ಕಡಬ(ಕುಲಾಲ ವರ್ಲ್ಡ್ ಡಾಟ್ ಕಾಮ್) : “ಕಲೆ ಎಂಬುದು ಬಡವ-ಬಲ್ಲಿದ ಎಂಬ ಭೇದ ಮಾಡುವುದಿಲ್ಲ, ಅದು ಅಂತರಾಳದ ನಿರಂತರ ಹರಿವ ಜಲಧಾರೆ.” ಈ ಅರ್ಥಪೂರ್ಣ ಮಾತುಗಳಿಗೆ ಜೀವಂತ ಉದಾಹರಣೆಯಾಗಿ ನಿಲ್ಲುತ್ತಾರೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಅಪರೂಪದ ಬಹುಮುಖ ಪ್ರತಿಭೆ ಶೇಖರ್ ಕುಂಬಾರ ಕಡಬ. ವೃತ್ತಿಯಲ್ಲಿ ಬದುಕಿನ ಹಸಿವನ್ನು ನೀಗಿಸಿಕೊಳ್ಳಲು ಗೋಡೆಗಳಿಗೆ ಬಣ್ಣ ಬಳಿಯುವ ಕಾಯಕ ಮಾಡುವ ಇವರು, ಇಂದು ತಮ್ಮ ಅಂತರಾಳದ ವಿಭಿನ್ನ ಕಲಾ ಪ್ರಕಾರಗಳ ಮೂಲಕ ನಾಡಿನಾದ್ಯಂತ ಸಹೃದಯರ ಮನೆ-ಮನಗಳನ್ನು ಗೆದ್ದಿದ್ದಾರೆ.
ಶೇಖರ್ ಅವರ ಬದುಕಿನ ಬಂಡಿ ಸಾಗುವುದೇ ವಾಲ್ ಪೇಂಟಿಂಗ್ ಮೂಲಕ. ಮುಂಜಾನೆಯಿಂದ ಸಂಜೆಯವರೆಗೆ ಕಠಿಣ ಪರಿಶ್ರಮ ಪಡುತ್ತಾ, ಗೋಡೆಗಳ ಮೇಲೆ ತಮ್ಮ ಕುಂಚದ ಮಾಂತ್ರಿಕತೆಯಿಂದ ಸುಂದರ ವಿನ್ಯಾಸಗಳನ್ನು ಮೂಡಿಸುವ ಇವರು, ಕೇವಲ ವೃತ್ತಿಯನ್ನಷ್ಟೇ ಮಾಡದೇ ಅದರಲ್ಲಿಯೂ ಅಪೂರ್ವ ಕಲೆಯನ್ನು ಹುಡುಕಿಕೊಂಡವರು. ಜೀವವಿಲ್ಲದ ಕಟು ಗೋಡೆಗಳ ಮೇಲೆ ಇವರು ಬಿಡಿಸುವ ಪೇಂಟಿಂಗ್ಗಳು ಇವರ ವೃತ್ತಿಪರತೆ ಹಾಗೂ ಕಲಾ ಪ್ರೇಮಕ್ಕೆ ಸಾಕ್ಷಿಯಾಗಿ ಕಣ್ಣೆದುರು ನಿಲ್ಲುತ್ತವೆ.
ಇವರ ಕೈಚಳಕ ಕೇವಲ ಗೋಡೆಗಳಿಗಷ್ಟೇ ಸೀಮಿತವಾಗಿಲ್ಲ; ಪ್ರಕೃತಿಯ ಅತಿ ಸೂಕ್ಷ್ಮವಾದ ಎಲೆಗಳ ಮೇಲೆ ಇವರು ಮೂಡಿಸುವ ‘ಲೀಫ್ ಆರ್ಟ್’ ಯಾರನ್ನೂ ಆದರೂ ಬೆರಗುಗೊಳಿಸುವಂತಿದೆ. ಉದುರಿ ಹೋಗುವ ಎಲೆಗಳಿಗೆ ತಮ್ಮ ಕಲ್ಪನೆಯಿಂದ ಮರುಜೀವ ನೀಡುವ ಇವರ ವಿಶಿಷ್ಟ ಕೈಚಳಕಕ್ಕೆ ಮನಸೋಲದವರಿಲ್ಲ. ಇದರೊಂದಿಗೆ, ಸಿಗುವ ಅಲ್ಪ ಬಿಡುವಿನ ವೇಳೆಯನ್ನೂ ವ್ಯರ್ಥ ಮಾಡದೆ ಸಾಬೂನಿನ ಮೇಲೆ ಅದ್ಭುತ ಆಕೃತಿಗಳನ್ನು ಕೆತ್ತಿ ಸಣ್ಣದೊಂದು ಸೌಂದರ್ಯದ ಲೋಕವನ್ನೇ ಸೃಷ್ಟಿಸುತ್ತಾರೆ. ಇವರ ಈ ಸೋಪ್ ಕಾರ್ವಿಂಗ್ ಕಲೆ ಇವರ ಏಕಾಗ್ರತೆ ಮತ್ತು ಸೃಜನಶೀಲತೆಗೆ ಹಿಡಿದ ಕನ್ನಡಿಯಾಗಿದೆ.
ಕಣ್ಣಿಗೆ ಸೌಂದರ್ಯದ ಹಬ್ಬ ಉಣಿಸುವ ಶೇಖರ್, ಕಿವಿಗೆ ಇಂಪು ನೀಡುವ ಅದ್ಭುತ ಗಾಯಕ ಕೂಡ ಹೌದು. ದಿನದ ಕಠಿಣ ದುಡಿಮೆಯ ನಡುವೆ ತನ್ನ ದಣಿವನ್ನು ಮರೆಯಲು ಇವರು ಹಾಡುವ ಇಂಪಾದ ಗೀತೆಗಳು ಕೇಳುಗರ ಮನದ ತಂತಿಯನ್ನು ಮೀಟುತ್ತವೆ. ಭಾವ ತುಂಬಿ ಹಾಡುವ ಇವರ ಉದಯೋನ್ಮುಖ ಕಂಠದ ಗೀತೆಗಳು ಇಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಾ ಎಲ್ಲರ ಪ್ರೀತಿ ಗಳಿಸುತ್ತಿವೆ. ವಿವಿಧ ಸಾಂಸ್ಕೃತಿಕ ವೇದಿಕೆಗಳಲ್ಲಿ, ಸಮಾರಂಭಗಳಲ್ಲಿ ಹಾಗೂ ಗಾಯನ ಸ್ಪರ್ಧೆಗಳಲ್ಲಿ ಭಾಗವಹಿಸಿ ಜನಮನದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಇವರನ್ನು ಅರಸಿ ಹಲವು ಗೌರವಗಳು, ಪ್ರಶಸ್ತಿಗಳು ಈಗಾಗಲೇ ಬಂದಿವೆ.
ದೈನಂದಿನ ಬದುಕಿನ ಸಂಘರ್ಷಗಳ ನಡುವೆ, ಗೋಡೆಗೆ ಬಣ್ಣ ಹಚ್ಚುವ ವೃತ್ತಿಯಲ್ಲಿದ್ದರೂ ತಮ್ಮೊಳಗಿನ ಕಲಾವಿದನನ್ನು ಜೀವಂತವಾಗಿಟ್ಟುಕೊಂಡಿರುವ ಶೇಖರ್, ಹತ್ತಾರು ಕಲೆಗಳನ್ನು ಮೈಗೂಡಿಸಿಕೊಂಡ ಅಪರೂಪದ ಸಾಧಕ. ಚಿತ್ರಕಲೆ, ಕೆತ್ತನೆ ಮತ್ತು ಸಂಗೀತ ಹೀಗೆ ತ್ರಿವೇಣಿ ಸಂಗಮದಂತೆ ಮೂರು ಕ್ಷೇತ್ರಗಳಲ್ಲೂ ಮಿನುಗುತ್ತಿರುವ ಈ ‘ಮಣ್ಣಿನ ಮಗ’ನಿಗೆ ಸೂಕ್ತವಾದ ವೇದಿಕೆ ಮತ್ತು ಪ್ರೋತ್ಸಾಹ ಸಿಕ್ಕರೆ ನಮ್ಮ ಕರಾವಳಿಯ ಕೀರ್ತಿ ಮತ್ತಷ್ಟು ಎತ್ತರಕ್ಕೆ ಬೆಳಗುವುದರಲ್ಲಿ ಸಂಶಯವಿಲ್ಲ.
ಒಟ್ಟಿನಲ್ಲಿ, ಕಠಿಣ ಪರಿಶ್ರಮ, ಅಚಲ ಕಲಾ ಪ್ರೇಮ ಮತ್ತು ಸರಳತೆ ಒಂದಾದರೆ ಎಂತಹ ಅದ್ಭುತ ಪ್ರತಿಭೆ ಅರಳಬಹುದು ಎಂಬುದಕ್ಕೆ ಶೇಖರ್ ಕುಂಬಾರ ಅವರೇ ನೈಜ ಪ್ರೇರಣೆ. ಈ ಅಪೂರ್ವ ಪ್ರತಿಭೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಅವಕಾಶಗಳು ದೊರೆತು, ಅವರ ಕಲಾ ಸೇವೆ ಜಗತ್ತಿನಾದ್ಯಂತ ಪಸರಿಸಲಿ ಎಂಬುದೇ ಕಲಾಭಿಮಾನಿಗಳ ಹೃತೂರ್ವಕ ಶುಭಹಾರೈಕೆ.
ಚಿತ್ರ ಬರಹ : ಸಂತೋಷ ಪಿ ಕಡಬ















