ಬೆಳಗಾವಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಇತ್ತೀಚೆಗೆ ನಡೆದ ’15ನೇ ರಾಷ್ಟ್ರಮಟ್ಟದ ಅಕ್ವೆಟಿಕ್ ಚಾಂಪಿಯನ್ಶಿಪ್-2018’ನ 70ರಿಂದ 74 ವರ್ಷದೊಳಗಿನ ವಿಭಾಗದ ಈಜು ಸ್ಪರ್ಧೆಯಲ್ಲಿ ಬೆಳಗಾವಿಯ ಲಕ್ಷ್ಮಣ ಕುಂಬಾರ ಅವರು ಎರಡು ಚಿನ್ನ ಸಹಿತ ಐದು ಪದಕಗಳನ್ನು ಗೆದ್ದಿದ್ದಾರೆ.
ಆಂಧ್ರಪ್ರದೇಶದ ವಿಶಾಕಪಟ್ಟಣದಲ್ಲಿ ನಡೆದ ಸ್ಪರ್ಧೆಯಲ್ಲಿ ಲಕ್ಷ್ಮಣ ಅವರು, 4*50 ಮೀಟರ್ಸ್ ಮಿಡ್ಲ್ ರಿಲೇ ಮತ್ತು ಫ್ರೀ ಸ್ಟೈಲ್ ರಿಲೇಯಲ್ಲಿ ತಲಾ ಒಂದು ಚಿನ್ನದ ಪದಕ ಗೆದ್ದಿದ್ದಾರೆ. 50 ಮೀ. ಬಟರ್ಫ್ಲೈ, 200 ಮೀ. ಬ್ರಿಸ್ಟ್ ಸ್ಟ್ರೋಕ್ನಲ್ಲಿ ತಲಾ ಒಂದು ಬೆಳ್ಳಿ ಪದಕ, 50 ಮೀ. ಬ್ರಿಸ್ಟ್ ಸ್ಟ್ರೋಕ್ನಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
ರೇಲ್ವೆ ಇಲಾಖೆಯ ಆರ್ಎಂಎಸ್ (ರೇಲ್ವೆ ಮೇಲ್ ಸರ್ವಿಸ್) ವಿಭಾಗದಲ್ಲಿ ಕಾರ್ಯನಿರ್ವಹಿಸಿ ಹತ್ತು ವರ್ಷದ ಹಿಂದೆ ನಿವೃತ್ತರಾಗಿರುವ ಲಕ್ಷ್ಮಣ ಕುಂಬಾರ ಈಜು ಸ್ಪರ್ಧೆಗಳಲ್ಲಿ 42 ವರ್ಷಗಳಿಂದಲೂ ಪಾಲ್ಗೊಳ್ಳುತ್ತಿದ್ದು, ರಾಜ್ಯ, ರಾಷ್ಟ್ರೀಯ ಹಾಗೂ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ 227 ಚಿನ್ನ, ಬೆಳ್ಳಿ, ಕಂಚಿನ ಪದಕ ಹಾಗೂ ಪಾರಿತೋಷಕಗಳನ್ನು ತಮ್ಮದಾಗಿಸಿಕೊಂಡ ಕೀರ್ತಿ ಅವರದು. ನಿತ್ಯವೂ ಒಂದು ಗಂಟೆ ಯೋಗ ಹಾಗೂ ವಾಕಿಂಗ್ ಮಾಡುತ್ತಾರೆ. ಇದಲ್ಲದೇ, ಈಜುಕೊಳದಲ್ಲಿ 3 ಕಿ.ಮೀ.ನಷ್ಟು ಈಜುತ್ತಾರೆ. ಈಚೆಗೆ ನಡೆದ ರಾಜ್ಯ ಮಾಸ್ಟರ್ಸ್ ಈಜುಸ್ಪರ್ಧೆಯಲ್ಲಿ 4 ಚಿನ್ನದ ಪದಕಗಳಿಗೆ ಕೊರಳೊಡ್ಡಿ, ರಾಷ್ಟ್ರೀಯ ಕೂಟಕ್ಕೆ ಆಯ್ಕೆಯಾಗಿದ್ದಾರೆ. ದಣಿವರಿಯದ ಸಾಧಕರೆನಿಸಿದ್ದಾರೆ. ಬೆಳಗಾವಿ ಸ್ವಿಮ್ಮರ್ಸ್ ಕ್ಲಬ್ನ ಸಂಸ್ಥಾಪಕ ಸದಸ್ಯರೂ ಆಗಿದ್ದಾರೆ.