ಹಾವೇರಿ: ತಾಲ್ಲೂಕಿನ ಕನಕಾಪುರದ ಕಂದಾರಮ್ಮ ದೇವಸ್ಥಾನದಲ್ಲಿ ದೇವಿಯ ಉಬ್ಬು ಆಕೃತಿ ಹೊಂದಿದ ಪುರಾತನವಾದ ಮಣ್ಣಿನ ಮಡಕೆಯನ್ನು ಉಪನ್ಯಾಸಕ ಪ್ರಮೋದ ನಲವಾಗಲ ಹಾಗೂ ಡಾ.ರಮೇಶ ತೆವರಿ ಗುರುತಿಸಿದ್ದಾರೆ.
ಮಡಕೆಯು ಕಪ್ಪು ಬಣ್ಣದಾಗಿದ್ದು, 1ಅಡಿ ಎತ್ತರವಿದ್ದು, ತಳಭಾಗ ಸಮತಟ್ಟಾಗಿದೆ. ಅದರ ಮೇಲೆ ಕೋಣನ ಮೇಲೆ ಆಯುಧ ಹಿಡಿದು ನಿಂತಿರುವ ಶಕ್ತಿ ದೇವಿಯ ಆಕೃತಿ ಇದೆ. ಅಕ್ಕಪಕ್ಕದಲ್ಲಿ ಇಬ್ಬರು ಮಾನವರ ಚಿತ್ರಗಳಿವೆ. ಇದರಲ್ಲಿ ದೇವಿಯ ಎಡಭಾಗದಲ್ಲಿ ನಿಂತಿರುವ ಮನುಷ್ಯನ ಶಿರಚ್ಛೇದ್ಧವಾಗಿದೆ.

‘ಎಂಟು ವರ್ಷಗಳ ಹಿಂದೆ ಕನಕಾಪುರ ಹಾಗೂ ಹೊಂಬರಡಿ ಗ್ರಾಮಗಳ ಮಧ್ಯದ ಗುಡ್ಡದಲ್ಲಿ ಎಲುಬು ಹಾಗೂ ಬೂದಿ ತುಂಬಿಕೊಂಡಿದ್ದ ಈ ಮಡಕೆ ಸಿಕ್ಕಿತ್ತು’ ಎಂದು ಸ್ಥಳೀಯರು ತಿಳಿಸುತ್ತಾರೆ.
‘ಶಕ್ತಿ ದೇವತೆಯ ಆರಾಧನೆಯು ವೇದಗಳ ಕಾಲದಿಂದಲೂ ನಡೆದುಕೊಂಡು ಬಂದಿದೆ. ಅಲ್ಲಿ, ದೇವಿಯ ವಿಗ್ರಹ ಅಥವಾ ಕೋಣನ ತಲೆಯ ರೀತಿಯ ಕಲ್ಲು ಇದ್ದರೆ, ಇಲ್ಲಿ ಬಹುಕಾಲದಿಂದ ಪೂಜಿಸುವ ಶಕ್ತಿ ದೇವತೆಯ ಆಕೃತಿ ಮಡಕೆಯ ಮೇಲಿದೆ. ಇದು ಇತಿಹಾಸ ಪೂರ್ವ ಕಾಲಕ್ಕೆ ಸಂಬಂಧಿಸಿರಬಹುದು’ ಎಂದು ಹಿರಿಯ ಸಂಶೋಧಕ ಡಾ. ಭೋಜರಾಜ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂಶೋಧನೆ:
‘ಕನಕಾಪುರ ಗ್ರಾಮದಲ್ಲಿ ಎರಡು ಶಾಸನಗಳು ದೊರೆತಿದ್ದು, ಒಂದು ಶಾಸನ ಅಸ್ಪಷ್ಟವಾಗಿದೆ. ಇನ್ನೊಂದರಲ್ಲಿ ‘ಶ್ರೀ ವಿನಾಯಕ ದೇವರ ಆಶ್ರಿತ’ ಎಂಬ ಅಕ್ಷರಗಳ ಸಾಲು ಕಂಡು ಬರುತ್ತವೆ. ಹೀಗಾಗಿ ಇಲ್ಲಿ ಸುಮಾರು 500 ವರ್ಷಗಳ ಹಿಂದೆ ಗಣೇಶ (ವಿನಾಯಕ)ನ ದೇವಸ್ಥಾನ ಇದ್ದಿರಬಹುದು’ ಎಂದು ಅಂದಾಜಿಸಲಾಗಿದೆ.
ಈ ಹಿಂದೆ ಇದ್ದ ಗಣೇಶನ ದೇವಾಲಯ ನಶಿಸಿ ಹೋಗಿರಬಹುದು. ಗುಡ್ಡದ ಮೇಲ್ಭಾಗದಲ್ಲಿ ಮಹಿಷಾಸುರನ ಹಾಗೂ ಮಹಿಷಾಸುರ ಮರ್ದಿನಿ ಚಿತ್ರಗಳು ಬಂಡೆಯ ಮೇಲಿವೆ. ಜಕಾತಿ ಕಲ್ಲು, ಅಪರೂಪದ ವಾಮನ ಕಲ್ಲುಗಳು, ಶಂಖ-ಚಕ್ರಗಳಿರುವ ದಾನಶಾಸನಗಳು ಹಾಗೂ ಶಕ್ತಿದೇವತೆಯ ವಿಗ್ರಹಗಳು ದೊರೆತಿರುವುದು ಕುತೂಹಲವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಗ್ರಾಮಸ್ಥರಾದ ಭರಮಗೌಡ ಗಾಜೀಗೌಡ್ರ, ಎಸ್. ಎಫ್ಎನ್. ಗಾಜಿಗೌಡ್ರ, ಶಿವರಾಯಪ್ಪ ದೇವಗಿರಿ, ಎಫ್.ಎಸ್.ದೊಡ್ಡತಳವಾರ, ಬಸನಗೌಡ ಬಸನಗೌಡ್ರ, ಅಶೋಕ ಬಣಕಾರ, ಅಜ್ಜಪ್ಪ ದೊಡ್ಡತಳವಾರ, ಪ್ರಕಾಶ ಬಣಕಾರ, ಚಂದ್ರಪ್ಪ ಹರ್ಲಾಪುರ, ಹನುಮಂತಗೌಡ ಗಾಜಿಗೌಡ್ರ, ಭರಮಗೌಡ ತಿಪ್ಪನವರ ಪತ್ತೆ ಹಚ್ಚುವ ಕಾರ್ಯದಲ್ಲಿ ಸಹಕಾರ ನೀಡಿದ್ದಾರೆ ಎಂದು ಉಪನ್ಯಾಸಕ ಪ್ರಮೋದ. ನಲವಾಗಲ ಹಾಗೂ ಡಾ.ರಮೇಶ ತೆವರಿ ತಿಳಿಸಿದ್ದಾರೆ.
ಸುದ್ದಿ ಕೃಪೆ : ಪ್ರಜಾವಾಣಿ

