ಕಾಸರಗೋಡು(ಕುಲಾಲ ವರ್ಲ್ಡ್ ಡಾಟ್ ಕಾಮ್): ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಆಶ್ರಯದಲ್ಲಿ ಸಂಘದ 42ನೇ ವಾರ್ಷಿಕೋತ್ಸವವನ್ನು ಕುಂಜತ್ತೂರು ತೂಮಿನಾಡಿನಲ್ಲಿರುವ ಜಿಲ್ಲಾ ಕುಲಾಲ ಸಮುದಾಯ ಭವನದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗಣಪತಿ ಹೋಮದಂತಹ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಂತರ ನಡೆದ ಭವ್ಯ ಸಭಾ ಕಾರ್ಯಕ್ರಮವನ್ನು ಕೇರಳ ಮಣ್ ಪಾತ್ರ ನಿರ್ಮಾಣ ಸಮುದಾಯ ಸಭಾದ ರಾಜ್ಯ ಅಧ್ಯಕ್ಷರಾದ ರಾಜೇಶ್ ಪಾಲಂಗಾಟ್ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿ, ಶುಭ ಹಾರೈಸಿದರು. ಅಖಿಲ ಭಾರತ ಗ್ರಾಹಕರ ಕಲ್ಯಾಣ ಪರಿಷತ್ನ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಮೈಸೂರಿನ ಡಾ. ಎಂ.ಪಿ. ವರ್ಷ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಕುಂಬಾರ ಜನಾಂಗದ ಸುದೀರ್ಘ ಸಾಧನೆಯ ಇತಿಹಾಸವನ್ನು ಮೆಲುಕು ಹಾಕಿದರು. ಮಹಾರಾಷ್ಟ್ರದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸಂವಿಧಾನ ರಚನೆಯಲ್ಲಿ ಪ್ರಮುಖ ಸಹಕಾರ ನೀಡಿದ ರತ್ನಪ್ಪ ಪರಮಪ್ಪ ಕುಂಬಾರ್ ಅವರ ಕೊಡುಗೆಯನ್ನು ಸ್ಮರಿಸುತ್ತಾ, ಸಮುದಾಯದ ಯುವಜನತೆಗೆ ಅವರು ಪ್ರೇರಣೆ ನೀಡಿದರು. ಬಿಎಸ್ಎಫ್ನ ನಿವೃತ್ತ ಕಮಾಂಡೆಂಟ್, ಉಪ್ಪಿನಂಗಡಿಯ ಚಂದಪ್ಪ ಮೂಲ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಮುದಾಯದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಈ ಸಂದರ್ಭದಲ್ಲಿ “ಕುಲಾಲ ಸಾಧಕ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತರಲ್ಲಿ ಸೇಸಮ್ಮ ನಾರಾಯಣ ಮೂಲ್ಯ (ಮುನ್ನಿಪ್ಪಾಡಿ, ಟೀಚರ್ ಪೆರ್ಮುದೆ), ರಾಮಚಂದ್ರ ಬಡಾಜೆ, ಶ್ರೀನಿವಾಸ ಮೂಲ್ಯ (ಹೇರೂರು), ಕೆ. ಸೀತಾರಾಮ ಕುಲಾಲ್ (ಕಣ್ವತೀರ್ಥ), ಮೋಹನ ಕಡಂಬಾರು, ಚಂದ್ರಹಾಸ ದೈಗೋಳಿ, ಸತೀಶ್ ದೈಗೋಳಿ, ಕೃಷ್ಣ ಎನ್. ನೆಲ್ಲಿಕಳಯ, ಡಾ. ಆನಂದ ಎಂ. ಕಿದೂರು, ರಾಮ ತುಳುವನ (ಉಪ್ಪಿನೆ), ಸಂದೀಪ್ ಕೋಳೂರು, ಚಂದ್ರಶೇಖರ್ ಬೇಡಗುಡ್ಡೆ, ಕು. ನಮಿತಾ ಕೆ.ಜಿ. ಹಾಗೂ ಕುಮಾರ್ ಸುದೀಪ್ ಪಳ್ಳತಡ್ಕ (ಮೀಯಪದವು) ಸೇರಿದ್ದಾರೆ.
ಕೇರಳ ತ್ರಿಸ್ತರ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಅಭೂತಪೂರ್ವ ಜಯ ಗಳಿಸಿದ ಸಮುದಾಯದ ಜನಪ್ರತಿನಿಧಿಗಳಾದ ಕಮಲಾಕ್ಷಿ ವಿ. ಕುಲಾಲ್ (ವರ್ಕಾಡಿ – ಮಂಜೇಶ್ವರ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷರು), ಶಾಂತಾಕುಮಾರಿ (ಬೋಳಂತಕೋಡಿ), ಲತೇಶ್ ಕೆ. (ಮಜಿಬೈಲ್), ಗೋಪಾಲಕೃಷ್ಣ ಪಜ್ಜ (ಕೊಡ್ಲಮೊಗರು), ಮಾಲತಿ ಕೆ., ಗಾಯತ್ರಿ ರವೀಂದ್ರ (ಕಾಯರಡ್ಕ), ಚಂದ್ರಶೇಖರ (ಗುದ್ದಲಕೋಡಿ), ಐತಪ್ಪ ಕುಲಾಲ್ (ನಲ್ಕ), ವಿಜಯ ಕುಲಾಲ್, ಜಗದೀಶ್ (ಎಣ್ಮಕಜೆ), ಮಹೇಶ್ (ಅಜ್ಜಿಮೂಲೆ) ಹಾಗೂ ಸೀತಾ ಭಾಸ್ಕರ್ (ತಚ್ಚಾಣಿ) ಇವರುಗಳನ್ನು ಜಿಲ್ಲಾ ಸಂಘದ ಪರವಾಗಿ ಅದ್ಧೂರಿಯಾಗಿ ಸನ್ಮಾನಿಸಿ, ಅಭಿನಂದಿಸಲಾಯಿತು.
ಸಂಘದ ಸಾಮಾಜಿಕ ಮತ್ತು ಶೈಕ್ಷಣಿಕ ಸೇವಾ ಕಾರ್ಯಗಳ ಅಂಗವಾಗಿ, ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿದ 40ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಇದೇ ವೇಳೆ ಸಂಘದ ವತಿಯಿಂದ ಸಮುದಾಯದ ಸುಮಾರು 400ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಯಿತು. ಅಲ್ಲದೆ, ಕುಲಾಲ ಸಂಘದ 15 ಮತ್ತು 16ನೇಯ ‘ಆಸರೆ’ ಯೋಜನೆಯಡಿ ಇಬ್ಬರು ಅರ್ಹ ಫಲಾನುಭವಿಗಳಿಗೆ ಆರ್ಥಿಕ ಸಹಾಯಧನವನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೇರಳ ಮಣ್ ಪಾತ್ರ ನಿರ್ಮಾಣ ಸಮುದಾಯದ ರಾಜ್ಯ ಉಪಾಧ್ಯಕ್ಷರಾದ ಕೆ. ಭಾಸ್ಕರನ್, ರಾಜ್ಯ ಕಾರ್ಯದರ್ಶಿ ಕೆ. ವಿಜಯನ್, ಕಾಸರಗೋಡು ಜಿಲ್ಲಾ ಅಧ್ಯಕ್ಷ ಕೆ. ಜಿತೇಶ್ ಕುಮಾರ್, ಮೀಂಜ ಮೀಯಪದವು ಕೃಷಿ ಅಧಿಕಾರಿ ಚಂಚಲಾ, ಪ್ರಮುಖ ಉದ್ಯಮಿ ಕೊರಗಪ್ಪ ಜೆ. ಬಂಜನ್, ದಯಾನಂದ ಮುಜಂಗಾವು, ರವೀಂದ್ರ ಸಾಲ್ಯಾನ್, ಸುಜಿತ್ ಕೊಂಚಾಡಿ ಹಾಗೂ ಹೂವಯ್ಯ ನೂಜಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಜಿಲ್ಲಾಧ್ಯಕ್ಷರಾದ ನ್ಯಾಯವಾದಿ ರವೀಂದ್ರ ಮುನ್ನಿಪಾಡಿ ಎಲ್ಲರನ್ನೂ ಸ್ವಾಗತಿಸಿದರು. ದಾಮೋದರ ಮಾಸ್ಟರ್ (ಕಬ್ಬಿನಹಿತ್ತಿಲು) ವಂದನಾರ್ಪಣೆ ಮಾಡಿದರು. ಯುವ ಸಾಹಿತಿ ನವೀನ್ ಕುಲಾಲ್ ಕಜೆ ಚಿಪ್ಪಾರು ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಈ ಮಹೋತ್ಸವದಲ್ಲಿ ಜಿಲ್ಲಾ ಸಂಘದ ಪದಾಧಿಕಾರಿಗಳು, ಕಟ್ಟಡ ಸಮಿತಿಯ ಪದಾಧಿಕಾರಿಗಳು ಹಾಗೂ 10 ಪಂಚಾಯಿತಿ શાಖೆಗಳ ಅಧ್ಯಕ್ಷರು ಮತ್ತು ನೂರಾರು ಸಮುದಾಯದ ಬಂಧುಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.



