ಕಲೆಯೇ ಹಾಗೆ ಅದು ಎಲ್ಲರಿಗೂ ಒಲಿದರೂ ಕೆಲವರಿಗೆ ಅದು ಬದುಕು ಕೊಡುವುದಿಲ್ಲ. ಕಲೆ ಕೆಲವರಿಗೆ ಹವ್ಯಾಸವಾದರೆ ಮತ್ತೆ ಕೆಲವರಿಗೆ ಹೊಟ್ಟೆಪಾಡು. ತಮಗೆ ಒಲಿದ ಕಲೆಯನ್ನು ಬಳಸಿಕೊಂಡು ಬದುಕು ಕಟ್ಟಿಕೊಂಡವರು ಬಹಳಷ್ಟು ಜನರಿದ್ದಾರೆ ಅವರ ನಡುವೆ ಟೆರ್ರಾಕೋಟಾ (ಕುಂಭಕಲೆ) ಕಲಾಕೃತಿಗಳನ್ನು ರಚಿಸುವಲ್ಲಿ ನೈಪುಣ್ಯತೆ ಪಡೆದಿರುವ ವಿ.ಕೆ ಮುನುಸಾಮಿ ಒಬ್ಬರು. ಇವರು ಓದಿದ್ದು ಕೇವಲ ಎಂಟನೇ ತರಗತಿ ಮಾತ್ರ. ಆದರೆ ಇವರ ಕಲೆ ಪ್ರಪಂಚದಾದ್ಯಂತ ಫೇಮಸ್ಸು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಈ ಕಲೆಗಾರನ ಕೈಚಳಕದಿಂದ ಮೂಡಿ ಬಂದಿರುವ ಅನೇಕ ಕಲಾಕೃತಿಗಳು ವಿದೇಶಿಗರ ಮನಸೂರೆಗೊಳಿಸಿವೆ. ಹೀಗಾಗಿಯೇ ಇವರು 2015ನೇ ಇಸವಿಯಲ್ಲಿ ಪ್ರತಿಷ್ಠಿತ ಯುನೆಸ್ಕೊ ಪ್ರಶಸ್ತಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
1967ರ ಜುಲೈ 21ರಂದು ಪಾಂಡಿಚೇರಿಯ ವಿಲಿಯನೂರು ಎಂಬಲ್ಲಿ ಹುಟ್ಟಿದ ಮುನುಸಾಮಿ ಅವರು ಕುಂಬಾರ ಸಮುದಾಯದವರಾದ್ದರಿಂದ ಕಲೆ ವಂಶಪಾರಂಪರ್ಯವಾಗಿ ಕರಗತವಾಯಿತು. ಇವರ ತಂದೆ, ಅಜ್ಜ, ಮುತ್ತಜ್ಜ ಕಾಲದಿಂದಲೂ ಸಾಂಪ್ರದಾಯಿಕ ಕುಂಬಾರಿಕೆಯನ್ನು ಮಾಡುತ್ತಿದ್ದರು. ಹೀಗಾಗಿ ಮಣ್ಣಿನೊಂದಿಗಿನ ಒಡನಾಟ ಬಾಲ್ಯದಲ್ಲೇ ಇತ್ತು. ತನ್ನ ವಿದ್ಯಾಭ್ಯಾಸವನ್ನು 8ನೇ ತರಗತಿಗೆ ಮೊಟಕುಗೊಳಿಸಿದ ಮುನುಸಾಮಿ ಟೆರ್ರಾಕೋಟಾ ಕಲಾಕೃತಿ ರಚಿಸುವಲ್ಲಿ ಆಸಕ್ತಿ ಬೆಳೆಸಿಕೊಂಡರು. ಈ ಕಲೆಯನ್ನು ಕರಗತ ಮಾಡಿಕೊಳ್ಳಲು ಅವರಿಗೆ ಪ್ರೇರಕರಾಗಿ ಗುರುವಾಗಿದ್ದವರು ದಿ. ಕೃಷ್ಣ ಪತ್ತಾರ್. ಇವರ ಗರಡಿಯಲ್ಲಿ ಪಳಗಿದ ಮುನುಸಾಮಿ ಟೆರ್ರಾಕೋಟಾದಲ್ಲಿ ವಿವಿಧ ವಿನ್ಯಾಸ, ಪ್ರಯೋಗಗಳನ್ನು, ವೈಶಿಷ್ಟ್ಯಗಳನ್ನು ಸೃಷ್ಟಿಸತೊಡಗಿದರು. ಆರಂಭದಲ್ಲಿ ಗಣಪತಿ ವಿಗ್ರಹ ತಯಾರಿಕೆಯಲ್ಲಿ ಆರಂಭಗೊಂಡ ಇವರ ಕಲೆ ಅದೇ ಮುಂದುವರಿದು ಪ್ರಸಿದ್ಧ ಸಾಧಕರ ವಿಗ್ರಹ ರಚನೆಯಲ್ಲಿ ಪಳಗಿಕೊಳ್ಳುವಂತೆ ಮಾಡಿತು. ಮಣ್ಣಿನ ದೇವ- ದೇವತೆಗಳ ವಿಗ್ರಹ , ಚಿಕಣಿ, ಟ್ರೆರ್ರಾಕೋಟಾ ಫ್ರಿಡ್ಜ್, ಮೈಕ್ರೋವೇವ್, ವಾಟರ್ ಫಿಲ್ಟರ್, ಮಣ್ಣಿನ ಪ್ರಾಣಿ-ಪಕ್ಷಿಗಳ ಸೃಷ್ಟಿಸಲು ಕಲಿತರು.
೧೯೯೦ರಲ್ಲಿ ಸ್ವಂತ ಟೆರ್ರಾಕೋಟಾ ವರ್ಕ್ ಶಾಪ್ ಆರಂಭಿಸಿ ವಿವಿಧ ಕಲಾಕೃತಿ ರಚನೆಯಲ್ಲಿ ತೊಡಗಿದ ಮುನುಸಾಮಿ ಅವರು ಸ್ಪೇನ್ ನ ಬಾರ್ಸಿಲೋನಾ, ಸಿಂಗಾಪುರ, ಜರ್ಮನಿ, ರೊಮೇನಿಯಾ, ವಿಯೆಟ್ನಾ೦, ಫ್ರಾನ್ಸ್, ಅಮೆರಿಕಾ, ಸ್ವಿಟ್ಜರ್ಲಾಂಡ್ ನಲ್ಲಿ ನಡೆದ ವಸ್ತುಪ್ರದರ್ಶನಗಳಲ್ಲಿ ಭಾಗವಹಿಸಿ, ಕಲಾಕೃತಿ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ.
ಇವರ ಕಲಾಕೃತಿಗಳಿಗೆ 1998ರ ಬಳಿಕ ಐದು ಬಾರಿ ರಾಷ್ಟ್ರೀಯ ಪ್ರಶಸ್ತಿ ದೊರಕಿದ್ದು, ಎಂಟು ಅಂತಾರಾಷ್ಟ್ರೀಯ ಪ್ರಶಸ್ತಿ ಸೇರಿ ಒಟ್ಟು ಎಪ್ಪತ್ತಕ್ಕೂ ಅಧಿಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸುಮಾರು ಹತ್ತು ಸಾವಿರ ಯುವಕ-ಯುವತಿಯರಿಗೆ, ೨ ಲಕ್ಷ ಶಾಲಾ ವಿದ್ಯಾರ್ಥಿಗಳಿಗೆ ತಾನು ಕಲಿತ ಕಲೆಯನ್ನು ಧಾರೆ ಎರೆದು ತರಬೇತಿ ನೀಡಿರುವ ಮುನುಸಾಮಿ, ಹಲವು ಸಂಘ ಸಂಸ್ಥೆಯ ಕುಶಲಕರ್ಮಿ ಶಿಕ್ಷಕರಿಗೆ ಪ್ರೇರಕರಾಗಿ ಕೆಲಸ ಮಾಡಿದ್ದಾರೆ.
ಕವಿತಾ ಎಂಬಾಕೆಯನ್ನು ವರಿಸಿರುವ ಮುನುಸಾಮಿ ಅವರಿಗೆ ಒಬ್ಬ ಪುತ್ರ, ಇಬ್ಬರು ಪುತ್ರಿಯರಿದ್ದಾರೆ. Handicrafts Artisans Welfare Association (HAWA) ಇದರ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಮುನುಸಾಮಿ ಅವರು ಡೆಲ್ಲಿ ಕ್ರಾಫ್ಟ್ ಕೌನ್ಸಿಲ್ ನೀಡುವ ಪ್ರತಿಷ್ಠಿತ `ಕಮಲಾ ದೇವಿ ಪುರಸ್ಕಾರ’ವನ್ನೂ ಪಡೆದಿದ್ದಾರೆ. ವಿದ್ಯಾಭ್ಯಾಸ ಕಡಿಮೆಯಿದ್ದರೂ ಸಾರ್ಥಕ ಕಲೆ, ಕೌಶಲ್ಯದಿಂದ ಜೀವನ ಕಟ್ಟಲಷ್ಟೇ ಅಲ್ಲ, ದೇಶ-ವಿದೇಶಗಳಲ್ಲಿ ಪ್ರಸಿದ್ಧಿಯನ್ನೂ ಗಳಿಸಲು ಸಾಧ್ಯ ಎನ್ನುವುದಕ್ಕೆ ಮುನುಸಾಮಿ ಉದಾಹರಣೆ.
ಬರಹ : ದಿನೇಶ್ ಇರ್ವತ್ತೂರು










