ಕಾಸರಗೋಡು(ಡಿ.೩೧, ಕುಲಾಲ್ ವರ್ಲ್ಡ್ ನ್ಯೂಸ್): ಅಕಾಲಿಕ ಮಳೆ, ವಿವಿಧ ರೋಗಗಳ ಬಾಧೆ, ಕಷ್ಟಪಟ್ಟು ದುಡಿದರೂ ಬೆಳೆದ ಫಸಲಿಗೆ ಸೂಕ್ತ ಬೆಲೆ ದೊರಕದಿರುವುದು, ಆಳುಗಳ ಸಮಸ್ಯೆ ಹೀಗೆ ಹಲವಾರು ಕಾರಣಗಳಿಂದಾಗಿ ರೈತರು ಭತ್ತದ ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ಆದರೆ ಇವನ್ನೆಲ್ಲ ಎದುರಿಸಿಯೂ ಕೃಷಿಯಿಂದ ವಿಮುಖರಾಗದೇ, ಭತ್ತದ ಕೃಷಿಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳವ ಮೂಲಕ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬದಿಯಡ್ಕ ಸಮೀಪದ ಮುಂಡಿತಡ್ಕ ಉಪ್ಪಿನೆ ತುಳುವನದ ಬೀರಾಜೆ ನಾರಾಯಣ ಮೂಲ್ಯ ಕೃಷಿಯಲ್ಲಿ ಯಶಸ್ಸು ಸಾಧಿಸಿದ್ದಾರೆ.
ಇಂದಿಗೂ ಕೋಣಗಳ ಮೂಲಕವೇ ಉಳುವೆ ಮಾಡಿ ಹಳೆ ಕೃಷಿ ಪದ್ಧತಿ ಮೂಲಕವೇ ಭತ್ತದ ಕೃಷಿ ಮಾಡುತ್ತಿರುವ ನಾರಾಯಣ ಮೂಲ್ಯರು 15 ಮುಡಿ ಭತ್ತ ಬೆಳೆಯುವ ಮೂಲಕ ಕೃಷಿಯಿಂದ ಲಾಭವಿದೆ ಎಂದು ತೋರಿಸಿಕೊಟ್ಟಿದ್ದಾರೆ. ಸುಮಾರು 60 ವರ್ಷಗಳಿಂದ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಾರಾಯಣ ಮೂಲ್ಯರ ತಂದೆ ಕೊರಗ ಮೂಲ್ಯರು. ಅವರ ಕಾಲದಲ್ಲಿ ಸುಮಾರು ಇಪ್ಪತ್ತು ಮುಡಿ ಭತ್ತ ಬೆಳೆಯುತ್ತಿದ್ದರು. ಈಗ ಫಸಲು ಕಡಿಮೆಯಾದರೂ ಸಾಂಪ್ರದಾಯಿಕ ಪದ್ಧತಿಯಲ್ಲೇ ಕೃಷಿ ಮಾಡಿದರೂ ಯಾವುದೇ ನಷ್ಟವಾಗಿಲ್ಲ. ನಾರಾಯಣ ಮೂಲ್ಯರ ಸಹೋದರರು ಕೂಡಾ ಅಕ್ಕಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಸ್ವಂತ ಜಮೀನು ಅಲ್ಲದೇ ಬೇರೆಯವರ ಗದ್ದೆಯನ್ನು ಲೀಸ್ ಗೆ ಪಡೆದು ಭತ್ತ ಬೆಳೆಯುತ್ತಿದ್ದಾರೆ.
ಇಂದು ಉಳುಮೆ ಮಾಡಲು ಆಧುನಿಕ ಯಂತ್ರಗಳು ಬಂದಿದ್ದರೂ, ಹೈಬ್ರಿಡ್, ಕುಲಾಂತರಿ, ರಾಸಾಯನಿಕ ಚೋದಕಗಳೆಲ್ಲ ಎಲ್ಲಡೆ ಹೆಸರು ಮಾಡುತ್ತಿದ್ದರೂ ನಾರಾಯಣ ಅವರು ಆ ಬಗ್ಗೆ ತಲೆಕೆಸಿಕೊಳ್ಳದೆ, ಹಟ್ಟಿಯಲ್ಲಿ ಕೋಣಗಳನ್ನು ಸಾಕುತ್ತಾ, ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುತ್ತಿಗೆ ಮತ್ತು ಮುದು ದೇವಳದ ಹಡೀಲು ಗದ್ದೆಗಳನ್ನು ಲೀಸ್ ಗೆ ಪಡೆದಿರುವ ನಾರಾಯಣ ಮೂಲ್ಯರು ಎಲ್ಲರೂ ಚಕಿತಗೊಳ್ಳುವ ರೀತಿಯಲ್ಲಿ ಭತ್ತವನ್ನು ಬೆಳೆದಿದ್ದಾರೆ. ಅವರ ಕೃಷಿ ಚಟುವಟಿಗಳಿಗೆ ಪತ್ನಿ ಕಮಲಾ ಬೆನ್ನೆಲುಬಾದರೆ ನಾಲ್ವರು ಪುತ್ರರು ಮೂವರು ಪುತ್ರಿಯರು ಅವರು ಸಾಥ್ ನೀಡುತ್ತಾರೆ. ಎಲ್ಲ ಕೃಷಿ ಕೆಲಸವನ್ನು ಮನೆ ಮಂದಿಯೇ ನಿರ್ವಹಿಸುತ್ತಿರುವುದರಿಂದ ಭತ್ತದ ಕೃಷಿಗೆ ಆಳುಗಳ ಕೊರತೆ ಎಂಬುದು ಇವರಿಗೆ ಎದುರಾಗಿಲ್ಲ.
ಭತ್ತದ ಕೃಷಿಯ ಜೊತೆ ನಾರಾಯಣ ಮೂಲ್ಯರು ಗೇರು, ವಿವಿಧ ತರಕಾರಿ, ಕಾಳು ಮೆಣಸು, ಅಡಿಕೆ, ಮತ್ತು ತೆಂಗು ಕೃಷಿಯನ್ನು ಉಪಬೆಳೆಯಾಗಿ ಬೆಳೆಯುತ್ತಿದ್ದಾರೆ. ಈ ಎಲ್ಲದರ ಜೊತೆಗೆ ಹೈನುಗಾರಿಕೆಯನ್ನೂ ನಡೆಯುತ್ತಿರುವ ಅವರ ಕುಟುಂಬ ಕೃಷಿಯಲ್ಲೇ ನೆಮ್ಮದಿಯ ಜೀವನ ನಡೆಯುತ್ತಿದ್ದಾರೆ. ನಾರಾಯಣ ಮೂಲ್ಯ ಕೃಷಿ ಸಾಧನೆಯನ್ನು ಗುರುತಿಸಿ ಪುತ್ತಿಗೆ ಗ್ರಾಮ ಪಂಚಾಯತ್ `ಉತ್ತಮ ಕೃಷಿಕ’ ಪ್ರಶಸ್ತಿ ನೀಡಿ ಗೌರವಿಸಿದೆ.
“ಇಂದಿನ ಯುವಕರಿಗೆ ಕೃಷಿಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಬೇರೆ ಬೇರೆ ಕೆಲಸಗಳನ್ನು ಅರಸಿಕೊಂಡು ಗುಳೆ ಹೋಗುತ್ತಿದ್ದಾರೆ. ಯುವಕರು ಕೃಷಿಯಲ್ಲೇ ಉತ್ತಮ ಜೀವನ ನಡೆಸಬಹುದು. ರೈತರು ರಾಸಾಯನಿಕ ಗೊಬ್ಬರ ಬಳಸಿ ತಮ್ಮ ಭೂಮಿಯ ಜೀವಾಮೃತವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಮಣ್ಣಿನ ಫಲವತ್ತತೆಯನ್ನು ಕಾಪಾಡುವ ಹಾಗೂ ನೀರನ್ನು ಹಿಡಿದಿಟ್ಟುಕೊಳ್ಳುವ ಎರೆಹುಳುವನ್ನು ಸಾಯಿಸುತ್ತಿದ್ದಾರೆ. ನೈಸರ್ಗಿಕ ಕೃಷಿ ಪದ್ಧತಿಯನ್ನು ಅನುಸರಿಸುವುದರಿಂದ ಕಡಿಮೆ ಖರ್ಚಿನಿಂದ ಹೆಚ್ಚು ಆದಾಯವನ್ನು ಪಡೆಯುವುದರ ಜೊತೆಗೆ ಸಮಯವನ್ನು ಉಳಿಸಬಹುದಾಗಿದೆ ಎನ್ನುತ್ತಾರೆ ನಾರಾಯಣ ಮೂಲ್ಯರು.
ಯುವಜನಾಂಗ ದಿನದಿಂದ ದಿನಕ್ಕೆ ಕೃಷಿಯಿಂದ ದೂರ ಸರಿಯುತ್ತಿರುವ ಆಧುನಿಕ ಯುಗದಲ್ಲಿಯೂ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಯಶಸ್ಸು ಸಾಧಿಸಿ ಮಾದರಿಯಾಗಿರುವ ನಾರಾಯಣ ಮೂಲ್ಯರಿಗೆ ಹಾಟ್ಸಪ್ ಎನ್ನಲೇಬೇಕು.
ಮೂಲ : ಡೆಕ್ಕನ್ ಹೆರಾಲ್ಡ್
ಕನ್ನಡಾನುವಾದ : ದಿನೇಶ್ ಇರ್ವತ್ತೂರು



