ಇವರು ತುಳುನಾಡಿನ ನಡೆದಾಡುವ ಕೃಷಿ ಯೂನಿವರ್ಸಿಟಿ..!
`95’ ಪ್ರಾಯದ ರೈತನ ದಣಿವರಿಯದ ಸ್ಟೋರಿ..!
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಆ ಹಿರಿಯ ಚೇತನದ ವಯಸ್ಸು ಸೆಂಚೂರಿಗೆ ಹತ್ತಿರದಲ್ಲಿದೆ. ಆದರೆ ಇಳಿವಯಸ್ಸಲ್ಲೂ ಆ ಅಜ್ಜನ ಉತ್ಸಾಹ ಮಾತ್ರ ಇನ್ನೂ ಬತ್ತಿಲ್ಲ. ವಯಸ್ಸಾಯ್ತು ಅಂತ ಮೂಲೆ ಸೇರೋರ ಮಧ್ಯೆ ಈ ಹಿರಿಯಜ್ಜ ಇನ್ನೂ ಯಂಗ್ ಅಂಡ್ ಎನರ್ಜಿಟಿಕ್. ಅಲ್ಲದೇ ಸೆಂಚೂರಿ ಆಸುಪಾಸಿನಲ್ಲಿರೋ ಈ ತಾತಾ ಈಗಲೂ ಮಂಗಳೂರಿನ ಮಟ್ಟಿಗೆ ನಂಬರ್ ಒನ್ ಯಶಸ್ವಿ ಕೃಷಿಕ…ಹಾಗಿದ್ದರೆ ಆ ಹಿರಿವಯಸ್ಸಿನ ಗಟ್ಟಿಗ ಯಾರು? ಅವರ ಕೃಷಿ ಕಾಯಕ ಎಂಥಾದ್ದು ಅನ್ನೋದನ್ನು ನಾವು ಹೇಳ್ತೀವಿ.
ಈ ಅಜ್ಜ ಯಾವುದೇ ಆಯಾಸವೇ ಇಲ್ಲದೇ ನೇರವಾಗಿ ಗದ್ದೆಯತ್ತ ಹೆಜ್ಜೆ ಹಾಕಿ ಕೃಷಿ ಕೆಲಸ ಮಾಡುತ್ತಾರೆ, ಗದ್ದೆಯ ಸುತ್ತ ಬೆಳೆದಿರೋ ಕಳೆ ಕೀಳುತ್ತಾರೆ…ಅಷ್ಟೇ ಅಲ್ಲಾ, ಬರೋಬ್ಬರಿ 15 ಎಕರೆ ಕೃಷಿ ಭೂಮಿಯಲ್ಲಿ ಸಲೀಸಾಗಿ ತಮ್ಮ ಕೃಷಿ ಕಾಯಕವನ್ನು ಮಾಡ್ತಾರೆ. ಇದೆಲ್ಲ ನೋಡಿದರೆ ನಾವು-ನೀವು ಇವರ ವಯಸ್ಸೆಷ್ಟಪ್ಪ ಅಂತ ಒಮ್ಮೆ ಯೋಚನೆ ಮಾಡದೇ ಇರೋದಿಲ್ಲ. ಆದರೆ ಇಷ್ಟೆಲ್ಲಾ ಅನಾಯಸವಾಗಿ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿರೋ ಈ ಹಿರಿಯ ಜೀವದ ವಯಸ್ಸು ಬರೋಬ್ಬರಿ 95 ವರ್ಷ. ಆದರೆ ಇವರು ನಿತ್ಯ ಮಾಡೋ ಕೃಷಿ ಕಾರ್ಯಗಳು ಮಾತ್ರ ಅವರ ವಯಸ್ಸನ್ನು ಮೀರಿದ್ದು ಅನ್ನೋದೇ ಅಚ್ಚರಿ ಪಡುವ ವಿಚಾರ. ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಪಾವಂಜೆ ಗ್ರಾಮದವರಾಗಿರುವ ರುಕ್ಕಯ್ಯ ಮೂಲ್ಯರಿಗೆ ಸದ್ಯ 95ರ ಹರೆಯ. ಆದರೆ ಈಗಲೂ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುವ ಇವರು ಸದ್ಯ ಇಡೀ ಜಿಲ್ಲೆಯ ಮಟ್ಟಿಗೆ ಹಿರಿವಯಸ್ಸಿನ ಪ್ರಗತಿ ಪರ ಕೃಷಿಕ. ದಿ। ಬೊಗ್ಗು ಮೂಲ್ಯ ಮತ್ತು ದಿ। ದುಗ್ಗಮ್ಮ ಮೂಲ್ಯ ರವರ ಪುತ್ರನಾಗಿ ಪಾವಂಜೆ ಗ್ರಾಮದಲ್ಲಿ ಜನಿಸಿದರು.
ಕಡುಬಡತನವಿದ್ದುದರಿಂದ ಶಾಲೆಯ ಮೆಟ್ಟಿಲುನ್ನು ಏರದೆ, ಕೃಷಿಯನ್ನೇ ತನ್ನ ಸರ್ವಸ್ವ ಎಂದು ತಿಳಿದು ಕಾರ್ಯ ಪ್ರವೃತ್ತರಾದರು. ತನ್ನ ಹತ್ತನೇ ವಯಸ್ಸಲ್ಲೇ ನೇಗಿಲು ಹಿಡಿದು ಕೃಷಿ ಭೂಮಿಗೆ ಇಳಿದ ರುಕ್ಕಯ್ಯ ಮತ್ತೆ ತಿರುಗಿ ನೋಡಿದ್ದೇ ಇಲ್ಲ. ಸುಮಾರು 85 ವರ್ಷಗಳಿಂದ ನಿರಂತರ ಕೃಷಿ ಕಾಯಕ ನಡೆಸಿಕೊಂಡು ಬರುತ್ತಿರುವ ಇವರು ಈಗಲೂ ಅದೇ ಮಣ್ಣಿನ ಮಗ. ಸುಮಾರು 15 ಎಕ್ರೆ ಕೃಷಿ ಭೂಮಿಯಲ್ಲಿ ಏನೆಲ್ – ಸುಗ್ಗಿ – ಕೊಳಕೆ – ಇಡೆ ಕೊಳಕೆ ಕೃಷಿ ಮಾಡಿ ತಾಲೂಕಿನಲ್ಲಿಯೇ ಹೆಚ್ಚು ಇಳುವರಿ ತೆಗೆದ ಕೀರ್ತಿ ರುಕ್ಕಯ್ಯ ಮೂಲ್ಯರವರದ್ದು. ಇನ್ನೂ ರುಕ್ಕಯ್ಯರ ಪಾವಂಜೆಯ ಮನೆಯ ಮುಂದೆಯೇ ಸುಮಾರು 15 ಎಕರೆ ಕೃಷಿ ಭೂಮಿಯಿದೆ. ಈ ಭೂಮಿಗೆ ಈ ರುಕ್ಕಯ್ಯರೇ ಒಡೆಯ. ಹೀಗಾಗಿ ನಿತ್ಯ 5 ಗಂಟೆಗೆಲ್ಲಾ ಏಳುವ ಈ ಹಿರಿಯಜ್ಜ ದನ, ಎಮ್ಮೆಯ ಆರೈಕೆಯಲ್ಲಿ ತೊಡಗ್ತಾರೆ. ಒಬ್ಬರೇ ಮನೆಯ ಅಷ್ಟೂ ಎಮ್ಮೆ ಮತ್ತು ದನ-ಕರುಗಳಿಗೆ ಹುಲ್ಲು, ಆಹಾರ ಹಾಕಿ ನಂತರ ಹಾರೆ, ಪಿಕ್ಕಾಸು ಹಿಡಿದು ಗದ್ದೆಯತ್ತ ಮುಖ ಮಾಡ್ತಾರೆ.
ಹೀಗೆ ಬೆಳಿಗ್ಗಿನಿಂದ ಮಧ್ಯಾಹ್ನದವರೆಗೆ ಗದ್ದೆ ಕೆಲಸ ಮಾಡೋ 95ರ ಅಜ್ಜನಿಗೆ ದಣಿವೆಂಬುದೇ ಇಲ್ಲ. ಕೃಷಿ ಭೂಮಿಯ ಕಳೆ ಕೀಳೋದು, ತೋಡು ಬಿಡಿಸೋದು ಮತ್ತು ಪೈರು ನಾಟಿ ಸೇರಿದಂತೆ ಎಲ್ಲಾ ಕೆಲಸವೂ ಅಜ್ಜನದ್ದೆ. ಇದಾದ ಬಳಿಕ ಮನೆಯ ಸಣ್ಣಪುಟ್ಟ ಕೆಲಸ ಮಾಡೋ ರುಕ್ಕಯ್ಯ ಮೂಲ್ಯ, ಈ ವಯಸ್ಸಲ್ಲೂ ತೆಂಗಿನ ಸಿಪ್ಪೆ ಸುಳಿಯೋದು ನೋಡಿದರೆ ಅಚ್ಚರಿಯಾಗುತ್ತೆ. 70ರ ವಯಸ್ಸಲ್ಲೇ ನಿಲ್ಲೋಕಾಗದೇ ಇರೋ ಜನರ ಮಧ್ಯೆ ಇವರ ಗಟ್ಟಿತನ ನಿಜಕ್ಕೂ ಗ್ರೇಟ್.
ಯಂತ್ರದ ಮೂಲಕ ದಿನಕ್ಕೆ ನೂರಾರು ತೆಂಗಿನ ಸಿಪ್ಪೆ ಸುಳಿಯೋ ಗಟ್ಟಿಗ ಈ ರುಕ್ಕಯ್ಯ ಮೂಲ್ಯ. ಇನ್ನು ಇಷ್ಟೆಲ್ಲಾ ಆದಮೇಲೆ ಸಂಜೆ ಪೇಟೆಗೆ ವಾಕಿಂಗ್ ಹೋಗೋ ಈ ತಾತಾ, ಈ ಭಾಗದ ಜನರ ಪ್ರೀತಿಯ ಅಜ್ಜನೂ ಹೌದು. ಪಾವಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುವವರು ರುಕ್ಕಯ್ಯ ಮೂಲ್ಯರ ಕೃಷಿ ಚಟುವಟಿಕೆಯನ್ನು ನೋಡದವರೇ ಇರಲಿಕ್ಕೆ ಇಲ್ಲ. ಮನೆಯಲ್ಲಿ ಭತ್ತವನ್ನು ಅಕ್ಕಿ ಮಾಡಿ ಅನುಭವವಿರುವ ರುಕ್ಕಯ್ಯ ಮೂಲ್ಯ , ಯಾವ ಋತು ಮಾನದಲ್ಲಿ ಯಾವ ಬೆಲೆ ಸೂಕ್ತವಾದದ್ದು ಎಂದು ಹೇಳುವುದರಲ್ಲಿ ನಿಸ್ಸಿಮರು. ಇವರ ಮನೆಯಲ್ಲಿ ಇವರ ಸಾಧನೆಗೆ ಸಿಕ್ಕಿರೋ ಪ್ರಶಸ್ತಿ ಪತ್ರಗಳು, ಫಲಗಳು ಈ ಹಿರಿಯಜ್ಜನ ಸಾಧನೆಯ ಕಥೆ ಹೇಳುತ್ತಿದೆ. ಇನ್ನು ಇವರ ಈ ದಣಿವರಿಯ ಕೃಷಿ ಬದುಕಿನ ಬಗ್ಗೆ ಸಂಬಂಧಿಕರು ಮತ್ತು ಊರವರಿಗೂ ಹೆಮ್ಮೆಯಿದೆ.
ಒಟ್ಟಾರೆ ಕಳೆದ 85 ವರ್ಷಗಳಿಂದ ಈ ಜೀವಕ್ಕೆ ಕೃಷಿಯೇ ಆಧಾರ. ವರ್ಷವಿಡೀ ಕೃಷಿ ಭೂಮಿಯಲ್ಲಿ ಬೇರೆ ಬೇರೆ ಬೆಳೆ ಬೆಳೆದು ತೋರಿಸಿಕೊಟ್ಟಿದ್ದಾರೆ. ಇಂದಿಗೂ ಇವರ ಕುಟುಂಬಕ್ಕೆ ಈ ಅಜ್ಜನ ಕೃಷಿ ಭೂಮಿಯೇ ಆಧಾರ. ಏಳು ಮಕ್ಕಳನ್ನ ಹೊಂದಿರೋ ರುಕ್ಕಯ್ಯ ಮೂಲ್ಯ ಮಕ್ಕಳಿಗೂ ಕೃಷಿ ಕಾಯಕದ ಅರಿವು ಮೂಡಿಸಿದ್ದಾರೆ. ದಣಿವರಿಯದ ಇವರ ಕೃಷಿ ಸೇವೆಗೆ ನಿಜಕ್ಕೂ ಭೇಷ್ ಎನ್ನಲೇ ಬೇಕು.
ಬರಹ: ವಜ್ರ ಗುಜರನ್, ಮಾಡೂರು (ಚಿತ್ರ: ಅನೂಪ್ ಸೂರಿಂಜೆ)




