ನೆನೆಯುವ ಸೂರಿನಡಿ ಕಣ್ಣೀರಿನ ಬದುಕು
ಬೆಳ್ತಂಗಡಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ಒಂದು ಊರು, ನೂರಾರು ಸರಕಾರಿ ಯೋಜನೆಗಳು, ಕಣ್ಣು ಕುಕ್ಕುವ ಪ್ರಗತಿಯ ಭಾಷಣಗಳು… ಆದರೆ ಇವೆಲ್ಲದರ ನಡುವೆ, ಜಗತ್ತಿನ ಕಣ್ಣಿಗೆ ಬೀಳದಂತೆ ಕತ್ತಲಲ್ಲೇ ಕರಗಿಹೋಗುತ್ತಿರುವ ಬದುಕೊಂದರ ಕರುಣಾಜನಕ ಕಥೆಯಿದು. ಬೆಳ್ತಂಗಡಿಯ ಮಚ್ಚಿನ ಗ್ರಾಮದ ಪೈಯೊಟ್ಟು ಎಂಬಲ್ಲಿಗೆ ನೀವು ಹೋದರೆ, ಪ್ರಜಾಪ್ರಭುತ್ವದ ಅಟ್ಟಹಾಸದ ನಡುವೆಯೂ ಮೂಕವಾಗಿ ರೋದಿಸುತ್ತಿರುವ ಆ ತಾಯಿ-ಮಗಳ ಕಣ್ಣೀರಿನ ದೃಶ್ಯ ನಿಮ್ಮ ಎದೆ ಸೀಳದೇ ಇರದು.
ಕಾಂತಪ್ಪ ಮೂಲ್ಯ ಮತ್ತು ಸುಮತಿ ಅವರದು ಪ್ರೀತಿಯ ಸಂಸಾರವಾಗಿತ್ತು. ಆದರೆ ಬಡತನ ಬೆಂಬಿಡದ ಭೂತವಾಗಿ ಕಾಡುತ್ತಿತ್ತು. ಹೆಂಡತಿ ಬೀಡಿ ಕಟ್ಟಿದರೂ, ಗಂಡ ದಿನವಿಡೀ ಬೆವರು ಹರಿಸಿದರೂ ಹೊಟ್ಟೆಯ ಹಸಿವು ನೀಗುತ್ತಿರಲಿಲ್ಲವೇ ವಿನಃ ಒಂದು ತಲೆಯ ಮೇಲೊಂದು ಸುರಕ್ಷಿತ ಸೂರಿನ ಕನಸು ನನಸಾಗುತ್ತಿರಲಿಲ್ಲ. ತಮಗೊಂದು ಸ್ವಂತ ಜಾಗವಿದ್ದರೂ ಅದಕ್ಕೆ ಸರಕಾರದ ಸೀಲು ಬಿದ್ದಿರಲಿಲ್ಲ. ಹೆಂಡತಿ ಮತ್ತು ಪುಟ್ಟ ಮಗಳು ಲಾವಣ್ಯಳಿಗೆ ಒಂದು ಸುಂದರವಾದ ಮನೆ ಕಟ್ಟಿಕೊಡಬೇಕೆಂಬ ಹಂಬಲದಿಂದ ಕಾಂತಪ್ಪ ಅವರು ದೂರದ ಮುಂಬೈಗೆ ವಲಸೆ ಹೋದರು. ಹೊಟೇಲೊಂದರಲ್ಲಿ ಹಗಲಿರುಳು ದುಡಿದರು. ನಾಲ್ಕು ವರ್ಷಗಳ ಹಿಂದೆ, ಏನೋ ಆಸೆಯನ್ನಿಟ್ಟುಕೊಂಡು ಊರಿಗೆ ಬಂದ ಮರುದಿನವೇ ವಿಧಿ ಕ್ರೂರವಾಗಿ ಅಟ್ಟಹಾಸಗೈಯಿತು. ಮಧ್ಯರಾತ್ರಿ ಬಂದ ಆ ತೀವ್ರ ಹೃದಯಾಘಾತ ಕಾಂತಪ್ಪನವರ ಜೀವವನ್ನಷ್ಟೇ ಅಲ್ಲ, ಆ ಇಡೀ ಕುಟುಂಬದ ಆಧಾರವನ್ನೇ ಕಿತ್ತುಕೊಂಡಿತು. ಹೆಂಡತಿ ಸುಮತಿ ಮತ್ತು ಪುಟ್ಟ ಹೆಣ್ಣು ಮಗು ಕಣ್ಣೆದುರೇ ಕಾಂತಪ್ಪ ಕೊನೆಯುಸಿರೆಳೆದಾಗ, ಆ ಜೋಪಡಿಯಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಆ ಕ್ಷಣದಿಂದ ಆ ತಾಯಿ-ಮಗಳು ಅನಾಥರಾದರು.
ಪತಿಯನ್ನು ಕಳೆದುಕೊಂಡ ಸುಮತಿಯವರಿಗೆ ಜಗತ್ತೇ ಶೂನ್ಯವಾಯಿತು. ಆದರೆ ಎದೆ ಮೇಲೆ ಬಿದ್ದ ಹೆಣ್ಣು ಮಗುವಿನ ಮುಖ ನೋಡಿ ಅವರು ಕಣ್ಣೀರನ್ನು ನುಂಗಿ ನಿಂತರು. ತಾನು ಕಲಿಯದಿದ್ದರೂ ಮಗಳನ್ನು ಓದಿಸಿ ದೊಡ್ಡವಳನ್ನಾಗಿ ಮಾಡಬೇಕೆಂಬ ಛಲದಿಂದ ಹರಿದ ಹರಕಲು ಬದುಕನ್ನು ಮತ್ತೆ ತೇಪೆ ಹಾಕಲು ತೊಡಗಿದರು. ಮಗಳು ಲಾವಣ್ಯ ಇಂದು ಪುಂಜಾಲಕಟ್ಟೆಯಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಕಲಿಯುತ್ತಿದ್ದಾಳೆ. ಆಕೆಯ ಕಣ್ಣಲ್ಲಿ ಕನಸುಗಳಿವೆ, ಆದರೆ ಆ ಕನಸುಗಳಿಗೆ ಆಸರೆಯಾಗಬೇಕಾದ ಮನೆಯೇ ಇಂದಿಗೂ ಒಂದು ಬರ್ಬರ ಕತೆಯಾಗಿದೆ.
ಗೋಡೆಗಳಿಲ್ಲದ, ಕೇವಲ ಹರಿದ ಪ್ಲಾಸ್ಟಿಕ್ ಚೀಲಗಳು ಮತ್ತು ಹಳೆಯ ತಗಡಿನ ಶೀಟುಗಳಿಂದ ಮುಚ್ಚಲ್ಪಟ್ಟ ಆ ಜೋಪಡಿಯೇ ಇಂದು ಅವರ ಪ್ರಪಂಚ. ಮಳೆಗಾಲ ಬಂತೆಂದರೆ ಆ ತಾಯಿ-ಮಗಳ ಎದೆಯಲ್ಲಿ ಮೃತ್ಯು ನರ್ತಿಸಲು ತೊಡಗುತ್ತದೆ. ಬಿರುಗಾಳಿ ಬೀಸುವಾಗ ಹರಿದ ಪ್ಲಾಸ್ಟಿಕ್ ಹೊದಿಕೆಗಳು ಹಾರಾಡುತ್ತಿದ್ದರೆ, ಜಡಿಮಳೆಗೆ ಇಡೀ ರಾತ್ರಿ ನಿಂತುಕೊಂಡೇ ಕಳೆಯುವ ಇವರ ಪಾಡನ್ನು ಕಲ್ಲೆದೆಯವರೂ ನೋಡಿ ಕಣ್ಣೀರಿಡಬೇಕು. ಕಳೆದ ವರ್ಷವಂತೂ ಮಧ್ಯರಾತ್ರಿ ಬಿರುಗಾಳಿಗೆ ಇಡೀ ಚಾವಣಿ ಹಾರಿಹೋದಾಗ, ಬೋರ್ಗರೆಯುವ ಮಳೆಯಲ್ಲಿ ನೆನೆಯುತ್ತಾ ಪ್ರಾಣಭಯದಿಂದ ತಾಯಿ-ಮಗಳು ಅಕ್ಕಪಕ್ಕದ ಮನೆಗೆ ಓಡಿದ ಭೀಕರ ದೃಶ್ಯ ಇಂದಿಗೂ ಅವರ ನೆನಪಿನಲ್ಲಿ ಹಸಿರಾಗಿದೆ. ಮಳೆಗಾಲದ ಹೆಸರೆತ್ತಿದರೆ ಆ ಮಗು ಲಾವಣ್ಯ ಇಂದಿಗೂ ನಡುಗುತ್ತಾಳೆ. ಮೊನ್ನೆ ಸುರಿದ ಭಾರೀ ಗಾಳಿ-ಮಳೆಗೆ ಜೋಪಡಿಯ ತಗಡುಶೀಟುಗಳು ಹಾರಿಹೋಗಿದ್ದು ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.
ಗ್ರಾಮ ಪಂಚಾಯತ್ನವರು ಬಂದು ನೋಡಿ “ನಿಮಗೆ ಮೊದಲ ಆದ್ಯತೆಯಲ್ಲಿ ಮನೆ ನೀಡುತ್ತೇವೆ” ಎಂದು ಭರವಸೆಯ ಮಹಾಪೂರವನ್ನೇ ಹರಿಸಿದ್ದಾರೆ. ಆದರೆ ಆ ಭರವಸೆಗಳು ಕಾಗದದ ಮೇಲೆಯೇ ಉಳಿದಿವೆಯೇ ಹೊರತು ಇಂದಿಗೂ ಸುಮತಿಯವರ ಜೋಪಡಿಗೆ ಒಂದು ಇಟ್ಟಿಗೆಯೂ ಸಿಕ್ಕಿಲ್ಲ. ಅಕ್ರಮ-ಸಕ್ರಮದ ಕಡತಗಳು ಸರಕಾರಿ ಕಚೇರಿಗಳ ಧೂಳು ತಿನ್ನುತ್ತಿವೆ. ಕೇವಲ ಒಂಬತ್ತು ಸೆಂಟ್ಸ್ ಜಾಗದ ಹಕ್ಕುಪತ್ರ ಸಿಕ್ಕಿದೆಯಾದರೂ, ಅಲ್ಲಿ ಮನೆ ಕಟ್ಟಲು ಕಾಸಿಲ್ಲದ ಆ ತಾಯಿ ಏನು ತಾನೇ ಮಾಡಿಯಾಳು?
ದೇಶ ಮುಂದುವರಿಯುತ್ತಿದೆ, ಚಂದ್ರನಿಗೆ ಉಪಗ್ರಹಗಳನ್ನು ಕಳುಹಿಸುತ್ತಿದೆ. ಆದರೆ ಬೆಳ್ತಂಗಡಿಯ ಈ ಮೂಲೆಯಲ್ಲಿ ಒಂದು ಹೆಣ್ಣು ಮಗು ಮತ್ತು ಅಸಹಾಯಕ ತಾಯಿ ಗಾಳಿ-ಮಳೆಗೆ ಸಿಲುಕಿ ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ. ಇವರ ಬದುಕಿಗೆ ಈಗ ಸರಕಾರದ ಒಣ ಭರವಸೆಗಳಿಗಿಂತ ಹೆಚ್ಚಾಗಿ ಮಾನವೀಯತೆಯ ದಯೆ ಬೇಕಾಗಿದೆ. ಈ ಬಡ ತಾಯಿ ಮತ್ತು ಆಕೆಯ ಮಗಳ ಶಿಕ್ಷಣಕ್ಕೆ, ಒಂದು ಭದ್ರವಾದ ಸೂರಿನ ನಿರ್ಮಾಣಕ್ಕೆ ಸಮಾಜದ ಸಹೃದಯಿಗಳ ನೆರವು ಅತ್ಯಗತ್ಯವಾಗಿದೆ. `ಜನಸೇವೆಯೇ ಜನಾರ್ದನ ಸೇವೆ’ ಎಂಬಂತೆ, ಈ ನೊಂದ ಜೀವಗಳಿಗೆ ಆಸರೆಯಾಗುವುದು ನಾವು ಭಗವಂತನಿಗೆ ಸಲ್ಲಿಸುವ ನಿಜವಾದ ಪೂಜೆ.
ಸಹಾಯ ಹಸ್ತ ಚಾಚಬಯಸುವ ದಯಾಮಯಿ ದಾನಿಗಳು ಸುಮತಿಯವರನ್ನು ಮೊಬೈಲ್ ಸಂಖ್ಯೆ: 9535838953 ಮೂಲಕ ಸಂಪರ್ಕಿಸಬಹುದು. ಅಥವಾ ಬ್ಯಾಂಕ್ ಆಫ್ ಬರೋಡಾ ಖಾತೆ ಸಂಖ್ಯೆ: 70980100004523 (IFSC: BARBOVJMACK, MICR code 575012046) ಕ್ಕೆ ನೇರವಾಗಿ ಆರ್ಥಿಕ ನೆರವು ನೀಡಿ ಆ ತಾಯಿ-ಮಗಳ ಕಣ್ಣೀರನ್ನು ಒರೆಸಬಹುದು. ನಿಮ್ಮ ಒಂದು ಸಣ್ಣ ಸಹಾಯ, ಒಂದು ಮಗಳ ಭವಿಷ್ಯವನ್ನು ಮತ್ತು ಒಂದು ತಾಯಿಯ ನೊಂದ ಜೀವವನ್ನು ಕಾಪಾಡಬಲ್ಲದು.




