ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) :ಮಂಗಳೂರಿನ ಎಂಆರ್’ಪಿಎಲ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕುಲಾಲ ಸಮುದಾಯದ ಸಮಾನ ಮನಸ್ಕ ಉದ್ಯೋಗಿಗಳ ಸಮಾಜ ಸೇವಾ ಸಂಘಟನೆ ಅಮೂಲ್ಯ ಸೇವಾ ಪ್ರತಿಷ್ಠಾನದ ವತಿಯಿಂದ 2018-19ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿಗಳು ಮತ್ತು ಹೆತ್ತವರಿಗಾಗಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಕಾರ್ಯಕ್ರಮ ಇತ್ತೀಚೆಗೆ ತಡಂಬೈಲ್ ಕುಲಾಲ ಸಭಾಭವನದಲ್ಲಿ ನಡೆಯಿತು.
ಹತ್ತನೇ ತರಗತಿಯಲ್ಲಿ ಅತ್ಯುತ್ತಮ ಅಂಕ ಗಳಿಸಿರುವ ಕುಲಾಲ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಹಾಗೂ ಕ್ರೀಡಾ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಮೂಲ್ಯ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಪೂರ್ವಾಹ್ನ 9:30 ರಿಂದ ಪ್ರಸಿದ್ಧ ಶಿಕ್ಷಣ ತಜ್ಞ ಡಾ.ಪುಷ್ಪರಾಜ ಬದಿಯಡ್ಕ ಅವರಿಂದ ವಿದ್ಯಾರ್ಥಿಗಳು ಮತ್ತು ಹೆತ್ತವರಿಗಾಗಿ ವ್ಯಕ್ತಿತ್ವ ವಿಕಸನ ಹಾಗೂ ಶಿಕ್ಷಣ, ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ ಎಂ ಕುಲಾಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಲಾಲ್ ವರ್ಲ್ಡ್ ಡಾಟ್ ಕಾಮ್ ನ ಸಂಸ್ಥಾಪಕ ದಿನೇಶ್ ಬಂಗೇರ ಇರ್ವತ್ತೂರು, ಹಳೆಯಂಗಡಿ ಸರಕಾರಿ ಪಿಯು ಕಾಲೇಜಿನ ಪ್ರಾಂಶುಪಾಲೆ ಜ್ಯೋತಿ ಚೇಳಾಯರು, ಸುರತ್ಕಲ್ ಕುಲಾಲ ಸಂಘದ ಅಧ್ಯಕ್ಷ ಸುಧಾಕರ ಕುಲಾಲ್, ಕುಲಶೇಖರ ವೀರ ನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎ. ದಾಮೋದರ್ ಮೊದಲಾದವರು ಉಪಸ್ಥಿತರಿದ್ದು, ಅಮೂಲ್ಯ ಪ್ರತಿಷ್ಠಾನದ ಸಮಾಜಮುಖಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.