ಉಡುಪಿ(ಮೇ.೧೮, ಕುಲಾಲ್ ವರ್ಲ್ಡ್ ನ್ಯೂಸ್): ಕರಾಟೆ ಜಪಾನ್ ಮೂಲದ ಸಮರ ಕಲೆ. ಈ ಕಲೆಯಲ್ಲಿ ಬಾಲಕನೊಬ್ಬ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದು ಸದ್ದಿಲ್ಲದೇ ಹೆಸರು ಮಾಡಿದ್ದಾನೆ. ಗ್ರಾಮೀಣ ಪ್ರತಿಭೆ ವಿಶಾಲ್ ಸಾಧನೆ ಮಾಡಿ ಚಿಕ್ಕವಯಸ್ಸಿಗೆ ಎಲ್ಲರ ಗಮನಸೆಳೆದಿದ್ದಾನೆ.
ಕಾಪು ಸಮೀಪದ ಕಳತ್ತೂರು ಇರಂದಾಡಿ ಗ್ರಾಮದ ಸುರೇಂದ್ರ ಕುಲಾಲ್ ಮತ್ತು ಸುಗಂಧಿ ಕುಲಾಲ್ ಪುತ್ರನಾದ ವಿಶಾಲ್ ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಅಂತರಾಷ್ಟ್ರೀಯ ಜೂನಿಯರ್ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಕುಮಿಟೆ ವಿಭಾಗದಲ್ಲಿ ಬೆಳ್ಳಿ ಪದಕ ಮತ್ತು ಕಟಾ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾನೆ. ಎಲ್ಲೂರು ಯುವಕ ಮಂಡಲದ ವತಿಯಿಂದ ನಡೆಸುವ ಕರಾಟೆ ತರಗತಿಯಲ್ಲಿ ನಿರಂತರ ಪರಿಶ್ರಮದಿಂದ ಅಭ್ಯಾಸ ಮಾಡುತ್ತಿರುವ ವಿಶಾಲ್ ಈ ಹಿಂದೆ ತಾಲೂಕು, ಜಿಲ್ಲ್ಲಾ ಮತ್ತು ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಬಹುಮಾನ ಗೆದ್ದುಕೊಂಡಿದ್ದಾನೆ.
ಈತನ ಸಾಧನೆಯನ್ನು ಗುರುತಿಸಿ ಕಳತ್ತೂರು ಕುಲಾಲ ಒಕ್ಕೂಟದ ವತಿಯಿಂದ ಸಮ್ಮಾನ ಮಾಡಿದೆ. ವಿಶಾಲ್ ನ ಕಿರಿ ಸಹೋದರ ವಿನೀತ್ ಕೂಡಾ ಕರಾಟೆ ಕಲಿಕೆಯಲ್ಲಿ ತೊಡಗಿಕೊಂಡಿದ್ದಾನೆ. ಎಲ್ಲೂರು ಯುವಕ ಮಂಡಲ ಕರಾಟೆ ತರಗತಿಯ ಹಲವು ವಿದ್ಯಾರ್ಥಿಗಳು ಶ್ರೀಲಂಕಾದಲ್ಲಿ ನಡೆದ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.