ಸೌಂದರ್ಯ ಲೋಕದಲ್ಲಿ ಕುಲಾಲ ಪ್ರತಿಭೆಯ ಹ್ಯಾಟ್ರಿಕ್ ಸಾಧನೆ
ಮುಂಬಯಿ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಕರಾವಳಿಯ ಪ್ರತಿಭಾನ್ವಿತ ಬಾಲಕಿ ಪೂರ್ವಿ ಕುಲಾಲ್ ಅವರು ಸೌಂದರ್ಯ ಲೋಕದಲ್ಲಿ ಸಾಲು ಸಾಲು ಸಾಧನೆಗಳ ಮೂಲಕ ಉಡುಪಿಯ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ. ಲೂಪ್ ಸಂಸ್ಥೆಯು ಒನ್ ಸ್ಟೆಪ್ ಕ್ಲೋಸರ್ ಸಹಯೋಗದೊಂದಿಗೆ ಮಣಿಪಾಲದಲ್ಲಿ ಆಯೋಜಿಸಿದ್ದ ‘ಮಿಸ್, ಟೀನ್ & ಮಿಸೆಸ್ ಮಣಿಪಾಲ್ 2025–26’ ಸೌಂದರ್ಯ ಸ್ಪರ್ಧೆಯಲ್ಲಿ ಪೂರ್ವಿ ಅವರು ತಮ್ಮ ಅದ್ಭುತ ಆತ್ಮವಿಶ್ವಾಸದ ಪ್ರದರ್ಶನದೊಂದಿಗೆ `ಮಿಸ್ ಟೀನ್ ಕ್ರೌನ್ ಆಫ್ ಕಾನ್ಫಿಡೆನ್ಸ್’ ಪ್ರಶಸ್ತಿಯನ್ನು ಹೆಮ್ಮೆಯಿಂದ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಉಡುಪಿ ಹಿರಿಯಡ್ಕದ ಗ್ರೀನ್ ಪಾರ್ಕ್ ಸೆಂಟ್ರಲ್ ಶಾಲೆಯ 9ನೇ ತರಗತಿಯ ಹೆಮ್ಮೆಯ ವಿದ್ಯಾರ್ಥಿನಿಯಾಗಿರುವ ಪೂರ್ವಿ ಕುಲಾಲ್ , ಪೆರ್ಡೂರಿನ ನಿವಾಸಿಗಳಾದ ಏಕನಾಥ್ ಕುಲಾಲ್ ಮತ್ತು ಗಾಯತ್ರಿ ಕುಲಾಲ್ ದಂಪತಿಯ ಸುಪುತ್ರಿ. ಇವರ ಯಶಸ್ಸಿನ ಪಯಣ ಇಷ್ಟಕ್ಕೇ ಸೀಮಿತವಾಗಿಲ್ಲ; ಇತ್ತೀಚೆಗಷ್ಟೇ ಮುಂಬಯಿಯ ‘ಗೆಲಾಕ್ಟಿಕ್ ಯೂನಿವರ್ಸ್ ಇಂಡಿಯಾ’ ಮಾಡೆಲ್ ಮ್ಯಾನೇಜ್ಮೆಂಟ್ ಸಂಸ್ಥೆಯು ಜುಹೂನ ‘ಹೋಟೆಲ್ ಮುಂಬೈ ಹೌಸ್’ನಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ದೇಶದ ವಿವಿಧ ಮೂಲೆಗಳಿಂದ ಬಂದ ನೂರಾರು ಸ್ಪರ್ಧಿಗಳನ್ನು ಹಿಂದಿಕ್ಕಿ ‘ಮಿಸ್ ಟೀನ್ ಗೆಲಾಕ್ಟಿಕ್ ಯುನಿವರ್ಸ್ ಇಂಡಿಯಾ (ಸೌತ್) -2026’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಅದಕ್ಕೂ ಮುನ್ನ ನಡೆದ ‘ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ -2025’ ಸ್ಪರ್ಧೆಯಲ್ಲಿಯೂ ‘ಮಿಸ್ ಕ್ವೀನ್ ಕರಾವಳಿ’ ಪ್ರಶಸ್ತಿ ಗೆದ್ದು ಸೈ ಎನಿಸಿಕೊಂಡಿದ್ದರು. ನಿರಂತರ ಪರಿಶ್ರಮ ಮತ್ತು ಅಪ್ರತಿಮ ಪ್ರತಿಭೆಯ ಮೂಲಕ ಸೌಂದರ್ಯ ಮತ್ತು ಆತ್ಮವಿಶ್ವಾಸದ ವೇದಿಕೆಗಳಲ್ಲಿ ಮಿಂಚುತ್ತಿರುವ ಪೂರ್ವಿ ಕುಲಾಲ್ ಅವರ ಸಾಧನೆಗೆ ಈಗ ಎಲ್ಲೆಡೆಯಿಂದ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ.

