ವಿದ್ಯಾರ್ಥಿ, ಯುವಜನ ಚಳವಳಿಯಲ್ಲಿ ಗುರುತಿಸಿಕೊಂಡಿರುವ ನಾಯಕರನ್ನು ಈ ಬಾರಿ ಜಿಲ್ಲೆಯಲ್ಲಿ ಸ್ಪರ್ಧೆಗಿಳಿಸಿಲು ಸಿಪಿಐಎಂ ಮುಂದಾಗಿದ್ದು, ವಿದ್ಯಾರ್ಥಿ, ಯುವಜನ ಚಳವಳಿಯಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಸ್ತುತ ಡಿವೈಎಫ್ಐ ಜಿಲ್ಲಾ ಜೊತೆ ಕಾರ್ಯದರ್ಶಿಯಾಗಿ, ವಕೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ಕುಲಾಲ ಸಮುದಾಯದ ಯುವಕ ನಿತಿನ್ ಕುತ್ತಾರ್ ಉಳ್ಳಾಲ ಕ್ಷೇತ್ರದ ಅಭ್ಯರ್ಥಿಯೆಂದು ಘೋಷಿಸಿದ್ದು, ಹಲವರಲ್ಲಿ ಅಚ್ಚರಿ ಮೂಡಿಸಿದೆ..
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ರಂಗೇರಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಸ್ ಹಾಗೂ ಸಿಪಿಐ(ಎಂ) ಚುನಾವಣೆಯನ್ನು ಎದುರಿಸಲು ಭರದ ತಯಾರಿ ನಡೆಸಿಕೊಳ್ಳುತ್ತಿದೆ.
ದ.ಕ ಜಿಲ್ಲೆಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿಪಿಐ(ಎಂ) ಯುವ ನಾಯಕರಿಗೆ ಮಣೆ ಹಾಕಿದ್ದು, ಈಗಾಗಲೇ ಕಾರ್ಮಿಕ ಯುವ ಮುಖಂಡ ಸುನಿಲ್ ಕುಮಾರ್ ಬಜಾಲ್ ಮಂಗಳೂರು ದಕ್ಷಿಣ, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಂಗಳೂರು ಉತ್ತರ, ದ.ಕ ಡಿವೈಎಫ್ಐ ಮಾಜಿ ಅಧ್ಯಕ್ಷ ಯಾದವ್ ಶೆಟ್ಟಿ ಮೂಡುಬಿದಿರೆ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದು, ಸಾಮಾಜಿಕ ಜಾಲತಾಣ ಹಾಗೂ ಬಹಿರಂಗ ಪ್ರಚಾರ ಆರಂಭಿಸಿದ್ದಾರೆ.
ಉಳಿದೆಲ್ಲಾ ಪಕ್ಷಗಳಿಗಿಂತ ಚುನಾವಣೆಗೆ ಎರಡು ತಿಂಗಳ ಮೊದಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಚುನಾವಣಾ ಪ್ರಚಾರಕ್ಕಿಳಿಯುವ ಸಿಪಿಐ(ಎಂ) ತಂತ್ರ ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಪರಿಣಾಮಕಾರಿಯಾಗಬಲ್ಲದು ಎಂಬುವುದು ರಾಜಕೀಯ ವಿಶ್ಲೇಷಕರ ಮಾತು.
ಅಚ್ಚರಿ ಮೂಡಿಸಿದ 25ರ ಹರಯದ ನಿತಿನ್ ಆಯ್ಕೆ!
ವಿದ್ಯಾರ್ಥಿ, ಯುವಜನ ಚಳವಳಿಯಲ್ಲಿ ಗುರುತಿಸಿಕೊಂಡಿರುವ ನಾಯಕರನ್ನು ಈ ಬಾರಿ ಜಿಲ್ಲೆಯಲ್ಲಿ ಸ್ಪರ್ಧೆಗಿಳಿಸಿಲು ಸಿಪಿಐಎಂ ಮುಂದಾಗಿದ್ದು, ವಿದ್ಯಾರ್ಥಿ, ಯುವಜನ ಚಳವಳಿಯಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಸ್ತುತ ಡಿವೈಎಫ್ಐ ಜಿಲ್ಲಾ ಜೊತೆ ಕಾರ್ಯದರ್ಶಿಯಾಗಿ, ವಕೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ನಿತಿನ್ ಕುತ್ತಾರ್ ಉಳ್ಳಾಲ ಕ್ಷೇತ್ರದ ಅಭ್ಯರ್ಥಿಯೆಂದು ಘೋಷಿಸಿದ್ದು, ಹಲವರಲ್ಲಿ ಅಚ್ಚರಿ ಮೂಡಿಸಿದೆ.

ಕೇವಲ 25ರ ಹರಯದ ನಿತಿನ್ ಕುತ್ತಾರ್ ಬಿ.ಕಾಂ ಮುಗಿಸಿ ಎಲ್ಎಲ್ಬಿ ಪದವೀಧರರಾಗಿದ್ದಾರೆ. 2011 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ತರಗತಿ ಪ್ರತಿನಿಧಿಯಾಗಿ ಚುನಾವಣೆ ಆಯ್ಕೆಗೊಂಡಿದ್ದಾರೆ. ಈ ಹಿಂದೆ ವಿದ್ಯಾರ್ಥಿ ಚಳವಳಿಯಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿರುವ ನಿತಿನ್, ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್ಎಫ್ಐ) ಜಿಲ್ಲಾಧ್ಯಕ್ಷರಾಗಿ, ರಾಜ್ಯ ಜೊತೆ ಕಾರ್ಯದರ್ಶಿಯಾಗಿದ್ದು, ಕಳೆದ ಬಾರಿ ವಿದ್ಯಾರ್ಥಿ ಚಳವಳಿಯಿಂದ ಹೊರಬಂದಿದ್ದರು. ಬಳಿಕ ಜಿಲ್ಲೆಯ ಯುವಜನ ಚಳವಳಿಯಲ್ಲಿ ಗುರುತಿಸಿಕೊಂಡಿರುವ ನಿತಿನ್ ಪ್ರಸ್ತುತ ಡಿಫಿ ಜಿಲ್ಲಾ ಜೊತೆ ಕಾರ್ಯದರ್ಶಿಯಾಗಿದ್ದಾರೆ.
ಸರ್ಕಾರಿ ಶಾಲೆ ಉಳಿಸಲು ಯಶಸ್ವಿ ಹೋರಾಟ
2012 ರಲ್ಲಿ ಆಗಿನ ಬಿಜೆಪಿ ಸರಕಾರ ಪ್ರೊ. ಗೋವಿಂದ ವರದಿಯ ಪ್ರಕಾರ ರಾಜ್ಯದ 12,000 ಶಾಲೆಗಳನ್ನು ಮುಚ್ಚಲು ಹೊರಟಾಗ ನ.1 ರಂದು ತನ್ನ ನಾಯಕತ್ವದಲ್ಲಿ ನೆಹರೂ ಮೈದಾನದಲ್ಲಿ ಹೋರಾಟ ನಡೆಸಿದ ಫಲವಾಗಿ ಶಾಲೆಗಳನ್ನು ಉಳಿಸಿದ ಕೀರ್ತಿ ನಿತಿನ್ ಅವರದು. ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯರಾಗಿರುವ ನಿತಿನ್ ಜಿಲ್ಲೆಯಲ್ಲಿ ನಡೆಯುತ್ತಿರುವ ಅನೈತಿಕ ಪೊಲೀಸ್ ಗಿರಿ, ಕೋಮು ಗಲಭೆಗಳ ವಿರುದ್ದ ಧ್ವನಿ ಎತ್ತುತ್ತಲೇ ಹಲವರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.
ಯು.ಟಿ ಖಾದರ್ ವರ್ಸಸ್ ನಿತಿನ್ ಕುತ್ತಾರ್
ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ ಖಾದರ್ ವಿರುದ್ದ ನಿತಿನ್ ಕುತ್ತಾರ್ ಸ್ಪರ್ಧೆ ಖಚಿತವಾಗಿದೆ. ತನ್ನ ಸರಳತೆಯಿಂದಲೇ ಆಗಾಗೆ ಮಾಧ್ಯಮಗಳಲ್ಲಿ ಸುದ್ದಿಯಲ್ಲೇ ಇರುವ ಯು.ಟಿ ಖಾದರ್ ವಿರುದ್ದ ಶೋಷಿತರ ಪರ, ಅನ್ಯಾಯದ ವಿರುದ್ದ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ ಸಂತ್ರಸ್ತರಿಗೆ ನೆರವಾಗುವ ನಿತಿನ್ ಚುನಾವಣಾ ಸ್ಪರ್ಧೆ ಉಳ್ಳಾಲ ಕ್ಷೇತ್ರದ ರಾಜಕೀಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.
ನಿತಿನ್ ಗೆದ್ದರೆ ತುಳುನಾಡಿನ ಧ್ವನಿಯಾಗಬಲ್ಲ: ಡಿಫಿ ರಾಜ್ಯಾಧ್ಯಕ್ಷ ಮುನೀರ್
ಖುಷಿಯ ಸಂಗತಿ. ವಿದ್ಯಾವಂತ, ಜನಪರ ಕಾಳಜಿಯ, ಬಡತನದ ಅರಿವಿರುವ, ಶೋಷಿತ ಸಮುದಾಯದ, ಪ್ರಾಮಾಣಿಕ ಯುವಜನರು ಚುನಾವಣೆಯ ಕಣಕ್ಕಿಳಿಯುವುದು ಇಂದಿನ ರಾಜಕೀಯ ಸಂದರ್ಭದಲ್ಲಿ ಅತ್ಯಂತ ಅಗತ್ಯವಾದದ್ದು. ಅದರಲ್ಲೂ ಕಮ್ಯುನಿಸ್ಟ್ ಪಕ್ಷವೊಂದು ಇಂತಹ ನಿರ್ಧಾರ ಕೈಗೊಂಡಿರುವುದು ಮಹತ್ವದ ಸಂಗತಿ. ನಿತಿನ್ ನನ್ನ ಜೊತೆಗೆ ಬೆಳೆದ ಹುಡುಗ. ಆತನಿಗೆ ಅಪಾರವಾದ ತಿಳುವಳಿಕೆಯಿದೆ, ಸೈದ್ದಾಂತಿಕ ಬದ್ದತೆ, ಹಸಿವು, ಅಸಮಾನತೆಯ ಕುರಿತು ಆಕ್ರೋಶ ಆತನಲ್ಲಿದೆ. ಕೋಮುವಾದದ ವಿರುದ್ದ ಸೈದ್ದಾಂತಿಕ ಸ್ಪಷ್ಟತೆಯಿಂದ ಮಾತಾಡಬಲ್ಲ. ಆತ ಗೆದ್ದರೆ ತುಳುನಾಡಿನ ಎಲ್ಲರ ಧ್ವನಿಯಾಗಬಲ್ಲ. ಅದರಲ್ಲೂ ಯುವಜನತೆಯ ಸಮಸ್ಯೆಗಳಿಗೆ ಉತ್ತರ ಹುಡುಕಬಲ್ಲ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಾಳ್ಳ ತಿಳಿಸಿದ್ದಾರೆ.
ಅಭ್ಯರ್ಥಿ ಆಯ್ಕೆ ಸಂತೋಷದ ವಿಚಾರ: ನಿತಿನ್ ಕುತ್ತಾರ್

ಒಂದು ರಾಪ್ಟ್ರೀಯ ಪಕ್ಷದಲ್ಲಿ ಕಾರ್ಯಕರ್ತನಾಗಿ ದುಡಿದದನಿಗೆ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದು ಸಂತೋಷದ ವಿಚಾರ. ಕಾರ್ಮಿಕರು, ಜನ ಸಾಮಾನ್ಯರಿಗಾಗಿ ಅನೇಕ ಹಿರಿಯ ಸಂಗಾತಿಗಳು ಜೀವನ ಸವೆಸಿದ್ದಾರೆ. ಅವರ ಪ್ರತಿನಿಧಿಯಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ.
ಕೃಪೆ : ಕರಾವಳಿ ಕರ್ನಾಟಕ ಡಾಟ್ ಕಾಮ್





