ಆರೂರು ಗ್ರಾಮ ಪಂಚಾಯತ್ ವಿಶೇಷ
ಬ್ರಹ್ಮಾವರ: ಹೊಸದಾಗಿ ಅಸ್ತಿತ್ವಕ್ಕೆ ಬಂದ ಆರೂರು ಗ್ರಾಮ ಪಂಚಾಯಿತಿಯ ಹೊಸ ಆಡಳಿತದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕುಲಾಲ್ ಸಮಾಜದ ವ್ಯಕ್ತಿಗಳು ಆಯ್ಕೆಯಾಗಿದ್ದು, ಹೊಸ ಪಂಚಾಯಿತಿ, ಹೊಸ ಆಡಳಿತ, ಅಪಾರ ನಿರೀಕ್ಷೆಯಲ್ಲಿರುವ ಜನತೆಗೆ ಕುತೂಹಲ ಮೂಡಿಸಿದೆ.
2989.92 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ಈ ಗ್ರಾಮ 2011ರ ಜನಗಣತಿ ಪ್ರಕಾರ ಒಟ್ಟು 3,609 ಜನಸಂಖ್ಯೆಯನ್ನು ಹೊಂದಿತ್ತು. ಇದರಲ್ಲಿ 1,841 ಮಹಿಳೆಯರು ಮತ್ತು 1,768 ಪುರುಷರು. ಈ ಮೊದಲು ಕೇವಲ 2 ವಾರ್ಡ್ಗಳನ್ನು ಹೊಂದಿದ್ದ ಈ ಪಂಚಾಯಿತ್ ದೀಗ ಹೊಸ ಪಂಚಾಯಿತಿಯಾಗಿ ಬದಲಾವಣೆ ಆಗಿ 4 ವಾರ್ಡ್ಗಳನ್ನು ಹೊಂದಿದೆ. 10 ಸದಸ್ಯ ಬಲದ ಈ ನೂತನ ಪಂಚಾಯಿತ್ ಇದೀಗ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಅಧಿಕಾರದಲ್ಲಿದ್ದು, (8 ಬಿಜೆಪಿ ಬೆಂಬಲಿತ, 2 ಕಾಂಗ್ರೆಸ್ ಬೆಂಬಲಿತ) ರಾಜೀವ ಕುಲಾಲ್ ಅಧ್ಯಕ್ಷರಾಗಿ, ಗಣೇಶ ಕುಲಾಲ್ ಉಪಾಧ್ಯಕ್ಷ ರಾಗಿ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ.
ಅಭಿವೃದ್ಧಿ ಕನಸು: ರಾಜೀವ ಕುಲಾಲರ ನೇತೃತ್ವದಲ್ಲಿ ಐದು ವರ್ಷಗಳ ಕಾಲ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸದಸ್ಯರು ಅನೇಕ ಅಭಿವೃದ್ಧಿ ಕನಸು ಕಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಪ್ರಥಮವಾಗಿ ಗ್ರಾಮದಲ್ಲಿಯೇ ಗ್ರಾಮ ಪಂಚಾಯಿತಿಯ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಗ್ರಾಮ ಲೆಕ್ಕಿಗರ ಕಚೇರಿ, ಸಭಾಭವನ, ಗ್ರಂಥಾಲಯ ಮತ್ತು ವಿವಿಧ ಇಲಾಖೆಗಳ ಕಚೇರಿಗೆ ಅನುಕೂಲವಾಗು ವಂತೆ ಸುಮಾರು 1ಎಕರೆ ವಿಸ್ತೀರ್ಣದ ಜಾಗಕ್ಕಾಗಿ ಹುಡುಕಾಟ ಮಾಡಲಾಗುತ್ತಿದೆ.
ಇದಲ್ಲದೇ ನಿವೇಶನ ರಹಿತರಿಗೆ ನಿವೇಶನವನ್ನು ನೀಡಲು ಈಗಾಗಲೇ 2.5 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಇದನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ ನಿರ್ಮಾಣ, ವಿದ್ಯುತ್ ಸಂಪರ್ಕ, ಸಂಪರ್ಕ ರಸ್ತೆಗಳ ನಿರ್ಮಾಣ ಮಾಡಲು ಹೆಚ್ಚಿನ ಆದ್ಯತೆ ನೀಡಲಾಗುವುದು. ಈಗಾಗಲೇ ಗ್ರಾಮದಲ್ಲಿ ಸ್ಮಶಾನ ರಚನೆಗೆ ಜಾಗವನ್ನು ಗೊತ್ತುಪಡಿಸಲಾಗಿದೆ. 14ನೇ ಹಣಕಾಸು ಆಯೋಗದ ಅನುದಾನ ಮತ್ತು ರಾಜ್ಯದ ಶಾಸನ ಬದ್ದ ಅನುದಾನ ಬರುವುದರಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಬೇಡಿಕೆ: ನೀಲಾವರ ಮತ್ತು ಆರೂರು ಎರಡು ಬೇರೆ ಬೇರೆಯಾಗಿ ಪಂಚಾಯಿತಿಯಾಗಿ ರೂಪುಗೊಂಡ ಕಾರಣ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಸಿಗುವಂತಾಗುತ್ತದೆ. ಇದರ ಕೇಂದ್ರಸ್ಥಾನ (ಪಂಚಾಯಿತಿ ಕಚೇರಿ) ಗ್ರಾಮದಲ್ಲಿಯೇ ಆದಲ್ಲಿ ಗ್ರಾಮಸ್ಥರು ನೇರವಾಗಿ ತಮ್ಮ ಸಮಸ್ಯೆಗಳನ್ನು ಪಂಚಾಯಿತಿ ಮೂಲಕ ಪರಿಹರಿಸಿಕೊಳ್ಳಬಹುದು ಎನ್ನುವ ಅಭಿಪ್ರಾಯಗಳು ಗ್ರಾಮಸ್ಥರದ್ದು. ಇದಲ್ಲದೇ ಗ್ರಾಮದಲ್ಲಿ ಪಶು ಚಿಕಿತ್ಸಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಸುಸಜ್ಜಿತ ಮೈದಾನ, ರಂಗಮಂದಿರದ ನಿರ್ಮಾಣದೊಂದಿಗೆ ಪ್ರತ್ಯೇಕವಾದ ಗ್ರಾಮ ಲೆಕ್ಕಿಗರನ್ನು ನೀಡುವುದರೊಂದಿಗೆ ಗ್ರಾಮಸ್ಥರ ಮೂಲ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಬೇಕಾಗಿದೆ ಎನ್ನುವುದು ಗ್ರಾಮಸ್ಥರ ಬೇಡಿಕೆ.