`ಲಾಭಕ್ಕಿಂತ ನೈತಿಕತೆಗೆ ಬೆಲೆ ನೀಡಿದ ಹಿರಿಯ ದಂಪತಿ’
ಉಡುಪಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ಉಡುಪಿಯ ಗಿಜಿಗುಟ್ಟುವ ಕಲ್ಸಂಕ ಜಂಕ್ಷನ್. ಅಲ್ಲಿನ ಟೈಮ್ ಸ್ಕ್ವೇರ್ ಮಾಲ್ನ ವೈಭವದ ಮುಂದೆ ಒಂದು ಪುಟ್ಟ ಗೂಡಂಗಡಿ ಇದೆ. ಆ ಬೃಹತ್ ಕಟ್ಟಡದ ಅಬ್ಬರದ ನಡುವೆ, ಕಳೆದ 47 ವರ್ಷಗಳಿಂದ ಈ ಪುಟ್ಟ ಅಂಗಡಿಯೇ ಬದುಕಿನ ಆಸರೆಯಾಗಿ ನಗುನಗುತ್ತಾ ಕುಳಿತಿರುವವರು 72 ವರ್ಷದ ದಾಮೋದರ ಮೂಲ್ಯ ಮತ್ತು 68 ವರ್ಷದ ಸುಶೀಲಾ ಮೂಲ್ಯ ದಂಪತಿ. ಎದುರಿಗಿರುವ ದೈತ್ಯ ಮಾಲ್ ನೋಡಿ “ನಮ್ಮ ವ್ಯಾಪಾರ ಏನಾದೀತು?” ಎಂಬ ಕಿಂಚಿತ್ತೂ ಅಳುಕಿಲ್ಲದೆ, ಇಂದಿಗೂ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡಿರುವ ಇವರನ್ನು ಕಂಡರೆ ಯಾರಿಗಾದರೂ ಒಮ್ಮೆ ಗೌರವದಿಂದ ತಲೆಬಾಗಬೇಕು ಎನಿಸುತ್ತದೆ.
ಇಲ್ಲಿ ಕೇವಲ ಬಾಯಾರಿಕೆಗೆ ಎಳನೀರು, ಹಣ್ಣುಗಳಷ್ಟೇ ಸಿಗುವುದಿಲ್ಲ; ಅದಕ್ಕಿಂತ ಮಿಗಿಲಾದ ಒಂದು ಸತ್ಯವಿದೆ. ಇವರ ಅಂಗಡಿಯಲ್ಲಿ “ಇಲ್ಲಿ ಸಿಗರೇಟು, ಗುಟ್ಕಾ, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ” ಎಂಬ ಫಲಕ ಎದ್ದು ಕಾಣುತ್ತದೆ. ಅತಿಯಾದ ಲಾಭ ತಂದುಕೊಡುವ ಈ ಪದಾರ್ಥಗಳನ್ನು ಇವರು ಯಾಕೆ ಮಾರುವುದಿಲ್ಲ ಎಂದು ಕೇಳಿದರೆ, ದಾಮೋದರ ಅವರು ಭಾವುಕರಾಗುತ್ತಾರೆ. “ಒಂದು ಕಾಲದಲ್ಲಿ ನಾನು ಸಿಕ್ಕಾಪಟ್ಟೆ ಬೀಡಿ ಸೇದುತ್ತಿದ್ದೆ. ನಡೆಯಲೂ ಆಗದಷ್ಟು ದಮ್ಮು ಹತ್ತುತ್ತಿತ್ತು. ಆಗ ಟಿವಿಯಲ್ಲಿ ಬರುವ ಜಾಹೀರಾತು ನೋಡಿ ನನ್ನ ಮಗಳು, ‘ಪಪ್ಪಾ, ಹೀಗೆಯೇ ಬೀಡಿ ಸೇದುತ್ತಿದ್ದರೆ ನೀವು ನಮ್ಮನ್ನು ಬಿಟ್ಟು ಬೇಗ ಹೋಗ್ತೀರಾ.. ದಯವಿಟ್ಟು ಇದನ್ನು ಬಿಟ್ಟುಬಿಡಿ’ ಎಂದು ಕಣ್ಣೀರು ಹಾಕಿದಳು. ಮಗಳ ಆ ಮಾತು ನನ್ನ ಎದೆಗೆ ನಾಟಿತು. ಅಂದೇ ಆ ಕ್ಷಣವೇ ಕೈಯಲ್ಲಿದ್ದ ಬೀಡಿ ಎಸೆದೆ, ಇವತ್ತಿನವರೆಗೂ ಮುಟ್ಟಿಲ್ಲ. ಅಷ್ಟೇ ಅಲ್ಲ, ಇತರರ ಜೀವನವನ್ನೂ ಹಾಳುಮಾಡುವ ಇಂತಹ ವಿಷದ ವಸ್ತುಗಳನ್ನು ನನ್ನ ಅಂಗಡಿಯಲ್ಲಿಟ್ಟು ಲಾಭ ಮಾಡಲಾರೆ” ಎಂದು ಅವರು ಹೇಳುವಾಗ ಅಲ್ಲಿ ಅವರ ಮಗಳ ಮೇಲಿನ ಪ್ರೀತಿ ಮತ್ತು ಸಮಾಜದ ಮೇಲಿನ ಕಾಳಜಿ ಎದ್ದು ಕಾಣುತ್ತದೆ.
ಇನ್ನೊಂದು ಹೃದಯಸ್ಪರ್ಶಿ ವಿಷಯವೆಂದರೆ, ಈ ಹಿರಿಯರಿಗೆ ಇಂದಿನ ಡಿಜಿಟಲ್ ಜಗತ್ತಿನ ಫೋನ್ ಪೇ, ಗೂಗಲ್ ಪೇಗಳ ಅರಿವಿಲ್ಲ. ಸ್ಮಾರ್ಟ್ಫೋನ್ ಕೂಡ ಅವರ ಬಳಿಯಿಲ್ಲ. ಆದರೆ ಗ್ರಾಹಕರಿಗಾಗಿ ಸ್ಥಳೀಯ ರಿಕ್ಷಾ ಚಾಲಕ ಮನೋಹರ್ ಶೆಟ್ಟಿಗಾರ್ ಎಂಬುವರು ತಮ್ಮದೇ ಆದ ಯುಪಿಐ ಸ್ಕ್ಯಾನರ್ ನೀಡಿ ಸಹಾಯ ಮಾಡುತ್ತಿದ್ದಾರೆ. ಪ್ರತಿ ದಿನ ಸಂಜೆ ಆ ಖಾತೆಗೆ ಬಂದ ಹಣವನ್ನು ಇವರಿಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಈ ನಂಬಿಕೆ ಮತ್ತು ಪ್ರೀತಿಯ ನಡುವೆ ನಡೆಯುವ ವ್ಯವಹಾರವೇ ನಿಜವಾದ ಶ್ರೀಮಂತಿಕೆ.
ವಯಸ್ಸು ಎಪ್ಪತ್ತರ ಹತ್ತಿರವಿದ್ದರೂ, ಮಗಳ ಮಾತಿಗೆ ಬೆಲೆ ನೀಡಿ ಕೆಟ್ಟ ಹವ್ಯಾಸ ಬಿಟ್ಟು, ಇತರರಿಗೂ ಮಾದರಿಯಾಗಿ ಆತ್ಮಗೌರವದಿಂದ ಬದುಕುತ್ತಿರುವ ಈ ದಂಪತಿಗಳ ಬದುಕು ನಮಗೆಲ್ಲ ಸ್ಫೂರ್ತಿ. ಇನ್ನೊಮ್ಮೆ ಕಲ್ಸಂಕದ ಬಳಿ ಹೋದರೆ, ಈ ಪುಟ್ಟ ಅಂಗಡಿಯಲ್ಲಿ ಒಂದು ಎಳನೀರು ಕುಡಿಯಿರಿ. ನಿಮ್ಮ ಹೊಟ್ಟೆಯೂ ತಣ್ಣಗಾಗುತ್ತದೆ, ಇಂತಹ ಸಾತ್ವಿಕ ಜೀವಗಳನ್ನು ಕಂಡಾಗ ನಿಮ್ಮ ಮನಸ್ಸಿಗೆ ನೆಮ್ಮದಿಯೂ ಸಿಗುತ್ತದೆ.
(ಡಿಬಿಐ)



