ಗುಲ್ಬರ್ಗಾ(ಅ.೨೦, ಕುಲಾಲ ವರ್ಲ್ಡ್ ಡಾಟ್ ಕಾಮ್): ಸಂಗೀತಕ್ಕೆ ಗಡಿಗಳಿಲ್ಲ, ಭಾಷೆಯ ಹಂಗಿಲ್ಲ. ಅದು ಹೃದಯದಿಂದ ಹೊರಹೊಮ್ಮಿ ಪ್ರತಿಯೊಬ್ಬರ ಆತ್ಮವನ್ನು ತಲುಪುವ ದಿವ್ಯ ಶಕ್ತಿ. ಅಂತಹ ನಾದಲೋಕದಲ್ಲಿ ತಮ್ಮ ವಿಶಿಷ್ಟ ಸಾಧನೆಯ ಮೂಲಕ ಇಡೀ ರಾಜ್ಯದ ಗಮನಸೆಳೆದ ಕಲ್ಯಾಣ ಕರ್ನಾಟಕದ ಖ್ಯಾತ ಕಲಾವಿದರಾದ ಆಳಂದ ತಾಲೂಕಿನ ಬೆಣ್ಣೆಶಿರೂರ ಗ್ರಾಮದ ಸಿದ್ದಣ್ಣ ಕುಂಬಾರ ಅವರು ಸಾಮಾನ್ಯರು ಬಾಯಿಯಿಂದ ಊದಲು ಕಷ್ಟಪಡುವ ಕೊಳಲನ್ನು ತಮ್ಮ ಮೂಗಿನಿಂದಲೇ ನುಡಿಸಿ ನಾದಸುಧೆ ಹರಿಸುವ ಅಪ್ರತಿಮ ಕಲಾ ವಿದ್ವಾಂಸರಾಗಿದ್ದಾರೆ.
ಬಡತನದ ಕುಲುಮೆಯಲ್ಲಿ ಬೇಯುತ್ತಲೇ ಬೆಳೆದ ಸಿದ್ದಣ್ಣ ಅವರ ಬಾಲ್ಯ ಸಾಮಾನ್ಯವಾಗೇನಿರಲಿಲ್ಲ. ಶಾಲೆ-ಕಾಲೇಜುಗಳ ಮೆಟ್ಟಿಲು ಹತ್ತಲು ಸಾಧ್ಯವಾಗದ, ಅಕ್ಷರ ಕಲಿಯದ ಈ ಪ್ರತಿಭಾವಂತ ಬಾಲಕ, ತನ್ನ 12ನೇ ವಯಸ್ಸಿನಲ್ಲಿ ಹಸು-ದನಗಳನ್ನು ಕಾಯುತ್ತಲೇ ಈ ಅಪರೂಪದ ವಿದ್ಯೆಯನ್ನು ಸ್ವಯಂ ಕರಗತ ಮಾಡಿಕೊಂಡರು. ಕಾಡು-ಮೇಡುಗಳಲ್ಲಿ ದನ ಮೇಯಿಸುತ್ತಾ ಕೈಗೆ ಸಿಕ್ಕ ಕೊಳಲನ್ನು ಮೂಗಿಗಿಟ್ಟು ನುಡಿಸಲು ಅಭ್ಯಾಸ ಮಾಡಿ, ಇಂದು ನಾಡೇ ಮೆಚ್ಚುವ ನಾಸಿಕ ಕೊಳಲು ವಾದಕರಾಗಿ ಹೊರಹೊಮ್ಮಿರುವುದು ನಿಜಕ್ಕೂ ರೋಚಕ ಮತ್ತು ಸ್ಪೂರ್ತಿದಾಯಕ ಸಂಗತಿಯಾಗಿದೆ.
ಯಾವುದೇ ಔಪಚಾರಿಕ ಶಿಕ್ಷಣ ಹಾಗೂ ಸಂಗೀತದ ಗುರುಗಳಿಲ್ಲದಿದ್ದರೂ, ಸಂಗೀತ ಪ್ರೀತಿಯೇ ಅವರ ಉಸಿರಾಗಿ ನಾಡಿನಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನ ವಾಹಿನಿಗಳಲ್ಲಿ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿ ತಮ್ಮ ಕಲಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಹಮ್ಮಿಕೊಂಡ ನೂರಾರು ಸಾಹಿತ್ಯ ಸಮ್ಮೇಳನ ವೇದಿಕೆಗಳಲ್ಲಿ ತಮ್ಮ ಕೊಳಲು ವಾದನದ ಮೂಲಕ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ. ನಾಡಿನ ವಿವಿಧ ಮಠ-ಮಾನ್ಯಗಳು, ರಂಗ ಸಂಘಟನೆಗಳು ಹಾಗೂ ಸಾಮಾಜಿಕ ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಹಲವಾರು ಪ್ರಶಸ್ತಿ ಗೌರವಗಳನ್ನು ನೀಡಿ ಪುರಸ್ಕರಿಸಿವೆ. ಅಲ್ಲದೆ, ರಾಜ್ಯದ ಪ್ರಮುಖ ದಿನಪತ್ರಿಕೆಗಳು ಇವರ ಅನನ್ಯ ಸಾಧನೆಯ ಬಗ್ಗೆ ವಿಶೇಷ ಲೇಖನಗಳನ್ನು ಪ್ರಕಟಿಸಿ ಗೌರವಿಸಿವೆ.
ಅಗಾಧ ಪ್ರತಿಭೆ ಹಾಗೂ ಅಚಲ ಶ್ರಮವಿದ್ದರೂ ಸಿದ್ದಣ್ಣ ಕುಂಬಾರ ಅವರು ಹಳ್ಳಿಯ ವಾತಾವರಣದಲ್ಲಿ ಸರಳ ಜೀವನ ನಡೆಸುತ್ತಾ ಬಂದಿದ್ದಾರೆ. ಕಲ್ಯಾಣ ಕರ್ನಾಟಕದ ಈ ಅಪರೂಪದ ರತ್ನವನ್ನು ಪ್ರೋತ್ಸಾಹಿಸುವುದು ಕಲಾಭಿಮಾನಿಗಳ ಹಾಗೂ ಸಮಾಜದ ಜವಾಬ್ದಾರಿಯಾಗಿದೆ. ಈ ಹಿರಿಯ ಕಲಾವಿದರನ್ನು ಸಂಪರ್ಕಿಸಲು ಬಯಸುವವರು 9880262415 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

