ಕುಲಾಲ ಸಂಭ್ರಮ- 2018: ಡಿಸೆಂಬರ್ 23 ಭಾನುವಾರ
(ಕುಂಬಾರರ ಬೃಹತ್ ಸಮಾವೇಶ ಮತ್ತು ಸಾಂಸ್ಕೃತಿಕ ಕಲಾ ವೈಭವ)
ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕರಾವಳಿ ಕರ್ನಾಟಕದ ಮೂಲೆ ಮೂಲೆಯಲ್ಲಿ ವಾಸ್ತವ್ಯ ಹೊಂದಿರುವ ಸಜ್ಜನ ಮತ್ತು ಪ್ರಾಮಾಣಿಕ ಸಮುದಾಯ ಅದು ಕುಲಾಲ/ಕುಂಬಾರ ಸಮುದಾಯ. ಮಣ್ಣಿನ ಕಾಯಕದಿಂದಲೆ ಬದುಕನ್ನು ಆರಂಭಿಸಿ ಕಾಲದ ಸ್ಥಿತ್ಯಂತರಕ್ಕೆ ತನ್ನನ್ನು ಒಡ್ಡಿಕೊಂಡು ಪ್ರಸ್ತುತ ಬದುಕಿನಾಸೆರೆಗೆ ಬೇರೆ ಬೇರೆ ವೃತ್ತಿಯನ್ನು ಮಾಡಿಕೊಂಡು ಬದುಕುತ್ತಿರುವ ಸರ್ವಜ್ಞನ ಸಮುದಾಯ. ಕರಾವಳಿಯಲ್ಲಿ ಕುಲಾಲ, ಕುಂಬಾರ,ಮೂಲ್ಯ, ಹಾಂಡ, ಗುನಗ ಎಂಬಿತ್ಯಾದಿ ಹೆಸರುಗಳಿಂದ ಕರೆಸಿಕೊಂಡ ಈ ಸಮುದಾಯ, ತಲೆತಲಾಂತರದಿಂದ ಬಡತನದಿಂದ ಬೆಂದು, ಮೇಲ್ವರ್ಗದ ಸಮುದಾಯಗಳ ತುಳಿತಕ್ಕೆ ಒಳಗಾಗಿ ಶೋಷಿಸಲ್ಪಟ್ಟ ಬಡ ಸಮುದಾಯವೂ ಹೌದು. ಕರಾವಳಿಯಲ್ಲಿ ಐದು ಲಕ್ಷಕ್ಕೂ ಅಧಿಕ ಸಂಖ್ಯಾಬಾಹುಳ್ಯವನ್ನು ಹೊಂದಿದರೂ ರಾಜಕೀಯವಾಗಿ, ಸಾಮಾಜಿಕವಾಗಿ ಕಡೆಗಣಿಸಲ್ಪಟ್ಟ ಸಮುದಾಯ. ಇಂತಹ ಕುಂಬಾರ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸುವ ಕಟಿ ಬದ್ಧತೆಯೊಂದಿಗೆ, ಕರಾವಳಿಯ ಮೂಲೆ ಮೂಲೆಯಲ್ಲಿ ಚದುರಿ ಹೋಗಿರುವ ಸಮಸ್ತ ಕುಂಬಾರ ಮನಸ್ಸುಗಳನ್ನು ಸಂಘಟನೆಯಡಿಯಲ್ಲಿ ಒಗ್ಗೂಡಿಸಿ ಅವರ ಶ್ರೇಯೋಭಿವೃದ್ಧಿಗೆ ದಣಿವರಿಯದೇ ದುಡಿವುದೇ ನಮ್ಮೆಲ್ಲರ ಹೆಮ್ಮೆಯ ಸಂಘ ಪೆರ್ಡೂರು ಕುಲಾಲ ಸಂಘ ಮತ್ತು ಬುಕ್ಕಿಗುಡ್ಡೆ ಕುಲಾಲ ಸಮುದಾಯ ಭವನ. ಅದೀಗ ದಶಮಾನದ ಸಂಭ್ರಮದಲ್ಲಿ ಬೀಗುತ್ತಿರುವುದು ಕರಾವಳಿಯ ಸಮಸ್ತ ಕುಂಬಾರ ಸಮುದಾಯಕ್ಕೆ ಹೆಮ್ಮೆ ಮತ್ತು ಅಭಿಮಾನದ ಸಂಗತಿ.
ಹೌದು, ಪೆರ್ಡೂರು ಕುಲಾಲ ಸಂಘವೆಂದರೆ ಇಂದು ರಾಜ್ಯದ ಅತ್ಯಂತ ಪ್ರತಿಷ್ಠಿತ ಮತ್ತು ಬಲಿಷ್ಠ ಸಂಘಗಳಲ್ಲಿ ಒಂದು. ಸಮುದಾಯದ ಕಟ್ಟಕಡೆಯ ಬಡ ವ್ಯಕ್ತಿಯನ್ನು ಸಂಘಟನೆಯಡಿಯಲ್ಲಿ ಒಗ್ಗೂಡಿಸಿ ಅವರಲ್ಲಿ ಜಾತಿ ಪ್ರೇಮವನ್ನು ತುಂಬಿ ಕರಾವಳಿಯ ಕುಂಬಾರರ ಆತ್ಮಸಾಕ್ಷಿಯ ಗಟ್ಟಿ ದ್ಯೋತಕದಂತೆ ದುಡಿಯುತ್ತಿರುವ ಹೆಮ್ಮೆಯ ಸಂಸ್ಥೆ. ಸದಾ ಹೊಸ -ಹೊಸ ಯೋಜನೆ ಮತ್ತು ಯೋಚನೆಗಳಿಂದ ಕ್ರೀಯಾಶೀಲವಾಗಿ ತನ್ನನ್ನು ತೆರೆದುಕೊಂಡು, ಸಮುದಾಯ ಅಭಿವೃದ್ಧಿಯ ಹಲವು ಕೆಲಸಗಳನ್ನು ಸಕ್ರೀಯವಾಗಿ ಮಾಡುತ್ತಾ ಬಂದಿರುವ ಗಟ್ಟಿ ಸಂಸ್ಥೆ. ಕರಾವಳಿಯ ಹಲವು ಹಿರಿಯರ, ಸಮುದಾಯ ನಾಯಕರ ಬೆವರಿನ ಫಲಶ್ರುತಿಯಾಗಿ ಮೈದಳೆದು ನಿಂತಿರುವ ಬುಕ್ಕಿಗುಡ್ಡೆ ಕುಲಾಲ ಸಮುದಾಯ ಭವನ ಬದಲಾಗುತ್ತಿರುವ ಕುಂಬಾರರ ಬೆಳವಣಿಗೆಯ ಆತ್ಮಸಾಕ್ಷಿಯ ಪ್ರತೀಕ. ಇಂತಹ ಕರಾವಳಿಯ ಕುಂಬಾರರ ಮಾಣಿಕ್ಯದ ಶಲಾಕೆಯಂತೆ ಕಂಗೊಳಿಸುತ್ತಿರುವ ಪೆರ್ಡೂರು ಕುಲಾಲ ಸಂಘ ದಶಮದ ಸಿಹಿ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.
ಪೆರ್ಡೂರಿನ ಕುಲಾಲ ಸಂಘ ಇವತ್ತು ಇಷ್ಟೊಂದು ಬಲಿಷ್ಠವಾಗಿ ಬೆಳೆಯಬೇಕಾದರೆ ಅದರ ಹಿಂದೆ -ದಣಿವರಿಯದೇ ದುಡಿದ ಕುಲಾಲ ನಾಯಕರ ಬೆವರಿನ ಪರಿಶ್ರಮ, ಸಮಸ್ತ ಕುಲಾಲ ಮನಸ್ಸುಗಳ ಬೆಂಬಲ ಸದಾ ಇದೆ. ಆರಂಭದಲ್ಲಿ ದ.ಕ ಮೂಲ್ಯರ ಯಾನೆ ಕುಲಾಲರ ಸಂಘದ ಅಡಿಯಲ್ಲಿ ಹುಟ್ಟಿಕೊಂಡ ಪೆರ್ಡೂರು ಕುಲಾಲ ಸಂಘ ಆರಂಭದ ದಿನದಲ್ಲಿ ಹಲವು ಸಮಸ್ಯೆಗಳ ಸವಾಲುಗಳನ್ನು ಎದುರಿಸಿ ಗಟ್ಟಿಯಾಗಿ ನಿಂತ ಬಗೆ ಒಂದು ಅಪೂರ್ವ ಯಶೋಗಾಥೆ.
ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ, ಶೈಕ್ಷಣಿಕವಾಗಿಯೂ ಅಷ್ಟೇನೂ ಸಬಲರಾಗಿರದ ಅಂದಿನ ಕುಲಾಲ ಕುಟುಂಬಗಳಿಗೆ ಸಮುದಾಯ ಸಂಘಟನೆಯ ಮಹತ್ವವನ್ನು ತಿಳಿಸಿ ಅವರನ್ನು ಒಗ್ಗೂಡಿಸಿ ಅವರ ನೋವು-ನಲಿವುಗಳಿಗೆ ಸ್ಪಂದಿಸಿದ ಬಗೆ ಅದ್ಬುತ. ಇದೀಗ ಪೆರ್ಡೂರು, ಬೈರಂಪಳ್ಳಿ, ಕುಕ್ಕೆಹಳ್ಳಿ, ಕುಕ್ಕಿಕಟ್ಟೆ, ಶಿವಪುರ, ಹಿರಿಯಡಕ, ಪರ್ಕಳ, ಪಟ್ಲ, ಮರ್ಣೆ, ಅಲೆವೂರು, ಸಗ್ರಿ, ಉಡುಪಿ ಸೇರಿದಂತೆ ಸರಿಸುಮಾರು ಇಪ್ಪತ್ತಕ್ಕೂ ಅಧಿಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಲಾಲರನ್ನು ಒಂದೇ ಸೂರಿನಡಿಯಲ್ಲಿ ಒಗ್ಗೂಡಿಸಿದ ಕೀರ್ತಿ ಪೆರ್ಡೂರು ಕುಲಾಲ ಸಂಘದ್ದು. ಪ್ರಸ್ತುತ ಸರಿಸುಮಾರು ಒಂದು ಸಾವಿರಕ್ಕೂ ಅಧಿಕ ಅಜೀವ ಸದಸ್ಯತ್ವವನ್ನು ಹೊಂದಿರುವ ಸಂಘ ಸಮುದಾಯದ ಅಭಿವೃದ್ಧಿಯ ಕೈಂಕರ್ಯಗಳನ್ನು ಒಂದು ಬೃಹತ್ ತಪಸ್ಸಿನಂತೆ ಕೈಗೊಂಡಿದೆ.
ಪೆರ್ಡೂರು ಕುಲಾಲ ಸಂಘ ಹಿರಿಯರಾದ ರಾಮ ಕುಲಾಲ್ ಪಕ್ಕಾಲು ಅವರ ಸಾರಥಿತನದಲ್ಲಿ ಸ್ವತಂತ್ರಗೊಂಡು, ಹಿರಿ-ಕಿರಿ ಸಮಾನ ಮನಸ್ಕ ಸಂಗಡಿಗರ ಜೊತೆಗೂಡಿ ಗಾಲಿಯ ಚಕ್ರದಂತೆ ಹೊಸ ಹುರುಪು-ಹರುಷದಿಂದ ಕುಂಬಾರ ಸಮುದಾಯವನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದು, ಇದೀಗ ಭವ್ಯ ಕಥನದಂತೆ ನಮ್ಮ ಕಣ್ಣ ಮುಂದೇ ಸುಳಿದು ಹೋಗುತ್ತದೆ.
ಪೆರ್ಡೂರಿನ ಕುಲಾಲರ ಹೆಮ್ಮೆಯ ಧ್ಯೋತಕವಾಗಿ ಮೈದಳೆದು ನಿಂತಿರುವ ಬುಕ್ಕಿಗುಡ್ಡೆ ಕುಲಾಲ ಸುಮದಾಯ ಭವನ ರೂಪುಗೊಂಡ ಬಗೆಯೂ ಒಂದು ಅದ್ಬುತ ಯಶೋಗಾಥೆಯೇ. ಭೂ ಪರಿವರ್ತನೆಯ ಅಂದಿನ ಕಾಲದಲ್ಲಿ ಹನ್ನೆರಡು ಸಾವಿರ ರೂ ಅಂದಿನ ಮೌಲ್ಯವನ್ನು ಕಷ್ಟದಿಂದ ತೆತ್ತು ಬುಕ್ಕಿಗುಡ್ಡೆಯಲ್ಲಿ ಒಂದು ಎಕರೆ ಜಾಗವನ್ನು ಅಂದಿನ ಹಿರಿಯ ನಾಯಕರು ಖರೀದಿಸಿದ್ದರು. ಅವರಿಗಂದು ಇದ್ದ ಭವಿತವ್ಯದ ಕನಸ್ಸಿನಂತೆ ಇಂದು ಒಂದು ಕೋಟಿಗೂ ಮಿಕ್ಕಿ ವೆಚ್ಚದಲ್ಲಿ ಸುಸಜ್ಜಿತ ಸಮುದಾಯ ಭವನ ಲೋಕಾರ್ಪಣೆಗೊಂಡು ಸಮುದಾಯದ ಕಾರ್ಯಕ್ರಮಗಳಿಗೆ ತನ್ನನ್ನು ಅರ್ಪಿಸಿಕೊಳ್ಳುತ್ತಾ ಬಂದಿದೆ.
ಮದುವೆ-ಮುಂಜಿ ಸೇರಿದಂತೆ ಸಮುದಾಯ ಸಂಘಟನೆಯ ಕ್ರೀಡೂತ್ಸವ, ವಾರ್ಷಿಕೋತ್ಸವ, ವರಮಹಾಲಕ್ಷ್ಮಿ ಪೂಜೆ, ಚಂಡಿಕಾ ಹೋಮ, ವ್ಯಕ್ತಿತ್ವ ವಿಕಸನ, ಯೋಗ, ಸುದರ್ಶನ ಕ್ರಿಯೆ, ಭಜನೆ, ಚಂಡೆಕುಣಿತ, ರಕ್ತದಾನ ಶಿಬಿರ, ನೇತ್ರದಾನ ಶಿಬಿರ, ಕಲಾ ತರಬೇತಿ, ಹದಿಹರೆಯದ ಸಮಸ್ಯೆಗಳ ಕುರಿತ ಕಾರ್ಯಗಾರ ಸಹಿತ ನಿತ್ಯವೂ ಇಲ್ಲಿ ಒಂದಿಲ್ಲೊಂದು ಕಾರ್ಯಕ್ರಮ ನೆಡೆಯುತ್ತಿರುವುದು ಸಮುದಾಯಕ್ಕೆ ಒಂದು ದೊಡ್ಡ ಹೆಮ್ಮೆ. ಕಾರ್ಕಳ, ಹೆಬ್ರಿ, ಕಾಪು, ಉಡುಪಿ, ಕುಂದಾಪುರ ಸೇರಿದಂತೆ ಕರಾವಳಿಯ ಮೂಲೆಮೂಲೆಯಿಂದ ಸಮುದಾಯದ ಕುಟುಂಬಗಳು ಮದುವೆಯಂತಹ ಮಂಗಳ ಕಾರ್ಯಕ್ರಮಕ್ಕಾಗಿ ಈ ಭವನವನ್ನು ಅರಸಿಕೊಂಡು ಬರುತ್ತಿರುವುದು ಪೆರ್ಡೂರು ಕುಲಾಲ ಸಂಘಕ್ಕೆ ಹೆಮ್ಮೆ ಮತ್ತು ಅಭಿಮಾನದ ಸಂಗತಿ.
ಶಂಕರ್ ಕುಲಾಲ್ ಪೆರಂಪಳ್ಳಿ ಇವರ ಮುತುವರ್ಜಿಯಿಂದ ಈಗಾಗಲೇ ಎಲ್ಲ ಪಕ್ಷಗಳ ನಾಯಕರನ್ನು ಕಾರ್ಯಕ್ರಮಗಳಿಗೆ ಕರೆಸಿಕೊಂಡು ಸಮುದಾಯದ ಸಮಸ್ಯೆ ಮತ್ತು ತುರ್ತು ಅಗತ್ಯತೆಯ ಬಗೆಗೆ ಅವರಲ್ಲಿ ಹೇಳಿಕೊಂಡು ಸರಕಾರದಿಂದ ಐವತ್ತು ಲಕ್ಷಕ್ಕೂ ಅಧಿಕ ಸಹಾಯಧನವನ್ನು ಜನಪ್ರತಿನಿಧಿಗಳ ಸಹಕಾರದಿಂದ ಬಾಚಿಕೊಂಡಿದೆ. ರಾಜ್ಯದ ಮುಖ್ಯಮಂತ್ರಿಗಳ ಭೇಟಿ ಇತ್ಯಾದಿ ಪೆರ್ಡೂರು ಕುಲಾಲ ಸಂಘದ ಸಕ್ರೀಯತೆಗೆ ಸಾಕ್ಷಿ.
ಇಂತಹ ಪೆರ್ಡೂರು ಕುಲಾಲ ಸಂಘ ಇದೀಗ ದಶಮಾನದ ಸಂಭ್ರಮದಲ್ಲಿದ್ದು, ಪೆರ್ಡೂರು ಕುಲಾಲ ಎರಡು ಕಣ್ಣುಗಳಾದ ರಾಮ ಕುಲಾಲ್ ಮತ್ತು ಐತು ಕುಲಾಲ್ ನೇತ್ರತ್ವದಲ್ಲಿ, ಸಂಘಟನೆಯ ಯುವಕರ ಮುತುವರ್ಜಿಯಿಂದ ಈ ಸವಿಯನ್ನು ಬರುವ ಡಿಸೆಂಬರ್ 23 ಭಾನುವಾರದಂದು ಬೃಹತ್ ಕುಲಾಲ ಸಮಾವೇಶವನ್ನು ಸಂಘಟಿಸುವ ಮೂಲಕ ಕರಾವಳಿಯ ಸಮಸ್ತ ಕುಲಾಲರನ್ನು ಒಂದೇ ಸೂರಿನಡಿಯಲ್ಲಿ ಒಗ್ಗೂಡಿಸುವ ಬೃಹತ್ ಕಾರ್ಯಕ್ಕೆ ಮುಂದಾಗುತ್ತಿದೆ. ಎಲ್ಲ ಪಕ್ಷಗಳ ರಾಜ್ಯ-ರಾಷ್ಟ್ರ ನಾಯಕರನ್ನು ಕರೆಸಿ ಕರಾವಳಿಯ ಕುಲಾಲರ ಸಮಸ್ಯೆ ಮತ್ತು ಅಗತ್ಯತೆಯ ಬಗೆಗೆ ಹಕ್ಕೊತ್ತಾಯ ಮಂಡಿಸುವ ಸಾಮಾಜಿಕ ನ್ಯಾಯದ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ.
ಕರಾವಳಿಯ ಸಮುದಾಯ ಸಂಘಟನೆ, ಕುಂಬಾರಿಕೆ, ವಿಜ್ಞಾನ, ಶಿಕ್ಷಣ, ಕೃಷಿ, ಕ್ರೀಡೆ, ನಾಟಕ, ಸಿನಿಮಾ ಸೇರಿದಂತೆ ಹಲವು ರಂಗದಲ್ಲಿ ಮಿಂಚಿದ ಕುಲಾಲ ಹಿರಿ-ಕಿರಿಯ ಸಾಧಕರನ್ನು ಒಗ್ಗೂಡಿಸಿ ಅವರನ್ನು ಗುರುತಿಸುವ ಕನಸ್ಸೂ ಪೆರ್ಡೂರು ಕುಲಾಲ ಸಂಘಕ್ಕೆ ಇದೆ. ಸಮುದಾಯ ಪ್ರತಿಭೆಗಳ ಒಗ್ಗೂಡುವಿಕೆಯಲ್ಲಿ ಬೃಹತ್ ಸಾಂಸ್ಕೃತಿಕ ಕಲಾ-ವೈವಿದ್ಯವನ್ನು ಸಂಘಟಿಸುವ ಹೆಬ್ಬಯಕೆಯನ್ನೂ ಹೊಂದಿದೆ. ವಿಚಾರ ಮಂಥನ, ಉಡುಪಿ ಜಿಲ್ಲಾ ಉದ್ಯಮಿಗಳ ಮಿಲನ, ಸಮ್ಮಾನ ಹೀಗೆ ಕರಾವಳಿಯ ಕುಲಾಲರ ಇತಿಹಾಸಲ್ಲಿ ಸುವರ್ಣ ಅಕ್ಷರಗಳಲ್ಲಿ ದಾಖಲಿಸಬಹುದಾದ ಈ ದಶಮದ ಅಮೃತ ಸಿಂಚನಕ್ಕೆ ಕರಾವಳಿಯ ಸಮಸ್ತ ಕುಲಾಲರು ಬೆಂಬಲ ಸೂಚಿಸಿ ಒಗ್ಗೂಡಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದೆ. ಸಾಮಾಜಿಕ ನ್ಯಾಯಕ್ಕಾಗಿ, ರಾಜಕೀಯ ಪ್ರಾತಿನಿದ್ಯಕ್ಕಾಗಿ ಸಮಸ್ತ ಕುಂಬಾರರೂ ಒಗ್ಗೂಡಿ ಗಟ್ಟಿ ದನಿಯಲ್ಲಿ ಶಂಖನಾದ ಗೈಯಬೇಕಾದ ತುರ್ತು ಅನಿವಾರ್ಯತೆ ಇದೆ. ಹಾಗಾಗಿ ನಮ್ಮೆಲ್ಲರ ಚಿತ್ತ ಡಿ.23 ಭಾನುವಾರದಂದು ಪೆರ್ಡೂರಿನಲ್ಲಿ ನಡೆಯುವ ಐತಿಹಾಸಿಕ ಕುಂಬಾರರ ಸಮಾವೇಶದತ್ತ ಮೂಡಲಿ. ಕ್ರೇಜ್ ಇಂದಿನಿಂದಲೇ ಆರಂಭಗೊಳ್ಳಲಿ.. ಸಮುದಾಯ ಒಗ್ಗೂಡಲಿ.. ಸಂಘಟನೆ ಬೆಳೆಯಲಿ..ಜೈ ಕುಂಭಶ್ರೀ.










