ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮೋಕೆದ ಸಿಂಗಾರಿ….ಪಕ್ಕಿಲು ಮೂಜಿ.. ಹೀಗೆ ತುಳು ಭಾಷೆಯ ಎವರ್ ಗ್ರೀನ್ ಹಾಡುಗಳ ರಚನೆಕಾರ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಸೀತಾರಾಮ್ ಕುಲಾಲ್ (78) ರವಿವಾರ ನಿಧನರಾದರು.
ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಸೀತಾರಾಮ್ ಕುಲಾಲ್ ಅವರು ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಕುಲಾಲ್ ಅವರು ರಚಿಸಿರುವ ಮೋಕೆದ ಸಿಂಗಾರಿ, ಪಕ್ಕಿಲು ಮೂಜಿ ಒಂಜೇ ಗೂಡ್ ಡ್, ಬ್ರಹ್ಮನ ಬರವು ಮಾಜಂದೆ ಪೋಂಡಾ, ಡಿಂಗಿರಿ ಮಾಮ ಡಿಂಗಿರಿ ಮಾಮ, ಪರಶುರಾಮನ ಕುಡರಿಗ್ ಪುಟಿನ ತುಳುನಾಡ್, ಅಪ್ಪೆ ಮನಸ್ ಬಂಗಾರ ಮುಂತಾದ ಹಾಡುಗಳು ತುಳು ಚಿತ್ರರಂಗದ ಎವರ್ ಗ್ರೀನ್ ಹಾಡುಗಳು ಎಂದೆನಿಸಿಕೊಂಡಿವೆ.
ʼಪಗೆತ ಪುಗೆʼ, ʼಉಡಲ್ದ ತುಡರ್ʼ, ʼಕಾಸ್ ದಾಲ್ ಕಂಡನಿʼ ಮುಂತಾದ ಚಿತ್ರಗಳಿಗೆ ಸಾಹಿತ್ಯ ಬರೆದಿದ್ದ ಸೀತಾರಾಮ ಕುಲಾಲರು ʼಮಣ್ಣ್ ದ ಮಗಲ್ ಅಬ್ಬಕ್ಕʼ ಮತ್ತು ʼ ಧರ್ಮೊಗು ಧರ್ಮದ ಸವಾಲ್ʼ ಕೃತಿಗಳನ್ನು ರಚಿಸಿದ್ದರು.
ರಂಗಕಲಾ ಭೂಷಣʼ, ತುಳು ರತ್ನ, ಪೆರ್ಮೆದ ತುಳುವೆ, ತುಳು ಸಿರಿ, ತುಳು ಸಾಹಿತ್ಯ ರತ್ನಾಕರ, ತೌಳವ ಪ್ರಶಸ್ತಿ ಮುಂತಾದ ಗೌರವಗಳಿಗೆ ಪಾತ್ರರಾಗಿದ್ದ ಕುಲಾಲರು ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.
1970ರ ದಶಕದಲ್ಲಿ ತುಳು ಸಿನಿಮಾಗಳಿಗೆ ಗೀತೆಗಳನ್ನು ಬರೆದಿದ್ದು, ಪಿ.ಬಿ.ಶ್ರೀನಿವಾಸ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಜೇಸುದಾಸ್, ಎಸ್.ಜಾನಕಿ ಕಂಠಸಿರಿಯಲ್ಲಿ ಖ್ಯಾತಿ ಪಡೆದಿದ್ದವು. 1973ರಲ್ಲಿ ತೆರೆಕಂಡ ‘ಉಡಲ್ದ ತುಡರ್’ ಚಿತ್ರಕಥೆಗೆ ಪ್ರಶಸ್ತಿ ಪಡೆದಿದ್ದರು. ಕನ್ನಡ–ತುಳು ಸಿನಿಮಾ ಮತ್ತು ನಾಟಕಗಳಿಗೆ 350ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ್ದರು. 69 ನಾಟಕ ಹಾಗೂ ಸಿನಿಮಾಗಳಿಗೆ (ಗೀತೆ, ಕಥೆ, ಚಿತ್ರಕತೆ, ಸಂಭಾಷಣೆ) ಸಾಹಿತ್ಯಿಕ ಕೊಡುಗೆ ನೀಡಿದ್ದರು. ಬಂಟ್ವಾಳ ತಾಲೂಕಿನ ಕೊಲ್ನಾಡು ಎಂಬ ಪುಟ್ಟ ಗ್ರಾಮದಲ್ಲಿ ಎಂ ಕಾಂತಪ್ಪ ಮಾಸ್ತರ್ ಮತ್ತು ದೇವಕಿ ದಂಪತಿಯ ಸುಪುತ್ರನಾಗಿ ೧೯೪೦ರಲ್ಲಿ ಜನಿಸಿದ ಸೀತಾರಾಮ್ ಕುಲಾಲ್ ಎಳವೆಯಿಂದಲೂ ನಾಟಕ ಸಾಹಿತ್ಯದ ಕೃಷಿಯನ್ನು ನಡೆಸುತ್ತಾ ಬಂದವರು.