದಿನ ದಿನಮಾನಗಳಲ್ಲಿ ಕೃಷಿಯನ್ನೇ ನಂಬಿಕೊಂಡು 64 ಜನ ಸದಸ್ಯರ ಅವಿಭಕ್ತ ಕುಟುಂಬವೊಂದು ಒಂದೇ ಸೂರಿನಲ್ಲಿ ಮಾದರಿ ಜೀವನ ನಡೆಸುತ್ತಿದೆ.
ಜಿಲ್ಲೆಯ ಇಂಡಿ ತಾಲೂಕಿನ ಹಲಗುಣಕಿ ಗ್ರಾಮದ ದಿ| ಹಾಜಪ್ಪ ಕುಂಬಾರ ಎಂಬುವವರೇ ಈ ಅವಿಭಕ್ತ ಕುಟುಂಬದ ಮೂಲ ಪುರುಷ. ಇವರು ಕುಂಬಾರ ರಾಮಚಂದ್ರ- ಸಿದ್ದವ್ವ ದಂಪತಿಯ ಮೂವರು ಮಕ್ಕಳಲ್ಲಿ ಮಧ್ಯದವರು. ಹಾಜಪ್ಪ ಹಾಗೂ ರೇವಮ್ಮ ದಂಪತಿಗೆ ಗುರುಶಾಂತಪ್ಪ, ಮಹಾದೇವ, ಬಸವಾನಂದ, ಶಿವಾನಂದ, ಸಿದ್ದರಾಯ, ಪರಮಾನಂದ ಆರು ಗಂಡು ಮಕ್ಕಳು ಹಾಗೂ ಸಿದ್ದವ್ವ, ಸರೋಜಿನಿ, ಶಾಂತಾಬಾಯಿ ಹಾಗೂ ರುಕುಮಾಬಾಯಿ ಎಂಬ ಹೆಣ್ಣು ಮಕ್ಕಳು ಸೇರಿ ಒಟ್ಟು ಹತ್ತು ಜನ ಮಕ್ಕಳು.
ಸದ್ಯ ಹಾಜಪ್ಪ ದಂಪತಿ ಹಾಗೂ ಅವರ ದೊಡ್ಡ ಮಗ ಗುರುಶಾಂತಪ್ಪ ಇಲ್ಲ. ಗಂಡು ಮಕ್ಕಳ ಪತ್ನಿಯರು, ಮಕ್ಕಳು, ಮೊಮ್ಮಕ್ಕಳು ಎಲ್ಲ ಸೇರಿ ಒಟ್ಟು 64 ಜನ ಸದಸ್ಯರಿದ್ದಾರೆ. ಹೆಣ್ಣು ಮಕ್ಕಳ ಗಂಡ ಮತ್ತು ಮಕ್ಕಳನ್ನು ಸೇರಿಸಿದರೆ ಈ ಕುಟುಂಬ ಸದಸ್ಯರ ಸಂಖ್ಯೆ 130ರ ಗಡಿ ದಾಟುತ್ತದೆ.
ಹೊಲದಲ್ಲೇ ಮನೆ:
50 ವರ್ಷದ ಹಿಂದೆಯೇ ಈ ಕುಟುಂಬ ಹೊಲದಲ್ಲೇ ಮನೆ ಕಟ್ಟಿಕೊಂಡು ಒಗ್ಗಟ್ಟಿನಿಂದ ಜೀವನ ನಡೆಸುತ್ತಿದೆ. ಈ ಕುಟುಂಬದಲ್ಲಿ ಹಿರಿಯರೇ ಪೊಲೀಸ್ ಠಾಣೆ, ಕೋರ್ಟ್ ಎಲ್ಲವೂ. ಪರಸ್ಪರ ನಾಲ್ಕಾರು ತಲೆಮಾರುಗಳ ಹಳೆಯ ಸಂಬಂಧಗಳಲ್ಲೇ ಇಂದಿಗೂ ವೈವಾಹಿಕ ಸಂಬಂಧಗಳು ಏರ್ಪಟ್ಟಿವೆ. ಹೀಗಾಗಿ ಕೌಟುಂಬಿಕ ಕಲಹಗಳು ಕಾಣಿಸಿಕೊಂಡಿಲ್ಲ.
ಹಿಂದೆ 25 ಎಕರೆ ಮಾತ್ರ ಇದ್ದ ಜಮೀನು ಇದೀಗ 80 ಎಕರೆ ಆಗಿದೆ. ಇದರಲ್ಲಿ ಸುಮಾರು 70 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯೇ ಪ್ರಧಾನ ಕೃಷಿ. ದ್ರಾಕ್ಷಿ ಬೆಳೆಗೆ ನೀರು ಹೊಂದಿಸಿಕೊಳ್ಳಲು ಇವರು ಸರ್ಕಾರದ ನೆರವಿಲ್ಲದೇ ದೊಡ್ಡ ದೊಡ್ಡ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡಿದ್ದಾರೆ. 80 ಎಕರೆ ಜಮೀನು 8 ಕಡೆ ಹಂಚಿ ಹೋಗಿದೆ. ಆದರೆ ಒಂದು ಜಮೀನಿನಲ್ಲಿ ನಿರ್ಮಿಸಿರುವ ದೊಡ್ಡ ಕೃಷಿ ಹೊಂಡದಿಂದಲೇ ಎಲ್ಲ ಜಮೀನಿಗೂ ಪೈಪ್ಲೈನ್ ಸಂಪರ್ಕ ಕಲ್ಪಿಸಿಕೊಂಡು ನೀರು ಹರಿಸಲಾಗುತ್ತಿದೆ. 3 ಟ್ರಾÂಕ್ಟರ್, 4 ದ್ವಿಚಕ್ರ ವಾಹನ ಹೊಂದಿರುವ ಈ ಕುಟುಂಬ, ಒಣ ದ್ರಾಕ್ಷಿ ಮಾಡುವ ಘಟಕಗಳನ್ನು ತೋಟಗಳಲ್ಲಿಯೇ ಮಾಡಿಕೊಂಡಿದೆ. ಗುಣಮಟ್ಟದ ಒಣದ್ರಾಕ್ಷಿ ವಿಂಗಡಣೆಗೆ ಸ್ವಂತಕ್ಕೆ ಗ್ರೇಡಿಂಗ್ ಮಶಿನ್ ಹೊಂದಿದ್ದಾರೆ. 8 ಎಮ್ಮೆ, 2 ಆಕಳಿವೆ. ನಿರ್ವಹಣೆಗೆ ಒಬ್ಬ ಕಾರ್ಮಿಕನನ್ನು ನೇಮಿಸಿಕೊಳ್ಳಲಾಗಿದೆ. ಮನೆಯಲ್ಲಿರುವ ಜನರಿಗೆ ಹಾಲು, ಮೊಸರು, ಮಜ್ಜಿಗೆ ಸಾಕಾಗುವುದಿಲ್ಲ. ಹೀಗಾಗಿ ಹೈನು ಮಾರುವುದಿಲ್ಲ.
ಪರಮಾನಂದನಿಗೆ ಮನೆ ಜವಾಬ್ದಾರಿ:
ಶಿಕ್ಷಣದಿಂದ ದೂರ ಇರುವ ಈ ಕುಟುಂಬದಲ್ಲಿ ಹಾಜಪ್ಪ ಅವರ ಕೊನೆ ಮಗ ಪರಮಾನಂದ ಮಾತ್ರ ಕಾಲೇಜು ಮೆಟ್ಟಿಲೇರಿ ಪಿಯುಸಿ ಪಾಸಾಗಿದ್ದೆ ಈ ಕುಟುಂಬದ ದೊಡ್ಡ ಮಟ್ಟದ ಶೈಕ್ಷಣಿಕ ಪದವಿ! ಹೀಗಾಗಿ ಪರಮಾನಂದ ಈ ಕುಟುಂಬದ ಅರ್ಥ ವ್ಯವಸ್ಥೆಯ ನಿರ್ವಹಣೆ ಮಾಡುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಕುಟುಂಬದ ಮಕ್ಕಳು, ಮೊಮ್ಮಕ್ಕಳು ಶಾಲೆಗಳಿಗೆ ಹೋಗುತ್ತಿದ್ದಾರೆ.
ಕೃಷಿ ಹೊರತಾಗಿ ಈ ಕುಟುಂಬದವರಿಗೆ ಅಷ್ಟಾಗಿ ಹೊರಪ್ರಪಂಚದ ಕುರಿತು ಅರಿವೇ ಇಲ್ಲ. ಚಹಾ ಈ ಮನೆಗೆ ಇತ್ತೀಚಿನ ವರ್ಷಗಳಲ್ಲಿ ಪರಿಚಯವಾಗಿದೆ. ಮದ್ಯ ವ್ಯಸನ, ಬೀಡಿ, ಸಿಗರೇಟ್, ಗುಟ್ಕಾದಂತಹ ವ್ಯಸನಗಳು ಈ ಕುಟುಂಬದ ಯಾವೊಬ್ಬ ಸದಸ್ಯರನ್ನೂ ಆವರಿಸಿಲ್ಲ. ಇತ್ತೀಚೆಗಷ್ಟೆ ಟೀವಿ ಬಂದಿದೆ. ಈ ಕುಟುಂಬದ ಹಿರಿಯರಲ್ಲಿ ಬಹುತೇಕರಿಗೆ ಚಿತ್ರಮಂದಿರಗಳ ದರ್ಶನವೇ ಆಗಿಲ್ಲ.
ಅಡುಗೆ ಕಾರ್ಯ:
ಮಹಿಳೆಯರು ನಿತ್ಯದ ಸರದಿಯಂತೆ ರೊಟ್ಟಿ ಮಾಡಿದರೆ, ಉಳಿದವರು ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ಹಾಲು ಹಿಂಡುವಂತಹ ಕೆಲಸ ಮಾಡುತ್ತಾರೆ. ಕೃಷಿ ಕೆಲಸಕ್ಕೆ ಹೋಗುವುದಿಲ್ಲ. ಈ ಮನೆಯಲ್ಲಿ ಈಗಲೂ ಕಟ್ಟಿಗೆಯಿಂದಲೇ ಅಡುಗೆ ಮಾಡಲಾಗುತ್ತದೆ.
ಜೋಳ, ತೊಗರಿ, ಕಡಲೆ, ಶೇಂಗಾ ಹೀಗೆ ಕುಟುಂಬಕ್ಕೆ ಬೇಕಾಗುವಷ್ಟು ಆಹಾರ ಧಾನ್ಯಗಳನ್ನು ಜಮೀನಿನಲ್ಲೇ ಬೆಳೆಯಲಾಗುತ್ತದೆ. ಆದರೂ ಅಡುಗೆ ಎಣ್ಣೆ ಸೇರಿ ಇತರೆ ವಸ್ತುಗಳ ಖರೀದಿಗೆ ಮಾಸಿಕ ಎರಡು ಬಾರಿ ಮಾಡುವ ಸಂತೆಯ ವೆಚ್ಚ 40 ಸಾವಿರ ರೂ. ಮೀರುತ್ತದೆ.
………………………………………………………………………………………………………….
ಏಕತೆ ಹಾಗೂ ವಂಚನೆ ರಹಿತವಾಗಿ ವಿಶ್ವಾಸದಿಂದ ಜೀವನ ನಡೆಸುತ್ತಿದ್ದೇವೆ. ನಮ್ಮಲ್ಲಿ ಯಾರಿಗೂ ಪ್ರತ್ಯೇಕವಾಗಿ ಬಾಳಬೇಕು ಎಂಬ ಭಾವನೆ ಮೂಡದಂತೆ ಎಲ್ಲರೂ ಪರಸ್ಪರ ಹೊಂದಾಣಿಕೆ ಜೀವನ ನಡೆಸಿದ್ದೇವೆ. ಶಿಕ್ಷಣಕ್ಕಿಂತ ನಮ್ಮ ಕುಟುಂಬಕ್ಕೆ ಕೃಷಿಯೇ ಉಸಿರು-ಆಸರೆ.
– ಬಸವಾನಂದ ಕುಂಬಾರ
ಅವಿಭಕ್ತ ಕುಂಬಾರ ಕುಟುಂಬದ ಹಿರಿಯ ಸದಸ್ಯ
(ಕೃಪೆ : ಉದಯವಾಣಿ )