(ಕುಲಾಲ ವರ್ಲ್ಡ್ ಡಾಟ್ ಕಾಮ್ ಲೇಖನ):
ಸತತ ಐದು ದಶಕಗಳ ಕಾಲ ಸರಕಾರದ ಸವಲತ್ತುಗಳಿಗಾಗಿ ನಿರಂತರ ಹೋರಾಟ ನಡೆಸಿ, ಆ ಮೂಲಕವೇ ಇಡೀ ಕುಂಬಾರ ಸಮಾಜಕ್ಕೆ ಒಂದು ಸುಭದ್ರವಾದ ಅಡಿಪಾಯ ಹಾಕಿದ ಕೇರಳದ ಕುಂಬಾರರ ಸಂಘಟಿತ ಶಕ್ತಿ ಇಂದು ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ. ಶೈಕ್ಷಣಿಕ ಮೀಸಲಾತಿಯನ್ನೇ ಪ್ರಬಲ ಅಸ್ತ್ರವನ್ನಾಗಿಸಿಕೊಂಡು ಸಮಾಜವನ್ನು ಕಟ್ಟಲು ಪಣತೊಟ್ಟ ‘ಕೇರಳ ಮಣ್ ಪಾತ್ರ ನಿರ್ಮಾಣ ಸಹಕಾರ ಸಭಾ’ (KMSS) ಇಂದು ಯಶಸ್ಸಿನ ಶಿಖರದಲ್ಲಿದೆ. ಭೌಗೋಳಿಕವಾಗಿ ಕೇರಳದ ದಕ್ಷಿಣ ಭಾಗದಲ್ಲಿ ಓಡನ್, ವೇಲನ್, ವೇಲಾರ್, ಕುಶವನ್, ಕುಂಬಾರ, ಆಂಧ್ರ ನಾಯರ್ ಹಾಗೂ ಅಂತೂರ್ ನಾಯರ್ ಎಂಬ ವಿವಿಧ ಉಪನಾಮಗಳಿಂದ ಮಡಿಕೆ-ಹಂಚು ಮಾಡುವ ವೃತ್ತಿ ನಿರತರನ್ನು ಗುರುತಿಸಿದರೆ, ಕರ್ನಾಟಕದ ಗಡಿಭಾಗವಿರುವ ಉತ್ತರ ಕೇರಳದಲ್ಲಿ ಕುಲಾಲ, ಮೂಲ್ಯ ಅಥವಾ ಕುಲಾಲ ನಾಯರ್ ಎಂದು ಕರೆಯಲಾಗುತ್ತದೆ. ಕೇರಳದ ಸರಿಸುಮಾರು 3.5 ಕೋಟಿ ಜನಸಂಖ್ಯೆಯಲ್ಲಿ ಕುಂಬಾರ ಜನಾಂಗದವರು ಕೇವಲ ಒಂದು ಲಕ್ಷದಷ್ಟಿದ್ದರೂ, ಅವರ ಸಂಘಟಿತ ಹೋರಾಟವು ಅವರನ್ನು ರಾಷ್ಟ್ರ ಮಟ್ಟದಲ್ಲಿ ಅತ್ಯುನ್ನತ ಸ್ಥಾನದಲ್ಲಿ ನಿಲ್ಲುವಂತೆ ಮಾಡಿದೆ.
2014ರಲ್ಲಿ ತಳಿಪರಂಬದಲ್ಲಿ ಜರುಗಿದ ಸಮ್ಮೇಳನದಲ್ಲಿ ಪ್ರಧಾನ ಭಾಷಣಕಾರನಾಗಿ ಭಾಗವಹಿಸಿದ ಸಂದರ್ಭದಲ್ಲಿ ಅಲ್ಲಿನ ರಾಜ್ಯ ನಾಯಕರಾದ ಕೆ.ಎಂ. ದಾಸ್, ಸುಭಾಷ್ ಬೋಸ್ ಹಾಗೂ ರಾಜೇಶ್ ಪಾಲಂಘಾಟ್ ಅವರ ಪರಿಚಯವಾಯಿತು. ನನ್ನ ಮಲಯಾಳಂ ಮಿಶ್ರಿತ ಇಂಗ್ಲಿಷ್ ಭಾಷಣವನ್ನು ಅಪ್ಪಟ ಸ್ಥಳೀಯ ಮಲಯಾಳಂಗೆ ಅನುವಾದಿಸಿದ ನ್ಯಾಯವಾದಿ ಹಾಗೂ ಪೊಲೀಸ್ ಅಧಿಕಾರಿ ಶಶಿಕುಮಾರ್ ಅವರು ಅಂದಿನಿಂದಲೂ ನನಗೆ ಆತ್ಮೀಯರು. ನಂತರದ ದಿನಗಳಲ್ಲಿ ಅವರನ್ನು ಅಖಿಲ ಭಾರತ ರಾಷ್ಟ್ರೀಯ ಪ್ರಜಾಪತಿ ಸಂಘಟನೆಗೆ ಪರಿಚಯಿಸಿದ ಫಲವಾಗಿ ಇಂದು ಅವರು ಕೇರಳದಲ್ಲಿ ಪ್ರಜಾಪತಿ ಸಂಘಟನೆಯ ಪರವಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಕ್ಷಿಣ ಭಾರತದ ಕುಂಬಾರರ ಬದುಕು ಮತ್ತು ಹೋರಾಟಗಳ ಬಗ್ಗೆ ಸುದೀರ್ಘ ಅಧ್ಯಯನ ಹಾಗೂ ಪ್ರವಾಸಗಳನ್ನು ಕೈಗೊಂಡ ನನಗೆ, ಇಡೀ ದೇಶದಲ್ಲಿ ಕೇರಳದ ಕುಂಬಾರರ ಸಾಧನೆ ಅತ್ಯಂತ ವಿಶಿಷ್ಟವಾದುದು ಎಂದು ಮನವರಿಕೆಯಾಗಿದೆ. ಈ ವಿಚಾರವನ್ನು ನಾನು 2010ರಿಂದಲೇ ದೆಹಲಿ, ಗೋವಾ, ಗುಜರಾತ್, ಉತ್ತರ ಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನಗಳಲ್ಲಿ ದಿವಂಗತ ಸಿದ್ದನಂಜ ಶೆಟ್ಟಿ, ಚೌಡ ಶೆಟ್ಟಿ, ನಟರಾಜ್ ಮತ್ತು ಡಿ.ವಿ.ಆರ್. ಸ್ವಾಮಿ ಅವರಂತಹ ಹಿರಿಯರೊಂದಿಗೆ ಅಂದಿನ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಆರ್.ಬಿ.ಕೆ. ಪ್ರಜಾಪತಿಯವರ ಗಮನಕ್ಕೆ ತರುತ್ತಲೇ ಬಂದಿದ್ದೇನೆ.
ವಾಸ್ತವದಲ್ಲಿ ಸಮಾಜದ ಸಂಘಟನೆ ಎಂದರೆ ಕೇವಲ ಭವ್ಯ ಕಟ್ಟಡಗಳು, ಸಭಾಂಗಣಗಳು, ಭೂಮಿ ಅಥವಾ ಬ್ಯಾಂಕುಗಳ ಸ್ಥಾಪನೆಯಲ್ಲ, ಅಥವಾ ಅವುಗಳ ಒಡೆತನಕ್ಕಾಗಿ ನಡೆಸುವ ಕಚ್ಚಾಟವೂ ಅಲ್ಲ. ಒಂದು ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಮೂಲ ಉದ್ದೇಶವು ಆ ಸಮಾಜವನ್ನು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢಗೊಳಿಸುವುದಾಗಿರಬೇಕು. ಯುವ ಜನಾಂಗಕ್ಕೆ ಔದ್ಯೋಗಿಕ ಹಾಗೂ ವ್ಯವಹಾರಿಕ ಮಾರ್ಗದರ್ಶನ ನೀಡಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದರ ಜೊತೆಗೆ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಎರಡನೇ ಮತ್ತು ಮೂರನೇ ಹಂತದ ಸಮರ್ಥ ನಾಯಕರನ್ನು ಬೆಳೆಸುವುದೇ ಜಾತಿ ಸಂಘಟನೆಗಳ ನಿಜವಾದ ಗುರಿಯಾಗಿರಬೇಕು. ಈ ನಿಟ್ಟಿನಲ್ಲಿ ಕೇರಳದ ಕುಂಬಾರ ಸಂಘಟನೆಗಳು ಯಾವುದೇ ಅಬ್ಬರವಿಲ್ಲದೆ ಮಾಡುತ್ತಿರುವ ಕೆಲಸವೊಂದು ಅದ್ಭುತ ಯಶೋಗಾಥೆ. ವಿಶೇಷವಾಗಿ ಯುಡಿಎಫ್ ಮತ್ತು ಎಲ್ಡಿಎಫ್ ಪಕ್ಷಗಳಲ್ಲಿ ಉನ್ನತ ಜವಾಬ್ದಾರಿಯಲ್ಲಿದ್ದ ಸುಭಾಷ್ ಬೋಸ್, ಕೆ.ಎಂ. ದಾಸ್ ಮತ್ತು ರಾಜೇಶ್ ಫಲಂಘಾಟ್ ಅವರ ದಶಕಗಳ ಶ್ರಮ ಇಂದು ಸಾರ್ಥಕತೆ ಕಂಡಿದೆ.
ಕೇರಳದಾದ್ಯಂತ ಚದುರಿಹೋಗಿದ್ದ ಜನಾಂಗದವರು ಈ ಹಿಂದೆ ಕೇರಳ ಓಡರ್ ಮಹಾಸಭಾ, ಕೇರಳ ವೆಲಾರ್ ಮಹಾಸಭಾ, ಕುಲಾಲ ಸಂಘ ಹಾಗೂ ಆಂದರ್ ನಾಯರ್ ಮಹಾಸಭಾ ಎಂಬ ಬೇರೆ ಬೇರೆ ಹೆಸರಿನಲ್ಲಿ ಸಂಘಟಿತರಾಗಿದ್ದರು. ಇದರಲ್ಲಿ ಓಡರ್ ಮಹಾಸಭಾ 1947ರಷ್ಟು ಹಿಂದೆಯೇ ಶಾಲೆಗಳನ್ನು ಕಟ್ಟಿ ಶಿಕ್ಷಣಕ್ಕೆ ಮಹತ್ವ ನೀಡುತ್ತಾ ಬಂದಿರುವುದು ಗಮನಾರ್ಹ. 1979ರ ಅವಧಿಯಲ್ಲೇ ತ್ರಿಶೂರ್ ಮತ್ತು ತ್ರಿವೇಂಡ್ರಂನ ಮಾಣಿಕ್ಯಂ ಹಾಗೂ ವಿಕ್ರಮನ್ ಅಂತಹ ಹಿರಿಯರು ಕುಂಬಾರ ಜನಾಂಗಕ್ಕೆ ಸಾಮಾಜಿಕ ಮತ್ತು ಶೈಕ್ಷಣಿಕ ಮೀಸಲಾತಿ ಬೇಕೆಂದು ಅಂದಿನ ಮುಖ್ಯಮಂತ್ರಿ ಪಿ.ಕೆ. ವಾಸುದೇವ ನಾಯರ್ ಅವರಿಗೆ ಒತ್ತಾಯಿಸಿದ್ದರು. ಮುಂದೆ 1991ರಲ್ಲಿ ಕರುಣಾಕರನ್ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಪರಿಶಿಷ್ಟ ಜಾತಿ (SC) ಪಟ್ಟಿಗೆ ಸೇರಿಸಲು ಮನವಿ ಮಾಡಲಾಯಿತಾದರೂ, ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಬದಲಾಗಿ, ಕುಂಬಾರರನ್ನು OEC (Other Eligible Communities) ವರ್ಗಕ್ಕೆ ಸೇರಿಸಲಾಯಿತು. ಇದರಿಂದ ಶಿಕ್ಷಣದಲ್ಲಿ ಎಸ್ಸಿ ವಿದ್ಯಾರ್ಥಿಗಳಿಗೆ ಸಿಗುವ ಸವಲತ್ತುಗಳು ದೊರೆತರೂ, ಉದ್ಯೋಗ ಮೀಸಲಾತಿಯಲ್ಲಿ ಎಸ್ಸಿ ಸ್ಥಾನಮಾನ ಲಭಿಸಲಿಲ್ಲ.
ಆದರೆ ಛಲ ಬಿಡದ ಕೇರಳದ ಕುಂಬಾರರು 2006ರಲ್ಲಿ ತಮ್ಮೆಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು KMSS ಅಡಿಯಲ್ಲಿ ಒಂದಾದರು. ಸುಭಾಷ್ ಬೋಸ್, ಕೆ.ಎಂ. ದಾಸ್ ಹಾಗೂ ರಾಜೇಶ್ ಫಲಂಘಾಟ್ ಅವರ ನೇತೃತ್ವದಲ್ಲಿ ನಡೆದ ಬೃಹತ್ ಹೋರಾಟದ ಫಲವಾಗಿ ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರ ಮನವೊಲಿಸುವಲ್ಲಿ ಯಶಸ್ವಿಯಾದರು. ಇದರ ಪರಿಣಾಮವಾಗಿ 2014ರಲ್ಲಿ ಕೇರಳದ ಪಿಯುಸಿಯಿಂದ ಮೇಲ್ಪಟ್ಟ ಎಲ್ಲಾ ಶೈಕ್ಷಣಿಕ ತರಬೇತಿ ಸಂಸ್ಥೆಗಳಲ್ಲಿ ಕುಂಬಾರ ವಿದ್ಯಾರ್ಥಿಗಳಿಗೆ ಶೇಕಡಾ ಒಂದರಷ್ಟು (1%) ಪ್ರತ್ಯೇಕ ಮೀಸಲಾತಿಯನ್ನು ಘೋಷಿಸಲಾಯಿತು. ಇದು 2015ರಿಂದ ಅಧಿಕೃತವಾಗಿ ಜಾರಿಗೆ ಬಂದಿದ್ದು, ರಾಷ್ಟ್ರಮಟ್ಟದಲ್ಲೇ ಕುಂಬಾರ ಜನಾಂಗಕ್ಕೆ ಶಿಕ್ಷಣದ ಮೂಲಕ ಸರಕಾರದಿಂದ ದೊರೆತ ಬಹುದೊಡ್ಡ ಕೊಡುಗೆಯಾಗಿದೆ. ಈ ಕ್ರಾಂತಿಕಾರಿ ನಿರ್ಧಾರದಿಂದಾಗಿ ಇಂದು ಪಿಯುಸಿ, ಐಟಿಐ, ಟಿಸಿಎಚ್, ಬಿ.ಎಡ್, ಎಂಬಿಬಿಎಸ್, ಇಂಜಿನಿಯರಿಂಗ್ ಹಾಗೂ ಪ್ಯಾರಾಮೆಡಿಕಲ್ ಸೇರಿದಂತೆ ಎಲ್ಲಾ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕುಂಬಾರ ಮಕ್ಕಳಿಗೆ ಉಚಿತ ಸೀಟು, ಉಚಿತ ಶುಲ್ಕ, ಹಾಸ್ಟೆಲ್ ವ್ಯವಸ್ಥೆ ಹಾಗೂ ಮಾಸಿಕ ವಿದ್ಯಾರ್ಥಿ ವೇತನ ದೊರೆಯುತ್ತಿದೆ.
ಇದರ ಫಲವಾಗಿ 2015ರಿಂದ ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸ್ವಾವಲಂಬಿಗಳಾಗಿದ್ದಾರೆ. ಆಶ್ಚರ್ಯದ ಸಂಗತಿಯೆಂದರೆ, ಕೇರಳದ ಒಟ್ಟು 4,500 ಎಂಬಿಬಿಎಸ್ ಸೀಟುಗಳ ಪೈಕಿ ಪ್ರತಿ ವರ್ಷ ಸುಮಾರು 30 ಸೀಟುಗಳು ಕುಂಬಾರ ಜನಾಂಗದ ಮಕ್ಕಳಿಗೆ ಮೀಸಲಾಗಿವೆ. ಅಂದರೆ, ಕಳೆದ ಹತ್ತು ವರ್ಷಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಕುಂಬಾರ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆದು ವೈದ್ಯರಾಗುತ್ತಿದ್ದಾರೆ. ಇಷ್ಟೇ ಅಲ್ಲದೆ, ಕೇರಳದ ಪಾಟರಿ ನಿಗಮವನ್ನೂ ಪಡೆಯುವಲ್ಲಿ ಈ ಸಂಘಟನೆ ಯಶಸ್ವಿಯಾಗಿದೆ. “ಒಬ್ಬನಿಗೆ ಪ್ರತಿದಿನ ತಿನ್ನಲು ಮೀನು ಅಥವಾ ರೊಟ್ಟಿ ಕೊಡುವುದಕ್ಕಿಂತ, ಮೀನು ಹಿಡಿಯುವುದು ಹೇಗೆ ಮತ್ತು ರೊಟ್ಟಿ ಸಂಪಾದಿಸುವುದು ಹೇಗೆ ಎಂಬುದನ್ನು ಶಿಕ್ಷಣದ ಮೂಲಕ ಕಲಿಸಿಕೊಡಿ” ಎಂಬ ಮಾತಿಗೆ ಕೇರಳದ ಈ ಸಂಘಟಿತ ಹೋರಾಟ ಜೀವಂತ ಉದಾಹರಣೆಯಾಗಿದೆ. ಕಳೆದ ಹಲವು ವರ್ಷಗಳಿಂದ ಈ ಸಂಘಟನೆಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ನನಗೆ ಅವರ ಈ ಸಾಧನೆ ಅಪಾರ ಹೆಮ್ಮೆ ತಂದಿದೆ. ಯುವ ಜನಾಂಗವನ್ನು ಶೈಕ್ಷಣಿಕವಾಗಿ ಸದೃಢಗೊಳಿಸಿ, ಅವರನ್ನು ಉನ್ನತ ಸ್ಥಾನಕ್ಕೇರಿಸಿ ನಾವೇ ‘ಕಿಂಗ್ ಮೇಕರ್’ಗಳಾಗುವ ಅವರ ಚಿಂತನೆ ಇಂದಿನ ಕಾಲಘಟ್ಟದಲ್ಲಿ ಸರ್ವರಿಗೂ ಮಾದರಿಯಾಗಿದೆ.
ಡಾ. ಎಂ .ಅಣ್ಣಯ್ಯ ಕುಲಾಲ್ ಉಳ್ತೂರು

