ಪುತ್ತೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕಲೆ ಎಂಬುದು ಯಾರಿಗೆ ಒಲಿಯುತ್ತದೆ ಎಂಬುದು ಯಾರಿಗೂ ಅರಿವಿಗೆ ಇರದ ಸಂಗತಿ. ಬದುಕಿನಲ್ಲಿ ಕಲೆಯಿಂದಲೇ ನೆಲೆ ಕಂಡುಕೊಂಡವರು ಹಲವರು. ತಮ್ಮ ಬದುಕನ್ನೇ ಕಲೆಗೆ ಅರ್ಪಿಸಿದವರು ಇನ್ನೂ ಕೆಲವರು. ಮನದಲ್ಲಿ ಮೂಡಿದ ಭಾವಕ್ಕೆ ಕುಂಚದ ಮೂಲಕ ಚಿತ್ರರೂಪ ನೀಡುವುದು ಕಷ್ಟಕರವಾದರೂ ಕೂಡ, ಆ ಕಷ್ಟದ ಕೆಲಸಕ್ಕೆ ಇಷ್ಟದ ಲೇಪನಕೊಡುವವರೇ ಚಿತ್ರಕಲಾವಿದರು. ಇವರು ತಮ್ಮ ಕಲಾನೈಪುಣ್ಯದಿಂದ ಮನೋಹರ ಚಿತ್ರಗಳನ್ನು ಕುಂಚದಲ್ಲಿ ಮೂಡಿಸಬಲ್ಲರು. ಇಂತಹ ಪ್ರತಿಭಾವಂತ ಯುವ ಚಿತ್ರ ಕಲಾವಿದರಲ್ಲಿ ಅಪ್ಪಟ ಹಳ್ಳಿ ಪ್ರತಿಭೆ ಮತ್ತು ತುಂಬ ಕಷ್ಟದಿಂದ ಬೆಳೆದು ಬಂದ ಯೋಗೀಶ್ ಕಡಂದೇಲು ಕೂಡಾ ಒಬ್ಬರು.
ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ಕಡಂದೇಲು ಎಂಬಲ್ಲಿಯ ದಿ. ಅಂಗಾರ ಮೂಲ್ಯ ಮತ್ತು ಲಕ್ಷ್ಮೀ ದಂಪತಿಯ ಪುತ್ರನಾದ ಯೋಗೀಶ್ ಅವರು ವಿಶಿಷ್ಟ ಕಲಾಕೃತಿಗಳನ್ನು ರಚಿಸುವ ಮೂಲಕ ಗಮನ ಸೆಳೆದಿದ್ದು, ಚಿತ್ರಕಲೆ ಹಾಗೂಕಲಾನಿರ್ದೇಶಕನಾಗಿ ಸಾಧನೆಯ ಹಾದಿಯಲ್ಲಿದ್ದಾರೆ. ಈಗಾಗಲೇ ಇವರ ಕೈಯಲ್ಲಿ ಅರಳಿದ ಅದ್ಭುತ ಕಲಾಕೃತಿಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿ ಎಲ್ಲರ ಮೊಬೈಲ್ ನಲ್ಲೂ ಹರಿದಾಡುತ್ತಿದೆ.
ಕುಗ್ರಾಮವಾದರೂ ಪ್ರಸಿದ್ಧ ಯಕ್ಷಗಾನ ಕಲಾವಿದ ಪುರುಷೋತ್ತಮ ಭಟ್ಟರಂತಹ ಅನೇಕ ಅದ್ಭುತ ಕಲಾವಿದರನ್ನು ಕೊಟ್ಟಂತಹ ಕಡಂದೇಲು ಎಂಬ ಪ್ರದೇಶದಲ್ಲಿ ಹುಟ್ಟಿರುವ ಯೋಗೀಶ್ ಎಂಬ ಪ್ರತಿಭಾವಂತ ಬಾಲ್ಯದಿಂದಲೇ ಕಷ್ಟ ನಷ್ಟಗಳನ್ನು ಧೈರ್ಯದಿಂದ ಎದುರಿಸುತ್ತಾ, ಕಲಾ ಕ್ಷೇತ್ರದಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡವರು. ಪಾಣಾಜೆಯ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಸುಭೋದ ಪ್ರೌಢಶಾಲೆಯ ಮೆಟ್ಟಿಲು ಹತ್ತುವ ಹೊತ್ತಿದಾಗಲೇ ಯೋಗೀಶ್ ತಂದೆ ಅಕಾಲಿಕ ಮರಣಕ್ಕೆ ತುತ್ತಾಗಿ ಬಿಟ್ಟರು.
ಇದರಿಂದ ಇದ್ದ ಒಬ್ಬನೇ ಮಗ ಆರ್ಥಿಕ ಸಂಕಷ್ಟಕ್ಕೀಡಾಗಿ ಶಿಕ್ಷಣವನ್ನು ಮೊಟಕುಗೊಳಿಸಿ ಮನೆಯ ಜವಾಬ್ದಾರಿಯನ್ನು ಹೊರಬೇಕಾಯಿತು. ಕಲಿಯುವುದರಲ್ಲಿ- ಚಿತ್ರ ರಚನೆಯಲ್ಲಿ ಮುಂದಿದ್ದ ಹುಡುಗ ತನ್ನಶಾಲೆ ಕಲಿಯುವ ಕನಸನ್ನು ಬದಿಗೊತ್ತಿ ಅವರಿವರ ಮನೆಗೆ ಕೂಲಿ ಕೆಲಸಕ್ಕೆ ಹೋಗುವ ಅನಿವಾರ್ಯತೆ ಎದುರಾಯಿತು. ಹೀಗೆ ಹಗಲು ಕೂಲಿ ಕೆಲಸ ಮಾಡುತ್ತಾ ರಾತ್ರಿ ತನ್ನ ಕಲ್ಪನೆಯಲ್ಲಿ ಮೂಡಿದ ಭಾವಕ್ಕೆ ಕುಂಚದಲ್ಲಿ ರೂಪ ಮೂಡಿಸುತ್ತಾ ಕಾಲ ಕಳೆಯುತ್ತಿದ್ದರು ಯೋಗೀಶ್. ಹೀಗೆ ಐದು ವರ್ಷ ಕಳೆಯಿತು. ತನಗಿನ್ನು ಶಾಲೆ ಕಲಿಯುವ ಯೋಗವಿಲ್ಲ ಎಂದುಕೊಂಡಿದ್ದ ಯೋಗೀಶನ ಬದುಕಿನ ಚಿತ್ರಣವನ್ನು ತಾನು ಬಿಡಿಸಿದ್ದ ಚಿತ್ರವೇ ಬದಲಿಸಿ ಬಿಟ್ಟಿತು. ಅದೊಂದು ದಿನ ತಾನು ಕಲಿತ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯೊಬ್ಬನಿಗೆ ಚಿತ್ರವೊಂದನ್ನು ಬಿಡಿಸಿಕೊಟ್ಟಿದ್ದು ಅದು ಶಿಕ್ಷಕಿಯೊಬ್ಬರ ಕಣ್ಣಿಗೆ ಬಿದ್ದು ಕುಗ್ರಾಮವೊಂದರಲ್ಲಿ ಕಮರಿಹೋಗಲಿದ್ದ ಯೋಗೀಶರ ಕನಸುಗಳಿಗೆ ಮರುಜೀವ ನೀಡಿತು.
ಯೋಗೀಶ್ ಕೈಯಲ್ಲಿ ಅರಳಿದ ಚಿತ್ರಕಲೆಯಲ್ಲಿ ಭಿನ್ನತೆಯನ್ನು ಮತ್ತು ಅವರಲ್ಲಿರುವ ಕಲಾ ನೈಪುಣ್ಯತೆಯನ್ನು ಗುರುತಿಸಿದ ಪಾಣಾಜೆ ಸರಕಾರಿ ಶಾಲೆಯ ಶಿಕ್ಷಕಿ ಲಲಿತ ಹೆಗ್ಡೆ ಅವರು, ಕರೆದು ಮಾತನಾಡಿಸುತ್ತಾರೆ. ಅಷ್ಟೇ ಅಲ್ಲ. ಇಂತಹ ಹಳ್ಳಿಯ ಅನನ್ಯ ಪ್ರತಿಭೆಯನ್ನು ಲೋಕ ಗುರುತಿಸಬೇಕೆಂಬ ನಿಟ್ಟಿನಲ್ಲಿ ಶಿಕ್ಷಣ ಮುಂದುವರಿಸಲು ಸಲಹೆ ನೀಡುತ್ತಾರೆ. ಯೋಗೀಶ್ ನ ಉತ್ಸಾಹ ಕಂಡು ರೆಂಜ ಎಂಬಲ್ಲಿರುವ ಶ್ರೀ ಗುರು ಟುಟೋರಿಯಲ್ ನ ಸೇರಿಸುವಲ್ಲಿ ಸಹಕರಿಸುತ್ತಾರೆ. ಇಲ್ಲಿ ಅರ್ಧಕ್ಕೆ ಮೊಟಕುಗೊಳಿಸಿದ್ದ ಹೈಸ್ಕೂಲ್ ಶಿಕ್ಷಣದ ಜೊತೆಗೆ ಪಿಯೂಸಿಯನ್ನು ಶಿಕ್ಷಕ ದಂಪತಿಗಳಾದ ಮಂಜುನಾಥ್ ಹಾಗೂ ಮೀನಾಕ್ಷಿ ಅವರ ಮಾರ್ಗದರ್ಶನದಲ್ಲಿ ಮುಗಿಸುತ್ತಾರೆ.
ಮುಂದೆ ಪ್ರಕಾಶ್ ಎಂಬ ಶಿಕ್ಷಕರ ಪ್ರೇರಣೆಯಿಂದ ಮೈಸೂರಿನ ಚಿತ್ರಕಲಾ ಯುನಿವರ್ಸಿಟಿಯಲ್ಲಿ ಕಠಿಣ ಪರಿಶ್ರಮದಿಂದ ಮೂರು ವರ್ಷಗಳ ಕಾಲ ಚಿತ್ರಕಲೆಯನ್ನು ಅಭ್ಯಸಿಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗುತ್ತಾರೆ. ಅಲ್ಲಿಂದ ಯೋಗೀಶ್ವರ ಆತ್ಮವಿಶ್ವಾಸ ಹೆಚ್ಚಾಗಿದ್ದು, ಬುದುಕೇ ಅವರ ಚಿತ್ರಗಳಿಗೆ ಪ್ರೇರಣೆ. ಇವರ ಹಲವಾರು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದಲ್ಲದೆ, ಏಷ್ಯಾದ ಅತಿ ವೇಗದ ಚಿತ್ರಗಾರ ವಿಲಾಸ್ ನಾಯಕ್ ರಂಥ ಕಲಾವಿದರ ಸಖ್ಯವೂ ದೊರೆಯುವಲ್ಲಿ ಸಹಕಾರಿಯಾಗಿದೆ.
ಯೋಗೀಶ್ ರಚಿಸಿದ ಪೋಟ್ರೈಟ್ (portrait)ಗಳನ್ನು ಗಮನಿಸಿದರೆ ವ್ಹಾವ್ ಎಂದು ಉದ್ಗರಿಸದೇ ಇರಲು ಸಾಧ್ಯ ಇಲ್ಲ. ಇವರು ರಚಿಸಿರುವ ಡಾ. ವೀರೇಂದ್ರ ಹೆಗ್ಗಡೆ, ಅಂಬರೀಷ್, ರವಿಶಂಕರ್ ಗುರೂಜಿ, ಮುತ್ತಪ್ಪ ರೈ ದಂಪತಿ ಮುಂತಾದವರ ಚಿತ್ರಗಳು ಮನಸೆಳೆಯುತ್ತವೆ. ಇತ್ತೀಚೆಗೆ ರಚಿಸಿರುವ ನರೇಂದ್ರ ಮೋದಿ ಅವರ ಚಿತ್ರವಂತೂ ನೋಡುಗರನ್ನು ಮೋಡಿ ಮಾಡಿದ್ದು, ಈ ಚಿತ್ರವನ್ನು ಪ್ರಧಾನಿಗೆ ಕೈಯಾರೆ ಉಡುಗೊರೆ ನೀಡಬೇಕೆಂಬ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದಾರೆ. ತೈಲವರ್ಣವಲ್ಲದೆ, ಚುಕ್ಕಿಚಿತ್ರದಲ್ಲೂ ನೈಪುಣ್ಯತೆ ಸಾಧಿಸಿ ಚಿತ್ರಗಳಲ್ಲೇ ಮೋಡಿ ಮಾಡುವ ಈ ಪ್ರತಿಭಾವಂತ ಇದೀಗ ಚಲನಚಿತ್ರಗಳಿಗೆ ಕಲಾ ನಿರ್ದೇಶಕರಾಗುವ ಅವಕಾಶವೂ ಒದಗಿಬಂದಿದ್ದು, ‘ಪೆನ್ಸಿಲ್ ಬಾಕ್ಸ್’ ಎಂಬ ಕನ್ನಡ ಚಿತ್ರದಲ್ಲಿ ತಮ್ಮ ಪ್ರತಿಭೆ ಅನಾವರಣ ಮಾಡಲಿದ್ದಾರೆ.
`ಸೋಲೇ ಗೆಲುವಿನ ಸೋಪಾನ’ ಎಂಬುದು ಗಾದೆ ಮಾತು. ಅಂಥಾ ಸೋಲುಗಳೇ ನಮ್ಮನ್ನು ಗೆಲುವಿನೆಡೆಗೆ ಕೈ ಹಿಡಿದು ನಡೆಸುತ್ತವೆ. ತಂದೆಯ ಮರಣದ ಬಳಿಕ ತನ್ನ ಬದುಕು ಎಲ್ಲೋ ಕಳೆದುಹೋಯಿತು ಅಂದುಕೊಂಡಿದ್ದ ಈ ಯುವಕ ತನ್ನ ಭರವಸೆ, ಆತ್ಮಸ್ಥೈರ್ಯ ಕಳೆದುಕೊಳ್ಳದೆ ಮುಂದುವರಿದ ಪರಿಣಾಮ ಕಲಾದೇವತೆ ಇಂದು ಕೈವಶ ಆಗಿದ್ದಳೇನೋ ಎನ್ನುವಷ್ಟರ ಮಟ್ಟಿಗೆ ಪ್ರತಿಭೆ ಬೆಳೆದಿದೆ. ಈಗಾಗಲೇ ನೂರಾರು ಚಿತ್ರಬಿಡಿಸಿ ಸೈ ಅನಿಸಿಕೊಂಡು ಪ್ರಬುದ್ಧತೆಯ ಮೆಟ್ಟಿಲನ್ನೇರುತ್ತಾ ಬಂದಿರುವ ಯೋಗೀಶ್, ಮುಂದೊಂದು ದಿನ ನಾಡಿನ ಶ್ರೇಷ್ಠ ಚಿತ್ರ ಕಲಾವಿದನಾಗುವುದರಲ್ಲಿ ಅನುಮಾನವಿಲ್ಲ.