ಗುಜರಾತ್(ಕುಲಾಲ ವರ್ಲ್ಡ್ ಡಾಟ್ ಕಾಮ್): ಕೆನಡಾದಲ್ಲಿ ವಾಸಿಸುವ ಭಾರತೀಯ ಮೂಲದ ಐದು ವರ್ಷದ ಅರ್ಜುನ್ ಪ್ರಜಾಪತಿಯ ಐಕ್ಯೂ 141. ಸುಮಾರು 18 ತಿಂಗಳ ವಯಸ್ಸಿನಲ್ಲೇ ಓದಲು ಆರಂಭಿಸಿದ ಈ ಬಾಲಕ 3,000ಕ್ಕೂ ಹೆಚ್ಚು ಪುಸ್ತಕಗಳನ್ನು ಓದಿದ್ದಾನೆ. ನಾಲ್ಕನೇ ವಯಸ್ಸಿನಲ್ಲೇ ಮೆನ್ಸಾ ಮತ್ತು ಇಂಟರ್ಟೆಲ್ ಸದಸ್ಯತ್ವಕ್ಕೆ ಅರ್ಹತೆ ಪಡೆದಿದ್ದು, ಗಣಿತ, ವಿಜ್ಞಾನ ಮತ್ತು ಬಾಹ್ಯಾಕಾಶದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾನೆ.
ಸಾಮಾನ್ಯವಾಗಿ ಐದು ವರ್ಷದ ಮಕ್ಕಳು ಆಟ, ಚಿತ್ರಕಲೆ ಮತ್ತು ಕಥೆಗಳಲ್ಲಿ ಆಸಕ್ತಿ ತೋರಿಸುತ್ತಾರೆ. ಆದರೆ ಕೆನಡಾದಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಅರ್ಜುನ್ ಪ್ರಜಾಪತಿ ಗಣಿತ, ಬಾಹ್ಯಾಕಾಶ, ಮಾನವ ದೇಹ ಮತ್ತು ತಳಿವಿಜ್ಞಾನದಂತಹ ಸಂಕೀರ್ಣ ವಿಷಯಗಳ ಬಗ್ಗೆ ಕುತೂಹಲ ಹೊಂದಿದ್ದಾನೆ. ಈಗಾಗಲೇ 3,000ಕ್ಕೂ ಹೆಚ್ಚು ಪುಸ್ತಕಗಳನ್ನು ಓದಿರುವ ಈ ಬಾಲಕನ ಬುದ್ಧಿಮತ್ತೆ ಮತ್ತು ಕಲಿಯುವ ಆಸಕ್ತಿ ಎಲ್ಲರ ಗಮನ ಸೆಳೆದಿದೆ.
ಗುಜರಾತ್ನ ವಡೋದರ ಮೂಲದ ವೈದ್ಯಕೀಯ ಸಂಶೋಧಕ ಡಾ. ವಿಶಾಲ್ ಪ್ರಜಾಪತಿ ಮತ್ತು ವಕೀಲೆಯಾಗಿರುವ ಮಹಿತಾ ಅವರ ಪುತ್ರ ಅರ್ಜುನ್, ಸುಮಾರು 18 ತಿಂಗಳ ವಯಸ್ಸಿನಲ್ಲೇ ಓದಲು ಆರಂಭಿಸಿದ್ದನು. ನಾಲ್ಕು ವರ್ಷದವನಾಗಿದ್ದಾಗಲೇ ಆತನ ಐಕ್ಯೂ ಪರೀಕ್ಷೆಯ ಫಲಿತಾಂಶ 141 ದಾಖಲಾಗಿತ್ತು. ಈ ಸಾಧನೆಯ ಆಧಾರದಲ್ಲಿ ಜಗತ್ತಿನ ಎರಡು ಪ್ರತಿಷ್ಠಿತ ಉನ್ನತ ಬುದ್ಧಿಮತ್ತೆ ಸಂಘಟನೆಗಳಾದ ಮೆನ್ಸಾ (Mensa) ಮತ್ತು ಇಂಟರ್ಟೆಲ್ (Intertel) ಸದಸ್ಯತ್ವಕ್ಕೂ ಅರ್ಹತೆ ಪಡೆದಿದ್ದಾನೆ.
ಐಕ್ಯೂ 141 ಎಂದರೇನು?
ಅರ್ಜುನ್ಗೆ ನಾಲ್ಕು ವರ್ಷ ಮತ್ತು ಹತ್ತು ತಿಂಗಳಾಗಿದ್ದಾಗ ಸ್ಟ್ಯಾನ್ಫೋರ್ಡ್–ಬಿನೆಟ್ (Stanford–Binet) ಬುದ್ಧಿಮತ್ತೆ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ ಆತನ ಒಟ್ಟು ಐಕ್ಯೂ 141 ದಾಖಲಾಗಿದ್ದು, ಇದು ಜನಸಂಖ್ಯೆಯ ಸುಮಾರು ಶೇ. 99.7ರಷ್ಟು ಜನರಿಗಿಂತ ಹೆಚ್ಚಿನ ಫಲಿತಾಂಶವಾಗಿದೆ ಎಂದು ವರದಿಯಾಗಿದೆ.
ಸ್ಕ್ರೀನ್ ಟೈಮ್ ನಿಯಂತ್ರಣಕ್ಕೆ ಪೋಷಕರಿಗೆ ಬಹುದೊಡ್ಡ ಪಾಠ
ಕೆನಡಾದಲ್ಲಿ ಪ್ರತಿ ವರ್ಷ ಮಕ್ಕಳ ಐಕ್ಯೂ ಅಳೆಯಲು ವಿಶೇಷ ಪರೀಕ್ಷೆಗಳು ನಡೆಯುತ್ತವೆ. ಅರ್ಜುನ್ ತನ್ನ ನಾಲ್ಕನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಈ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ. 1000 ಮಕ್ಕಳು ಭಾಗವಹಿಸಿದ್ದ ಈ ಪರೀಕ್ಷೆಯಲ್ಲಿ ಆತ 997 ಮಕ್ಕಳಿಗಿಂತ ಅತಿ ಹೆಚ್ಚು ಐಕ್ಯೂ ಹೊಂದಿದ್ದ. ಐದನೇ ವಯಸ್ಸಿಗೆ ಮತ್ತೆ ಅದೇ ಪರೀಕ್ಷೆ ಬರೆದಾಗ, 10,000 ಮಕ್ಕಳಲ್ಲಿ 9999 ಮಕ್ಕಳಿಗಿಂತ ಅತಿ ಹೆಚ್ಚು ಅಂಕ ಗಳಿಸುವ ಮೂಲಕ ಅಗ್ರಸ್ಥಾನ ಪಡೆದುಕೊಂಡ.
ಒಟ್ಟಾರೆಯಾಗಿ, ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಅವರ ಭವಿಷ್ಯ ಹಾಳು ಮಾಡುವ ಪೋಷಕರಿಗೆ ಅರ್ಜುನ್ ಪ್ರಜಾಪತಿ ಸಾಧನೆ ಬಹುದೊಡ್ಡ ಪಾಠವಾಗಿದೆ. ಇಂಟರ್ನೆಟ್ ಮತ್ತು ಮೊಬೈಲ್ ಬಳಕೆಯ ಮೇಲೆ ನಿಯಂತ್ರಣವಿದ್ದರೆ ಹಾಗೂ ಬಾಲ್ಯದಿಂದಲೇ ಪುಸ್ತಕ ಓದುವ ಹವ್ಯಾಸ ಬೆಳೆಸಿದರೆ, ಮಕ್ಕಳು ಎಂತಹ ಅದ್ಭುತ ಸಾಧನೆ ಬೇಕಾದರೂ ಮಾಡಬಲ್ಲರು ಎಂಬುದಕ್ಕೆ ಅರ್ಜುನ್ ಅತ್ಯುತ್ತಮ ಉದಾಹರಣೆಯಾಗಿದ್ದಾನೆ.

