ಮಂಗಳೂರು(ಕುಲಾಲ್ ವರ್ಲ್ಡ್ ನ್ಯೂಸ್): ಜಮ್ಮು ಕಾಶ್ಮೀರದ ಶ್ರೀನಗರದ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಮೂರನೇ MINF ಮುವಾಯ್ ಥಾಯ್ ಫೆಡರೇಷನ್ ಕಪ್ -2018 ಇದರಲ್ಲಿ ಭಾಗವಹಿಸಿದ ಮಂಗಳೂರಿನ ಯುವಕ ಮೊಟ್ಟಮೊದಲ ಬಾರಿಗೆ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಮುವಾಯ್ ಥಾಯ್ ಕಿಕ್ ಬಾಕ್ಸಿಂಗ್ (81ರಿಂದ 86 ಕೆಜಿ ವಿಭಾಗ) ನಲ್ಲಿ ಭಾಗವಹಿಸಿದ ಕುಲಾಲ ಸಮಾಜದ ಯುವಕ ಸುಕ್ರೀತ್ ಕೋಡಿಕಲ್ ಅವರು ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದಾರೆ. ಏಪ್ರಿಲ್ 19ರಿಂದ 23ರವರೆಗೆ ನಡೆದ ಈ ಕೂಟದಲ್ಲಿ ಒಟ್ಟು ಹದಿನೈದು ರಾಜ್ಯದ ಕ್ರೀಡಾಪಟುಗಳು ಭಾಗವಹಿಸಿದ್ದರು. ಸುಕ್ರೀತ್ ಅವರು ಕೋಡಿಕಲ್ ನ ಉಮಾನಾಥ್ ಬಂಗೇರ ಮತ್ತು ಯಶೋಧ ದಂಪತಿಯ ಸುಪುತ್ರರಾಗಿದ್ದು, ಬಿಎಸ್ಸಿ ಪದವೀಧರರಾಗಿದ್ದಾರೆ.
ಮುವಾಯ್ ಥಾಯ್ (Mauythai) ಎನ್ನುವುದು ಒಂದು ಜನಪ್ರಿಯ ಸಮರ ಕಲೆಯಾಗಿದ್ದು ಅದು ನಮ್ಮ ಆತ್ಮರಕ್ಷಣೆಯ ಅಸ್ತ್ರ ಕೂಡ ಹೌದು. ಥಾಯ್ಲೆಂಡ್ ನಲ್ಲಿ ಜನಪ್ರಿಯವಾಗಿರುವ ಮುವಾಯ್ ಥಾಯ್ ಎಂಬ ಸಮರಕಲೆ ಭಾರತ ಸೇರಿದಂತೆ ಇತರ ಕಡೆ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ.