ಉಡುಪಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ಇದು ಕೇವಲ ಅಂಕಗಳ ಪಟ್ಟಿಯಲ್ಲ, ಬಡತನದ ಕತ್ತಲನ್ನು ಸೀಳಿ ಬಂದ ಛಲಗಾತಿಯೊಬ್ಬಳ ವಿಜಯಗಾಥೆ..
ಶಿರ್ವದ ಹಿಂದೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ಇಂದು ಇಡೀ ಜಿಲ್ಲೆ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾಳೆ. ಕೂಲಿ ಕಾರ್ಮಿಕರಾದ ಕಾಪು ಕಳತ್ತೂರು ಚಂದ್ರನಗರ ನಿವಾಸಿ ಸತೀಶ್ ಮೂಲ್ಯ ಮತ್ತು ರತ್ನ ಮೂಲ್ಯ ದಂಪತಿಯ ಈ ಪುತ್ರಿ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 595 ಅಂಕಗಳನ್ನು ಗಳಿಸಿ, ಐದು ವಿಷಯಗಳಲ್ಲಿ(ಕನ್ನಡ, ಎಕನಾಮಿಕ್ಸ್, ಬಿಸಿನೆಸ್ ಸ್ಟಡೀಸ್, ಅಕೌಂಟೆನ್ಸಿ, ಕಂಪ್ಯೂಟರ್ ಸೈನ್ಸ್ ) ನೂರಕ್ಕೆ ನೂರು ಅಂಕ ಪಡೆಯುವ ಮೂಲಕ ಅಸಾಧಾರಣ ಸಾಧನೆ ಮೆರೆದಿದ್ದಾರೆ.
ಈ ಮಿನುಗುವ ಅಂಕಗಳ ಹಿಂದೆ ಮೌನವಾಗಿ ಅಡಗಿರುವ ಕಷ್ಟದ ಕಥೆ ಮನಕಲಕುವಂತಿದೆ. ಮಗಳಿಗೆ ಶಿಕ್ಷಣ ನೀಡಲು ಅವಳ ಹೆತ್ತವರು ದಿನವಿಡೀ ಬಿಸಿಲಿನಲ್ಲಿ ಬೆವರು ಸುರಿಸುತ್ತಿದ್ದರೆ, ಮಗಳು ತನ್ನ ಓದಿನ ಹೊರೆ ಹೆತ್ತವರ ಮೇಲೆ ಬೀಳಬಾರದೆಂದು ರಜಾ ದಿನಗಳಲ್ಲಿ ಕಾಪುವಿನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. “ಹೆಚ್ಚು ಅಂಕ ಗಳಿಸಿದರೆ ವಿದ್ಯಾರ್ಥಿವೇತನ ಪಡೆಯಬಹುದು, ಆ ಮೂಲಕ ಹೆತ್ತವರಿಗೆ ಆರ್ಥಿಕವಾಗಿ ನೆರವಾಗಬಹುದು” ಎನ್ನುವ ಆಕೆಯ ಮುಗ್ಧ ಹಾಗೂ ದೃಢ ಸಂಕಲ್ಪವೇ ಇಂದು ಈ ಯಶಸ್ಸಿಗೆ ಕಾರಣವಾಗಿದೆ.
ಲೆಕ್ಕವಿಲ್ಲದಷ್ಟು ಸವಾಲುಗಳನ್ನು ದಾಟಿ ಬಂದಿರುವ ಕಾವ್ಯಳಿಗೆ ಈಗ ಲೆಕ್ಕಪರಿಶೋಧಕಿ (Chartered Accountant) ಆಗಬೇಕೆಂಬ ದೊಡ್ಡ ಕನಸಿದೆ. ಆಕೆಯ ಸಾಧನೆಯನ್ನು ಮೆಚ್ಚಿ ಜ್ಞಾನ ಚೇತನ ಎಜುಕೇಶನ್ ಟ್ರಸ್ಟ್ನ ಪದಾಧಿಕಾರಿಗಳು ಮತ್ತು ಕಾಲೇಜಿನ ಪ್ರಾಂಶುಪಾಲರು ಆಕೆಯ ಪುಟ್ಟ ಮನೆಗೆ ಭೇಟಿ ನೀಡಿ ಸನ್ಮಾನಿಸಿದ್ದಾರೆ. ಒಬ್ಬಉಪನ್ಯಾಸಕಿ ಕಾವ್ಯಳ ಸಾಧನೆ ಮೆಚ್ಚಿ ನೀಡಿದ ನಗದು ಪುರಸ್ಕಾರವು ಆಕೆಯ ಮುಂದಿನ ಉನ್ನತ ವಿದ್ಯಾಭ್ಯಾಸದ ಹಾದಿಗೆ ಆಶೀರ್ವಾದದಂತಿದೆ. ಬಡತನವೆಂಬುದು ಸಾಧನೆಗೆ ಅಡ್ಡಿಯಲ್ಲ, ಬದಲಾಗಿ ಅದು ಛಲವನ್ನು ಹೆಚ್ಚಿಸುವ ಇಂಧನ ಎಂಬುದನ್ನು ಕಾವ್ಯ ಸಾಬೀತುಪಡಿಸಿದ್ದಾರೆ. ಕೂಲಿ ಕಾರ್ಮಿಕನ ಮನೆಯ ಈ ಕುವರಿ ಇಂದು ನಾಡಿನ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.


