ಬಂಟ್ವಾಳ (ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಇಂಗ್ಲೆಂಡ್ನ ಮ್ಯಾಂಚೆಸ್ಟರ್ ನಲ್ಲಿ ಶ್ರವಣಶಕ್ತಿಯ ಕೊರತೆ ಇರುವವರಿಗಾಗಿ ನಡೆದ ಅಂತಾರಾಷ್ಟ್ರೀಯ ಚೆಸ್ ಪಂದ್ಯಾಟದ ಮಹಿಳಾ ವಿಭಾಗದಲ್ಲಿ ಭಾಗವಹಿಸಿದ ಪುತ್ತೂರು ಜೀನಿಯಸ್ ಚೆಸ್ ಅಕಾಡೆಮಿ ವಿದ್ಯಾರ್ಥಿನಿ, ಬಂಟ್ವಾಳ ಕಡೇಶಿವಾಲಯ ಪ್ರೌಢಶಾಲೆಯ 10ನೆ ತರಗತಿಯಲ್ಲಿ ಕಲಿಯುತ್ತಿರುವ ಯಶಸ್ವಿ ಕಂಚಿನ ಪದಕಗಳಿಸಿದ್ದಾಳೆ.
ಜುಲೈ 6ರಿಂದ 16ರವರೆಗೆ ಶ್ರವಣಶಕ್ತಿಯ ಕೊರತೆ ಇರುವ ಮಹಿಳೆಯರಿಗಾಗಿ ಇರುವ ಅಂತಾರಾಷ್ಟ್ರೀಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಈಕೆ ಭಾಗವಹಿಸಿದ್ದಳು.

ಬುದ್ಧಿವಂತರ ಆಟವೆಂದೇ ಹೆಸರಾಗಿರುವ ಚದುರಂಗದಾಟ (ಚೆಸ್)ದಲ್ಲಿ ಫಿಡೆಯ 1300ನೆ ರೇಟಿಂಗ್ ಗಳಿಸಿರುವ ಯಶಸ್ವಿ, ಬಂಟ್ವಾಳ ಎಸ್ವಿಎಸ್ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಲ್ಯಾಬ್ ಅಸಿಸ್ಟೆಂಟ್ ತಿಮ್ಮಪ್ಪ ಮೂಲ್ಯ ಮತ್ತು ಬಂಟ್ವಾಳ ತಾಲೂಕಿನ ಸರಕಾರಿ ಶಾಲಾ ಶಿಕ್ಷಕಿ ಯಶೋಧಾ ದಂಪತಿಯ ಇಬ್ಬರು ಹೆಣ್ಣುಮಕ್ಕಳಲ್ಲಿ ಎರಡನೆಯವಳು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಚೆಸ್ ಪಂದ್ಯಾಕೂಟಕ್ಕೆ ತೆರಳುವ ಮುನ್ನ ಆಕೆಯನ್ನು ಗೌರವಿಸಿದ್ದರು. ಯಶಸ್ವಿ ಕಲಿಯುತ್ತಿರುವ ಕಡೇಶಿವಾಲಯ ಸರಕಾರಿ ಹೈಸ್ಕೂಲಿನಲ್ಲಿ ಆಕೆಯನ್ನು ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.






