ನರಿಕೊಂಬುವಿನ ಶತಾಯುಷಿ ಅಜ್ಜಿ ನೀಲು ಮೂಲ್ಯರ ವಯಸ್ಸು105
ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಶತಾಯುಷಿ ಅಜ್ಜಿ. ತಲೆತುಂಬಾ ನರೆತ ಕೂದಲು..ಸುಕ್ಕುಗಟ್ಟಿದ ಚರ್ಮ..ಬಾಗಿ ಹೋದ ಬೆನ್ನು..ಅದರೂ ಜೀವನೋತ್ಸಾಹ ಮಾತ್ರ ಎಳ್ಳಷ್ಟು ಕಮ್ಮಿಯಾಗಿಲ್ಲ. ಯುವಸಮುದಾಯವನ್ನು ನಾಚಿಸುವಂತಿರುವ ಈ ಅಜ್ಜಿ ಬರೋಬ್ಬರಿ 105 ವರ್ಷ ದಾಟಿ ನೂರ ಆರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮುಖದಲ್ಲಿ ಮಂದಹಾಸ, ಅಜ್ಜಿಯ ಲವಲವಿಕೆಯನ್ನು ನೋಡಿದವರು ಅವರ ಮಾತನ್ನು ಕೇಳಿದವರು ಒಂದು ಕ್ಷಣ ದಂಗಾಗುತ್ತಾರೆ.
ಬಂಟ್ವಾಳ(ನ.೧೨,ಕುಲಾಲ್ ವರ್ಲ್ಡ್ ಡಾಟ್ ಕಾಮ್): ಇತ್ತೀಚೆಗೆ ಕೆಲವರಿಗೆ ವಯಸ್ಸು 40 ದಾಟಿತೆಂದರೆ ಬಿಪಿ-ಶುಗರ್ ಎಂಬಿತ್ಯಾದಿ ಖಾಯಿಲೆ ಬೆನ್ನುಹತ್ತಿ ಕಾಡಲು ಶುರುಮಾಡುತ್ತದೆ. ಇವರಿಗೆಲ್ಲರಿಗೂ ಮಾದರಿ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಶತಾಯುಷಿ ಅಜ್ಜಿ. ತಲೆತುಂಬಾ ನರೆತ ಕೂದಲು..ಸುಕ್ಕುಗಟ್ಟಿದ ಚರ್ಮ..ಬಾಗಿ ಹೋದ ಬೆನ್ನು..ಅದರೂ ಜೀವನೋತ್ಸಾಹ ಮಾತ್ರ ಎಳ್ಳಷ್ಟು ಕಮ್ಮಿಯಾಗಿಲ್ಲ. ಯುವಸಮುದಾಯವನ್ನು ನಾಚಿಸುವಂತಿರುವ ಈ ಅಜ್ಜಿ ಬರೋಬ್ಬರಿ 105 ವರ್ಷ ದಾಟಿ ನೂರ ಆರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮುಖದಲ್ಲಿ ಮಂದಹಾಸ, ಅಜ್ಜಿಯ ಲವಲವಿಕೆಯನ್ನು ನೋಡಿದವರು ಅವರ ಮಾತನ್ನು ಕೇಳಿದವರು ಒಂದು ಕ್ಷಣ ದಂಗಾಗುತ್ತಾರೆ. ಅಜ್ಜಿಗೆ ಇಷ್ಟೊಂದು ವರ್ಷಗಳಾದರೂ ಅವರ ಕೆಲಸ ಕಾರ್ಯಗಳು ಹಾಗೂ ಅವರ ಉತ್ಸಾಹ ಎಲ್ಲರನ್ನು ಸೆಳೆಯುತ್ತವೆ.
ಒಂದು ಶತಮಾನವನ್ನು ಪೂರೈಸಿರುವ ನರಿಕೊಂಬು ಗ್ರಾಮದ ನಾಯಿಲ ಕಾಪಿಕಾಡು ದಿವಂಗತ ರಾಮ ಮೂಲ್ಯ ಅವರ ಪತ್ನಿ ಶತಾಯುಷಿ ಶ್ರೀಮತಿ ನೀಲು ಮೂಲ್ಯ ಅವರು ಜನಿಸಿದ್ದು 1913ರಲ್ಲಿ. ಕಡುಬಡತನದ ಕುಟುಂಬದಲ್ಲಿ ಜೀವನ ಸವೆಸಿರುವ, ಇಂದಿಗೂ ತನ್ನೆಲ್ಲಾ ಕೆಲಸಗಳ ಜೊತೆ ಮನೆಯ ಸಣ್ಣ ಪುಟ್ಟ ಕೆಲಸವನ್ನು ಯಾರ ಸಹಾಯವಿಲ್ಲದೇ ನಿರ್ವಹಿಸುವ ಈ ಅಜ್ಜಿ ಇಂದಿಗೂ ಫಿಟ್ ಎಂಡ್ ಫೈನ್. ಅವರು ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳ ತಾಯಿ. ದುರದೃಷ್ಟಾವಶಾತ್ ಮೂವರು ಮಕ್ಕಳೂ ಅನಾರೋಗ್ಯದಲ್ಲಿ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ. ಮೊದಲನೆಯವರು ಪದ್ಮನಾಭ ಮೂಲ್ಯ ಅವರು ಕ್ಯಾನ್ಸರ್ ರೋಗದಿಂದ ವರ್ಷಗಳ ಹಿಂದೆ ತೀರಿಕೊಂಡರೆ ಎರಡನೆ ಮಗ ಉಮೇಶ್ ಮೂಲ್ಯ ಅವರು ಲಿವರ್ ಸಮಸ್ಯೆಯಿಂದ ಸಾವನಪ್ಪಿದ್ದರು. ಮಗಳು ಶಾರದಾ ಅವರು ಹೃದಯಘಾತದಿಂದ ತೀರಿಕೊಂಡಿದ್ದಾರೆ.
ಹಿರಿಮಗ ಪದ್ಮನಾಭ ಅವರ ಪುತ್ರ ಜಗದೀಶ್ ಅವರವರೊಂದಿಗಿದ್ದು ಖುಷಿಯಿಂದ ಜೀವನ ಕಳೆಯುತ್ತಿರುವ ನೀಲಜ್ಜಿ ಇವರು ಇಂದಿಗೂ ತನ್ನ ದಿನನಿತ್ಯದ ಚಟುವಟಿಕೆಗಳಿಗೆ ಕೈಯ್ಯಲ್ಲಿ ಊರುಗೋಲನ್ನು ಬಿಟ್ಟರೆ ಇತರ ಯಾರನ್ನೂ ಅವಲಂಬಿಸಿಲ್ಲ. ಎಂದಿನಂತೆ ಮುಂಜಾವಿನಲ್ಲೇ ಎಲ್ಲರಂತೆ ತನ್ನ ನಿತ್ಯ ಕಾರ್ಯದಲ್ಲಿ ತೊಡಗುತ್ತಾರೆ. ಅಪ್ಪಟ ಗ್ರಾಮೀಣ ಸೊಗಡಿನ ಜೀವನಶೈಲಿಯೊಂದಿಗೆ ಜೀವನ ಸಾಗಿಸುತ್ತಿರುವ ಅಜ್ಜಿಯು ಆಧುನಿಕ ಆಹಾರ ಪದ್ದತಿಯಿಂದ ಈಗಲೂ ದೂರ. ಪ್ರಮುಖವಾಗಿ ತಾನು ಸೇವಿಸುವ ದಿನನಿತ್ಯದ ಆಹಾರವನ್ನು ಇಂದಿಗೂ ಮಣ್ಣಿನ ಮಡಿಕೆ ಕುಡಿಕೆಯಲ್ಲಿ ಸಿದ್ದಪಡಿಸಿಕೊಳ್ಳುವ ಹವ್ಯಾಸ ಮುಂದುವರೆಸಿದ್ದಾರೆ. ಹಿತಮಿತವಾದ ಆಹಾರ ಮತ್ತು ಕಠಿಣ ಪರಿಶ್ರಮದ ಜೀವನ ವಿಧಾನವೇ ಅವರ ಶತಾಯುಷ್ಯದ ಗುಟ್ಟಾಗಿದೆ.
ಶತಾಯುಷಿಯಾದರೂ ನೀಲಜ್ಜಿಯ ಮಾತಿನಲ್ಲಿ ತೊದಲಿಲ್ಲ.. ಮರೆಯೂ ಇನ್ನೂ ಅವರಿಸಿಲ್ಲ.. ಮನೆಮಂದಿಯಿಂದ ಗ್ರಾಮದ ಜನತೆಯವರೆಗೆ ಅಜ್ಜಿ ಎಂದರೆ ಅಚ್ಚುಮೆಚ್ಚು. ಮನೆಯವರಿಗೆ ಹೊರೆಯಾಗದೇ ತನ್ನ ಕೆಲಸವನ್ನು ತಾನೇ ನಿರ್ವಹಿಸಿಕೊಳ್ಳುತ್ತಿರುವ ಈ ಶತಾಯುಷಿ ಅಜ್ಜಿ ನರಿಕೊಂಬು ಗ್ರಾಮದ ಹೆಮ್ಮೆಯ ಅಜ್ಜಿಯಾಗಿದ್ದಾರೆ.


